ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಮೇಲ್ಛಾವಣಿಗೆ ಟರ್ಪಾಲ್ !
ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಮೇಲ್ಛಾವಣಿ ಶಿಥಿಲಗೊಂಡು 3 ರಿಂದ 4 ವರ್ಷಗಳೇ ಕಳೆದಿವೆ. ಪೊಲೀಸರು ಟರ್ಪಾಲ್ ಹಾಕಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸುಬ್ರಹ್ಮಣ್ಯ ಕ್ಷೇತ್ರ ದಕ್ಷಿಣ ಭಾರತದಲ್ಲೇ ಪ್ರಸಿದ್ಧ ಧಾರ್ಮಿಕ ಕ್ಷೇತ್ರ. ಇಲ್ಲಿ ದಿನಂಪ್ರತಿ ಸಾವಿರಾರು ಭಕ್ತರು ಆಗಮಿಸುತ್ತಾರೆ. ಆಗಾಗ ಗಣ್ಯರು ಆಗಮಿಸುತ್ತಿರುತ್ತಾರೆ. ಪೊಲೀಸ್ ಇಲಾಖೆಯ ನಿವೃತ್ತ ಕಮಿಷನರ್, ನಿವೃತ್ತ ನ್ಯಾಯಾಧೀಶರು, ಸುಪ್ರೀಂ ಕೋರ್ಟ್, ಹೈಕೋರ್ಟ್ ನ್ಯಾಯಾದೀಶರು, ಅಧಿಕಾರಿಗಳು, ಹಾಲಿ ಎಸ್ಪಿ, ಡಿವೈಎಸ್ಪಿ, ಇನ್ಸ್ ಪೆಕ್ಟರ್ ಗಳು ಮತ್ತಿತರ ಇಲಾಖಾ ಅಧಿಕಾರಿಗಳು ಬರುತ್ತಾರೆ.
ಇತ್ತೀಚೆಗೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಗೃಹ ಸಚಿವ ಆರಗ ಜಾನೇಂದ್ರ ಬಂದಿದ್ದು ಈ ಸಂದರ್ಭ ಪತ್ರಿಕಾಗೋಷ್ಠಿ ನಡೆಸಿದ್ದ ಅವರು ಸುಬ್ರಹ್ಮಣ್ಯ ಠಾಣೆಗೆ ಒಂದು ಕೋಟಿ ರೂ. ಅನುದಾನವಿದ್ದು ಶೀಘ್ರವೇ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದರು. ಆದರೆ ಕೋಟಿ ಅನುದಾನ ಟೆಂಡರ್ ಕರೆದದ್ದಾಗಲಿ, ಅನುದಾನ ಬಿಡುಗಡೆ ಮಾಡಿದ್ದಾಗಲಿ ಮಾತ್ರ ಗೊತ್ತಾಗಿಲ್ಲ. ಠಾಣೆಯ ಮಾಡು ಬೀಳುವ ಮುಂಚೆ ಹೊಸ ಕಟ್ಟಡಕ್ಕೆ ಶಿಲನ್ಯಾಸವಾದರೆ ಸಾಕು ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಮಾಸ್ಟರ್ ಪ್ಲಾನ್ ವ್ಯಾಪ್ತಿಯಲ್ಲಿ ಠಾಣೆ ಇಲ್ಲ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಸ್ಟರ್ ಪ್ಲಾನ್ ವತಿಯಿಂದ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿದ್ದು ದೇವಸ್ಥಾನಕ್ಕೆ ಸಂಬಂಧಪಟ್ಟ ಶಾಲೆ, ಆರೋಗ್ಯ ಇಲಾಖೆಗೆ ಕಟ್ಟಡ ಕಟ್ಟಿದ್ದು, ಕಸ ವಿಲೇವಾರಿ ಘಟಕ ನಿರ್ಮಿಸಿದ್ದು, ಶವಸಂಸ್ಕಾರಕ್ಕೆ ಕಟ್ಟಡ ನಿರ್ಮಾಣ ಮಾಡಿದ್ದು ಇದೆ. ಆದರೆ ಪೊಲೀಸ್ ಠಾಣೆಗೆ ಸಂಬಂಧಪಟ್ಟ ಯಾವುದೇ ಅನುದಾನ ಇರಿಸುವುದಾಗಲೀ ಕಟ್ಟಿಕೊಡುವ ವ್ಯವಸ್ಥೆ ಮಾಡುವ ನಿಯಮಗಳು ಇಲ್ಲದ ಕಾರಣ ದೇವಸ್ಥಾನ ವತಿಯಿಂದ ಮಾಸ್ಟರ್ ಪ್ಲಾನ್ ನಲ್ಲಿ ಈ ಬಗ್ಗೆ ಯಾವುದೇ ಅನುದಾನ ಇಡುವಂತಿಲ್ಲ.
2017 ರಲ್ಲೇ ಕೋಟಿ ರೂ. ಹಣ ಇಟ್ಟಿದ್ದರು
2017 ನೇ ಇಸವಿಯಲ್ಲಿ 1. 23 ಕೋಟಿ ರೂ. ಹಣ ಸರಕಾರ ಸುಬ್ರಹ್ಮಣ್ಯ ಠಾಣೆಗಾಗಿ ಇರಿಸಿತ್ತು. ಆದರೆ ಅದು ಟೆಂಡರ್ ಆಗಿ ಬಿಡುಗಡೆಗೊಂಡಾಗ 4 ವರ್ಷ ಕಳೆದಿದ್ದು ಆ ಮೊತ್ತಕ್ಕೆ ಸುಬ್ರಹ್ಮಣ್ಯ ಠಾಣೆ ಕಟ್ಟಲು ಸಾಧ್ಯವಿಲ್ಲ ಎಂದು ತಿಳಿದುಬಂದಿತ್ತು. ಹೆಚ್ಚುವರಿ ಹಣ ಬೇಕು ಎಂದು ಪೊಲೀಸ್ ಇಲಾಖೆ ಸರ್ಕಾರಕ್ಕೆ ಕೇಳಿಕೊಂಡಿದ್ದರೂ ಹೆಚ್ಚುವರಿ ಹಣ ಸೇರ್ಪಡೆಗೊಂಡು ಹಣ ಬಿಡುಗಡೆ ಯಾವಾಗ ಆಗುತ್ತದೆ ಎಂದು ಕಾದು ನೋಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.