ವೆಚ್ಚ ಕಡಿತಕ್ಕೆ ಕೇಂದ್ರ ಸರ್ಕಾರ ಯೋಚನೆ: ಕಡಿಮೆ ದರದ ಟಿಕೆಟ್‌ ಇರುವ ವಿಮಾನದಲ್ಲಿ ಪ್ರಯಾಣಿಸಲು ನೌಕರರಿಗೆ ಸೂಚನೆ

Update: 2022-06-19 17:52 GMT

ಹೊಸದಿಲ್ಲಿ: ಅನಗತ್ಯ ವೆಚ್ಚವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ಉದ್ದೇಶಿಸಿದ್ದು, ಪ್ರಯಾಣಿಸಲು ಲಭ್ಯವಿರುವ ಅಗ್ಗದ ದರದ ವಿಮಾನಗಳನ್ನು ಆಯ್ಕೆ ಮಾಡಲು ಹಣಕಾಸು ಸಚಿವಾಲಯವು ಸರ್ಕಾರಿ ಉದ್ಯೋಗಿಗಳಿಗೆ ನಿರ್ದೇಶನಗಳನ್ನು ನೀಡಿದೆ ಎಂದು ಪಿಟಿಐ ವರದಿ ಮಾಡಿದೆ. 

ವಿತ್ತ ಸಚಿವಾಲಯವು ಉದ್ಯೋಗಿಗಳಿಗೆ ಅವರು ಅರ್ಹರಾಗಿರುವ ಪ್ರಯಾಣದ ವರ್ಗದಲ್ಲಿ ಅಗ್ಗದ ದರವನ್ನು ಆಯ್ಕೆ ಮಾಡಲು ಸೂಚಿಸಿದೆ. ಮಾತ್ರವಲ್ಲ, ನೌಕರರು ತಮ್ಮ ವಿಮಾನ ಟಿಕೆಟ್‌ಗಳನ್ನು ಪ್ರಯಾಣದ ದಿನಾಂಕಕ್ಕಿಂತ ಕನಿಷ್ಠ ಮೂರು ವಾರಗಳ ಮೊದಲು ಎಲ್‌ಟಿಸಿಗೆ ಕಾಯ್ದಿರಿಸಬೇಕು ಎಂದು ಸೂಚಿಸಲಾಗಿದೆ.

ಸರ್ಕಾರಿ ನೌಕರರಿಗೆ ಮೂರು ಟ್ರಾವೆಲ್ ಏಜೆಂಟ್‌ಗಳಿಂದ ಮಾತ್ರ ವಿಮಾನ ಟಿಕೆಟ್‌ಗಳನ್ನು ಖರೀದಿಸಲು ಅಧಿಕಾರ ನೀಡಲಾಗಿದ್ದು, ಅವುಗಳೆಂದರೆ,  ಬೋಮರ್ ಲಾರಿ & ಕಂಪನಿ ಲಿಮಿಟೆಡ್, ಅಶೋಕ್ ಟ್ರಾವೆಲ್ಸ್ & ಟೂರ್ಸ್ ಮತ್ತು ಇಂಡಿಯನ್ ರೈಲ್ವೇಸ್ ಕ್ಯಾಟರಿಂಗ್ & ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್. ಎಲ್ಲಾ ಉದ್ಯೋಗಿಗಳಿಗೆ ಒಂದೇ ಪ್ರವಾಸಕ್ಕೆ ಟಿಕೆಟ್‌ಗಳನ್ನು ಆಯ್ದ ಟ್ರಾವೆಲ್ ಏಜೆನ್ಸಿ ಮೂಲಕ ಮಾತ್ರ ಮಾಡಬೇಕು, ಆ ಮೂಲಕ ಅನಗತ್ಯ ಟಿಕೆಟ್‌ ರದ್ದತಿಯನ್ನು ತಪ್ಪಿಸಬೇಕು ಎಂದು ಲಾಖೆ ಜೂನ್ 16 ರಂದು ಹೊರಡಿಸಿದ ಜ್ಞಾಪಕ ಪತ್ರದಲ್ಲಿ ತಿಳಿಸಿದೆ.

ಪ್ರವಾಸದ ಪ್ರಯಾಣದ ದಿನಾಂಕಕ್ಕಿಂತ ಕನಿಷ್ಠ 21 ದಿನಗಳ ಮೊದಲು ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಬೇಕು ಮತ್ತು ಪ್ರಯಾಣ ರಿಯಾಯಿತಿಯನ್ನು ಬಿಟ್ಟುಬಿಡಬೇಕು. ಅತ್ಯಂತ ಸ್ಪರ್ಧಾತ್ಮಕ ದರಗಳನ್ನು ಪಡೆಯಲು ಮತ್ತು ಬೊಕ್ಕಸದ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಪ್ರಯಾಣದ ಅನುಮೋದನೆ ಪ್ರಕ್ರಿಯೆಯು ಪ್ರಗತಿಯಲ್ಲಿರುವಾಗ ಬುಕ್ಕಿಂಗ್ ಮಾಡಬಹುದು ಎಂದು ಅದು ಹೇಳಿದೆ.

ಪ್ರಯಾಣದ ದಿನಾಂಕದ 72 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಫ್ಲೈಟ್ ಬುಕ್ಕಿಂಗ್ ಮಾಡುವ ಉದ್ಯೋಗಿಗಳು ಸ್ವಯಂ ಪ್ರೇರಿತ ಸಮರ್ಥನೆಯನ್ನು ಸಲ್ಲಿಸಬೇಕಾಗುತ್ತದೆ ಎಂದೂ ಅದು ಹೇಳಿದೆ. ಅನವಶ್ಯಕ ರದ್ದತಿಗಳನ್ನು ತಪ್ಪಿಸಲು ಉದ್ಯೋಗಿಗಳನ್ನು ಪ್ರೋತ್ಸಾಹಿಸಲಾಗುತ್ತದೆ ಎಂದು ಹೇಳಿರುವ ಹಣಕಾಸು ಸಚಿವಾಲಯ, ʼಉದ್ದೇಶಿತ ಪ್ರಯಾಣದ ಮೊದಲು 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಮಾಡಿದ ರದ್ದತಿಗೆ ಉದ್ಯೋಗಿ ಸ್ವಯಂ ಪ್ರೇರಿತ ಸಮರ್ಥನೆಯನ್ನು ಸಲ್ಲಿಸುವ ಅಗತ್ಯವಿದೆʼ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News