ಭೂಕುಸಿತ; ಅಮೃತ ವಿವಿಯಿಂದ ಕೊಡಗು, ಕರಾವಳಿಯಲ್ಲಿ ಅಧ್ಯಯನ: ಸಿಎಂ ಬೊಮ್ಮಾಯಿ

Update: 2022-07-13 15:39 GMT

ಉಡುಪಿ : ಕೊಡಗು ಮತ್ತು ಕರಾವಳಿ ಜಿಲ್ಲೆಗಳ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಇತ್ತೀಚೆಗೆ ಭೂಕುಸಿತ ಹೆಚ್ಚೆಚ್ಚು ಸಂಭವಿಸುತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ತಜ್ಞರಿರುವ ಅಮೃತ ವಿವಿ ಈಗಾಗಲೇ ಕೊಡಗು ಭಾಗದಲ್ಲಿ ಕೆಲಸ ಪ್ರಾರಂಭಿಸಿದೆ. ಅದೇ ತಂಡದ ಮೂಲಕ ದ.ಕ, ಉಡುಪಿ, ಉ.ಕ. ಜಿಲ್ಲೆಗಳ ಪಶ್ಚಿಮ ಘಟ್ಟಗಳಲ್ಲಿಯೂ ಅಧ್ಯಯನ ಕೈಗೊಳ್ಳುವಂತೆ ಆದೇಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇತ್ತೀಚಿನ ಮಳೆಹಾನಿಗೆ ಸಂಬಂಧಿಸಿದಂತೆ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲಾ ಮಟ್ಟದ ಪರಿಶೀಲನಾ ಸಭೆಯ ಬಳಿಕ ಕರೆದ ಸುದ್ದಿಗೋಷ್ಠಿ ಯಲ್ಲಿ ಅವರು ಮಾತನಾಡುತಿದ್ದರು.

ಅಮೃತ ವಿವಿ ತಂಡ ಅಧ್ಯಯನದ ಬಳಿಕ ನೀಡುವ ವರದಿಯನ್ನು ಅನುಷ್ಠಾನ ಗೊಳಿಸಲು ಸರಕಾರ ಸಿದ್ಧವಿದೆ. ಅದೇ ರೀತಿ ಕೊಡಗು ಹಾಗೂ ಕರಾವಳಿಯ ಕೆಲವು ಭಾಗಗಳಲ್ಲಿ ಭೂಕಂಪನದ ಸಮಸ್ಯೆಗಳಿವೆ. ಭೂಕಂಪನದ ಅಧ್ಯಯನ ಮಾಡಲು ಜಿಯೋಗ್ರಾಫಿಕಲ್ ಸರ್ವೇ ಆಫ್ ಇಂಡಿಯಾ ಬೆಂಗಳೂರು ಹಾಗೂ ಮೈಸೂರು ವಿವಿಯಿಂದ ಸುದೀರ್ಘ  ಅಧ್ಯಯನ ನಡೆಸಿ ಪರಿಹಾರ ಸೂಚಿಸಿ  ವರದಿ ಸಲ್ಲಿಸಲು ಸೂಚಿಸಲಾಗಿದೆ.ಪರಿಹಾರವಾಗಿ ರೆಟ್ರೋ ಫಿಟ್ಟಿಂಗ್ ಮಾಡಲು ಸಲಹೆ ನೀಡಿದ್ದಾರೆ. ಅದರ ಅಂತಿಮ ವರದಿ ನೀಡಲು ಆದೇಶಿಸಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.

ಕರಾವಳಿಯಲ್ಲಿ ಮಳೆಹಾನಿಗೆ ೮ ಬಲಿ: ಈ ಬಾರಿಯ ಭಾರೀ ಮಳೆಗೆ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಒಟ್ಟು ಎಂಟು ಮಂದಿ ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೫ ಜನ ಮೃತಪಟ್ಟಿದ್ದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡ ಸುಮಾರು ೨೧೬ ಹೆಕ್ಟೇರ್ ಬೆಳೆ ಹಾನಿಯಾದರೆ, ಉಡುಪಿಯಲ್ಲಿ ೧೨೯ ಹೆಕ್ಟೇರ್ ಪ್ರದೇಶದ ಬೆಳೆಹಾನಿ ಸೇರಿ ಕೃಷಿ ಮತ್ತು ತೋಟಗಾರಿಕೆಯಲ್ಲಿ ಒಟ್ಟು ೩೫೫ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದರು.

ದಕ್ಷಿಣ ಕನ್ನಡದಲ್ಲಿ ೪೨೯ ಮನೆಗಳು, ಉತ್ತರಕನ್ನಡ ಜಿಲ್ಲೆಯಲ್ಲಿ ೪೩೭ ಮನೆಗಳು ಹಾಗೂ ಉಡುಪಿಯಲ್ಲಿ ೧೯೬ ಮನೆಗಳು ಸೇರಿದಂತೆ ಒಟ್ಟು ೧೦೬೨ ಮನೆಗಳು ಹಾನಿಗೊಳಗಾಗಿವೆ. ೫೮ ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾನಿಗೊಂಡಿದ್ದರೆ, ೨೬ ಮನೆಗಳಿಗೆ ತೀವ್ರ ಹಾನಿ ಹಾಗೂ ೧೦೨೬ ಮನೆಗಳು ಅಲ್ಪ ಪ್ರಮಾಣದಲ್ಲಿ ಹಾನಿಗೊಳಗಾಗಿವೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು. 

ಲೋಕೋಪಯೋಗಿ ಹಾಗೂ ಗ್ರಾಮೀಣ ರಸ್ತೆಗಳು ಸೇರಿ ದಕ್ಷಿಣ ಕನ್ನಡದಲ್ಲಿ ೭೨೭ ಕಿ.ಮಿ,  ಉತ್ತರ ಕನ್ನದ ೫೦೦ ಕಿ.ಮೀ ಹಾಗೂ ಉಡುಪಿಯ ೯೬೦ ಕಿ.ಮೀ ಸೇರಿ ಒಟ್ಟು ೨೧೮೭ ಕಿ.ಮೀ ರಸ್ತೆ ಹಾನಿಗೊಳಗಾಗಿವೆ. ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದಂತೆ ಮೂರು ಜಿಲ್ಲೆಗಳಲ್ಲಿ ೫೫೯೫ ವಿದ್ಯುತ್ ಕಂಬಗಳು ಬಿದ್ದಿವೆ. ೪೨೨ ಟ್ರಾನ್ಸಫಾಮರ್‌ಗಳು ಹಾನಿಗೊಂಡಿದ್ದು ದುರಸ್ತಿ ಕೆಲಸ  ನಡೆದಿದೆ. ೧೬೮ ಸೇತುವೆ ಮತ್ತು  ಕಾಲುಸಂಕಗಳು ಸಹ ಹಾನಿಗೊಂಡಿವೆ ಎಂದರು.

ಕಾಳಜಿ ಕೇಂದ್ರ: ಈ ಬಾರಿ ಇದುವರೆಗೆ ಒಟ್ಟು ೧೨ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಭಾರಿ ಮಳೆಯಿಂದಾಗಿ ತೀರಿಕೊಂಡವರಿಗೆ ಕೇಂದ್ರ ಸರ್ಕಾರ ೪ ಲಕ್ಷ ರೂ.ಗಳ ಪರಿಹಾರ ಮೊತ್ತ ನೀಡುತ್ತದೆ. ರಾಜ್ಯ ಸರಕಾರ ೫ ಲಕ್ಷ ರೂ. ನೀಡುತ್ತಿದೆ. ಕಾಳಜಿ  ಕೇಂದ್ರಗಳಿಗೆ ಕೆಲವರು ಬಂದರೆ, ಕೆಲವರು ಬರುವುದಿಲ್ಲ. ಈ ಬಾರಿ ಅವರಿಗೆ ನೀಡುವ ಆಹಾರದಲ್ಲಿ ಪೌಷ್ಟಿಕಾಂಶ ನೀಡಲು ಮೊಟ್ಟೆ ಯನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಕೇಂದ್ರಕ್ಕೆ ಬಾರದೇ ಸಂಬಂಧಿಕರ ಮನೆಗಳಲ್ಲಿ ಇರುವವರಿಗೆ ಆಹಾರ ಕಿಟ್ ನೀಡಲು ಆದೇಶ ನೀಡಲಾಗಿದೆ ಎಂದರು.

ಮುಂದಿನ ವಾರ ಕಾರವಾರ, ಬೆಳಗಾವಿಗೆ: ಅತಿವೃಷ್ಠಿಯಿಂದ ಹಾನಿಗೊಳಗಾದ ಕಾರವಾರ, ಬೆಳಗಾವಿ, ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಮುಂದಿನ ವಾರ ಪ್ರವಾಸ ಮಾಡಿ, ಅಲ್ಲಿಯೂ ಸ್ಥಳ ಪರಿಶೀಲನೆ ನಡೆಸಿ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. 

ಕಡಲ ಕೊರೆತ; ಶಾಶ್ವತ ಪರಿಹಾರಕ್ಕೆ ಕ್ರಮ

ಹಲವಾರು ವರ್ಷಗಳಿಂದ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದರೂ, ಕಡಲ ಕೊರೆತ ನಿಂತಿಲ್ಲ. ಎಡಿಬಿ ಯೋಜನೆಯಡಿ ಕಡಲ ಕೊರೆತಕ್ಕೆ ೩೦೦ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ೩೩೦ ಕಿಮೀ ಕಡಲ ತೀರದುದ್ದಕ್ಕೂ   ಇದನ್ನು ಅಳವಡಿಸಬೇಕಿದ್ದರೆ ಎಡಿಬಿ ಕೆಲಸದಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿ ಸೀ ವೇವ್ ಬ್ರೇಕರ್ ಎಂಬ ಹೊಸ ತಂತ್ರಜ್ಞಾನವನ್ನು ಬಳಕೆ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಕೇರಳದಲ್ಲಿ ಇದನ್ನು ಅಳವಡಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಈ ತಂತ್ರಜ್ಞಾನವನ್ನು ಮಂಗಳೂರಿನ ಉಳ್ಳಾಲದಲ್ಲಿ ಪ್ರಾಯೋಗಿಕವಾಗಿ ಒಂದು ಕಿ.ಮೀ.ವ್ಯಾಪ್ತಿಯಲ್ಲಿ ಜಾರಿಗೊಳಿಸಲಾಗುತ್ತದೆ. ಅದು ಯಶಸ್ವಿಯಾದರೆ ಇಡೀ ಕರಾವಳಿ ಭಾಗದಲ್ಲಿ ಅನುಷ್ಠಾನಕ್ಕೆ ತರುವ ಚಿಂತನೆ ನಮ್ಮದು. ಇದಕ್ಕಾಗಿ ಉನ್ನತ ಮಟ್ಟದ ಶಾಶ್ವತ ಸಮಿತಿ ರಚಿಸಲಾಗುವುದು ಎಂದರು.

ತಂತ್ರಜ್ಞಾನ ಯಶಸ್ವಿಯಾದರೆ ಸಂಪೂರ್ಣ ಕರಾವಳಿಯ ಡಿಪಿಆರ್ ಸಿದ್ಧಪಡಿಸಿ ಬಾಹ್ಯ ಏಜೆನ್ಸಿಯ ಹಣಕಾಸಿನ ನೆರವಿನಿಂದ  ಇದನ್ನು ಅನುಷ್ಠಾನ ಗೊಳಿಸಲು ತೀರ್ಮಾನ ಕೈಗೊಳ್ಳಲಾಗುವುದು. ಡಿಪಿಆರ್‌ಗೆ ಅಗತ್ಯವಿರುವ ಅನುದಾನ ಕೂಡಲೇ ಬಿಡುಗಡೆ ಮಾಡಲಾಗುವುದು. ಅದರ ವಿಸ್ತೃತ ಅಧ್ಯಯನ ನಡೆದ ನಂತರ ಹಣಕಾಸಿನ ವ್ಯವಸ್ಥೆಗೆ ತೀರ್ಮಾನ ಮಾಡಲಾಗುವುದು ಎಂದು ಅವರು ವಿವರಿಸಿದರು.

ಕಡಲ ಕೊರೆತ ತಕ್ಷಣ ನಿಲ್ಲಿಸಲು ಮೂರು ಜಿಲ್ಲೆಗಳ ಜಿಲ್ಲಾಡಳಿತಕ್ಕೆ ಕೂಡಲೇ   ಹಣವನ್ನು ಎಸ್‌ಡಿಆರ್‌ಎಫ್ ಅಡಿಯಲ್ಲಿ  ಒದಗಿಸಲಾಗುವುದು. ಸದ್ಯ ತಾತ್ಕಾಲಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗುವುದು ಎಂದರು.

ಶಾಶ್ವತ ಪರಿಹಾರಕ್ಕೆ  ೨-೩ ತಿಂಗಳಲ್ಲಿ ಯೋಜನೆ ರೂಪಿಸಲಾಗುವುದು. ಪ್ರತಿ ವರ್ಷ ಆಗುವ ಕಡಲ ಕೊರೆತ ತಡೆಯಲು  ಜಿಲ್ಲಾಧಿಕಾರಿಗಳ ಹಂತದಲ್ಲಿ ಕೆಲವು ಕಾರ್ಯಕ್ರಮಗಳನ್ನು  ನಿರಂತರವಾಗಿ ರೂಪಿಸಬೇಕು ಎಂದು ಸೂಚನೆ ನೀಡಿ ವಿಶೇಷ ಅನುದಾನವನ್ನು  ಇದಕ್ಕಾಗಿ ಒದಗಿಸಲಾಗುವುದು ಎಂದೂ ಬೊಮ್ಮಾಯಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News