ಭೀಮಾ ಕೋರೆಗಾಂವ್ ಪ್ರಕರಣ: ಬಂಧಿತರ ಸಾಧನಗಳಲ್ಲಿ ನಕಲಿ ಸಾಕ್ಷ್ಯಇರಿಸಿದ್ದ ಪೊಲೀಸರು; ವರದಿ

Update: 2022-06-17 12:34 GMT
ವರವರ ರಾವ್ (File Photo: PTI)

ಹೊಸದಿಲ್ಲಿ: ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಗಳಾಗಿರುವ ರೋನಾ ವಿಲ್ಸನ್, ವರವರ ರಾವ್ ಮತ್ತು ಹನಿ ಬಾಬು ಅವರ ಸಾಧನಗಳಲ್ಲಿ ನಕಲಿ ಸಾಕ್ಷ್ಯವನ್ನು ಇರಿಸಲಾಗಿತ್ತು ಎಂದು ಅಮೆರಿಕ ಮೂಲದ ಸೈಬರ್ ಸೆಕ್ಯುರಿಟಿ ಸಂಸ್ಥೆಯಾಗಿರುವ ಸೆಂಟಿನೆಲ್‍ಒನ್ ವರದಿ ಮಾಡಿದೆಯೆಂದು Wired ವರದಿ ಪ್ರಕಟಿಸಿದೆ.

ಈ ಮೂವರನ್ನು ಬಂಧಿಸಿದವರು ಮತ್ತು ಸಾಕ್ಷ್ಯಗಳನ್ನು ಅವರ ಸಾಧನಗಳಲ್ಲಿ ಇರಿಸಿದವರ ನಡುವೆ ಸಾಬೀತುಪಡಿಸಬಹುದಾದ ಸಂಪರ್ಕವಿದೆ ಎಂದು ಸೆಂಟಿನೆಲ್‍ಒನ್  ಸಂಸ್ಥೆಯ ಸಂಶೋಧಕ ಜುವಾನ್ ಆಂಡ್ರೆಸ್ ಗುವೆರ್ರೇರೊ-ಸಾದೆ ಹೇಳಿದ್ದಾರೆ.

ಈ ಪ್ರಕರಣದಲ್ಲಿ ಹೋರಾಟಗಾರರು ಮತ್ತು ವಕೀಲರು ಸೇರಿದಂತೆ ಪುಣೆ ಪೊಲೀಸರು 16 ಮಂದಿಯನ್ನು ಬಂಧಿಸಿದ್ದರು.

ಇಮೇಲ್ ಸೇವಾ ಪೂರೈಕೆದಾರರೊಬ್ಬರ ಭದ್ರತಾ ವಿಶ್ಲೇಷಕರೊಂದಿಗೆ ಈಗ ಕೆಲಸ ಮಾಡುತ್ತಿರುವ ಸೆಂಟಿನೆಲ್‍ಒನ್ ಪ್ರಕಾರ ಭೀಮಾ ಕೋರೆಗಾಂವ್ ಪ್ರಕರಣದ ತನಿಖೆಯ ಭಾಗವಾಗಿರುವ ಪುಣೆಯ ಪೊಲೀಸ್ ಅಧಿಕಾರಿಯೊಬ್ಬರಿಗೂ ಈ ಹ್ಯಾಕಿಂಗ್‍ಗೂ ನಂಟಿದೆ. ಆದರೆ ತಮ್ಮ ಹೆಸರು ಬಹಿರಂಗಪಡಿಸದಂತೆ ಭದ್ರತೆ ವಿಶ್ಲೇಷಕ ಸೂಚಿಸಿದ್ದಾರೆಂದೂ Wired ವರದಿ ತಿಳಿಸಿದೆ.

ವಿಲ್ಸನ್ ರಾವ್ ಮತ್ತು ಬಾಬು ಅವರ ಇಮೇಲ್ ಖಾತೆಗಳು 2018 ಹಾಗೂ 2019ರಲ್ಲಿ ಹ್ಯಾಕ್ ಆಗಿತ್ತೆನ್ನಲಾಗಿದೆ. ಅವರ ಖಾತೆಗಳಿಗೆ ಒಂದು ರಿಕವರಿ ಇಮೇಲ್ ವಿಳಾಸ ಮತ್ತು ಫೋನ್ ಸಂಖ್ಯೆ ಇತ್ತು ಹಾಗೂ ಈ ರಿಕವರಿ ಇಮೇಲ್‍ನಲ್ಲಿ ಆ ನಿರ್ದಿಷ್ಟ ಪುಣೆ ಪೊಲೀಸ್ ಅಧಿಕಾರಿಯ ಹೆಸರಿತ್ತು ಎಂದು Wired ವರದಿ ಮಾಡಿದೆ.

ಮೂವರು ತಮ್ಮ ಪಾಸ್‍ವರ್ಡ್‍ಗಳನ್ನು ಬದಲಾಯಿಸಿದರೂ ಅವರ ಖಾತೆಗಳಿಗೆ ಪ್ರವೇಶ ಪಡೆಯುವುದು ಈ ರಿಕವರಿ ಇಮೇಲ್ ವಿಳಾಸ ಮೂಲಕ ಪೊಲೀಸ್ ಅಧಿಕಾರಿಗೆ ಅವಕಾಶ ಒದಗಿಸಿತ್ತು. ಹ್ಯಾಕ್ ಮಾಡಲಾದ ಖಾತೆಗಳನ್ನು  ಮೋಡಿಫೈಡ್ ಎಲಿಫೆಂಟ್‍ಗೆ ಸಂಬಂಧಿಸಿದ ಐಪಿ ವಿಳಾಸಗಳ ಮೂಲಕ ಪ್ರವೇಶಿಸಲಾಗಿತ್ತು ಎಂದೂ ವರದಿ ತಿಳಿದಿದೆ.

ವಿಲ್ಸನ್ ಅವರ ಖಾತೆಗೆ ಸಂಬಂಧಿಸಿದ ರಿಕವರಿ ಇಮೇಲ್ ಅನ್ನು ಎಪ್ರಿಲ್ 2018ರಲ್ಲಿ ಸೇರಿಸಲಾಗಿತ್ತು. ಇದೇ ಸಮಯ ಅವರಿಗೆ ಫಿಶಿಂಗ್ ಇಮೇಲ್ ಬಂದಿತ್ತು ಎಂದೂ ವರದಿ ತಿಳಿಸಿದೆ.

ನಂತರ ಅವರ ಇಮೇಲ್ ಬಳಸಿ  ಭೀಮಾ ಕೋರೆಗಾಂವ್ ಪ್ರಕರಣದ ಇತರ ಆರೋಪಿಗಳಿಗೆ ಫಿಶಿಂಗ್ ಇಮೇಲ್ ಕಳುಹಿಸಲು ಬಳಸಲಾಗಿತ್ತು. ವಿಲ್ಸನ್ ಅವರ ಬಂಧನಕ್ಕಿಂತ ಎರಡು ತಿಂಗಳು ಮುನ್ನ ಈ ಕೆಲಸ ನಡೆದಿತ್ತು ಎಂದು ವರದಿಯಾಗಿದೆ.

ಈ ವಿಚಾರ ಬಹಿರಂಗಗೊಂಡಿರುವುದರಿಂದ ಆರೋಪಿಗಳಿಗೆ ನ್ಯಾಯ ದೊರೆಯಬಹುದೆಂಬ ನಿರೀಕ್ಷೆ ನಮ್ಮದು ಎಂದು ಜುವಾನ್ ಆಂಡ್ರೆಸ್ ಹೇಳಿದ್ದಾರೆ.

ಪ್ರಕರಣದ 16 ಆರೋಪಿಗಳ ಪೈಕಿ ಬಾಬು ಮತ್ತು ವಿಲ್ಸನ್ ಸೇರಿದಂತೆ 12 ಮಂದಿ ಈಗಲೂ ಜೈಲಿನಲ್ಲಿದ್ದಾರೆ. ವರವರ ರಾವ್ ವೈದ್ಯಕೀಯ ಕಾರಣಗಳಿಗಾಗಿ ತಾತ್ಕಾಲಿಕ ಜಾಮೀನಿನಲ್ಲಿದ್ದು ಅವರ ಜಾಮೀನು ಮುಂದಿನ ತಿಂಗಳು ಮುಗಿಯಲಿದೆ. ವಕೀಲೆ ಹೋರಾಟಗಾರ್ತಿ ಸುಧಾ ಭಾರದ್ವಾಜ್ ಅವರಿಗೆ ಕಳೆದ ಡಿಸೆಂಬರಿನಲ್ಲಿ ಜಾಮೀನು ದೊರಕಿದ್ದರೆ, ಇನ್ನೊಬ್ಬ ಬಂಧಿತ ಸ್ಟಾನ್ ಸ್ವಾಮಿ ಕಸ್ಟಡಿಯಲ್ಲಿರುವಾಗಲೇ ಜುಲೈ 5ರಂದು ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News