ದೂರುದಾರನಿಗೇ ದಂಡ!

Update: 2022-07-26 06:49 GMT
ಸಾಂದರ್ಭಿಕ ಚಿತ್ರ (Source: PTI)

ಖ್ಯಾತ ನಟಿ ಜೂಹಿ ಚಾವ್ಲಾ ಅವರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ದಿಲ್ಲಿ ಹೈಕೋರ್ಟ್ 2021ರ ಜೂನ್‌ನಲ್ಲಿ ನೀಡಿತ್ತು. 5ಜಿ ತಂತ್ರಜ್ಞಾನವನ್ನು ಅವಸರವಸರವಾಗಿ ಜಾರಿಗೆ ತರುವುದರ ವಿರುದ್ಧ ಆಕೆ ಅರ್ಜಿಯೊಂದನ್ನು ಸಲ್ಲಿಸಿದ್ದರು. ಇದನ್ನು ಯಾರು ಬೇಕಾದರೂ ಒಪ್ಪಲಿ ಅಥವಾ ಬಿಡಲಿ, ಜಗತ್ತಿನಾದ್ಯಂತದ ನೂರಾರು ವಿಜ್ಞಾನಿಗಳು ಕೂಡಾ ಜೂಹಿ ಚಾವ್ಲಾ ನ್ಯಾಯಾಲಯಕ್ಕೆ ಕೊಂಡೊಯ್ದ ವಿಷಯದ ಕುರಿತಾಗಿಯೇ ಎಚ್ಚರಿಕೆ ನೀಡಿದ್ದಾರೆ ಹಾಗೂ 5ಜಿ ತಂತ್ರಜ್ಞಾನದಿಂದ ಆರೋಗ್ಯಕ್ಕೆ ಗಂಭೀರವಾದ ಅಪಾಯವಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಜೂಹಿ ಚಾವ್ಲಾ ಅವರ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ವಜಾಗೊಳಿಸಿತ್ತು, ಮಾತ್ರವಲ್ಲದೆ ಪ್ರಚಾರ ಗಳಿಸುವ ಉದ್ದೇಶದಿಂದ ಈ ಅರ್ಜಿಯನ್ನು ಸಲ್ಲಿಸಲಾಗಿದೆಯೆಂದು ಅಸಮಾಧಾನ ವ್ಯಕ್ತಪಡಿಸಿತ್ತು ಹಾಗೂ ಜೂಹಿ ಚಾವ್ಲಾ ಅವರಿಗೆ 20 ಲಕ್ಷ ರೂ. ದಂಡವನ್ನು ವಿಧಿಸಿತ್ತು. ಅರ್ಜಿದಾರೆಯು ಕಾನೂನಿನ ಪ್ರಕ್ರಿಯೆಗೆ ಅಪಚಾರವೆಸಗಿದ್ದಾರೆಂದು ನ್ಯಾಯಾಲಯವು ಆದೇಶದಲ್ಲಿ ತಿಳಿಸಿತ್ತು.
ಅರ್ಜಿದಾರರನ್ನು ದಂಡಿಸುವ ಪ್ರವೃತ್ತಿಯು ಹೆಚ್ಚುತ್ತಿರುವುದು, ಭಾರತದಲ್ಲಿ ನ್ಯಾಯದಾನ ಹಾಗೂ ಮಾನವಹಕ್ಕುಗಳ ಬಗ್ಗೆ ಕಾಳಜಿ ಹೊಂದಿರುವವರೆಲ್ಲರಿಗೂ ತೀವ್ರ ಆತಂಕಕ್ಕೆ ಕಾರಣವಾಗಿದೆ. ಈ ಕಳವಳಗಳನ್ನು ಹೆಚ್ಚಿಸಿರುವಂತಹ ಇತ್ತೀಚಿನ ಇನ್ನೂ ಎರಡು ಪ್ರಕರಣಗಳತ್ತ ದೃಷ್ಟಿ ಹಾಯಿಸೋಣ.

 ಗುಜರಾತ್‌ನ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದಲ್ಲಿ ಸಾವನ್ನಪ್ಪಿದ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಕಿಯಾ ಜಾಫ್ರಿ 2022ರ ಜೂನ್‌ನಲ್ಲಿ ಅರ್ಜಿಯೊಂದನ್ನು ಸಲ್ಲಿಸಿದ್ದರು. ಮಾನವಹಕ್ಕುಗಳ ಹೋರಾಟಗಾರ್ತಿ, ಗುಜರಾತ್ ಗಲಭೆ ಪ್ರಕರಣದ ಸಂತ್ರಸ್ತರ ಕಾನೂನು ಹೋರಾಟಕ್ಕೆ ನೆರವು ನೀಡಿದ್ದ ಹಾಗೂ ಈಗ ಬಂಧನದಲ್ಲಿರುವ ತೀಸ್ತಾ ಸೆಟಲ್ವಾಡ್ ಅವರು ಸಹ ಅರ್ಜಿದಾರೆಯಾಗಿದ್ದರು. ದೂರುದಾರರು ಸುಳ್ಳು ವಾದಗಳನ್ನು ಮಂಡಿಸುತ್ತಿದ್ದಾರೆ ಹಾಗೂ ಕೋಲಾಹಲವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆಂದವರು ಆರೋಪಿಸಿದ್ದರು. ''ಇಂತಹ ಕಾನೂನು ಪ್ರಕ್ರಿಯೆಯ ದುರುಪಯೋಗದಲ್ಲಿ ಶಾಮೀಲಾಗಿರುವವರನ್ನು ಕಟಕಟೆಯಲ್ಲಿ ನಿಲ್ಲಿಸಬೇಕು ಹಾಗೂ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು'' ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಇದರ ಬೆನ್ನಲ್ಲೇ ಗುಜರಾತ್ ಗಲಭೆಗಳ ಕುರಿತಾದ ವಾಸ್ತವಗಳನ್ನು ಬಯಲಿಗೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಮಾಜಿ ಹಿರಿಯ ಪೊಲೀಸ್ ಅಧಿಕಾರಿ ಆರ್.ಬಿ.ಶ್ರೀಕುಮಾರ್ ಹಾಗೂ ಗುಜರಾತ್ ಸಂತ್ರಸ್ತರ ಪರ ಕಾನೂನು ಹೋರಾಟ ನಡೆಸುತ್ತಿರುವ ತೀಸ್ತಾ ಸೆಟಲ್ವಾಡ್ ಅವರ ಬಂಧನವಾಗಿತ್ತು.

ಈ ತೀರ್ಪಿನ ಬಗ್ಗೆ ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಾಧೀಶ ಮದನ್ ಲೋಕೂರ್ ಅವರು ಕರಣ್ ಥಾಪರ್ ಅವರಿಗೆ ನೀಡಿದ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸುತ್ತಾ, ''ಇದು ಅತ್ಯಂತ ದುರದೃಷ್ಟಕರವಾಗಿದೆ'' ಎಂದು ಹೇಳಿದ್ದರು. ಬಂಧಿಸುವುದೇ ತಾನು ನೀಡಿದ್ದ ತೀರ್ಪಿನ ಉದ್ದೇಶವಾಗಿರಲಿಲ್ಲವೆಂಬ ಬಗ್ಗೆ ಸುಪ್ರೀಂಕೋರ್ಟ್ ಸ್ಪಷ್ಟೀಕರಣ ನೀಡಬೇಕೆಂದು ಲೋಕೂರ್ ಅವರು ಸಂದರ್ಶನದಲ್ಲಿ ಆಗ್ರಹಿಸಿದ್ದರು. ಆದರೆ ಇದಕ್ಕೆ ಸರ್ವೋಚ್ಚ ನ್ಯಾಯಾಲಯದಿಂದ ಯಾವುದೇ ಸ್ಪಷ್ಟೀಕರಣ ಬಂದಿರಲಿಲ್ಲ. ಬಂಧನವೇ ಈ ಆದೇಶದ ಉದ್ದೇಶವಾಗಿರುವ ಸಾಧ್ಯತೆಯ ಬಗ್ಗೆ ಕರಣ್ ಥಾಪರ್ ಅವರು ಕೇಳಿದಾಗ, ಲೋಕೂರ್ ಅವರು ''ಈ ಪ್ರಕರಣದಲ್ಲಿ ಸ್ವರ್ಗವೇ ನಮಗೆ ನೆರವಾಗಬೇಕು'' ಎಂದು ಹೇಳಿದ್ದರು. ''ಒಂದು ವೇಳೆ ಕಕ್ಷಿದಾರನು ಕೋರ್ಟ್ ಮೆಟ್ಟಲೇರಿದಲ್ಲಿ ಮತ್ತು ಯಶಸ್ವಿಯಾಗದೆ ಇದ್ದಲ್ಲಿ, ಆಗ ಆತ ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ಸುಪ್ರೀಂಕೋರ್ಟ್‌ನ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಆಕೆಗೆ (ತೀಸ್ತಾ ಸೆಟಲ್ವಾಡ್) ಜಾಮೀನು ಬಿಡುಗಡೆ ದೊರೆಯುವುದು ಅತ್ಯಂತ ಕಷ್ಟಕರವಾಗಲಿದೆ'' ಎಂದು ಲೋಕೂರ್ ಹೇಳಿದ್ದರು.

ಈ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಟೈಮ್ಸ್ ಆಫ್ ಇಂಡಿಯಾದ ಹಿರಿಯ ಅಂಕಣಕಾರ ಸ್ವಾಮಿನಾಥನ್ ಎಸ್. ಅಂಕ್ಲೆಸರಿಯಾ ಅಯ್ಯರ್ ಅವರು, ''ಈ ಆದೇಶವು ನ್ಯಾಯಕ್ಕಾಗಿ ಕಾನೂನು ಹೋರಾಟ ನಡೆಸುತ್ತಿರುವ ಅರ್ಜಿದಾರರಿಗೆ ಪ್ರತಿಕೂಲಕರವಾಗಿದೆ ಹಾಗೂ ಅವರನ್ನು ಆರೋಪಿಗಳೆಂಬಂತೆ ನೋಡುತ್ತಿದೆಯೇ ಹೊರತು ಆರೋಪಿಸಿದವರು (ದೂರುದಾರರು) ಎಂಬುದಾಗಿ ಅಲ್ಲವೆಂದು ನೂರಾರು ಗಣ್ಯ ವ್ಯಕ್ತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ಹೇಳಿದ್ದಾರೆ. ಈ ಹಿಂದೆಯೂ ಕಾರ್ಯನಿರತ ಮತ್ತು ನಿವೃತ್ತ ನ್ಯಾಯಾಧೀಶರು ಕೂಡಾ 2002ರ ಗುಜರಾತ್ ಗಲಭೆಗಳಲ್ಲಿ ರಾಜ್ಯ ಸರಕಾರದ ಪಾತ್ರವನ್ನು ಕಟುವಾಗಿ ಟೀಕಿಸಿದ್ದರು ಎಂದು ಅಂಕಣಕಾರ ಸ್ವಾಮಿನಾಥನ್ ಅವರು ಓದುಗರಿಗೆ ನೆನಪಿಸಿದ್ದರು.

ಮೂರನೆಯ ಉದಾಹರಣೆಯಾಗಿ, 2022ರ ಜುಲೈನಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶವೊಂದರಲ್ಲಿ, ಛತ್ತೀಸ್‌ಗಡದ ದಾಂತೆವಾಡದಲ್ಲಿ 16 ಬುಡಕಟ್ಟು ಜನರ ಹತ್ಯಾಕಾಂಡಕ್ಕೆ ಸಂಬಂಧಿಸಿ ಸಾಮಾಜಿಕ ಕಾರ್ಯಕರ್ತ ಹಿಮಾಂಶು ಕುಮಾರ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿತ್ತು ಹಾಗೂ ಅವರಿಗೆ 5 ಲಕ್ಷ ರೂ. ದಂಡ ವಿಧಿಸಿತ್ತು. ಈ ಹತ್ಯಾಕಾಂಡದ ಘಟನೆಯು 2009ರಲ್ಲಿ ನಡೆದುದಾಗಿತ್ತು. ಆ ಕಾಲದಲ್ಲಿ ಛತ್ತೀಸ್‌ಗಡ ರಾಜ್ಯದಲ್ಲಿ ಮಾನವಹಕ್ಕುಗಳ ತೀವ್ರ ಉಲ್ಲಂಘನೆಯ ಹಲವಾರು ಪ್ರಕರಣಗಳು ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಹಿಮಾಂಶು ಅವರು ತೆಗೆದುಕೊಂಡಿದ್ದ ನಿಲುವಿನ ಬಗ್ಗೆ ಅಪಾರವಾದ ಬೆಂಬಲ ಹಾಗೂ ಸಹಾನುಭೂತಿ ವ್ಯಕ್ತವಾಗಿತ್ತು. ಆಗಿನ ದಿನಗಳಲ್ಲಿ ನಡೆದ ಚರ್ಚಾಕೂಟಗಳಲ್ಲಿ ಹಿಮಾಂಶು ಅವರನ್ನು ಗಾಂಧಿವಾದಿ ಹೋರಾಟಗಾರನೆಂದು ಪರಿಗಣಿಸಲಾಗುತ್ತಿತ್ತು. ಅತ್ಯಂತ ಕಠಿಣವಾದ ಸಂದರ್ಭಗಳಲ್ಲಿ ಅಪಾರ ದಿಟ್ಟತನದೊಂದಿಗೆ ತನ್ನ ಪತ್ನಿಯೊಂದಿಗೆ ಹಿಮಾಂಶು ಅವರು ಮಾನವಹಕ್ಕುಗಳ ರಕ್ಷಣೆಗಾಗಿ ಶ್ರಮಿಸಿದ್ದರು. ವಾಸ್ತವವಾಗಿ ಅವರದ್ದೇ ಆದ ಸಂಘಟನೆಯ ಕಾರ್ಯಾಲಯವನ್ನು ಕೂಡಾ ಆಡಳಿತವು ನೆಲಸಮಗೊಳಿಸಿತ್ತು.

ಹಿಮಾಂಶು ಅವರು ತಪ್ಪಾಗಿ ಗ್ರಹಿಸಿರಬಹುದು ಅಥವಾ ಅವರು ಮಾಡಿದ್ದ ಆರೋಪಗಳು ಸರಿಯಾಗಿರಲೂ ಬಹುದು. ಆದರೆ ಅವರು ಗೊತ್ತಿದ್ದೇ ಸುಳ್ಳೇನಾದರೂ ಹೇಳಿರುವುದು ತೀರಾ ಅಸಂಭವ ನೀಯವಾಗಿದೆ. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ ಅವರು ಸುಳ್ಳ್ಳುಗಳು ಹಾಗೂ ಕಪೋಲಕಲ್ಪಿತ ವಿಷಯಗಳ ಆಧಾರದಲ್ಲಿ ಅತ್ಯಂತ ಪ್ರಭಾವಿಗಳ ವಿರೋಧಕಟ್ಟಿಕೊಳ್ಳಲು ಮುಂದಾಗುವುದು ಅಸಾಧ್ಯ. ಲಭ್ಯವಿರುವ ಎಲ್ಲಾ ಮೂಲಗಳ ಮಾಹಿತಿಯ ಪ್ರಕಾರ ಹೇಳುವುದಾದರೆ, ತಾನು ಯಾವ ವಿಷಯವನ್ನು ಸರಿಯೆಂಬುದಾಗಿ ನಂಬಿದ್ದೇನೋ ಅದರ ಪರವಾಗಿ ಅತ್ಯಂತ ಪ್ರಾಮಾಣಿಕ, ದಿಟ್ಟತನದಿಂದ ಹಾಗೂ ಅತ್ಯಂತ ಸಂಕಷ್ಟಗಳನ್ನು ಎದುರಿಸಿ ಹೋರಾಡಿದವರಾಗಿದ್ದಾರೆ.

ತೀರ್ಪಿನ ಆನಂತರ ಪ್ರತಿಕ್ರಿಯಿಸಿದ್ದ ಹಿಮಾಂಶು ಅವರು, ತನಗೆ ನ್ಯಾಯಾಲಯವು ದೊಡ್ಡ ಮೊತ್ತದ ದಂಡವನ್ನು ಪಾವತಿಸುವಂತೆ ಸೂಚಿಸಿದೆ ಹಾಗೂ ತನ್ನ ವಿರುದ್ಧ ಇನ್ನಷ್ಟು ಕಾನೂನುಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಿದೆ ಎಂದು ಹೇಳಿದ್ದಾರೆ. ತನಗೆ ವಿಧಿಸಿರುವ ದಂಡದ ಮೊತ್ತದ ಒಂದು ಭಾಗದಷ್ಟು ಹಣ ಕೂಡಾ ತನ್ನ ಬಳಿಯಿಲ್ಲವೆಂದು ಅವರು ತಿಳಿಸಿದ್ದಾರೆ ಹಾಗೂ ಒಂದು ವೇಳೆ ತಾನು ದಂಡವನ್ನೇನಾದರೂ ಪಾವತಿಸಿದ್ದೇ ಆದಲ್ಲಿ, ನ್ಯಾಯವನ್ನು ಕೋರುವಾಗ ತಪ್ಪು ಎಸಗಿದ ಹಾಗಾಗುತ್ತದೆ ಎಂದವರು ಹೇಳಿದ್ದರು.

ಆಂಗ್ಲ ದಿನಪತ್ರಿಕೆ 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಈ ತೀರ್ಪಿನ ಬಗ್ಗೆ ಹಾಗೂ ಈ ಪ್ರಕರಣದಲ್ಲಿ ಹಾಗೂ ಸೆಟಲ್ವಾಡ್ ಪ್ರಕರಣದಲ್ಲಿ ಅರ್ಜಿದಾರರನ್ನು ದಂಡಿಸುವ ಪ್ರವೃತ್ತಿಯ ಬಗ್ಗೆ ವಿಷಾದವನ್ನು ವ್ಯಕ್ತಪಡಿಸಿತ್ತು. ''ನ್ಯಾಯಾಲಯ ವಿಧಿಸಿರುವ ಭಾರೀ ಮೊತ್ತದ ದಂಡವು ಭವಿಷ್ಯದಲ್ಲಿ ಸರಕಾರದ ವಿರುದ್ಧ ಅಹವಾಲಿನ ಹೊರತಾಗಿ ಬೇರೇನೂ ಇಲ್ಲದೆ ನ್ಯಾಯಾಲಯದ ಕದ ತಟ್ಟಿದವರಿಗೆ ಇದು ಎಚ್ಚರಿಕೆಯ ಕರೆಗಂಟೆಯಾಗಿದೆ. ದಾಂತೆವಾಡ ಪ್ರಕರಣದಲ್ಲಿ ಅರ್ಜಿದಾರರ ಮೇಲೆ ದಂಡ ಹೇರುವಿಕೆಯು ಈಗ ಹೊರಹೊಮ್ಮುತ್ತಿರುವ ನ್ಯಾಯದಾನದ ನಮೂನೆಯ ಭಾಗವಾಗಿದೆ''.

ಇದರಿಂದಾಗಿ ನ್ಯಾಯಕ್ಕಾಗಿ ಹಾಗೂ ಸಾರ್ವಜನಿಕ ಹಿತಾಸಕ್ತಿಗಾಗಿನ ಹೋರಾಟದ ಮೇಲಾಗುವ ಪರಿಣಾಮಗಳು ಅತ್ಯಂತ ಆತಂಕಕಾರಿಯಾಗಿವೆ. ನ್ಯಾಯಾಲಯದ ಬಾಗಿಲನ್ನು ಬಡಿಯುವವರು ದಂಡ ಅಥವಾ ಜೈಲುವಾಸವನ್ನು ಎದುರಿಸುವ ಸಾಧ್ಯತೆಯ ಬಗ್ಗೆಯೂ ಚಿಂತಿಸಬೇಕಾಗುತ್ತದೆ. ಹೀಗಾಗಿ ನ್ಯಾಯದ ಹಿತದೃಷ್ಟಿಯಿಂದ ಅರ್ಜಿದಾರರನ್ನು ಶಿಕ್ಷಿಸುವ ಈ ಪ್ರವೃತ್ತಿಗೆ ಕಡಿವಾಣ ಹಾಕಬೇಕಾಗಿದೆ. 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯ ಸಂಪಾದಕೀಯದಲ್ಲಿ ಹೇಳಲಾದಂತೆ, ಸುಪ್ರೀಂ ಕೋರ್ಟ್ ಈ ಕಳವಳಕಾರಿ ವಿದ್ಯಮಾನವನ್ನು ಅವಲೋಕಿಸಬೇಕು ಹಾಗೂ ಸಾಂವಿಧಾನಿಕ ವೌಲ್ಯಗಳ ಆಶ್ರಯದಾತನೆಂಬ ತನ್ನ ಹೆಗ್ಗಳಿಕೆಗೆ ಹಾನಿಯಾಗುವುದಕ್ಕೆ ಮುನ್ನವೇ ಅದು ಈ ಪ್ರವೃತ್ತಿಯನ್ನು ನಿಲ್ಲಿಸುವಂತೆ ಕರೆ ನೀಡಬೇಕಾಗಿದೆ.

ಕೃಪೆ: countercurrents.org

Writer - ಭರತ್ ಡೋಗ್ರಾ

contributor

Editor - ಭರತ್ ಡೋಗ್ರಾ

contributor

Similar News