ಸಾಗರಗಳು ಸುಸ್ಥಿತಿಯಲ್ಲಿರಲಿ
ಪ್ರತಿವರ್ಷ ಜೂನ್ 8ರಂದು ವಿಶ್ವ ಸಾಗರ ದಿನವನ್ನು ಆಚರಿಸಲಾಗುತ್ತದೆ. 1992ರಲ್ಲಿಯೇ ವಿಶ್ವ ಸಾಗರ ದಿನದ ಪರಿಕಲ್ಪನೆ ಹುಟ್ಟಿಕೊಂಡರೂ ವಿಶ್ವಸಂಸ್ಥೆ ಅಧಿಕೃತವಾಗಿ ವಿಶ್ವ ಸಾಗರ ದಿನವನ್ನು ಅಂಗೀಕರಿಸಿದ್ದು 2008ರಲ್ಲಿ. ಇದು ವಿಶ್ವವ್ಯಾಪಿ ಸುಸ್ಥಿರ ಅಭಿವೃದ್ಧಿ ಗುರಿಗಳ ಅನುಷ್ಠಾನವನ್ನು ಬೆಂಬಲಿಸುತ್ತದೆ ಮತ್ತು ಸಾಗರ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು ಉಲ್ಲೇಖಿಸುತ್ತದೆ. ಈ ವರ್ಷದ ಘೋಷ ವಾಕ್ಯವೆಂದರೆ ‘ಸಾಗರಕ್ಕಾಗಿ ಸಾಮೂಹಿಕ ಕ್ರಿಯೆ-2022’ ಎನ್ನುವುದು. ಸಾಗರವನ್ನು ಸಂರಕ್ಷಿಸಲು ಮತ್ತು ಪುನರುಜ್ಜೀವನಗೊಳಿಸಲು ಒಟ್ಟಾಗಿ ಕೆಲಸ ಮಾಡುತ್ತಿರುವ ಸಮುದಾಯಗಳು, ಆಲೋಚನೆಗಳು ಮತ್ತು ಪರಿಹಾರಗಳ ಬಗ್ಗೆ ಗಮನ ಹರಿಸುವುದು. ಸಾಗರ ಮತ್ತು ಅದರ ಪರಿಸರ ವ್ಯವಸ್ಥೆಗಳು ಮತ್ತು ಜೀವವೈವಿಧ್ಯವನ್ನು ರಕ್ಷಿಸುವ ಮತ್ತು ಹವಾಮಾನ ಬದಲಾವಣೆಯ ಹೊಂದಾಣಿಕೆಯನ್ನು ಹೆಚ್ಚಿಸುವತ್ತ ಗಮನ ಹರಿಸುವುದು. ಭೂಮಿ ಒಂದು ಜೀವಂತ ಕ್ರಿಯಾತ್ಮಕ(ಡೈನಾಮಿಕ್) ಯಂತ್ರವಾಗಿದೆ. ಭೂಮಿಯ ಮೇಲೆ ಮಣ್ಣು, ಗಾಳಿ, ನೀರು ಇಲ್ಲದಿದ್ದರೆ ಗಿಡಮರ, ಪಕ್ಷಿ-ಪ್ರಾಣಿಗಳು, ಮನುಷ್ಯನೂ ಕೂಡ ಇರುತ್ತಿರಲಿಲ್ಲ. ಅಂದರೆ ನಿಸರ್ಗದಲ್ಲಿ ಎಲ್ಲವೂ ಒಂದಕ್ಕೊಂದು ಪೂರಕವಾಗಿ ಕಾರ್ಯನಿರ್ವಹಿಸುತ್ತವೆ. ಹಾಗೆಯೇ ಭೂಮಿಯನ್ನು ಆವರಿಸಿಕೊಂಡಿರುವ ಸಾಗರ ಇಲ್ಲದಿದ್ದರೆ ಭೂಮಿ ಬರಡು ಗ್ರಹವಾಗಿರುತ್ತಿತ್ತು. ಸಾಗರ ಮಹತ್ವದ ಬಗ್ಗೆ ತಿಳಿದುಕೊಳ್ಳುತ್ತಾಹೋದರೆ ವಿಸ್ಮಯ ಮೂಡದೆ ಇರುವುದಿಲ್ಲ.
ಭೂಮಿಯ ಮೇಲೆ ನೀರು ಹೇಗೆ ಉದ್ಭವಿಸಿತು ಎನ್ನುವ ಪ್ರಶ್ನೆಗೆ ಇಂದಿಗೂ ನಿಖರವಾದ ಉತ್ತರ ದೊರಕಿಲ್ಲ. ಸಾಗರವು ಭೂಮಿಯ ಶೇ. 70.8 ಮೇಲ್ಮೈ ಭಾಗವನ್ನು ಆವರಿಸಿಕೊಂಡಿದೆ. ಮಹಾಸಾಗರವನ್ನು ಐದು ವಿಭಿನ್ನ ಪ್ರದೇಶಗಳಾಗಿ ಗುರುತಿಸಲಾಗಿದೆ: ಪೆಸಿಫಿಕ್(ಅತಿ ದೊಡ್ಡದು), ಅಟ್ಲಾಂಟಿಕ್, ಇಂಡಿಯನ್, ಅಂಟಾರ್ಕ್ಟಿಕ್(ದಕ್ಷಿಣಧ್ರುವ) ಮತ್ತು ಆರ್ಕ್ಟಿಕ್(ಉತ್ತರಧ್ರುವ). ಸಮುದ್ರಗಳ ನೀರು ಸುಮಾರು 361,000,000 ಚ.ಮೈಲಿಗಳ ಪ್ರದೇಶವನ್ನು ಆವರಿಸಿಕೊಂಡಿದೆ. ಬೃಹತ್ ಶಾಖದ ಜಲಾಶಯವಾಗಿ ಕಾರ್ಯನಿರ್ವಹಿಸುವ ಸಾಗರ ಹವಾಮಾನ ಮಾದರಿಗಳು-ಋತುಗಳು, ಇಂಗಾಲದ ಚಕ್ರ ಮತ್ತು ನೀರಿನ ಚಕ್ರದ ಮೇಲೆ ಪ್ರಭಾವ ಬೀರುತ್ತದೆ. ಸಾಗರವನ್ನು ಭೌತಿಕ ಮತ್ತು ಜೈವಿಕ ಪರಿಸ್ಥಿತಿಗಳ ಆಧಾರದ ಮೇಲೆ ವಿವಿಧ ಲಂಬ ಮತ್ತು ಸಮತಲ ವಲಯಗಳಾಗಿ ವಿಂಗಡಿಸಲಾಗಿದೆ. ಪೆಲಾಜಿಕ್(ಮೀನುಗಾರಿಕೆ) ವಲಯವು ತೆರೆದ ಸಾಗರದಾದ್ಯಂತ ಮೇಲ್ಮೈಯಿಂದ ಸಾಗರ ತಳದವರೆಗೆ ನೀರಿನ ಸ್ತಂಭವನ್ನು ಹೊಂದಿದೆ. ನೀರಿನ ಕಾಲಮ್‌ನಲ್ಲಿ ಎಷ್ಟು ಆಳದವರೆಗೂ ಬೆಳಕು ಇದೆ ಎಂಬುದರ ಆಧಾರದ ಮೇಲೆ ಇತರ ವಲಯಗಳನ್ನು ವರ್ಗೀಕರಿಸಲಾಗಿದೆ. ಬೆಳಕಿಗೆ ಸಂಬಂಧಿಸಿದ ಮೇಲ್ಮೈ ವಲಯ ಬೆಳಕಿನ ಶೇ. 1 ಆಳದವರೆಗೂ (ಸುಮಾರು 200 ಮೀಟರು) ಇದ್ದು ಇಲ್ಲಿ ದ್ಯುತಿಸಂಶ್ಲೇಷಣೆ ನಡೆಯುತ್ತದೆ. ಸಸ್ಯಗಳು ಮತ್ತು ಸೂಕ್ಷ್ಮಪಾಚಿ(ತೇಲುವ) ಬೆಳಕು, ನೀರು, ಇಂಗಾಲದ ಡೈಆಕ್ಸೈಡ್ ಮತ್ತು ಪೋಷಕಾಂಶಗಳನ್ನು ಬಳಸಿಕೊಂಡು ಸಾವಯವ ವಸ್ತುಗಳನ್ನು ಸೃಷ್ಟಿಸುತ್ತದೆ. ಸಾಗರ ದ್ಯುತಿಸಂಶ್ಲೇಷಣೆಯು ಭೂಮಿಯ ವಾತಾವರಣದಲ್ಲಿ ಶೇ. 50ರಷ್ಟು ಆಮ್ಲಜನಕವನ್ನು ಸೃಷ್ಟಿಸುತ್ತದೆ ಎಂದರೆ ಜೀವಜಾಲಕ್ಕೆ ಎಷ್ಟು ಸಹಾಯಕಾರಿ ಎನ್ನುವುದು ತಿಳಿಯುತ್ತದೆ. ಸೂರ್ಯನ ಬೆಳಕು ಬೀಳುವ ಸಾಗರ ವಲಯವು ಸಾಗರ ಪರಿಸರ ವ್ಯವಸ್ಥೆಯನ್ನು ಪೋಷಿಸುವ ಮತ್ತು ಆಹಾರ ಪೂರೈಕೆಯ ಮೂಲವಾಗಿದೆ. ಬೆಳಕು ಬೀಳದ ವಲಯ ಶೀತ ಮತ್ತು ಕತ್ತಲೆಯಿಂದ ತುಂಬಿಕೊಂಡಿದೆ.
ಸಾಗರವು ಶುಷ್ಕ ಭೂಮಿಯನ್ನು ಸಮೀಪಿಸುವ ಭೂಖಂಡದ ಷೆಲ್ಫ್ (ಹೆಚ್ಚು ಆಳವಿಲ್ಲದ) ಕೆಲವು ನೂರು ಮೀಟರ್ ಅಥವಾ ಅದಕ್ಕಿಂತ ಕಡಿಮೆ ಆಳವನ್ನು ಹೊಂದಿರುತ್ತದೆ. ಷೆಲ್ಫ್ ವಲಯದಲ್ಲಿನ ಮಾನವ ಚಟುವಟಿಕೆಗಳು ಸಾಗರದ ಮೇಲೆ ಹೆಚ್ಚಿನ ಪರಿಣಾಮ ಬಿರುತ್ತದೆ. ಸಾಗರದ ತಾಪಮಾನವು ಸಾಗರದ ಮೇಲ್ಮೈ ತಲುಪುವ ಸೌರ ವಿಕಿರಣದ ಪ್ರಮಾಣವನ್ನು ಅವಲಂಬಿಸಿರುತ್ತದೆ. ಉಷ್ಣವಲಯದಲ್ಲಿ, ಮೇಲ್ಮೈ ತಾಪಮಾನವು 30 ಡಿ.ಸೆ.ಗಿಂತ ಹೆಚ್ಚಾಗಿರುತ್ತದೆ. ಸಮುದ್ರದ ಮಂಜುಗಡ್ಡೆ ರೂಪುಗೊಳ್ಳುವ ಧ್ರುವಗಳ ಬಳಿ ತಾಪಮಾನವು ಸುಮಾರು -2 ಡಿ.ಸೆ. ಸಮತೋಲನದಲ್ಲಿರುತ್ತದೆ. ಸಾಗರದ ಎಲ್ಲಾ ಭಾಗಗಳ ಆಳದ ನೀರಿನ ತಾಪಮಾನವು -2 ಡಿ.ಸೆ.ನಿಂದ +5 ಡಿ.ಸೆ. ನಡುವೆ ಇರುತ್ತದೆ. ನಿರಂತರವಾಗಿ ಸಾಗರದಲ್ಲಿ ನೀರು ಸಂಚರಿಸುತ್ತಾ ಪ್ರವಾಹಗಳನ್ನು ಸೃಷ್ಟಿಸುತ್ತದೆ. ಸಾಗರ ನೀರಿನ ಈ ನಿರ್ದೇಶಿತ ಚಲನೆಗಳು ತಾಪಮಾನ ವ್ಯತ್ಯಾಸಗಳು, ವಾತಾವರಣದ ಪರಿಚಲನೆ (ಗಾಳಿ) ಕೋರಿಯೋಲಿಸಿಸ್ ಪರಿಣಾಮ ಮತ್ತು ನೀರಿನ ಲವಣತ್ವದಲ್ಲಿನ ವ್ಯತ್ಯಾಸಗಳು ಸೇರಿದಂತೆ ನೀರಿನ ಮೇಲೆ ಕಾರ್ಯನಿರ್ವಹಿಸುವ ಬಲಗಳಿಂದ ಉತ್ಪತ್ತಿಯಾಗುತ್ತದೆ. ಸಾಗರ ಭೂಮಿಯ ಹವಾಮಾನವನ್ನು ನಿಯಂತ್ರಿಸುತ್ತದೆ. ನಾವು ಉಸಿರಾಡುವ ಶೇ. 70 ಆಮ್ಲಜನಕವನ್ನು ಸಾಗರ ಸಸ್ಯಗಳು ಉತ್ಪಾದನೆ ಮಾಡುತ್ತವೆ ಮತ್ತು ಅತಿದೊಡ್ಡ ಜೀವಿಗಳು ಸಾಗರಗಳಲ್ಲಿ ಬದುಕುತ್ತಿವೆ. ಫೈಟೋಪ್ಲಾಂಕ್ಟನ್ ಎಂಬುದು ಸೂಕ್ಷ್ಮ ಪಾಚಿಯಾಗಿದ್ದು ಇದು ಸಾಗರ ಪ್ರವಾಹಗಳ ಜೊತೆಗೆ ತನ್ನ ಬದುಕು ನಡೆಸುತ್ತದೆ ಮತ್ತು ಇಂಗಾಲ ಡೈಆಕ್ಸೈಡನ್ನು ಹೀರಿಕೊಂಡು ಹೇರಳ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ.
ಸಾಗರ ಒಂದು ಬಿಲಿಯನ್‌ಗಿಂತಲೂ ಹೆಚ್ಚು ಜನರಿಗೆ ಪ್ರೊಟೀನ್‌ನ್ನು ಮೀನು ಮತ್ತು ಇತರ ಸಾಗರ ಜೀವಿಗಳ ಮೂಲಕ ಒದಗಿಸುತ್ತದೆ. ಪಾಚಿ ಮತ್ತು ಸಾಗರ ಸಸ್ಯಗಳನ್ನು ಅನೇಕ ದೇಶಗಳಲ್ಲಿ ಆಹಾರಕ್ಕೆ ಬಳಸಲಾಗುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆ ಹೆಚ್ಚೆಚ್ಚು ಪರ್ಯಾಯ ಮತ್ತು ಪೌಷ್ಟಿಕ ಸಾಗರ ಆಹಾರವನ್ನು ಅವಲಂಬಿಸುತ್ತಿದೆ. ಭೂಮಿಯ ಮೇಲ್ಮೈಯಲ್ಲಿ ಕಾಣಸಿಗುವ ಜೀವಿಗಳಿಗಿಂತ ಸಾಗರದಲ್ಲಿ ಹೆಚ್ಚು ಪ್ರಾಣಿಗಳು ಬದುಕು ನಡೆಸುತ್ತಿವೆ. ಉಲ್ಲಾಸದ ಸ್ಥಳವಾಗಿ, ಹಡಗುಯಾನ, ಸರಕುಸಾಗಣೆ ಹೀಗೆ ಅನೇಕ ರೀತಿಯಲ್ಲಿ ಸಾಗರಗಳು ಮನುಷ್ಯನ ಬದುಕಿನ ಭಾಗವಾಗಿದೆ. ಸಾಗರಗಳ ಮಧ್ಯದಲ್ಲಿ ಹವಳ ದಿಬ್ಬಗಳು-ದ್ವೀಪಗಳಂತೂ ಅಮೋಘ ಪ್ರೇಕ್ಷಣೀಯ ಸ್ಥಳಗಳಾಗಿವೆ. ಜೊತೆಗೆ ಕರಾವಳಿ ಮತ್ತು ಕಡಲ ಪ್ರವಾಸೋದ್ಯಮ, ಜಲಕೃಷಿ, ನವೀಕರಿಸಬಹುದಾದ ಇಂಧನ, ಖನಿಜ ಸಂಪನ್ಮೂಲಗಳು, ಜೈವಿಕ ತಂತ್ರಜ್ಞಾನ, ಮೀನುಗಾರಿಕೆ, ಹಡಗು ನಿರ್ಮಾಣ-ದುರಸ್ತಿ, ತೈಲ ಮತ್ತು ಅನಿಲ ಸಾರಿಗೆ ಇತ್ಯಾದಿ ಕಡಲಿನಿಂದಲೇ ನಡೆಯುತ್ತದೆ. ವಿಶ್ವದ ಶೇ. 90 ವ್ಯಾಪಾರ ಸಾಗರಗಳ ಮೂಲಕವೇ ನಡೆಯುತ್ತದೆ. ಅಮೆರಿಕದಲ್ಲಿ ಸುಮಾರು ಮೂರು ದಶಲಕ್ಷ ಉದ್ಯೋಗಗಳು ಸಾಗರ ಮತ್ತು ಸರೋವರಗಳನ್ನು ಅವಲಂಬಿತವಾಗಿದೆ. ಭೂಮಿಗೆ ಸಂಬಂಧಿಸಿದಂತೆ ಸೂರ್ಯ ಮತ್ತು ಚಂದ್ರನ ಸ್ಥಾನವು ಬದಲಾಗುವ ಕಾರಣ ಸಾಗರ ಮೇಲ್ಮೈಯಲ್ಲಿ ಉಬ್ಬರವಿಳಿತಗಳು ಉದ್ಭವಿಸಿದರೆ, ಮೇಲ್ಮೈ ಪ್ರವಾಹಗಳು ಗಾಳಿ ಮತ್ತು ಅಲೆಗಳಿಂದ ಉಂಟಾಗುತ್ತವೆ. ಪ್ರಮುಖ ಸಾಗರ ಪ್ರವಾಹಗಳಲ್ಲಿ ಗಲ್ಫ್ ಸ್ಟ್ರೀಮ್, ಕುರೋಶಿಯೊ ಪ್ರವಾಹ, ಅಗುಲ್ಹಾಸ್ ಪ್ರವಾಹ ಮತ್ತು ಅಂಟಾರ್ಕ್ಟಿಕ್ ಪ್ರದಕ್ಷಿಣಾ ಪ್ರವಾಹ ಸೇರಿದೆ. ಒಟ್ಟಾರೆಯಾಗಿ, ಅಪಾರ ಪ್ರಮಾಣದ ನೀರು ಮತ್ತು ಶಾಖದ ಪ್ರವಾಹ ಭೂಮಿಯ ಸುತ್ತಲೂ ಚಲಿಸುತ್ತದೆ. ಈ ಪರಿಚಲನೆಯು ಜಾಗತಿಕ ಹವಾಮಾನ ಮತ್ತು ಮಾಲಿನ್ಯಕಾರಕಗಳನ್ನು ಮೇಲ್ಮೈಯಿಂದ ಆಳವಾದ ಸಾಗರಕ್ಕೆ ಸಾಗಿಸುವ ಮೂಲಕ ಇಂಗಾಲದ ಡೈಆಕ್ಸೈಡ್‌ನಂತಹ ಮಾಲಿನ್ಯಕಾರಕಗಳನ್ನು ಹೀರಿಕೊಳ್ಳುತ್ತ ಮರುಹಂಚಿಕೆ ಗಮನಾರ್ಹವಾಗಿ ನಡೆಯುತ್ತದೆ. ಸಾಗರ ನೀರಿನಲ್ಲಿ ಆಮ್ಲಜನಕ, ಇಂಗಾಲದ ಡೈಆಕ್ಸೈಡ್ ಮತ್ತು ಸಾರಜನಕ ಸೇರಿದಂತೆ ದೊಡ್ಡ ಪ್ರಮಾಣದಲ್ಲಿ ಅನಿಲಗಳು ಕರಗಿವೆ. ಈ ಅನಿಲಗಳ ವಿನಿಮಯ ಸಾಗರದ ಮೇಲ್ಮೈಯಲ್ಲಿ ನಡೆಯುತ್ತದೆ ಮತ್ತು ಕರಗುವಿಕೆಯು ನೀರಿನ ತಾಪಮಾನ ಮತ್ತು ಲವಣಾಂಶವನ್ನು ಅವಲಂಬಿಸಿರುತ್ತದೆ. ಅಪಾರ ತೈಲ-ಇಂಧನ ಉರಿಯುವಿಕೆಯಿಂದ ಇಂಗಾಲ ಡೈಆಕ್ಸೈಡ್ ವಾತಾವರಣದ ಮೂಲಕ ಸಾಗರಕ್ಕೆ ಸೇರಿ ಸಾಗರ ಹೆಚ್ಚು ಆಮ್ಲೀಕರಣವಾಗುತ್ತಿದೆ. ಸಾಗರವು ಹವಾಮಾನವನ್ನು ನಿಯಂತ್ರಣದಲ್ಲಿಡುವುದರ ಜೊತೆಗೆ ಪ್ರಮುಖ ಪರಿಸರ ಸೇವೆಗಳನ್ನು ಒದಗಿಸುತ್ತದೆ. ವ್ಯಾಪಾರ, ಸಾರಿಗೆ, ಆಹಾರ ಮತ್ತು ಇತರ ಸಂಪನ್ಮೂಲಗಳನ್ನು ಸಹ ಒದಗಿಸುತ್ತದೆ.
ಸಾಗರ 2,30,000ಕ್ಕಿಂತ ಹೆಚ್ಚು ಪ್ರಭೇದಗಳ ಆವಾಸಸ್ಥಾನವೆಂದು ತಿಳಿದುಬರುತ್ತದೆ. ಹೀಗೆ ಸಾಗರಗಳು ಭೂಮಿಯ ಮೇಲಿರುವ ಜೀವಜಾಲ ಸೇರಿ ಒಟ್ಟಾರೆ ಪರಿಸರವನ್ನು ಕಾಪಾಡಿಕೊಂಡು ಬರುತ್ತಿದೆ. ಸಾಗರ ಮಾಲಿನ್ಯ, ಅತಿಯಾದ ಮೀನುಗಾರಿಕೆ, ಸಾಗರ ಆಮ್ಲೀಕರಣ ಮತ್ತು ಜಾಗತಿಕ ತಾಪಮಾನ ತಡೆಯದಿದ್ದರೆ ಭೂಮಿಯೇ ಅಪಾಯಕ್ಕೆ ಸಿಲುಕಿಕೊಳ್ಳುತ್ತದೆ.