ಸಾರ್ವಜನಿಕ ಆರೋಗ್ಯ ಮಸೂದೆ: ವ್ಯಾಪಕ ಸಮಾಲೋಚನೆ, ಎಚ್ಚರ ಅಗತ್ಯ

Update: 2022-07-21 06:58 GMT

ಸರಕಾರವು 125 ವರ್ಷ ಹಳೆಯ, 1897ರ ಸಾಂಕ್ರಾಮಿಕ ರೋಗಗಳ ಕಾಯ್ದೆಯನ್ನು ರದ್ದುಪಡಿಸಿ ನೂತನ ಸಾರ್ವಜನಿಕ ಆರೋಗ್ಯ ಮಸೂದೆಯೊಂದನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ. ಇಷ್ಟು ಹಳೆಯ ಮತ್ತು ಅವಧಿ ಮೀರಿದ ಕಾಯ್ದೆಯ ರದ್ದತಿಯನ್ನು ಯಾರೂ ಪ್ರಶ್ನಿಸುವುದಿಲ್ಲವಾದರೂ, ನೂತನ ಮಸೂದೆಯ ವಿವಿಧ ವಿಧಿಗಳನ್ನು ಜಾಗರೂಕವಾಗಿ ಪರಿಶೀಲಿಸಬೇಕಾದ ಅಗತ್ಯವಿದೆ. ವಿಧಿಗಳು ಬಲವಂತದ ಹೇರಿಕೆಯಾಗಿರದಂತೆ ಮತ್ತು ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸದಂತೆ ನೋಡಿಕೊಳ್ಳಬೇಕಾಗಿದೆ. ಇಂತಹ ಎಚ್ಚರಿಕೆಯನ್ನು ಹೊಂದಲು ಕನಿಷ್ಠ ಐದು ಕಾರಣಗಳಿವೆ.

ಮೊದಲನೆಯದಾಗಿ, 2017ರಲ್ಲಿ, ಸಾರ್ವಜನಿಕ ಆರೋಗ್ಯ (ಸಾಂಕ್ರಾಮಿಕಗಳು, ಜೈವಿಕ ಭಯೋತ್ಪಾದನೆ ಮತ್ತು ವಿಪತ್ತುಗಳ ತಡೆ, ನಿಯಂತ್ರಣ ಮತ್ತು ನಿರ್ವಹಣೆ) ಮಸೂದೆ ಎಂಬ ಬೇರೆ ಮಸೂದೆಯೊಂದನ್ನು ಸಿದ್ಧಪಡಿಸಲಾಯಿತು. ಆದರೆ, ಆ ಮಸೂದೆಯನ್ನು ಪರಿಶೀಲಿಸಿದ ಹಲವಾರು ಹಿರಿಯ ವೈದ್ಯಕೀಯ ಪರಿಣತರು ಮತ್ತು ಆರೋಗ್ಯ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದರು. ಮಸೂದೆಯು ಅನಗತ್ಯವಾಗಿ ಬಲವಂತಪಡಿಸುವಂತಹದ್ದಾಗಿದೆ ಹಾಗೂ ಅದರ ಕೆಲವು ವಿಧಿಗಳು ನಿರಂಕುಶವಾಗಿವೆ, ಜನರ ಪ್ರಾಥಮಿಕ ಮತ್ತು ಮೂಲಭೂತ ಹಕ್ಕುಗಳನ್ನು ನಿರಾಕರಿಸುತ್ತವೆ ಹಾಗೂ ಅಧಿಕಾರಿಗಳಿಗೆ ಅಪರಿಮಿತ ಅಧಿಕಾರಗಳನ್ನು ನೀಡುತ್ತವೆ ಎಂಬ ಅಭಿಪ್ರಾಯಕ್ಕೆ ಅವರು ಬಂದರು. ಬಳಿಕ, ಆ ಮಸೂದೆಯು ಕಾಯ್ದೆಯಾಗದಿದ್ದರೂ, ಅದು ಒಳಗೊಂಡಿದ್ದ ನಿರಂಕುಶ ಧೋರಣೆ ಮತ್ತು ಜನವಿರೋಧಿ ಅಂಶಗಳ ಹಿನ್ನೆಲೆಯಲ್ಲಿ ಈ ಬಾರಿ ಜನರು ಎಚ್ಚರದಿಂದ ಇರುವುದು ಅಗತ್ಯವಾಗಿದೆ.

ಎರಡನೆಯದಾಗಿ, ಕೋವಿಡ್-19ನ್ನು ಸರಕಾರ ಹೇಗೆ ನಿರ್ವಹಿಸಿತು ಎನ್ನುವುದು ಕೂಡ ನಮ್ಮ ಎಚ್ಚರಿಕೆಗೆ ಕಾರಣವಾಗಬೇಕು. ಸರಿಯಾದ ಹಾಗೂ ನಿರ್ದಿಷ್ಟ ಶಾಸನದ ಬೆಂಬಲ ಇಲ್ಲದೆಯೂ, ಭಾರತ ಸೇರಿದಂತೆ ಹಲವಾರು ದೇಶಗಳ ಸರಕಾರಗಳು ಅನವಶ್ಯಕವೆನಿಸುವಷ್ಟು ಕಠಿಣ ಹಾಗೂ ಸುದೀರ್ಘ ಲಾಕ್‌ಡೌನ್‌ಗಳನ್ನು ದಿಢೀರನೆ ಹೇರಿದವು. ಆ ಲಾಕ್‌ಡೌನ್‌ಗಳು ಜನರನ್ನು ಇನ್ನಿಲ್ಲದಂತೆ ಕಾಡಿದವು. ಒಂದು ವೇಳೆ, ಪ್ರಬಲ ಕಾನೂನು ಬೆಂಬಲವಿದ್ದರೆ ಇಂತಹ ಕಠಿಣ ಕ್ರಮಗಳನ್ನು ಪದೇ ಪದೇ ಹೇರಲೂ ಸರಕಾರ ಮುಂದಾಗಬಹುದು. ಹಾಗಾಗಿ, ಎಚ್ಚರಿಕೆ ಅಗತ್ಯ.

ಮೂರನೆಯದಾಗಿ, ಬಹುರಾಷ್ಟ್ರೀಯ ಕಂಪೆನಿಗಳು ಸೇರಿದಂತೆ ಹಲವಾರು ಪ್ರಭಾವಿ ಮತ್ತು ಬಲಿಷ್ಠ ಹಿತಾಸಕ್ತಿಗಳು ಸಾಂಕ್ರಾಮಿಕವನ್ನು ತಮ್ಮ ಸ್ವಾರ್ಥ ಸಾಧನೆಗಳಿಗಾಗಿ ಬಳಸಿಕೊಳ್ಳಲು ಮುಂದಾದವು. ಕೋವಿಡ್ ಅವಧಿಯಲ್ಲಿ ಹೆಚ್ಚಿನ ದೇಶಗಳ ಆರ್ಥಿಕತೆಗಳು ಕುಸಿದವು ಮತ್ತು ಕೋಟ್ಯಂತರ ಜನರು ಬಡತನ ರೇಖೆಯ ಕೆಳಗೆ ತಳ್ಳಲ್ಪಟ್ಟರು. ಆದರೆ, ಜಗತ್ತಿನ ಅತಿ ಶ್ರೀಮಂತರು ಹಿಂದೆಂದೂ ಇಲ್ಲದಷ್ಟು ಪ್ರಮಾಣದಲ್ಲಿ ತಮ್ಮ ಸಂಪತ್ತು ಮತ್ತು ಆದಾಯವನ್ನು ಹೆಚ್ಚಿಸಿಕೊಂಡರು. ಬಿಲಿಯಾಧೀಶರ ಕೂಟಕ್ಕೆ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರ್ಪಡೆಗೊಂಡರು.

ಇದು ಹೇಗಾಯಿತು? ಇದಕ್ಕೆ ಉತ್ತರ ಸಂಕೀರ್ಣ ಹಾಗೂ ಕೌತುಕಮಯ ಜಗತ್ತಿನಲ್ಲಿದೆ. ಇಲ್ಲಿ ಅತಿ ಶ್ರೀಮಂತರು ಮತ್ತು ಸರ್ವಾಧಿಕಾರಿ ಶಕ್ತಿಗಳ ಪರವಾಗಿ ಪರಿಸ್ಥಿತಿಗಳನ್ನು ನಿರ್ಮಿಸಲು ಅತ್ಯುನ್ನತ ಮಟ್ಟಗಳಲ್ಲಿ ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಈ ಶಕ್ತಿಗಳು ಸಾಂಕ್ರಾಮಿಕವನ್ನೂ ಅವಕಾಶಗಳನ್ನಾಗಿ ಬಳಸಿಕೊಳ್ಳುತ್ತಿವೆ. ವಿಜ್ಞಾನವನ್ನು ಮಾತ್ರ ಆಧಾರವಾಗಿಟ್ಟುಕೊಂಡು ಲಸಿಕೆಗಳನ್ನು ತಯಾರಿಸಿದರೆ, ಸಾರ್ವಜನಿಕ ಆರೋಗ್ಯದ ಸುಧಾರಣೆಯಲ್ಲಿ ಅವುಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಆದರೆ, ಅಭೂತಪೂರ್ವ ಹಾಗೂ ಅಗಾಧ ಲಾಭವನ್ನು ಗುರಿಯಾಗಿಸಿ ನಿರ್ಧಾರಗಳನ್ನು ತೆಗೆದುಕೊಂಡರೆ ಹಾಹಾಕಾರ ಏರ್ಪಡುತ್ತದೆ. ಆರೋಗ್ಯ ಕ್ಷೇತ್ರದ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಈ ಶಕ್ತಿಗಳ ಧಾವಂತವನ್ನು ಗಮನಿಸಿದರೆ, ಲಾಭವೂ ಅವರಿಗೆ ಮುಖ್ಯವಲ್ಲ ಎನಿಸುತ್ತದೆ. ಇದನ್ನು ಆಹಾರ ಕ್ಷೇತ್ರದ ಮೇಲೆ ನಿಯಂತ್ರಣ ಸಾಧಿಸಲು ಕುಲಾಂತರಿ (ಜಿಎಮ್) ಕಂಪೆನಿಗಳು ನಡೆಸುತ್ತಿರುವ ಪ್ರಯತ್ನಗಳಿಗೆ ಹೋಲಿಸಬಹುದಾಗಿದೆ. ಸರ್ವಾಧಿಕಾರಿ ಪ್ರವೃತ್ತಿ ಮತ್ತು ದೊಡ್ಡ ಪ್ರಮಾಣದಲ್ಲಿ ಲಾಭ ಕೊಳ್ಳೆಹೊಡೆಯುವ ಪ್ರವೃತ್ತಿಯು ಪರಸ್ಪರ ಪೂರಕವಾಗಿದೆ ಹಾಗೂ ಪರಸ್ಪರರನ್ನು ಅವಲಂಬಿಸಿವೆ.

ಹಾಗಾಗಿ, ಜನರ ಮೂಲಭೂತ ಹಕ್ಕುಗಳ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ಹಾಕಿ ಅಧಿಕಾರಿಗಳ ಕೈಗೆ ಅಗಾಧ ಅಧಿಕಾರಗಳನ್ನು ಶಾಸನಾತ್ಮಕವಾಗಿ ಅಥವಾ ಬೇರೆ ರೂಪಗಳಲ್ಲಿ ಕೊಡುವ ಪ್ರಯತ್ನಗಳ ಬಗ್ಗೆ ನಾವು ಅಗಾಧ ಎಚ್ಚರಿಕೆಯಿಂದಿರಬೇಕು.

ನಾಲ್ಕನೆಯದಾಗಿ, ಕೆಲವು ಸರಕಾರಗಳು ವಿಚಿತ್ರವಾಗಿ ವರ್ತಿಸುತ್ತಿರುವ ಹಿನ್ನೆಲೆಯಲ್ಲಿ ಜನರು ಹೆಚ್ಚು ಜಾಗರೂಕರಾಗಿರಬೇಕು. ಕೋವಿಡ್ ಲಸಿಕೆಗಳು ಕಡ್ಡಾಯವಲ್ಲ ಎಂದು ಹೇಳಿರುವುದಕ್ಕಾಗಿ ನಾವು ಸುಪ್ರೀಂ ಕೋರ್ಟ್ ಗೆ ಕೃತಜ್ಞರಾಗಿರಬೇಕು. ಲಸಿಕೆ ಕಡ್ಡಾಯವಲ್ಲ ಹಾಗೂ ಅದನ್ನು ಯಾವುದೇ ವ್ಯಕ್ತಿಯ ಮೇಲೆ ಅವರ ಇಚ್ಛೆಗೆ ವಿರುದ್ಧವಾಗಿ ಹೇರುವಂತಿಲ್ಲ ಎಂಬ ಸೂಚನೆಯನ್ನು ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ತಕ್ಷಣ ಒಪ್ಪಿಕೊಂಡಿತು, ಆದರೆ ವಾಸ್ತವವಾಗಿ, ಲಸಿಕೆ ತೆಗೆದುಕೊಳ್ಳದೆ ಬದುಕುವುದು ಮತ್ತು ಕೆಲಸ ಮಾಡುವುದನ್ನು ಅತ್ಯಂತ ಕಷ್ಟದಾಯಕವಾಗಿಸುವ ನಿಯಮಗಳನ್ನು ಹಲವು ಹಂತಗಳಲ್ಲಿ ತಂದಿತು. ಲಸಿಕೆಯ ವಿವಿಧ ಪ್ರತಿಕೂಲ ಅಡ್ಡ ಪರಿಣಾಮಗಳು ಭಾರತದಲ್ಲಿ ವರದಿಯಾಗದಿರುವಂತೆ ವ್ಯವಸ್ಥಿತವಾಗಿ ನೋಡಿಕೊಳ್ಳಲಾಯಿತು.

ಕೊನೆಯದಾಗಿ ಹೇಳಬೇಕೆಂದರೆ, ಸಾಂಕ್ರಾಮಿಕಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಗೂ ಮಹತ್ವದ ಪಾತ್ರವಿದೆ. ಹಾಗಾಗಿ, ಅದರ ನೀತಿಗಳು ಮತ್ತು ನಿರ್ಧಾರಗಳೂ ದಿನೇ ದಿನೇ ಹೆಚ್ಚೆಚ್ಚು ಸಂಕುಚಿತ ಹಿತಾಸಕ್ತಿಗಳಿಂದ ಪ್ರಭಾವಿತಗೊಳ್ಳುತ್ತಿದೆ ಎನ್ನುವುದನ್ನು ಹೇಳಬೇಕಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಓರ್ವ ವಿಶ್ವ ಆರೋಗ್ಯ ಸಂಸ್ಥೆಯ ಅತಿ ದೊಡ್ಡ ದೇಣಿಗೆದಾರನಾಗಿ ಹೊರಹೊಮ್ಮುತ್ತಿದ್ದಾನೆ. ಈ ಬಿಲಿಯಾಧೀಶನು ತನ್ನ ಹಲವಾರು ಲಸಿಕೆಗಳು ಮತ್ತು ಕುಲಾಂತರಿ ಬೆಳೆಗಳ ಪ್ರಚಾರಕ್ಕೆ ಅನೈತಿಕ ವಿಧಾನಗಳನ್ನು ಅನುಸರಿಸುತ್ತಿರುವ ಟೀಕೆಗಳನ್ನು ಎದುರಿಸುತ್ತಿದ್ದಾನೆ. ಇಂಥ ದೇಣಿಗೆದಾರರಿಂದಾಗಿ ವಿಶ್ವ ಆರೋಗ್ಯ ಸಂಸ್ಥೆಯು ಪದೇ ಪದೇ ತನಗೆ ಉಚಿತವಲ್ಲದ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತದೆ. ಉದಾಹರಣೆಗೆ: 2009ರಲ್ಲಿ ಹಂದಿಜ್ವರವನ್ನು ಅತ್ಯಂತ ಉತ್ಪ್ರೇಕ್ಷೆಗೊಳಿಸಲಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆಯ ಪಾತ್ರದ ಹಲವಾರು ಅಂಶಗಳು ಮತ್ತು ಅದರ ಉನ್ನತ ನಾಯಕ ಇತ್ತೀಚಿನ ಸಂದರ್ಭಗಳಲ್ಲಿ ಹೆಚ್ಚೆಚ್ಚು ಟೀಕೆಗಳಿಗೆ ಒಳಗಾಗಿದ್ದಾರೆ. ಹಾಗಾಗಿ, ನಮಗೆ ಹಾನಿಕಾರಕವಾಗುವ ಯಾವುದೇ ಕಾರ್ಯಸೂಚಿಯನ್ನು ಸಮರ್ಥಿಸಿಕೊಳ್ಳಲು ವಿಶ್ವ ಆರೋಗ್ಯ ಸಂಸ್ಥೆಯ ಆದೇಶಗಳನ್ನು ಬಳಸಿಕೊಳ್ಳಲಾಗುತ್ತದೆ. ಈ ವಿಷಯದಲ್ಲಿ ನಾವು ಎಚ್ಚರಿಕೆಯಿಂದಿರಬೇಕು.

ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ, ನಾವು ಎಚ್ಚರದಿಂದಿರಬೇಕಾಗಿರುವುದು ಅತ್ಯಂತ ಅಗತ್ಯವಾಗಿದೆ. ನೂತನ ಸಾರ್ವಜನಿಕ ಆರೋಗ್ಯ ಕಾನೂನಿನ ಮೂಲಕ ಸರಕಾರ ಏನನ್ನು ಕೊಡಲು ಹೋಗುತ್ತಿದೆ ಎನ್ನುವುದನ್ನು ಸ್ಪಷ್ಟವಾಗಿ ಪರಿಶೀಲಿಸಬೇಕಾಗಿದೆ. ನೀತಿ ಆಯೋಗ ಸಲ್ಲಿಸಿದ ಕರಡು ಮಸೂದೆಯು ಏಳು ಸದಸ್ಯರ ಸಮಿತಿಯ ಪರಿಶೀಲನೆಗೆ ಹೋಗುತ್ತದೆ ಎನ್ನುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸಮಿತಿಯು ಒಂದು ತಿಂಗಳಲ್ಲಿ ತನ್ನ ವರದಿಯನ್ನು ಸಲ್ಲಿಸಲಿದೆ. ಅದು ವಿವಿಧ ರಾಜ್ಯ ಸರಕಾರಗಳ ಅಭಿಪ್ರಾಯಗಳನ್ನೂ ತೆಗೆದುಕೊಳ್ಳುತ್ತದೆ. ಈ ಕರಡು ಮಸೂದೆಯನ್ನು ಸಾರ್ವಜನಿಕರೊಂದಿಗೆ ಬೇಗನೇ ಹಂಚಿಕೊಳ್ಳಬೇಕು. ಆಗ ಅದರ ಬಗ್ಗೆ ಸೂಕ್ಷ್ಮವಾಗಿ ಅಧ್ಯಯನ ಮಾಡಿ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಸ್ವತಂತ್ರ ಪರಿಣತರು ಮತ್ತು ಸಾರ್ವಜನಿಕ ಹಿತಾಸಕ್ತಿಯ ಸಂಘಟನೆಗಳಿಗೆ ಸಾಕಷ್ಟು ಸಮಯಾವಕಾಶ ಸಿಗುತ್ತದೆ. ಹೊಸ ಕಾನೂನಿನಲ್ಲಿ ಪಾರದರ್ಶಕ ಸಾರ್ವಜನಿಕ ಹಿತಾಸಕ್ತಿ ಇರುವುದೇ ಮುಖ್ಯ, ಸಂಕುಚಿತ ಹಿತಾಸಕ್ತಿಗಳಿಂದ ಪ್ರೇರಿತ ಯಾವುದೇ ಕಾರ್ಯಸೂಚಿಯಲ್ಲ.

 ಕೃಪೆ: countercurrents.org

Writer - ಭರತ್ ಡೋಗ್ರಾ

contributor

Editor - ಭರತ್ ಡೋಗ್ರಾ

contributor

Similar News