ಮಧ್ಯಪ್ರದೇಶ; ಮಹಿಳೆ ಮೇಲೆ ಹಲ್ಲೆ, ಚಪ್ಪಲಿ ಹಾರ ಹಾಕಿ ಮೆರವಣಿಗೆ

Update: 2022-07-05 02:44 GMT

ದೆವಾಸ್ (ಮಧ್ಯಪ್ರದೇಶ): ವಿವಾಹಿತ ಮಹಿಳೆಯೊಬ್ಬರು ವಿವಾಹೇತರ ಸಂಬಂಧ ಹೊಂದಿದ್ದಾಗಿ ಆಪಾದಿಸಿ ಮಹಿಳೆಯನ್ನು ಸಾರ್ವಜನಿಕ ಸ್ಥಳದಲ್ಲಿ ಅಮಾನುಷವಾಗಿ ಬೆಲ್ಟ್ ನಿಂದ ಹೊಡೆದು ಅವಮಾನಗೊಳಿಸಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಮಧ್ಯಪ್ರದೇಶ ಪೊಲೀಸರು 12 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರತ್ಯಕ್ಷದರ್ಶಿಗಳು ಹಾಗೂ ಈ ಹಲ್ಲೆ ನಡೆಸಿದವರೇ ಸೆರೆ ಹಿಡಿದಿರುವ ವಿಡಿಯೋದಲ್ಲಿ ಮಹಿಳೆಯನ್ನು ಹಲವು ಮಂದಿ ಅಮಾನುಷವಾಗಿ ಥಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡುತ್ತಿರುವುದು ಕಂಡುಬರುತ್ತಿದೆ. ಮಹಿಳೆಗೆ ಚಪ್ಪಲಿ ಹಾರ ಹಾಕಲಾಗಿದೆ. ಮಹಿಳೆಯ ಪತಿ ಕೂಡಾ ಕೂದಲು ಎಳೆದು ಗುದ್ದುತ್ತಿದ್ದು, ಮಹಿಳೆ ನೆಲದಲ್ಲಿ ಬಿದ್ದು ಹೊರಳಾಡುತ್ತಿರುವುದು ಕಾಣಿಸುತ್ತಿದೆ.

ಮಹಿಳೆ ನೆಲಕ್ಕೆ ಬಿದ್ದು ಹೊರಳಾಡುತ್ತಿರುವ ಸಂದರ್ಭ ವೃದ್ಧ ಮಹಿಳೆಯೊಬ್ಬರು ಹಾಗೂ ವೃದ್ಧರೊಬ್ಬರು ಮಹಿಳೆಯನ್ನು ರಕ್ಷಿಸಲು ವಿಫಲ ಯತ್ನ ನಡೆದಿದ್ದಾರೆ. ಇಷ್ಟಾಗಿಯೂ ನೆರೆದಿದ್ದ ಯಾರು ಕೂಡಾ ಮಹಿಳೆಯ ರಕ್ಷಣೆಗೆ ಬಂದಿಲ್ಲ. ಬದಲಾಗಿ ತಾವೂ ಮಹಿಳೆಯನ್ನು ಥಳಿಸುತ್ತಿರುವುದು ಕಂಡುಬಂದಿದೆ. ಮತ್ತೆ ಕೆಲವರು ವಿಡಿಯೋ ಮತ್ತು ಫೋಟೊಗಳನ್ನು ಸೆರೆ ಹಿಡಿಯುವಲ್ಲಿ ನಿರತರಾಗಿದ್ದಾರೆ.

ರವಿವಾರ ಈ ಘಟನೆ ದೆವಾಸ್ ಜಿಲ್ಲೆಯ ಬೋರ್‍ಪದವ್ ಎಂಬ ಗ್ರಾಮದಲ್ಲಿ ನಡೆದಿದ್ದು, ಬುಡಕಟ್ಟು ಮಹಿಳೆಯನ್ನು ಅರೆನಗ್ನಗೊಳಿಸಲಾಗಿದೆ. ಆಕೆಗೆ ಪತಿ ಸೇರಿದಂತೆ ಗ್ರಾಮಸ್ಥರು ಬೆಲ್ಟ್‌ ನಿಂದ ಹೊಡೆಯುತ್ತಿದ್ದರೆ ಸಾರ್ವಜನಿಕರು ಮೂಕಪ್ರೇಕ್ಷಕರಾಗಿದ್ದರು.

32 ವರ್ಷದ ಸಂತ್ರಸ್ತ ಮಹಿಳೆ 26 ವರ್ಷದ ಪ್ರಿಯಕರನ ಜತೆ ಆತನ ಮನೆಯಲ್ಲಿ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಬುಡಕಟ್ಟು ಜನರು ಆಕೆಯನ್ನು "ಶಿಕ್ಷಿಸಿದ್ದಾರೆ". ಮಹಿಳೆಯ ಮೇಲೆ ಆಕೆಯ ಮಗ ಹಾಗೂ ಇಬ್ಬರು ಪುತ್ರಿಯರ ಎದುರಿನಲ್ಲೇ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ.

ಮಹಿಳೆ ಮನೆಯಿಂದ ನಾಪತ್ತೆಯಾದ ಬಳಿಕ ಆಕೆಯ ಪತಿ ನಾಪತ್ತೆ ಪ್ರಕರಣ ದಾಖಲಿಸಿದ್ದ. ಆದರೆ ಮಹಿಳೆ ಅದೇ ಗ್ರಾಮದಲ್ಲಿ ಪ್ರಿಯಕರನ ಜತೆ ಪತ್ತೆಯಾಗಿದ್ದಳು ಎಂದು ದೂರಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News