ವಿಶ್ವ ರಕ್ತದಾನಿಗಳ ದಿನಾಚರಣೆ; ಪ್ರೇರಕರಿಗೆ ಸನ್ಮಾನ
ಮಣಿಪಾಲ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ರಕ್ತ ಕೇಂದ್ರದ ವತಿಯಿಂದ ವಿಶ್ವ ರಕ್ತದಾನಿಗಳ ದಿನಾಚರಣೆಯ ಪ್ರಯುಕ್ತ ಸ್ವಯಂಪ್ರೇರಿತ ರಕ್ತದಾನಿಗಳ ಪ್ರೇರಕರಿಗೆ ಸನ್ಮಾನ ಕಾರ್ಯಕ್ರಮವನ್ನು ಮಂಗಳವಾರ ಆಯೋಜಿಸ ಲಾಗಿತ್ತು.
ರಕ್ತದಾನಿಗಳನ್ನು ಸನ್ಮಾನಿಸಿದ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ದೇಶಕ ಕಮಾಂಡರ್ ಡಾ.ಅನಿಲ್ ರಾಣಾ ಮಾತನಾಡಿ, ನೀವು ಮಾಡುತ್ತಿರುವುದು ಶ್ರೇಷ್ಠ ಕೆಲಸ, ದಯವಿಟ್ಟು ಇದನ್ನು ಮುಂದುವರಿಸ ಬೇಕು. ಈ ಮೂಲಕ ನೀವು ಅನೇಕ ಜೀವಗಳನ್ನು ಉಳಿಸಬಹುದು ಎಂದು ತಿಳಿಸಿದರು
ಅಧ್ಯಕ್ಷತೆ ವಹಿಸಿದ್ದ ಕೆಎಂಸಿಯ ಡೀನ್ ಡಾ.ಶರತ್ ಕೆ.ರಾವ್ ಮಾತನಾಡಿ, ರಕ್ತಕ್ಕೆ ಬೇರೆ ಪರ್ಯಾಯವಿಲ್ಲ. ಅದನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ರಕ್ತದಾನ ಮಾಡುವುದೊಂದೇ ರಕ್ತಕ್ಕೆ ಪರ್ಯಾಯವಾಗಿದೆ. ಒಬ್ಬ ವ್ಯಕ್ತಿಯು ರಕ್ತದಾನದ ಮೂಲಕ ಮೂರು ಜೀವಗಳನ್ನು ಉಳಿಸಬಹುದು ಎಂದು ಹೇಳಿದರು.
ಕೆ.ಸತೀಶ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಿತ ಅತ್ಯುತ್ತಮ ಸಿಬ್ಬಂದಿ ಪ್ರಶಸ್ತಿ ಮತ್ತು ೩ಡಿ ಆರ್ಟ್ ಆಬ್ಜೆಕ್ಟ್ ಮೇಕಿಂಗ್ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು. ರಕ್ತ ಕೇಂದ್ರದ ಮುಖ್ಯಸ್ಥೆ ಡಾ.ಶಮ್ಮಿ ಶಾಸ್ತ್ರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತ ನಾಡಿದರು. ಕೆಎಂಸಿ ಆಸ್ಪತ್ರೆಯ ಸಿಒಒ ಸಿ.ಜಿ.ಮುತ್ತಣ್ಣ ಉಪಸ್ಥಿತರಿದ್ದರು. ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ವಂದಿಸಿದರು.