ಟಿ-20 ಕ್ರಿಕೆಟ್; ಐರ್ಲೆಂಡ್ ವಿರುದ್ಧ ರೋಚಕ ಜಯ, ಭಾರತಕ್ಕೆ ಸರಣಿ

Update: 2022-06-29 02:06 GMT
(BCCI Photo)

ಮಲಹೈಡ್ (ಐರ್ಲೆಂಡ್) ದೀಪಕ್ ಹೂಡಾ ಅವರ ಅದ್ಭುತ ಶತಕದ ನೆರವಿನಿಂದ ಭಾರತ ಟಿ-20 ಕ್ರಿಕೆಟ್ ತಂಡ ಐರ್ಲೆಂಡ್ ತಂಡವನ್ನು 4 ರನ್‍ಗಳ ಅಂತರದಿಂದ ಸೋಲಿಸಿ ಸರಣಿಯನ್ನು 2-0 ಅಂತರದಿಂದ ಕೈವಶ ಮಾಡಿಕೊಂಡಿತು.

ಹಲವು ರೋಚಕ ತಿರುವುಗಳಿಗೆ ಸಾಕ್ಷಿಯಾದ ಪಂದ್ಯದಲ್ಲಿ ಹೂಡಾ 57 ಎಸೆತಗಳಲ್ಲಿ 104 ರನ್‍ಗಳನ್ನು ಸಿಡಿಸಿ, ಅಂತರರಾಷ್ಟ್ರೀಯ ಟಿ-20 ಪಂದ್ಯದಲ್ಲಿ ಶತಕ ಸಾಧನೆ ಮಾಡಿದ ನಾಲ್ಕನೇ ಆಟಗಾರ ಎನಿಸಿಕೊಂಡರು. ಸಂಜು ಸ್ಯಾಮ್ಸನ್ 42 ಎಸೆತಗಳಲ್ಲಿ 77 ರನ್ ಗಳಿಸಿ ದೊಡ್ಡ ಮೊತ್ತ (225/7) ಸಾಧಿಸಲು ನೆರವಾದರು.

ಬೆಟ್ಟದಂಥ ಸವಾಲನ್ನು ಸಮರ್ಥವಾಗಿಯೇ ಬೆನ್ನಟ್ಟಿದ ಐರ್ಲೆಂಡ್ ಪರ ನಾಯಕ ಆ್ಯಂಡಿ ಬಲ್ಬ್ರೈನ್ (37 ಎಸೆತಗಳಲಿ 60), ಪಾಲ್ ಸ್ಟಿರ್ಲಿಂಗ್ (18 ಎಸೆತಗಳಲ್ಲಿ 40), ಹ್ಯಾರಿ ಟೆಕ್ಟರ್ (28 ಎಸೆತಗಳಲ್ಲಿ 39) ಮತ್ತು ಜಾರ್ಜ್ ಡಾಕ್ರೆಲ್ (16 ಎಸೆತಗಳಲ್ಲಿ 34) ಮಿಂಚಿದರು. ಆದರೆ ಅಂತಿಮ ಓವರ್‌ ನಲ್ಲಿ 17 ರನ್‍ಗಳು ಬೇಕಿದ್ದಾಗ ಭಾರತದ ವೇಗಿ ಉಮ್ರನ್ ಮಲಿಕ್ 12 ರನ್‍ಗಳಿಗೆ ನಿಯಂತ್ರಿಸಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಐರ್ಲೆಂಡ್ ತಂಡಕ್ಕೆ ಮಿಂಚಿನ ಆರಂಭ ದೊರಕಿಸಿಕೊಟ್ಟ ಸ್ಟಿರ್ಲಿಂಗ್ ಮತ್ತು ಬಲ್ಬ್ರೈನ್ ಮೊದಲ ವಿಕೆಟ್‍ಗೆ ಕೇವಲ 34 ಎಸೆತಗಳಲ್ಲಿ 71 ರನ್ ಪೇರಿಸಿದರು. ಆರಂಭಿಕ ಓವರ್‌ ನಲ್ಲೇ ಭುವನೇಶ್ವರ ಕುಮಾರ್ ಅವರನ್ನು ದಂಡಿಸಿದ ಸ್ಟಿರ್ಲಿಂಗ್ ಒಂದು ಸಿಕ್ಸ್ ಮತ್ತು ಮೂರು ಬೌಂಡರಿ ಸರಿ 18 ರನ್ ದೋಚಿಸಿದರು. ಮೊದಲ ನಾಲ್ಕು ಓವರ್‍ಗಳಲ್ಲೇ ಐರ್ಲೆಂಡ್ ತಂಡದ ಸ್ಕೋರ್ ವಿಕೆಟ್ ನಷ್ಟವಿಲ್ಲದೇ 50 ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News