ಯುಪಿಎಸ್ಸಿಯಲ್ಲಿ 271ನೇ ಸ್ಥಾನ ಪಡೆದ ಇಸ್ರೋ ವಿಜ್ಞಾನಿ: ಗಾಲಿಕುರ್ಚಿಯಲ್ಲಿ ಕುಳಿತ ಯುವಕನ ಸಾಧನೆ

Update: 2022-06-07 17:41 GMT

ಡೆಹ್ರಾಡೂನ್: ಉತ್ತರಾಖಂಡದ ರೂರ್ಕಿಯ ಚಾವಮಂಡಿ ನಿವಾಸಿ ಕಾರ್ತಿಕ್ ಕನ್ಸಾಲ್ ಎರಡನೇ ಬಾರಿಗೆ ಯುಪಿಎಸ್‌ಸಿಗೆ ಆಯ್ಕೆಯಾಗಿದ್ದಾರೆ. ಈ ಬಾರಿಯ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕಾರ್ತಿಕ್ 271ನೇ ಸ್ಥಾನ ಪಡೆದಿದ್ದಾರೆ. ವಿಶೇಷವೆಂದರೆ, ಗಾಲಿ ಕುರ್ಚಿಯ ಮೇಲೆ ಕುಲಿತೇ ಅವರು ಈ ಸಾಧನೆಯನ್ನು ಮಾಡಿದ್ದಾರೆ.  ಐಐಟಿ ರೂರ್ಕಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮಾಡಿದ ಅವರು, ಆ ನಂತರ ಇಸ್ರೋದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.  

 ಕಾರ್ತಿಕ್ ತಂದೆ ಎಲ್.ಪಿ.ಗುಪ್ತ ಕಂದಾಯ ಇಲಾಖೆಯಲ್ಲಿ ಕಂದಾಯ ನಿರೀಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಅವರು ಸರ್ಕಾರಿ ಪೊಲೀಸ್ ಮತ್ತು ಅಲ್ಮೋರಾದ ಭೂಲೇಖ್ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಮೊದಲಿನಿಂದಲೂ ಅಧ್ಯಯನದಲ್ಲಿ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಕಾರ್ತಿಕ್ ಅವರು 2018 ರಲ್ಲಿ ಐಐಟಿ ರೂರ್ಕಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. 2018 ರಿಂದ ಇಸ್ರೋದ ವಿಜ್ಞಾನಿಯಾಗಿರುವ ಅವರು ಶ್ರೀಹರಿಕೋಟಾದ ಇಸ್ರೋದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
 
ಕನ್ಸಾಲ್ ಅವರು ಮೂರು ಬಾರಿ ಯುಪಿಎಸ್‌ಸಿಗೆ ಹಾಜರಾಗಿದ್ದರು. 2019 ರಲ್ಲಿ ಅವರ ಮೊದಲ ಪ್ರಯತ್ನದಲ್ಲಿ 813 ನೇ ರ್ಯಾಂಕ್ ಗಳಿಸುವಲ್ಲಿ ಯಶಸ್ವಿಯಾದ ಅವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗ ಸಿಕ್ಕಿದ್ದರೂ ಆಗ  ಅವರು ಅದಕ್ಕೆ ಸೇರಿರಲಿಲ್ಲ. 2020 ರಲ್ಲಿ ಮರಳಿ ಪ್ರಯತ್ನಿಸಿದ್ದು,  ಪ್ರಿಲಿಮ್ಸ್ ಅನ್ನು ಭೇದಿಸುವಲ್ಲಿ ಯಶಸ್ವಿಯಾದರೂ, ಮುಖ್ಯ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಲು ವಿಫಲರಾದರು. ಇದರಿಂದ ವಿಚಲಿತಗೊಳ್ಳದ ಕನ್ಸಾಲ್ ಮತ್ತೊಮ್ಮೆ ಪರಿಶ್ರಮದಿಂದ ಮರು ತಯಾರಿ ನಡೆಸಿದ್ದು, ಇದೀಗ 271ನೇ ರ್ಯಾಂಕ್ ಪಡೆದಿದ್ದಾರೆ. 


ಎರಡು ಬಾರಿ ನಿರೀಕ್ಷಿತ ಫಲಿತಾಂಶ ಬಾರದಿದ್ದರೂ ಕಠಿಣ ಪರಿಶ್ರಮ ಹಾಕಿದ ಅವರು, ತಮ್ಮ ಲಿಖಿತ ಪರೀಕ್ಷೆಗಾಗಿ ಪ್ರತಿದಿನ ಅಭ್ಯಾಸ ಮಾಡಿದರು. 
 
"ಇಂತಹ ಪರೀಕ್ಷೆಗಳಲ್ಲಿ ನಮ್ಮ ಉತ್ತರವನ್ನು ನಾವೇ ಬರೆಯುವುದು ಯಾವಾಗಲೂ ಉತ್ತಮ ಎಂದು ನಾನು ನಂಬುತ್ತೇನೆ. ನನಗೆ ಕಷ್ಟವಾಗಿದ್ದರೂ, ನಾನು UPSC ಮುಖ್ಯ ಪರೀಕ್ಷೆಗೆ ಕುಳಿತು ನನ್ನ ಪತ್ರಿಕೆಯನ್ನು ನಾನೇ ಬರೆಯಲು ಮೂರು ತಿಂಗಳ ಪ್ರತಿದಿನ ಕಾಲ ನಾಲ್ಕು ಗಂಟೆಗಳ ಕಾಲ ಅಭ್ಯಾಸ ಮಾಡಿದೆ. " ಎಂದು ಕನ್ಸಾಲ್‌ IndiaToday ಯೊಂದಿಗೆ ಹೇಳಿಕೊಂಡಿದ್ದಾರೆ. 

"ವಾರದ ದಿನಗಳಲ್ಲಿ ಒಂಬತ್ತು ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರೂ, ಅದಕ್ಕೆ ತಕ್ಕಂತೆ ಅಧ್ಯಯನವನ್ನು ನಿರ್ವಹಿಸುತ್ತಿದ್ದೆ. ವಾರದ ದಿನಗಳಲ್ಲಿ ಬೆಳಗ್ಗೆ 6 ಗಂಟೆಗೆ ಎದ್ದು 8 ಗಂಟೆಯವರೆಗೆ ಓದಿ ತಯಾರಾಗಿ ಕಚೇರಿಗೆ ಹೊರಡುತ್ತಿದ್ದೆ. ಕಚೇರಿಯಿಂದ ಹಿಂತಿರುಗಿದ ನಂತರ ಸಂಜೆ 6:30 ರಿಂದ ರಾತ್ರಿ 11 ರವರೆಗೆ ಅಧ್ಯಯನ ಮಾಡುತ್ತಿದ್ದೆ, ವಾರಾಂತ್ಯದಲ್ಲಿ, ನಾನು ಹೆಚ್ಚು ಸಮಯವನ್ನು ಓದಿಗೆ ವಿನಿಯೋಗಿಸುತ್ತಿದ್ದೆ" ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News