ಬಜೆಟ್‌ನಲ್ಲಿ ಭಾರೀ ಏರಿಕೆಯಾದರೂ ಹೆಚ್ಚಿನ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿಲ್ಲವೇಕೆ?

Update: 2022-06-16 05:53 GMT

ಪೈಪ್‌ಲೈನ್‌ಗಳು ಮತ್ತು ನಳ್ಳಿಗಳನ್ನು ಅಳವಡಿಸುವುದಕ್ಕೆ ಜಲ ಜೀವನ್ ಯೋಜನೆಯು ಹೆಚ್ಚಿನ ಆದ್ಯತೆ ನೀಡುತ್ತದೆ. ನೀರಿನ ಸಂರಕ್ಷಣೆ ಮತ್ತು ಮರುಪೂರಣದ ನಿಟ್ಟಿನಲ್ಲಿ ಕೆಲಸ ಮಾಡುವ ಅವಕಾಶವನ್ನೂ ಅದು ಹೊಂದಿದೆ. ಪೈಪ್‌ಗಳು ಮತ್ತು ನಳ್ಳಿಗಳ ಸಂಖ್ಯೆಯು ಖಂಡಿತವಾಗಿಯೂ ಹೆಚ್ಚುತ್ತಿದೆ. ಆದರೆ ಒಟ್ಟಾರೆ ಪರಿಸರ ನಾಶ ಮತ್ತು ಜಾಗತಿಕ ತಾಪಮಾನ ಹಾಗೂ ಹಲವಾರು ಜಲ ಮೂಲಗಳಿಗೆ ಆಗಿರುವ ಹಾನಿಯಿಂದಾಗಿ ಈ ನಳ್ಳಿಗಳಲ್ಲಿ ಹರಿಯಬೇಕಾಗಿರುವ ನೀರಿನ ಮೂಲಗಳು ಬರಿದಾಗುತ್ತಿವೆ. ಹಾಗಾಗಿ, ಬಿರು ಬಿಸಿಲಿನ ದಿನಗಳಲ್ಲಿ ನೀರಿನ ಗರಿಷ್ಠ ಅಗತ್ಯವಿರುವಾಗ ಈ ನಳ್ಳಿಗಳಲ್ಲಿ ನೀರೇ ಇರುವುದಿಲ್ಲ.

ಈ ವರ್ಷವೂ ಬೇಸಿಗೆಯು ಬರ ಬಿಸಿಲಾಗಿದೆ. ಅದರೊಂದಿಗೆ ಹೆಚ್ಚಿನ ಹಳ್ಳಿಗಳಲ್ಲಿ ಕುಡಿಯುವ ನೀರಿನ ಗಂಭೀರ ಸಮಸ್ಯೆ ತಲೆದೋರಿದೆ. ಹದಿನೈದು ತಿಂಗಳುಗಳ ಹಿಂದೆ, ಹಳ್ಳಿಗಳಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ ಬಜೆಟ್‌ನಲ್ಲಿ ಅಗಾಧ ಪ್ರಮಾಣದ ಹಣವನ್ನು ಒದಗಿಸಲಾಗಿತ್ತು. ಹಾಗಾಗಿ, ಈ ಬಾರಿ ಪರಿಸ್ಥಿತಿ ಭಿನ್ನವಾಗಿರಬೇಕಾಗಿತ್ತು. ಆದರೆ, ಪರಿಸ್ಥಿತಿಯಲ್ಲಿ ಹೆಚ್ಚಿನ ಸುಧಾರಣೆಯೇನೂ ಆಗಿಲ್ಲ.

ಗ್ರಾಮೀಣ ಕುಡಿಯುವ ನೀರು ಪೂರೈಕೆ ಯೋಜನೆಯಾಗಿರುವ ಜಲಜೀವನ್ ಮಿಶನ್‌ನ 2021-22ರ ಬಜೆಟ್ ಅನುದಾನವನ್ನು ಅಭೂತಪೂರ್ವವೆಂಬಂತೆ 50,011 ಕೋಟಿ ರೂಪಾಯಿಗೆ ಏರಿಸಲಾಗಿತ್ತು. 2022-23 ಬಜೆಟ್‌ನಲ್ಲಿ ಈ ಅನುದಾನವನ್ನು 60,000 ಕೋಟಿ ರೂಪಾಯಿಗೆ ಮತ್ತೆ ಏರಿಸಲಾಯಿತು. ಆದರೆ, 2021-22ರ ಅನುದಾನದ ಪೈಕಿ ಕೇವಲ ಶೇ.26ನ್ನು 2022 ಜನವರಿವರೆಗೆ ಬಳಸಿಕೊಳ್ಳಲಾಗಿದೆ ಎಂದು ಜಲಸಂಪನ್ಮೂಲಗಳ ಕುರಿತ ಸ್ಥಾಯಿ ಸಮಿತಿ (2021-22)ಯ ವರದಿಯೊಂದು ತಿಳಿಸಿದೆ. ಆ ಹಣಕಾಸು ವರ್ಷದ ಉಳಿದ ಅವಧಿಯಲ್ಲಿ ಅವಸರವಸರವಾಗಿ ಖರ್ಚು ಮಾಡಿದರೆ ತೃಪ್ತಿಕರ ಫಲಿತಾಂಶ ಸಿಗುವುದಿಲ್ಲ. ಬದಲಿಗೆ, ಅದು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತದೆ. ಅದಕ್ಕಿಂತ ಹಿಂದಿನ ವರ್ಷದ ಅವಧಿಯಲ್ಲೂ ಒಟ್ಟಾರೆ ಖರ್ಚಿನ ಪ್ರಮಾಣ ತೀರಾ ಕಡಿಮೆಯಾಗಿತ್ತು ಮತ್ತು 10 ರಾಜ್ಯಗಳು 2021 ಜನವರಿವರೆಗೆ ಶೇ. 50ಕ್ಕೂ ಕಡಿಮೆ ಪ್ರಮಾಣದಲ್ಲಿ ಹಣವನ್ನು ಬಳಸಿಕೊಂಡಿದ್ದವು.

ಕುಡಿಯುವ ನೀರಿನ ಗುಣಮಟ್ಟದ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಹಲವಾರು ವರದಿಗಳು ಕಳವಳಗಳನ್ನು ವ್ಯಕ್ತಪಡಿಸಿವೆ. ನೀರಿನ ಗುಣಮಟ್ಟವನ್ನು ಉತ್ತಮಪಡಿಸುವ ಉದ್ದೇಶಕ್ಕಾಗಿ ಈ ಅನುದಾನಗಳಲ್ಲಿ ಮೀಸಲಿಡಲಾಗಿರುವ ಹಣವನ್ನೂ ಸರಿಯಾಗಿ ಬಳಸಿಕೊಳ್ಳಲಾಗಿಲ್ಲ. ಕೆಲವು ರಾಜ್ಯಗಳು ಈ ಬಗ್ಗೆ ತೀರಾ ನಿರ್ಲಕ್ಷ ವಹಿಸಿವೆ. ಕೇವಲ 10 ಶೇಕಡಾದಷ್ಟು ಭಾಗವನ್ನು ಮಾತ್ರ ಬಳಸಿಕೊಳ್ಳಲಾಗಿದೆ. ಹಾಗಾಗಿ, ನೀರಿನ ಗುಣಮಟ್ಟದ ಉಪ ಯೋಜನೆಯ ಪ್ರಗತಿಯೂ ನಿಧಾನವಾಗಿದೆ. ಅದೇ ರೀತಿ, ನೀರಿನ ಗುಣಮಟ್ಟ ಪರೀಕ್ಷಾ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವುದಕ್ಕಾಗಿ ನಿಗದಿಪಡಿಸಲಾಗಿರುವ ಹಣವನ್ನೂ ಸರಿಯಾಗಿ ಬಳಸಿಕೊಳ್ಳಲಾಗಿಲ್ಲ. ಜಲ ಸಂಪನ್ಮೂಲಗಳ ಮೇಲಿನ ಸ್ಥಾಯಿ ಸಮಿತಿಯ 2021-22ರ ಸಾಲಿನ ವರದಿ ಇದರ ಬಗ್ಗೆ ಗಮನ ಸೆಳೆದಿದೆ ಮತ್ತು ನೀರು ಪರೀಕ್ಷಾ ಪ್ರಯೋಗಾಲಯಗಳು ಕಡಿಮೆಯಾಗುತ್ತಿರುವ ಬಗ್ಗೆಯೂ ಆತಂಕ ವ್ಯಕ್ತಪಡಿಸಿದೆ.

ಪೈಪ್‌ಲೈನ್‌ಗಳು ಮತ್ತು ನಳ್ಳಿಗಳನ್ನು ಅಳವಡಿಸುವುದಕ್ಕೆ ಜಲ ಜೀವನ್ ಯೋಜನೆಯು ಹೆಚ್ಚಿನ ಆದ್ಯತೆ ನೀಡುತ್ತದೆ. ನೀರಿನ ಸಂರಕ್ಷಣೆ ಮತ್ತು ಮರುಪೂರಣದ ನಿಟ್ಟಿನಲ್ಲಿ ಕೆಲಸ ಮಾಡುವ ಅವಕಾಶವನ್ನೂ ಅದು ಹೊಂದಿದೆ. ಪೈಪ್‌ಗಳು ಮತ್ತು ನಳ್ಳಿಗಳ ಸಂಖ್ಯೆಯು ಖಂಡಿತವಾಗಿಯೂ ಹೆಚ್ಚುತ್ತಿದೆ. ಆದರೆ ಒಟ್ಟಾರೆ ಪರಿಸರ ನಾಶ ಮತ್ತು ಜಾಗತಿಕ ತಾಪಮಾನ ಹಾಗೂ ಹಲವಾರು ಜಲ ಮೂಲಗಳಿಗೆ ಆಗಿರುವ ಹಾನಿಯಿಂದಾಗಿ ಈ ನಳ್ಳಿಗಳಲ್ಲಿ ಹರಿಯಬೇಕಾಗಿರುವ ನೀರಿನ ಮೂಲಗಳು ಬರಿದಾಗುತ್ತಿವೆ. ಹಾಗಾಗಿ, ಬಿರು ಬಿಸಿಲಿನ ದಿನಗಳಲ್ಲಿ ನೀರಿನ ಗರಿಷ್ಠ ಅಗತ್ಯವಿರುವಾಗ ಈ ನಳ್ಳಿಗಳಲ್ಲಿ ನೀರೇ ಇರುವುದಿಲ್ಲ.

ಜಾಗತಿಕ ತಾಪಮಾನದ ಈ ದಿನಗಳಲ್ಲಿ ಸುಡುವ ಬೇಸಿಗೆಗಳಿಂದಾಗಿಯೇ ಜಲ ಮೂಲಗಳು ಬತ್ತಿಹೋಗುತ್ತಿವೆ. ವಿವೇಚನಾರಹಿತ ಗಣಿಗಾರಿಕೆ, ಅರಣ್ಯನಾಶ, ಹಸಿರು ಮರಗಳ ನಾಶ ಮತ್ತು ಸಾಮಾನ್ಯಕ್ಕಿಂತ ಅಗಾಧ ಪ್ರಮಾಣದಲ್ಲಿ ಹೆಚ್ಚು ನೀರು ಬೇಕಾಗುವ ಬೆಳೆಗಳು ಅಥವಾ ತಂತ್ರಜ್ಞಾನಗಳು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿವೆ. ನೀರಿಲ್ಲದ ಸ್ಥಳಗಳಲ್ಲಿ ಅತಿ ಹೆಚ್ಚು ನೀರು ಬೇಕಾಗುವ ಹಲವಾರು ಕೈಗಾರಿಕೆಗಳನ್ನು ಸ್ಥಾಪಿಸಲಾಗಿದ್ದು ಪರಿಸ್ಥಿತಿ ಬಿಗಡಾಯಿಸಿದೆ. ಲಭ್ಯವಿರುವ ಒಟ್ಟು ಅಂತರ್ಜಲ ನಿಕ್ಷೇಪಗಳ ಶೇ. 35 ಭಾಗವು ಈಗಾಗಲೇ ಅಪಾಯಕ್ಕೊಳಗಾಗಿದೆ ಅಥವಾ ಅದನ್ನು ಗರಿಷ್ಠ ಪ್ರಮಾಣದಲ್ಲಿ ದುರುಪಯೋಗಪಡಿಕೊಳ್ಳಲಾಗಿದೆ.

ಪ್ರಭಾವಿಗಳು ಮತ್ತು ಬಲಾಢ್ಯರು ತಮ್ಮ ಬಳಕೆಗಾಗಿ ಗರಿಷ್ಠ ನೀರನ್ನು ಪಡೆಯುವ ಪ್ರವೃತ್ತಿಯನ್ನು ಮುಂದುವರಿಸಿಕೊಂಡು ಹೋಗಿದ್ದಾರೆ. ಇದರಿಂದಾಗಿ ದುರ್ಬಲ ವರ್ಗದ ಜನರಿಗೆ ಕುಡಿಯುವ ನೀರು ಸಿಗುವುದೂ ಕಷ್ಟವಾಗಿದೆ. ಸುತ್ತಲಿನ ಹಳ್ಳಿಗಳಲ್ಲಿ ನೀರಿನ ತೀವ್ರ ಸಮಸ್ಯೆ ಇರುವ ಹೊರತಾಗಿಯೂ, ಹಲವು ಸ್ಥಳಗಳಲ್ಲಿ ಮದ್ಯ ತಯಾರಿಕಾ ಕಂಪೆನಿಗಳು ಗರಿಷ್ಠ ನೀರನ್ನು ಬಳಸುತ್ತವೆ.

ಪ್ರಭಾವಿ ಮತ್ತು ಶ್ರೀಮಂತ ಕೈಗಾರಿಕೆಗಳು ವರ್ಷಗಳಿಂದಲೂ ನೀರಿನ ಮೂಲಗಳನ್ನು ಕಲುಷಿತಗೊಳಿಸುವುದನ್ನು ಮುಂದುವರಿಸಿವೆ. ಇದರ ಅಗಾಧ ದುಷ್ಪರಿಣಾಮಗಳನ್ನು ಭಾರೀ ಸಂಖ್ಯೆಯ ಜನರು ಅನುಭವಿಸುತ್ತಿದ್ದಾರೆ. ಶ್ರೀಮಂತರು ಮಾಡುವ ತಪ್ಪುಗಳಿಗಾಗಿ ಜನರು ತಮ್ಮ ಆರೋಗ್ಯವನ್ನೇ ಬಲಿಕೊಡುತ್ತಿದ್ದಾರೆ. ಭಾರತದಲ್ಲಿರುವ ಪ್ರತಿ ನಾಲ್ಕು ನದಿ ವೀಕ್ಷಣಾ ಕೇಂದ್ರಗಳ ಪೈಕಿ ಮೂರು ನದಿಗಳಲ್ಲಿ ಅಗಾಧ ಪ್ರಮಾಣದಲ್ಲಿ ಸೀಸ, ಕಬ್ಬಿಣ, ನಿಕ್ಕಲ್, ಕ್ಯಾಡ್ಮಿಯಮ್, ಆರ್ಸೆನಿಕ್, ಕ್ರೋಮಿಯಮ್ ಮತ್ತು ತಾಮ್ರ ಮುಂತಾದ ಅತ್ಯಂತ ವಿಷಕಾರಿ ಲೋಹಗಳ ಅಂಶಗಳು ಇರುವುದನ್ನು ಗುರುತಿಸಿವೆ.

ಹಿಮಾಲಯ ವಲಯದಲ್ಲಿ ಮರಳು ಗಣಿಗಾರಿಕೆ ಮತ್ತು ಇತರ ಗಣಿಗಾರಿಕೆಗಳಿಂದಾಗಿ ಜಲ ಮೂಲಗಳು ನಾಶಗೊಳ್ಳುತ್ತಿರುವ ಅಥವಾ ಕಲುಷಿತಗೊಳ್ಳುತ್ತಿರುವ ಸುದ್ದಿಗಳನ್ನು ನಾವು ನಿರಂತರವಾಗಿ ಕೇಳುತ್ತಿದ್ದೇವೆ. ಹಳ್ಳಿಗಳ ಕುಡಿಯುವ ನೀರಿನ ಮೂಲಾಧಾರವಾಗಿರುವ ಅಗಾಧ ಸಂಖ್ಯೆಯ ನೀರಿನ ಒರತೆಗಳು ಬತ್ತಿಹೋಗಿವೆ ಅಥವಾ ಸಂಪೂರ್ಣವಾಗಿ ಮರೆಯಾಗಿವೆ. ಹೆದ್ದಾರಿ ಮತ್ತು ಅಣೆಕಟ್ಟು ನಿರ್ಮಾಣಗಳಿಂದಾಗಿ ನದಿಗಳಲ್ಲಿ ಭಾರೀ ಪ್ರಮಾಣದಲ್ಲಿ ತ್ಯಾಜ್ಯ ತುಂಬಿವೆ ಎಂಬುದಾಗಿ ವರದಿಗಳು ಹೇಳಿವೆ. ಚಾರ್‌ಧಾಮ್ ಯೋಜನೆಯಲ್ಲಿ, ಹಲವಾರು ಜಲ ಸಂಪನ್ಮೂಲಗಳು ನಿರ್ಮಾಣ ಕಾಮಗಾರಿಗಳ ತ್ಯಾಜ್ಯಗಳ ಅಡಿಯಲ್ಲಿ ಸಮಾಧಿಯಾಗಿವೆ. ಇದರಿಂದಾಗಿ ಸುತ್ತಮುತ್ತಲ ಹಳ್ಳಿಗಳ ಜನರು ನೀರಿನಿಂದ ವಂಚಿತರಾಗಿರುವುದಷ್ಟೇ ಅಲ್ಲ, ಹಲವಾರು ಸ್ಥಳಗಳಲ್ಲಿ ಅಪಾಯಕಾರಿ ಸನ್ನಿವೇಶಗಳು ಸೃಷ್ಟಿಯಾಗಿವೆ. ಇತ್ತೀಚಿನ ಸಮಯದಲ್ಲಿ, ವಿವೇಚನಾರಹಿತ ನಿರ್ಮಾಣ ಕಾಮಗಾರಿಗಳಿಂದಾಗಿ ಇಲ್ಲಿನ ಲಕ್ಷಾಂತರ ಮರಗಳನ್ನು ಕಡಿಯಲಾಗಿದೆ. ಈ ಪೈಕಿ ಹೆಚ್ಚಿನ ನಾಶವನ್ನು ಉತ್ತಮ ಯೋಜನೆಗಳ ಮೂಲಕ ತಡೆಯಬಹುದಾಗಿತ್ತು.

ಮಧ್ಯ ಭಾರತದ 13 ಜಿಲ್ಲೆಗಳಲ್ಲಿ ಹರಡಿರುವ ಬುಂದೇಲ್‌ಖಂಡ ವಲಯವು ತೀವ್ರ ನೀರಿನ ಕೊರತೆಗೆ ಪ್ರಸಿದ್ಧವಾಗಿದೆ. ಆದರೆ, ಇದರ ಹೊರತಾಗಿಯೂ, ವಲಯದಲ್ಲಿ ಅವ್ಯಾಹತ ಪರಿಸರ ನಾಶ, ಅತ್ಯಂತ ವಿವೇಚನಾರಹಿತ ಗಣಿಗಾರಿಕೆಗಳು ಬೃಹತ್ ಪ್ರಮಾಣದಲ್ಲಿ ಮುಂದುವರಿದಿವೆ. ಕೆನ್ ಮತ್ತು ಬೇತ್ವಾ ನದಿಗಳ ಜೋಡಣೆ ಯೋಜನೆಗಾಗಿ 20 ಲಕ್ಷದಿಂದ 30 ಲಕ್ಷ ಮರಗಳನ್ನು ಕಡಿಯುವ ಪ್ರಸ್ತಾಪವಿದೆ. ಹಾಗಾಗಿ, ಈ ಕಾರ್ಯಸಾಧುವಲ್ಲದ ಯೋಜನೆಗೆ ಭಾರೀ ಟೀಕೆ ವ್ಯಕ್ತವಾಗಿದೆ.

ಈ ವಲಯವು ಅತ್ಯುನ್ನತ ನೀರು ಸಂರಕ್ಷಣಾ ವಿಧಾನಕ್ಕೆ ಪ್ರಸಿದ್ಧವಾಗಿದೆ. ಇದಕ್ಕೆ ಹಲವಾರು ಐತಿಹಾಸಿಕ ಕೆರೆಗಳೇ ಸಾಕ್ಷಿಯಾಗಿವೆ. ಈ ಪೈಕಿ ಹಲವಾರು ಕೆರೆಗಳು ನೂರಾರು ವರ್ಷಗಳ ಬಳಿಕವೂ ಜನರಿಗೆ ನೀರುಣಿಸುವ ಕೆಲಸವನ್ನು ಮುಂದುವರಿಸುತ್ತಿವೆ. ಆದರೆ, ಇತರ ಹಲವಾರು ಕೆರೆಗಳು ಅತಿಕ್ರಮಣಕ್ಕೊಳಗಾಗಿವೆ ಮತ್ತು ನಿರ್ಲಕ್ಷಿಸಲ್ಪಟ್ಟಿವೆ. ಈ ಕೆರೆಗಳನ್ನು ಅಭಿವೃದ್ಧಿಪಡಿಸುವುದನ್ನು ಬಿಟ್ಟು ಸರಕಾರವು ತನ್ನ ಹೆಚ್ಚಿನ ಸಂಪನ್ಮೂಲಗಳನ್ನು ಅತ್ಯಂತ ವೆಚ್ಚದಾಯಕ ಬೃಹತ್ ಅಣೆಕಟ್ಟು ಯೋಜನೆಗಳ ಮೇಲೆ ಸುರಿಯುತ್ತಿದೆ. ಆದರೆ ಈ ಅಣೆಕಟ್ಟುಗಳ ಪ್ರಯೋಜನಗಳೂ ಹಿಂದೆ ಭಾವಿಸಿರುವುದಕ್ಕಿಂತ ತುಂಬಾ ಕಡಿಮೆ ಎನ್ನುವುದು ಇತ್ತೀಚೆಗೆ ಬಯಲಾಗಿದೆ. ಈ ಯೋಜನೆಗಳು ಅಗಾಧ ಸಂಖ್ಯೆಯ ಜನರನ್ನು ಒಕ್ಕಲೆಬ್ಬಿಸುವುದು ಮಾತ್ರವಲ್ಲ, ಕೃತಕ ನೆರೆಗಳಿಗೂ ಕಾರಣವಾಗುತ್ತಿವೆ. ಈ ಎಲ್ಲ ಯೋಜನೆಗಳ ಪೈಕಿ, 45,000 ಕೋಟಿ ರೂಪಾಯಿ ವೆಚ್ಚದ ಕೇನ್-ಬೇತ್ವಾ ನದಿಗಳ ಜೋಡಣಾ ಯೋಜನೆಯು ಅತ್ಯಂತ ವ್ಯರ್ಥ ಯೋಜನೆಯಾಗಿದೆ.

ರಾಷ್ಟ್ರೀಯ ಮಟ್ಟದಲ್ಲಿ ಇಂತಹ ಸುಮಾರು 30 ನದಿ ಜೋಡಣಾ ಯೋಜನೆಗಳನ್ನು ರೂಪಿಸಲಾಗಿದೆ. ಇವುಗಳಿಗೆ ಸುಮಾರು 15 ಲಕ್ಷ ಕೋಟಿ ರೂಪಾಯಿ ವೆಚ್ಚವಾಗುವುದೆಂದು ಅಂದಾಜಿಸಲಾಗಿದೆ.

ಆದರೆ, ಈ ನದಿ ಜೋಡಣಾ ಯೋಜನೆಯು ಜನರ ಅಗಾಧ ನಿರ್ವಸತಿ ಹಾಗೂ ಬೃಹತ್ ಪ್ರಮಾಣದ ಅರಣ್ಯ ಮತ್ತು ಪರಿಸರ ನಾಶಕ್ಕೆ ಕಾರಣವಾಗುವುದಷ್ಟೇ ಅಲ್ಲದೆ ಇಡೀ ನದಿ ಪರಿಸರ ವ್ಯವಸ್ಥೆಯನ್ನೇ ಹಾಳುಗೆಡವುತ್ತದೆ ಎಂಬ ಭೀತಿಯನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

ಇಂತಹ ನಿರುಪಯುಕ್ತ ಯೋಜನೆಗಳಿಗಾಗಿ ಭಾರತವು ತನ್ನ ಅಗಾಧ ಸಂಪನ್ಮೂಲಗಳನ್ನು ವ್ಯರ್ಥ ಮಾಡುವುದು ಸಾಧ್ಯವಿಲ್ಲ. ಜಗತ್ತಿನ ಸಿಹಿ ನೀರಿನ ಶೇ. 4 ಮತ್ತು ಜಾಗತಿಕ ಜನಸಂಖ್ಯೆಯ ಶೇ. 18 ಭಾರತದಲ್ಲಿ ಇದೆ. ಹಾಗಾಗಿ, ನಮ್ಮ ಸೀಮಿತ ಜಲ ಸಂಪನ್ಮೂಲಗಳನ್ನು ಬಳಸುವಾಗ ಮತ್ತು ನಮ್ಮ ಸೀಮಿತ ಬಜೆಟನ್ನು ನಿಭಾಯಿಸುವಾಗ ನಾವು ಅತ್ಯಂತ ಜಾಗರೂಕವಾಗಿರಬೇಕಾಗುತ್ತದೆ. ಲಭ್ಯವಿರುವ ಸೀಮಿತ ಬಜೆಟ್‌ನಿಂದಲೇ ನಮ್ಮ ಮಾನವ ಜನಸಂಖ್ಯೆ ಮತ್ತು ಇತರ ಜೀವಿಗಳ ಅಗತ್ಯಗಳನ್ನು ಪೂರೈಸಬೇಕಾಗಿದೆ.

 ಕೃಪೆ: countercurrents.org

Writer - ಭರತ್ ಡೋಗ್ರಾ

contributor

Editor - ಭರತ್ ಡೋಗ್ರಾ

contributor

Similar News