ಆರೆಸ್ಸೆಸ್ ಪ್ರಾಣ ಎಲ್ಲೆಲ್ಲಿದೆ?

Update: 2022-07-07 05:45 GMT

ಗೋಳ್ವಾಲ್ಕರ್ ಅವರು ಆರೆಸ್ಸೆಸ್‌ಗೆ ಸುದೀರ್ಘ ಸರಸಂಚಾಲಕರು. ಪಿತಾಮಹ ಡಾ.ಹೆಡಗೆವಾರ್. ಸ್ವತಃ ಹೆಡಗೆವಾರ್ ಅವರಿಂದಲೇ ತನ್ನ ಗುರು, ತತ್ವಜ್ಞಾನಿ, ಮಾರ್ಗದರ್ಶಿ ಎನ್ನಿಸಿಕೊಂಡ ಸಾವರ್ಕರ್ ಹಾಗೂ ಗೋಳ್ವಾಲ್ಕರ್ ಅವರ ಬರವಣಿಗೆಗಳ ದಾಖಲೆಯಿಂದ ಆಯ್ದ ಭಾಗಗಳನ್ನು ಮಾತ್ರ ಇಲ್ಲಿ ನೀಡಲಾಗಿದೆ.

ಗೋಳ್ವಾಲ್ಕರ್ ಅವರ ದೇವರು:
‘‘ನಮ್ಮಲ್ಲಿರುವ ಎಲ್ಲಾ ಶಕ್ತಿಗಳನ್ನು ಪ್ರಚೋದಿಸುವ ‘ಜೀವಂತ’ ಪರಮಾತ್ಮ ಬೇಕು. ಆದುದರಿಂದಲೇ ನಮ್ಮ ಹಿರಿಯರು ಹೇಳಿದರು: ‘ನಮ್ಮ ಸಮಾಜವೇ ನಮ್ಮ ದೇವರು... ಹಿಂದೂ ಜನಾಂಗವೇ ‘ವಿರಾಟ ಪುರುಷ’ ಸರ್ವಶಕ್ತನ ರೂಪ’ ಎಂದು. ‘ಹಿಂದೂ’ ಎಂಬ ಪದವನ್ನು ಅವರು ಬಳಸದಿದ್ದರೂ ‘ಪುರುಷ ಸೂಕ್ತ’ದಲ್ಲಿ ಬರುವ ಈ ಕೆಳಗಿನ ವರ್ಣನೆಯಲ್ಲಿ ಈ ಮಾತು ಸ್ಪಷ್ಟವಾಗುತ್ತದೆ- ಸೂರ್ಯ ಚಂದ್ರರೇ ದೇವರ ಕಣ್ಣುಗಳು, ಅವನ ನಾಭಿಯಿಂದ ನಕ್ಷತ್ರಗಳು ಮತ್ತು ಆಕಾಶ ಸೃಷ್ಟಿಯಾದವು ಎಂದು ಹೇಳಿದ ನಂತರ- ಬ್ರಾಹ್ಮಣನು ಆತನ ಶಿರ, ರಾಜನೇ ಬಾಹುಗಳು, ವೈಶ್ಯರು ತೊಡೆಗಳು ಮತ್ತು ಶೂದ್ರನು ಪಾದ ಎನ್ನುವ ಮಾತು ಬಂದಿದೆ. ಈ ಚತುರ್ವಿಧ ವ್ಯವಸ್ಥೆಯನ್ನು ಹೊಂದಿದವರು ಎಂದರೆ ಹಿಂದೂ ಜನಾಂಗ, ನಮ್ಮ ದೇವರು ಎಂಬುದೇ ಇದರ ಅರ್ಥ.’’
(ಉಲ್ಲೇಖ : ಗೋಳ್ವಾಲ್ಕರ್, ಚಿಂತನಗಂಗಾ, ಮೂರನೇ ಮುದ್ರಣ, ಪುಟ 29, ಪ್ರಕಟಣೆ: ಸಾಹಿತ್ಯಸಿಂಧು, ಬೆಂಗಳೂರು)

ಗೋಳ್ವಾಲ್ಕರ್ ಅವರ ‘ಸಂವಿಧಾನ’ ಅಂದರೆ:
ಹಿಂದೂ ಪರಂಪರೆಯಲ್ಲಿ ಹೆಮ್ಮೆ ಪಡುವವರನ್ನು ಎಲ್ಲೆಲ್ಲೂ ಕಾಣುತ್ತೇವೆ ಎಂದು ಬರೆಯುತ್ತ ‘‘ಫಿಲಿಪ್ಪೀನ್ಸ್ ನ್ಯಾಯಮಂದಿರದಲ್ಲಿ ಮನುವಿನ ಅಮೃತಶಿಲೆಯ ವಿಗ್ರಹವಿದೆ. ಅದರ ಕೆಳಗೆ ‘ಮಾನವ ಕುಲದ ಸರ್ವ ಪ್ರಥಮ, ಸರ್ವಶ್ರೇಷ್ಠ ಮತ್ತು ಅತ್ಯಂತ ವಿವೇಕಿಯಾದ ಶಾಸನದಾತ’ ಎಂದು ಬರೆದಿದೆ’’ ಎಂದು ಉಲ್ಲೇಖಿಸುತ್ತಾರೆ.
(ಉಲ್ಲೇಖ : ಗೋಳ್ವಾಲ್ಕರ್, ಚಿಂತನಗಂಗಾ, ಮೂರನೇ ಮುದ್ರಣ, ಪುಟ 12, ಪ್ರಕಟಣೆ: ಸಾಹಿತ್ಯಸಿಂಧು, ಬೆಂಗಳೂರು)

ವಿ.ಡಿ.ಸಾವರ್ಕರ್ ದೃಷ್ಟಿಯಲ್ಲಿ:
‘‘ನಮ್ಮ ಹಿಂದೂ ರಾಷ್ಟ್ರದಲ್ಲಿ ವೇದಗಳ ನಂತರ ಮನುಸ್ಮತಿಯೇ ಅತ್ಯಂತ ಪೂಜನೀಯ ಮತಗ್ರಂಥವಾಗಿದೆ. ಪ್ರಾಚೀನ ಕಾಲದಿಂದಲೂ ನಮ್ಮ ಸಂಸ್ಕೃತಿ-ಪದ್ಧತಿಗಳು, ಚಿಂತನೆ ಮತ್ತು ನಡವಳಿಕೆಗಳಿಗೆ ನಿರ್ಣಾಯಕ ತತ್ವ ಅದೇ ಆಗಿದೆ. ಈ ಗ್ರಂಥ ಶತಮಾನಗಳಿಂದಲೂ ನಮ್ಮ ದೇಶದ ಆಧ್ಯಾತ್ಮಿಕ ಹಾಗೂ ದೈವಿಕ ಪಯಣವನ್ನು ಕ್ರೋಡೀಕರಿಸಿ ಸಂಹಿತೆಯಾಗಿಸಿದೆ. ಕೋಟ್ಯಂತರ ಹಿಂದೂಗಳು ಇಂದಿಗೂ ತಮ್ಮ ಬದುಕು ಹಾಗೂ ನಡೆನುಡಿಗಳಲ್ಲಿ ಅನುಸರಿಸುತ್ತಿರುವ ನೀತಿ ನಿಯಮಗಳಿಗೆ ಮನುಸ್ಮತಿಯೇ ಆಧಾರ. ಇವತ್ತು ಮನುಸ್ಮತಿಯೇ ಹಿಂದೂ ಕಾಯ್ದೆ’’
(ಉಲ್ಲೇಖ: ವಿ.ಡಿ.ಸಾವರ್ಕರ್, "Women in Manusmurithi' Savarkar Samagra, ಸಂಪುಟ 4, ಪ್ರಭಾತ್ ಪ್ರಕಾಶನ, ದಿಲ್ಲಿ, ಆಯ್ದ ಭಾಗದ ಅನುವಾದ: ಸುರೇಶ್ ಭಟ್, ಬಾಕ್ರಬೈಲು.)

ಅಂಬೇಡ್ಕರ್ ನೇತೃತ್ವದ ಭಾರತದ ಸಂವಿಧಾನದ ಬಗ್ಗೆ ಗೋಳ್ವಾಲ್ಕರ್
‘‘ನಮ್ಮ ಸಂವಿಧಾನವೋ, ಕೆಲವು ಪಾಶ್ಚಾತ್ಯ ರಾಷ್ಟ್ರಗಳಿಂದ ಕೆಲವಾರು ವಿಧಿಗಳನ್ನು ತೆಗೆದು ಸಾಮರಸ್ಯವಿಲ್ಲದೆ ಒಟ್ಟಿಗೆ ತೊಡಕು ತೊಡಕಾಗಿ ತೇಪೆ ಹಾಕಿದ್ದು, ಅಷ್ಟೆ.... ವಿಶ್ವಸಂಸ್ಥೆಯ ಸನ್ನದಿ (ಚಾರ್ಟರ್)ನಿಂದ ಅಥವಾ ಹಿಂದಿನ ರಾಷ್ಟ್ರಸಂಘದ ಸನ್ನದಿನಿಂದ ಕೆಲವು ಕುಂಟು ತತ್ವಗಳು ಮತ್ತು ಅಮೆರಿಕ ಮತ್ತು ಬ್ರಿಟನ್ ಸಂವಿಧಾನಗಳ ತೇಪೆ ಕೆಲಸ ಇದು.’’
(ಉಲ್ಲೇಖ: ಗೋಳ್ವಾಲ್ಕರ್, ಚಿಂತನಗಂಗಾ, ಮೂರನೇ ಮುದ್ರಣ, ಪುಟ 245, ಪ್ರಕಟಣೆ: ಸಾಹಿತ್ಯಸಿಂಧು, ಬೆಂಗಳೂರು)

ಒಕ್ಕೂಟ ರಾಜ್ಯದ ಬಗ್ಗೆ
ವಿಷ ಬೀಜ: ‘‘ನಮ್ಮದು ಸಮರಸವಾದ ಏಕರಾಷ್ಟ್ರತ್ವ ಎಂಬ ದೃಢ ನಂಬಿಕೆಯು ನಮ್ಮ ಈಗಿನ ಸಂವಿಧಾನವನ್ನು ರಚಿಸಿದವರ ಮನಸ್ಸಿನಲ್ಲಿಯೂ ಬೇರೂರಿರಲಿಲ್ಲ ಎಂಬುದು ನಮ್ಮ ಒಕ್ಕೂಟ ಸ್ವರೂಪದ ಸಂವಿಧಾನ ರಚನೆಯಿಂದಲೇ ಸ್ಪಷ್ಟ. ನಮ್ಮ ದೇಶವನ್ನು ‘ರಾಜ್ಯಗಳ ಒಕ್ಕೂಟ’ ಎಂದು ಕರೆದಿದ್ದಾರೆ. ಈಗಿನ ಒಕ್ಕೂಟ ರಚನೆಯಲ್ಲಿ ಛಿದ್ರತೆಯ ಬೀಜಗಳು ಅಡಗಿವೆ.
(ಉಲ್ಲೇಖ: ಗೋಳ್ವಾಲ್ಕರ್, ಚಿಂತನಗಂಗಾ, ಮೂರನೇ ಮುದ್ರಣ, ಪುಟ 229, ಪ್ರಕಟಣೆ: ಸಾಹಿತ್ಯಸಿಂಧು, ಬೆಂಗಳೂರು)

‘‘...ಇದಕ್ಕಾಗಿ ನಮ್ಮ ದೇಶದ ಸಂವಿಧಾನದ ಒಕ್ಕೂಟ ಸ್ವರೂಪದ ಎಲ್ಲ ಮಾತನ್ನು ಆಳವಾಗಿ ಹೂಳಬೇಕು. ಭಾರತ ರಾಜ್ಯದೊಳಗೆ, ‘ಸ್ವಯಂ ಅಧಿಕಾರ’ವುಳ್ಳ ಅಥವಾ ಭಾಗಶಃ ಸ್ವಯಂ ಅಧಿಕಾರವುಳ್ಳ ರಾಜ್ಯಗಳ ಅಸ್ತಿತ್ವವನ್ನು ಅಳಿಸಿ ಹಾಕಬೇಕು. ಏಕಾತ್ಮಕ ಸರಕಾರದ ಪದ್ಧತಿಯನ್ನು ಸ್ಥಾಪಿಸುವಂತೆ ಸಂವಿಧಾನವನ್ನು ಪುನಃ ಬರೆದಿಡೋಣ’’
(ಉಲ್ಲೇಖ: ಗೋಳ್ವಾಲ್ಕರ್, ಚಿಂತನಗಂಗಾ, ಮೂರನೇ ಮುದ್ರಣ, ಪುಟ 474, ಪ್ರಕಟಣೆ: ಸಾಹಿತ್ಯಸಿಂಧು, ಬೆಂಗಳೂರು)

ಆರೆಸ್ಸೆಸ್‌ಗೆ ಸ್ಫೂರ್ತಿ ಅಂದರೆ...
‘‘ಒಂದು ಧ್ವಜ, ಒಬ್ಬ ನಾಯಕ ಮತ್ತು ಒಂದು ಸಿದ್ಧಾಂತದಿಂದ ಸ್ಫೂರ್ತಿ ಪಡೆಯುತ್ತಿರುವ ಆರೆಸ್ಸೆಸ್ ಈ ಮಹಾನ್ ದೇಶದ ಪ್ರತಿಯೊಂದು ಮೂಲೆಯಲ್ಲೂ ಹಿಂದುತ್ವದ ಜ್ಯೋತಿಯನ್ನು ಬೆಳಗಿಸುತ್ತಿದೆ’’
(1940ರಲ್ಲಿ ಗೋಳ್ವಾಲ್ಕರ್ ಮದ್ರಾಸ್‌ನಲ್ಲಿ ಉನ್ನತಮಟ್ಟದ 1,350 ಆರೆಸ್ಸೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಘೋಷಿಸಿದರು. ಇದು ಫ್ಯಾಶಿಸ್ಟ್ ಮತ್ತು ನಾಝಿ ಸಿದ್ಧಾಂತ)

ಹಿಟ್ಲರ್‌ನ ನಾಝಿ ಮತ್ತು ಫ್ಯಾಶಿಸ್ಟ್ ಸಿದ್ಧಾಂತದ ಬಗ್ಗೆ
‘‘ಇಂದಿನ ಚರ್ಚೆಯ ಪ್ರಧಾನ ವಿಷಯವೆಂದರೆ ಜರ್ಮನರಿಗೆ ತಮ್ಮ ಜನಾಂಗದ ಬಗೆಗಿರುವ ಹೆಮ್ಮೆ. ಜರ್ಮನಿ ತನ್ನ ಜನಾಂಗ ಹಾಗೂ ಸಂಸ್ಕೃತಿಯ ಪರಿಶುದ್ಧತೆಯನ್ನು ಉಳಿಸಿಕೊಳ್ಳುವ ಸಲುವಾಗಿ ತನ್ನ ದೇಶದಲ್ಲಿದ್ದ ಸೆಮಿಟಿಕ್ ಜನಾಂಗದ ಯಹೂದ್ಯರನ್ನು ಸಂಪೂರ್ಣವಾಗಿ ನಿರ್ನಾಮಗೊಳಿಸಿ ಪ್ರಪಂಚವನ್ನೇ ಬೆಚ್ಚಿ ಬೀಳಿಸಿತು.
ಇಲ್ಲಿ ಅತ್ಯುಚ್ಚಮಟ್ಟದ ಜನಾಂಗೀಯ ಅಭಿಮಾನ ತೋರಿ ಬಂದಿದೆ. ಹಿಂದೂಸ್ಥಾನದಲ್ಲಿರುವ ನಾವು ಈ ಉತ್ತಮ ಪಾಠದಿಂದ ಕಲಿಯಬೇಕಾಗಿದೆ ಮತ್ತು ಲಾಭ ಪಡೆಯಬೇಕಾಗಿದೆ.’’
(ಉಲ್ಲೇಖ : ಗೋಳ್ವಾಲ್ಕರ್ ಅವರ We or our nationhood defined'  ಭಾರತ್ ಪಬ್ಲಿಕೇಷನ್, ನಾಗಪುರ, 1939, ಪುಟ 35, ಆಯ್ದ ಭಾಗ ಅನುವಾದ: ಸುರೇಶ್ ಭಟ್, ಬಾಕ್ರಬೈಲು)

‘‘ಈ ಪುರಾತನ ದೇಶಗಳು ತಮ್ಮ ಅಲ್ಪಸಂಖ್ಯಾತರ ಸಮಸ್ಯೆಯನ್ನು ಹೇಗೆ ಬಗೆಹರಿಸಿಕೊಳ್ಳುತ್ತವೆ ಎಂಬುದನ್ನು ಮನಸ್ಸಿನಲ್ಲಿರಿಸಿಕೊಳ್ಳುವುದು ತುಂಬಾ ಪ್ರಯೋಜನಕಾರಿ. ಹೊರಗಿನಿಂದ ವಲಸೆ ಬಂದವರು ಜನಸಂಖ್ಯೆಯ ಪ್ರಧಾನ ಗುಂಪಾಗಿರುವ ರಾಷ್ಟ್ರೀಯ ಜನಾಂಗದ ಸಂಸ್ಕೃತಿ ಹಾಗೂ ಭಾಷೆಯನ್ನು ಅಳವಡಿಸಿಕೊಂಡು, ಅದರ ಹಿರಿಯಾಸೆಗಳನ್ನು ಹಂಚಿಕೊಂಡು, ತಮ್ಮ ಪ್ರತ್ಯೇಕ ಅಸ್ತಿತ್ವದ ಅಸ್ಮಿತೆಯನ್ನು ಮತ್ತು ವಿದೇಶಿ ಮೂಲವನ್ನು ಮರೆತು ರಾಷ್ಟ್ರೀಯ ಜನಾಂಗದಲ್ಲಿ ಸ್ವಾಭಾವಿಕವಾಗಿ ಬೆರೆತುಕೊಳ್ಳಬೇಕಾಗಿದೆ. ಅವರು ಹಾಗೆ ಮಾಡದಿದ್ದಲ್ಲಿ ರಾಷ್ಟ್ರದ ಎಲ್ಲ ನೀತಿ ನಿಯಮ ಮತ್ತು ಸಂಹಿತೆಗಳ ಕಟ್ಟುಪಾಡಿಗೆ ಒಳಗಾಗಿ, ಆದರ ಸಹಿಷ್ಣುತೆಯ ಕೃಪೆಯಲ್ಲಿ ಹಕ್ಕುಗಳಿಲ್ಲದೆ ಹೊರಗಿನವರಂತೆ ಬದುಕಬೇಕಾಗುತ್ತದೆ. ವಿದೇಶಿಯರಿಗಿರುವುದು ಎರಡೇ ಮಾರ್ಗಗಳು, ಒಂದೋ ರಾಷ್ಟ್ರೀಯ ಜನಾಂಗದಲ್ಲಿ ತಮ್ಮನ್ನು ಐಕ್ಯವಾಗಿಸುವುದು ಅಥವಾ ರಾಷ್ಟ್ರೀಯ ಜನಾಂಗದ ಕೃಪಾಶ್ರಯದಲ್ಲಿ ಅದು ಅನುಮತಿಸುವಷ್ಟು ಕಾಲ ಇದ್ದು ಹೇಳಿದಾಕ್ಷಣ ತೊಲಗಿ ಹೋಗುವುದು. ಅದೊಂದೇ ಅಲ್ಪಸಂಖ್ಯಾತರ ಸಮಸ್ಯೆ ಬಗೆಗಿನ ಆರೋಗ್ಯಕರ ನಿಲುವು. ಅದೊಂದೇ ತಾರ್ಕಿಕ ಹಾಗೂ ನೈಜ ಪರಿಹಾರ. ಕೇವಲ ಅದೊಂದರಿಂದಲೇ ರಾಷ್ಟ್ರೀಯ ಜೀವನ ಆರೋಗ್ಯಪೂರ್ಣವಾಗಿಯೂ ನಿರಾತಂಕವಾಗಿಯೂ ಇರುತ್ತದೆ. ಕೇವಲ ಅದೊಂದರಿಂದಲೇ ರಾಷ್ಟ್ರದೊಳಗೊಂದು ರಾಷ್ಟ್ರವಾಗುವ ಕ್ಯಾನ್ಸರ್‌ನ ಅಪಾಯದಿಂದ ರಾಷ್ಟ್ರ ಸುರಕ್ಷಿತವಾಗಿರುತ್ತದೆ’’
(ಉಲ್ಲೇಖ : ಗೋಳ್ವಾಲ್ಕರ್ ಅವರ "We or our nationhood defined', ಭಾರತ್ ಪಬ್ಲಿಕೇಷನ್, ನಾಗಪುರ, 1939, ಪುಟ 47, ಆಯ್ದ ಭಾಗ ಅನುವಾದ: ಸುರೇಶ್ ಭಟ್, ಬಾಕ್ರಬೈಲು)

‘‘ನಾಝಿ ಅಥವಾ ಫ್ಯಾಶಿಸ್ಟ್ ಮಂತ್ರದಂಡ ಮುಟ್ಟಿದ ಪರಿಣಾಮವಾಗಿ ಜರ್ಮನಿ ಅಥವಾ ಇಟಲಿ ಇಷ್ಟೊಂದು ಅದ್ಭುತವಾಗಿ ಸುಸ್ಥಿತಿಗೆ ಮರಳಿ ಹಿಂದೆಂದೂ ಇಲ್ಲದ ರೀತಿಯಲ್ಲಿ ಇಷ್ಟೊಂದು ಬಲಶಾಲಿಯಾಗಿ ಬೆಳೆದಿರುವ ಸತ್ಯವೇ ಆ ರಾಜಕೀಯ ಸಿದ್ಧಾಂತಗಳು ಅವುಗಳ ಆರೋಗ್ಯಕ್ಕೆ ಅವಶ್ಯವಿದ್ದ ಅತ್ಯಂತ ಹಿತಕರವಾದ ಶಕ್ತಿವರ್ಧಕಗಳೆಂಬುದನ್ನು ಸಾಬೀತುಪಡಿಸುತ್ತವೆ’’
(ಉಲ್ಲೇಖ: ವಿ.ಡಿ. ಸಾವರ್ಕರ್, 1910ರಲ್ಲಿ ಮಧುರೆಯಲ್ಲಿ ನಡೆದ ಹಿಂದೂ ಮಹಾಸಭಾದ ಅಧ್ಯಕ್ಷೀಯ ಭಾಷಣದಲ್ಲಿ, ಈ ಆಯ್ದ ಭಾಗದ ಅನುವಾದ: ಸುರೇಶ್ ಭಟ್ ಬಾಕ್ರಬೈಲು)

‘‘ಸ್ವತಂತ್ರ’’ತೆ:
‘‘ನಮ್ಮ ರಾಷ್ಟ್ರೀಯ ಜೀವನ ಮೌಲ್ಯವನ್ನು, ಎಂದರೆ ನಮ್ಮ ‘ಧರ್ಮ’ ಮತ್ತು ‘ಸಂಸ್ಕೃತಿ’ಯನ್ನು ರಕ್ಷಿಸಿ ಪ್ರಸಾರ ಮಾಡುವುದೇ ‘ಸ್ವತಂತ್ರ’ತೆಯ ಅಸ್ತಿತ್ವಕ್ಕೆ ‘ಮೂಲಸ್ಫೂರ್ತಿ’ ಎಂಬುದು ನಮ್ಮ ಚಾರಿತ್ರಿಕ ಸಂಪ್ರದಾಯದ ದೃಷ್ಟಿ’’.
(ಉಲ್ಲೇಖ: ಗೋಳ್ವಾಲ್ಕರ್, ಚಿಂತನಗಂಗಾ, ಮೂರನೇ ಮುದ್ರಣ, ಪುಟ 425, ಪ್ರಕಟಣೆ: ಸಾಹಿತ್ಯಸಿಂಧು, ಬೆಂಗಳೂರು)

Writer - ದೇವನೂರ ಮಹಾದೇವ

contributor

Editor - ದೇವನೂರ ಮಹಾದೇವ

contributor

Similar News