ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಗ್ರಾಮಕ್ಕೆ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ

Update: 2022-06-26 17:39 GMT
photo: PTI

ಭುವನೇಶ್ವರ, ಜೂ. 26: ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಮಯೂರ್‌ಭಂಜ್ ಜಿಲ್ಲೆಯಲ್ಲಿರುವ ಪೂರ್ವಜರ ಗ್ರಾಮವಾದ ಉಪರ್ಬೇಡದ ಒಂದು ಭಾಗದಲ್ಲಿ ಒಡಿಶಾ ಸರಕಾರ ವಿದ್ಯುತ್ ಸಂಪರ್ಕ ನೀಡಲು ಕಾರ್ಯ ಆರಂಭಿಸಿದೆ.

ಆದರೆ, ಮುರ್ಮು ಅವರು ಈಗ ಈ ಗ್ರಾಮದಲ್ಲಿ ವಾಸಿಸುತ್ತಿಲ್ಲ. ಅವರು ಕುಸುಮಿ ಬ್ಲಾಕ್‌ನ ಉಪರ್ಬೇಡದಿಂದ ಸುಮಾರು 20 ಕಿ.ಮೀ. ದೂರದ ನಗರ ಸಭೆ ರಾಯ್‌ರಂಗಪುರಕ್ಕೆ ಎರಡು ದಶಕಗಳ ಹಿಂದೆ ಸ್ಥಳಾಂತರಗೊಂಡಿದ್ದಾರೆ.

ಕುಸುಮಿ ಬ್ಲಾಕ್‌ನಲ್ಲಿರುವ ಉಪರ್ಬೇಡ ಗ್ರಾಮದ ಜನಸಂಖ್ಯೆ 3,500. ಇಲ್ಲಿ ಬಡಾಸಾಹಿ ಹಾಗೂ ದುಂಗುರ್‌ಸಾಹಿ ಎಂಬ ಎರಡು ಸಣ್ಣ ಹಳ್ಳಿಗಳಿವೆ. ಬಡಾಸಾಹಿ ಹಳ್ಳಿ ಸಂಪೂರ್ಣವಾಗಿ ವಿದ್ಯುದ್ಧೀಕರಣಗೊಂಡಿದೆ. ಆದರೆ, ದುಂಗುರ್‌ಸಾಹಿಯ ಕೇವಲ 14 ಮನೆಗಳಿಗೆ ಮಾತ್ರ ಇದುವರೆಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ.

ದುಂಗುರ್‌ಸಾಹಿಯಲ್ಲಿ ವಾಸಿಸುತ್ತಿರುವ 20 ಕುಟುಂಬಗಳು ಇದುವರೆಗೆ ಯಾವುದೇ ರೀತಿಯ ವಿದ್ಯುತ್ ಸಂಪರ್ಕ ಪಡೆದಿಲ್ಲ. ಇಲ್ಲಿನ ಜನರು ಕತ್ತಲೆ ಓಡಿಸಲು ಸೀಮೆ ಎಣ್ಣೆ ದೀಪ ಬಳಸುತ್ತಿದ್ದಾರೆ. ಇಲ್ಲಿನ ಜನರು ತಮ್ಮ ಮೊಬೈಲ್ ಚಾರ್ಜ್ ಮಾಡಲು ಕಿಲೋಮೀಟರ್ ದೂರದಲ್ಲಿರುವ ಇತರ ಹಳ್ಳಿಗೆ ಹೋಗುತ್ತಾರೆ.

ಮುರ್ಮು ಅವರ ಸೋದರಳಿಯ ಬಿರಾಂಚಿ ನಾರಾಯಣ ಟುಡು ಅವರು ದುಂಗುರ್‌ಸಾಹಿ ಹಳ್ಳಿಯಲ್ಲಿ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಜೀವಿಸುತ್ತಿದ್ದಾರೆ.

‘‘ನಮ್ಮ ದುಂಗುರ್‌ಸಾಹಿ ಹಳ್ಳಿಗೆ ವಿದ್ಯುತ್ ಸಂಪರ್ಕ ಒದಗಿಸುವಂತೆ ನಾವು ಹಲವರಲ್ಲಿ ಮನವಿ ಮಾಡಿದ್ದೆವು. ಆದರೆ, ಏನೂ ಪ್ರಯೋಜನವಾಗಿರಲಿಲ್ಲ’’ ಎಂದು ಬಿರಾಂಚಿ ಅವರ ಪತ್ನಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News