ಬುಮ್ರಾ, ಶಮಿ ಮ್ಯಾಜಿಕ್:‌ ಇಂಗ್ಲೆಂಡ್‌ ತಂಡವನ್ನು 10 ವಿಕೆಟ್‌ ಗಳ ಅಂತರದಿಂದ ಮಣಿಸಿದ ಭಾರತ ತಂಡ

Update: 2022-07-12 17:01 GMT
Photo: twitter.com/virendersehwag

ಲಂಡನ್:  ಓವೆಲ್‌ ಮೈದಾನದಲ್ಲಿ ನಡೆದ ಭಾರತ vs ಇಂಗ್ಲೆಂಡ್‌ ಪಂದ್ಯಾಟದಲ್ಲಿ ಇಂಗ್ಲೆಂಡ್‌ ತಂಡವು ಭಾರತದೆದುರು ಮುಗ್ಗರಿಸಿದೆ. ಜಸ್ಪ್ರೀತ್ ಬುಮ್ರಾ ಹಾಗೂ ಮಹಮ್ಮದ್‌ ಶಮಿ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡ ಮೊದಲ ಏಕದಿನ ಪಂದ್ಯದಲ್ಲಿ ಕೇವಲ 110 ರನ್ ಗಳಿಗೆ ಆಲೌಟ್ ಆಗಿದ್ದು, ರೋಹಿತ್‌ ಶರ್ಮಾ ಆಕರ್ಷಕ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ರೋಹಿತ್‌ ಶರ್ಮಾ 58 ಎಸೆತಗಳಲ್ಲಿ 76 ರನ್‌ ಗಳಿಸಿದ್ದು, ಇದಕ್ಕೆ ಜೊತೆಯಾಗಿ ಶಿಖರ್‌ ಧವನ್‌ 54 ಎಸೆತಗಳಲ್ಲಿ 31 ರನ್‌ ಸಿಡಿಸುವ ಮೂಲಕ ಟೀಂ ಇಂಡಿಯಾ ಗೆಲುವಿಗೆ ನೆರವಾದರು.

ತಮ್ಮ 7.2 ಓವರ್‌ಗಳ ದಾಳಿಯಲ್ಲಿ ಕೇವಲ 19 ರನ್‌ ನೀಡಿದ ಜಸ್ಪ್ರೀತ್‌ ಬುಮ್ರಾ 6 ವಿಕೆಟ್ ಉರುಳಿಸಿದ್ದಾರೆ. ಟಾಸ್‌ ಗೆದ್ದ ಭಾರತ ತಂಡವು ಮೊದಲು ಬೌಲಿಂಗ್‌ ಅನ್ನು ಆಯ್ಕೆ ಮಾಡಿಕೊಂಡಿತು. ಬುಮ್ರಾ ಅವರ ವೇಗದ ದಾಳಿಯ ಎದುರು ಕೇವಲ 26 ರನ್‌ಗೆ 5 ವಿಕೆಟ್‌ ಕಳೆದುಕೊಂಡಿದ್ದ ಇಂಗ್ಲೆಂಡ್‌ 25.2 ಓವರ್‌ಗಳಲ್ಲಿ 110 ರನ್‌ ಪೇರಿಸಲು ಸಾಕಷ್ಟು ಪರದಾಡಿದೆ.

ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಜೇಸನ್ ರಾಯ್ ಶೂನ್ಯಕ್ಕೆ ಔಟಾಗಿದ್ದರೆ, ಜಾನಿ ಬೇರ್ ಸ್ಟೋ 7 ರನ್ ಗಳಿಸಿ ಬುಮ್ರಾ ಬೌಲಿಂಗ್ ನಲ್ಲಿ ಔಟಾಗಿದ್ದಾರೆ. ಜೋ ರೂಟ್ ಅವರನ್ನೂ ಸೊನ್ನೆ ರನ್‌ ಗೆ ಬುಮ್ರಾ ಪೆವಿಲಿಯನ್‌ಗೆ ಕಳಿಸಿದ್ದು, ಇಂಗ್ಲೆಂಡ್‌ ತಂಡಕ್ಕೆ ದೊಡ್ಡ ಹಿನ್ನೆಡೆಗೆ ಕಾರಣವಾಗಿದೆ. ನಂತರ ಬೆನ್ ಸ್ಟೋಕ್ ರನ್ನು ಶಮಿ ತಮ್ಮ ಮೊದಲ ಎಸೆತದಲ್ಲೇ ಔಟ್ ಮಾಡಿದ್ದಾರೆ. ಬಳಿಕ ಬಂದ ಲಿಯಾಮ್ ಲಿವಿಂಗ್ ಸ್ಟೋನ್ ರನ್ನು ಬುಮ್ರಾ 8ನೇ ಓವರ್ ನ ಐದನೇ ಎಸೆತದಲ್ಲಿ ಕ್ಲೀನ್ ಬೋಲ್ಡ್ ಮಾಡಿದ್ದಾರೆ. ಪಂದ್ಯದಲ್ಲಿ ಬುಮ್ರಾ 6 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ 3 ಹಾಗೂ ಪ್ರಸಿದ್ಧ್ ಕೃಷ್ಣ 1 ವಿಕೆಟ್ ಪಡೆದಿದ್ದಾರೆ.

ಇಂಗ್ಲೆಂಡ್‌ ತಂಡದ ಈ ಮೊತ್ತ ಭಾರತ ವಿರುದ್ಧದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡದ ಈವರೆಗಿನ ಅತ್ಯಂತ ಕನಿಷ್ಠ ಮೊತ್ತ ಎನಿಸಿದೆ. ಈ ಹಿಂದೆ 2006ರಲ್ಲಿ ಜೈಪುರದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ ಭಾರತದೆದುರು 125 ರನ್‌ಗೆ ಅಲೌಟ್‌ ಆಗಿತ್ತು. ಈ ಪಂದ್ಯದ ಅದ್ಭುತ ಪ್ರದರ್ಶನದ ಮೂಲಕ ಬುಮ್ರಾ ತಮ್ಮ ವೈಯಕ್ತಿಕ ಸಾಧನೆಯನ್ನು ಮಾಡಿದ್ದು, ಕಡಿಮೆ ರನ್‌ ನೀಡಿ 6 ವಿಕೆಟ್‌ ಪಡೆದ ಆಟಗಾರರ ಪೈಕಿ ಮೂರನೆಯವರು ಎನಿಸಿಕೊಂಡಿದ್ದಾರೆ. ಬಾಂಗ್ಲಾದೇಶದ ವಿರುದ್ಧ ಸ್ಟುವರ್ಟ್‌ ಬಿನ್ನಿ 4 ರನ್‌ಗೆ 6 ವಿಕೆಟ್‌ ಹಾಗೂ 1993ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯದಲ್ಲಿ ಅನಿಲ್‌ ಕುಂಬ್ಳೆ 12 ರನ್‌ಗೆ 6 ವಿಕೆಟ್ ಉರುಳಿಸಿದ್ದು, ಅವರು ಈ ಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News