ಗೃಹಮಂತ್ರಿಗೆ ಕುವೆಂಪು ಬಗ್ಗೆ ದ್ವೇಷವಿದೆಯೇ?

Update: 2022-06-21 05:35 GMT

ಕುವೆಂಪು ಅವರ ಬಗ್ಗೆ ಕುತ್ಸಿತ ಮನೋಭಾವ ತೋರಿದ ವ್ಯಕ್ತಿಯ ಹಾಗೆ ಜ್ಞಾನೇಂದ್ರರಿಗೆ ಕುವೆಂಪು ಅವರ ಬಗ್ಗೆ ದ್ವೇಷ ಏಕೆ ಎಂದು ಗೊತ್ತಾಗುತ್ತಿಲ್ಲ. ನಾವು ಮಾತನಾಡುತ್ತಿರುವುದು ನಾಡಗೀತೆಯ ಬಗ್ಗೆ. ಭಾವನಾತ್ಮಕವಾಗಿ ಅದು ಪವಿತ್ರ. ಅಲ್ಲದೆ ಸಂಪ್ರದಾಯದ ಪ್ರಕಾರ ಅದಕ್ಕೆ ಅಗೌರವ ತೋರಿಸುವುದು ಅಪರಾಧ. ಇದರಲ್ಲಿ ಗೃಹಮಂತ್ರಿ ಭಾಗಿಯಾಗಬಾರದು.

ಕರ್ನಾಟಕ ರಾಜ್ಯದ ಮಾನ್ಯ ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರು ನಾಡಗೀತೆಯನ್ನು ತಿರುಚಿದ ವಿಷಯವನ್ನು ಕುರಿತು ಮತ್ತೆ ಒಂದು ಹೇಳಿಕೆಯನ್ನು ನೀಡಿದ್ದಾರೆ. ಸಂಗ್ರಹವಾಗಿ ಹೇಳುವುದಾದರೆ ಅವರ ಮಾತುಗಳು ಹೀಗಿವೆ: ಈ ಪ್ರಕರಣವನ್ನು ಕುರಿತು ಈಗಾಗಲೇ ತನಿಖೆಯನ್ನು ಆರಂಭಿಸಲಾಗಿದೆ. ಈಗ ಈ ತನಿಖೆಯು ನಾಡಗೀತೆಯನ್ನು ತಿರುಚಿ ಲೇವಡಿ ಮಾಡಿ Postಮಾಡಿದ ವ್ಯಕ್ತಿಯನ್ನು ಹುಡುಕುತ್ತಿದೆ. ಗೃಹಮಂತ್ರಿಯ ಪ್ರಕಾರ ಈ ಪ್ರಕರಣದಲ್ಲಿ ರೋಹಿತ್ ಚಕ್ರತೀರ್ಥರ ಪಾತ್ರವಿಲ್ಲ. ಅವರು ಕೇವಲ ತಮಗೆ ಬಂದ Post ಒಂದನ್ನು ಫಾರ್ವರ್ಡ್ ಮಾಡಿದ್ದಾರೆ. ಗೃಹಮಂತ್ರಿಯ ಪ್ರಕಾರ ಇದು ಅಪರಾಧವಲ್ಲ. ಅಲ್ಲದೆ ಈ ಫಾರ್ವರ್ಡ್ ಮಾಡಿದ ಪ್ರಕರಣ 2017ರಲ್ಲಿ ನಡೆದದ್ದು ಮತ್ತು ಆ ಕುರಿತು ಪೋಲೀಸರು ‘ಬಿ’ ವರದಿಯನ್ನು ಸಲ್ಲಿಸಿದ್ದರು. ಕೆಲವು ವಾರಗಳಿಂದ ನಡೆದಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮಾನ್ಯ ಗೃಹಮಂತ್ರಿ ಈ ಹೇಳಿಕೆಯನ್ನು ನೀಡಿದ್ದಾರೆ. ಸರಳ ಭಾಷೆಯಲ್ಲಿ ಹೇಳುವುದಾದರೆ ತನಿಖೆಯು ಆರಂಭವಾಗುವ ಮೊದಲೇ ತಾವೇ ‘ಬಿ’ ವರದಿ ಕೊಟ್ಟಿದ್ದಾರೆ. ಚಕ್ರತೀರ್ಥರು ಅಪರಾಧಿ ಅಲ್ಲವೆಂದು ತೀರ್ಪನ್ನು ಕೊಟ್ಟಿದ್ದಾರೆ. ಭಾರತವು ಸ್ವತಂತ್ರವಾಗಿ ವರ್ಷಗಳಾಗಿವೆ. ಇಲ್ಲಿಯ ಕಾನೂನುಗಳ ಬಗ್ಗೆ ನ್ಯಾಯಾಂಗದ ಬಗ್ಗೆ ಸಾಮಾನ್ಯ ಶಿಕ್ಷಿತ ವ್ಯಕ್ತಿಗಳಿಗೆ ಪರಿಚಯವಿರುತ್ತದೆ. ಈಗಂತೂ ಮಾಹಿತಿಯುಗದಲ್ಲಿ ಖಚಿತವಾದ ಮಾಹಿತಿಯು ಕ್ಷಣಮಾತ್ರದಲ್ಲಿ ದೊರೆಯುತ್ತದೆ. ನ್ಯಾಯಾಲಯಗಳು ಅನೇಕ ಬಾರಿ ಹೇಳಿದಂತೆ ಯಾವುದೇ ನಾಗರಿಕನು ಕಾನೂನಿನ ಬಗ್ಗೆ ಅಜ್ಞಾನವಿದೆಯೆಂದು ಜವಾಬ್ದಾರಿ ತಪ್ಪಿಸಿಕೊಳ್ಳಲಾಗದು. ಗೃಹಮಂತ್ರಿಗೆ ವಿಶೇಷವಾದ ಜವಾಬ್ದಾರಿ ಇರುತ್ತದೆ. ಅವರು ಕಾನೂನಿನ ಬಗ್ಗೆ ಅಜ್ಞಾನಿಗಳು ಆಗಿದ್ದರೆ ಅದು ಅಪಾಯಕಾರಿ ಹಾಗೂ ಅನಾಹುತಕಾರಿ. ಮಾನ್ಯ ಆರಗ ಜ್ಞಾನೇಂದ್ರರು ಪದೇ ಪದೇ ತಮ್ಮ ಅಜ್ಞಾನದಿಂದಾಗಿ ಮೊದಲೇ ಪ್ರಕ್ಷುಬ್ಧವಾಗಿರುವ ವಾತಾವರಣವನ್ನು ಸಂಕೀರ್ಣಗೊಳಿಸುತ್ತ ಬಂದಿದ್ದಾರೆ. ಬೆಂಗಳೂರಿನಲ್ಲಿ ನಡೆದ ಹತ್ಯೆಯೊಂದನ್ನು ಕೋಮುವಾದಕ್ಕೆ ಜೋಡಿಸಿ ಅವಸರದ ಹೇಳಿಕೆ ನೀಡಿ ಆಮೇಲೆ ನನಗೆ ತಪ್ಪುಮಾಹಿತಿ ಬಂದಿತ್ತು ಎಂದು ಮಾಧ್ಯಮಗಳ ಎದುರಿಗೆ ಕ್ಷಮೆ ಕೇಳಬೇಕಾಯಿತು. ಈಗ ಚಕ್ರತೀರ್ಥರ ಪರವಾಗಿ ಈ ಹೇಳಿಕೆ ಕೊಟ್ಟು ಬೇಜವಾಬ್ದಾರಿ ಹಾಗೂ ಅನೈತಿಕವಾಗಿ ನಡೆದುಕೊಂಡಿದ್ದಾರೆ. ಅದು ಹೇಗೆಂದರೆ,

1. ಗೃಹಮಂತ್ರಿ ಇಲಾಖೆಯ ವರದಿಗಾರರಲ್ಲ. ಅದರ Spokes man ಅಲ್ಲ. ಇದು ಅವರಿಗೆ ಇನ್ನೂ ಅರ್ಥವೇ ಆಗಿಲ್ಲ. ಖಚಿತವಾದ, ಲಿಖಿತವಾದ ಮಾಹಿತಿಯು ಗೃಹ ಇಲಾಖೆಯ ಅಧಿಕಾರಿಗಳಿಂದ ಬಂದಾಗ ಅದನ್ನು ಅವಶ್ಯವಿದ್ದರೆ ಮಾತ್ರ ಹಂಚಿಕೊಳ್ಳಬೇಕು. ಗೃಹಮಂತ್ರಿಯು ಸಂಘ ಪ್ರಚಾರಕರಲ್ಲ. ಈಗ ಚಕ್ರತೀರ್ಥ ಪ್ರಕರಣದ ತನಿಖೆ ಆರಂಭವಾಗಿದೆಯೆಂದು ಹೇಳಬಹುದೇ ಹೊರತು ಅದು ತಿರುಚಿದ PostOriginator ನ (ಮೂಲ ಕರ್ತೃ) ಬಗ್ಗೆ ಮಾತ್ರ ಎಂದು ಹೇಳಲಾಗದು. ಹಾಗೆ ಹೇಳಿರುವುದರಿಂದ ಚಕ್ರತೀರ್ಥರ ಬಗ್ಗೆ ಯಾವ ತನಿಖೆಯ ಅವಶ್ಯಕತೆಯೂ ಇಲ್ಲವೆಂದು ಗೃಹಮಂತ್ರಿ, ಸರಕಾರ ನಿರ್ದೇಶನ ನೀಡಿದೆ ಎಂದು ಅರ್ಥವಾಗುತ್ತದೆ. ಅಂದರೆ ತನಿಖೆಯು ಸತ್ಯದ ಬದಲು ಈ ಪ್ರಕಾರವೇ ನಡೆಯಬೇಕೆಂದು ಗೃಹಮಂತ್ರಿಗಳು ಆದೇಶ ನೀಡಿದ್ದಾರೆಯೇ? ತಮ್ಮ ಇಲಾಖೆಯ Protocol ಗೊತ್ತಿರದ ಈ ವ್ಯಕ್ತಿ ಗೃಹಮಂತ್ರಿಯಾಗಿರುವುದು ನಾಡಿನ ದುರಂತ.

2. ವಿಕೃತವಾದ Post ಒಂದನ್ನು ಫಾರ್ವರ್ಡ್ ಮಾಡುವುದು ಅಪರಾಧವಲ್ಲವೆಂದು ಹೇಳಿರುವುದು ದೇಶದ ಕಾನೂನುಗಳ ವಿರುದ್ಧವಾಗಿದೆ. ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ 2000ರ ಕಾಯ್ದೆ, ಆನಂತರ ಆದ ತಿದ್ದುಪಡಿಗಳು, ಸರ್ವೋಚ್ಚ ನ್ಯಾಯಾಲಯದ ಒಂದು ತೀರ್ಪು, ಅನೇಕ ಉಚ್ಚ ನ್ಯಾಯಾಲಯಗಳ ತೀರ್ಪು ಇವುಗಳ ಪ್ರಾಥಮಿಕ ಪರಿಚಯವೂ ಗೃಹಮಂತ್ರಿಗೆ ಇಲ್ಲದಿರುವುದು ಆತಂಕಕಾರಿಯಾಗಿದೆ. ಬೇರೆ ವಿವರಗಳಿಗೆ ಹೋಗುವುದಿಲ್ಲ ಏಕೆಂದರೆ ಗೃಹಮಂತ್ರಿಯ ತಿಳುವಳಿಕೆಗೆ ಕಷ್ಟವಾಗುತ್ತದೆ. ಇಂಥದೇ ಒಂದು ಪ್ರಕರಣವನ್ನು ಕುರಿತಂತೆ ಮದ್ರಾಸ್ ಉಚ್ಛ ನ್ಯಾಯಾಲಯವು ಖಚಿತವಾಗಿ ದೇಶದ ಕಾನೂನನ್ನು ವಿವರಿಸಿದೆ. ಅದು ಹೀಗೆ ಹೇಳಿದೆ Post “Forwarding message is equal to accepting the message and endorsing” (SVE Shekhar Vs. The Inspector of Police, 2018) ಅಂದರೆ ಒಂದು ಸಂದೇಶವನ್ನು ಫಾರ್ವರ್ಡ್ ಮಾಡುವುದೆಂದರೆ ಅದನ್ನು ಒಪ್ಪಿಕೊಂಡದ್ದಕ್ಕೆ ಸಮಾನ ಮತ್ತು ಆ ಸಂದೇಶವನ್ನು ಸಮರ್ಥಿಸಿದಂತೆ. ನ್ಯಾಯಾಲಯಗಳು ಹೀಗೆ ಹೇಳಿರುವಾಗ ಚಕ್ರತೀರ್ಥರು ಕೇವಲ ಫಾರ್ವರ್ಡ್ ಮಾಡಿದರು ಎನ್ನುವ ಗೃಹಮಂತ್ರಿಯ ಕಾನೂನಿನ ಅಜ್ಞಾನವು ಆಘಾತಕಾರಿಯಾಗಿದೆ. 3. ಎಲ್ಲ ಪ್ರಜ್ಞಾವಂತರು ಕೇಳುತ್ತಿರುವ ಪ್ರಶ್ನೆ. ಶ್ರೇಷ್ಠ ಕವಿ ಕುವೆಂಪು ಅವರು ಬರೆದ ನಾಡಗೀತೆಯನ್ನು ಅವಮಾನಿಸುವ ಒಂದು ನಮಗೆ ಬಂದರೆ ಅದನ್ನು ತಕ್ಷಣ ಡಿಲೀಟ್‌ಮಾಡಬೇಕು. ಅದನ್ನು ರಿಪೋರ್ಟ್ ಮಾಡಬೇಕು. ಕನ್ನಡಕ್ಕೆ ಹುಟ್ಟಿದವರಾಗಿದ್ದರೆ ಅದರ ಬಗ್ಗೆ ಪ್ರತಿಭಟಿಸಬೇಕು. ಬದಲಾಗಿ ಅದಕ್ಕೆ ‘ಇದರ ಮೂಲಕವಿ ಸಿಕ್ಕರೆ ಅವನಿಗೆ ಬಹುಮಾನ ಕೊಡುತ್ತೇನೆ’ ಎನ್ನುವ ಟಿಪ್ಪಣಿ ಬರೆಯುವ ಮಾನಸಿಕ ರೋಗಿಗೆ ಏನೆನ್ನಬೇಕು? ಇಂತಹವರನ್ನು ಕಾನೂನಿನ ಅಜ್ಞಾನವಿರಲಿ ಕಾಮನ್‌ಸೆನ್ಸ್ ಮತ್ತು ಸುಸಂಸ್ಕೃತ ಮನಸ್ಸು ಇಲ್ಲದ ಗೃಹಮಂತ್ರಿ ಸಮರ್ಥಿಸುವುದು ಬೇಜವಾಬ್ದಾರಿ ಮಾತ್ರವಲ್ಲ ರಾಜ್ಯಕ್ಕೆ ಮಾಡಿದ ದ್ರೋಹ. ಮದ್ರಾಸು ಉಚ್ಚ ನ್ಯಾಯಾಲಯದ ತರ್ಕವನ್ನು ಅನ್ವಯಿಸಿದರೆ ಫಾರ್ವರ್ಡ್ ಮಾಡಿದವನೂ ತಪ್ಪಿತಸ್ಥ, ಅದನ್ನು ಸಮರ್ಥಿಸುವ ಗೃಹಮಂತ್ರಿಯವರು ತಪ್ಪಿತಸ್ಥರು. ಅವರನ್ನೂ ಈ ಪ್ರಕರಣದಲ್ಲಿ ಅಪರಾಧಿಯೆಂದೇ ಪರಿಗಣಿಸಬೇಕಲ್ಲವೆ?

4. ತೀರ್ಥಹಳ್ಳಿಯವರಾದ ಆರಗ ಜ್ಞಾನೇಂದ್ರ ನನಗೆ ಪರಿಚಿತರು. ಒಂದು ಚಳವಳಿಯಲ್ಲಿ ನಮ್ಮ ಜೊತೆ ಇದ್ದವರು. ಅವರಿಂದ ಇದನ್ನು ನಿರೀಕ್ಷಿಸಿರಲಿಲ್ಲ. ಅಧಿಕಾರದ ಲಾಲಸೆಗಾಗಿ ತಮ್ಮ ಸಾರ್ವಜನಿಕ ವ್ಯಕ್ತಿತ್ವವನ್ನು ಅವರು ಹೀಗೆ ನಾಶಮಾಡಿಕೊಂಡಿದ್ದು ನನಗೆ ವಿಷಾದವನ್ನು ತಂದಿದೆ. ಕುವೆಂಪು ಅವರ ಬಗ್ಗೆ ಕುತ್ಸಿತ ಮನೋಭಾವ ತೋರಿದ ವ್ಯಕ್ತಿಯ ಹಾಗೆ ಜ್ಞಾನೇಂದ್ರರಿಗೆ ಕುವೆಂಪು ಅವರ ಬಗ್ಗೆ ದ್ವೇಷ ಏಕೆ ಎಂದು ಗೊತ್ತಾಗುತ್ತಿಲ್ಲ. ನಾವು ಮಾತನಾಡುತ್ತಿರುವುದು ನಾಡಗೀತೆಯ ಬಗ್ಗೆ. ಭಾವನಾತ್ಮಕವಾಗಿ ಅದು ಪವಿತ್ರ. ಅಲ್ಲದೆ ಸಂಪ್ರದಾಯದ ಪ್ರಕಾರ ಅದಕ್ಕೆ ಅಗೌರವ ತೋರಿಸುವುದು ಅಪರಾಧ. ಇದರಲ್ಲಿ ಗೃಹಮಂತ್ರಿ ಭಾಗಿಯಾಗಬಾರದು. ಇದು ನನ್ನ ಭಿನ್ನಹ.

Writer - ಪ್ರೊ. ರಾಜೇಂದ್ರ ಚೆನ್ನಿ

contributor

Editor - ಪ್ರೊ. ರಾಜೇಂದ್ರ ಚೆನ್ನಿ

contributor

Similar News