ಕುಸಿಯುತ್ತಿರುವ ರೂಪಾಯಿ ಮತ್ತು ಭಾರತದ ಆರ್ಥಿಕತೆ

Update: 2022-07-27 06:14 GMT

ವಿಶೇಷ ಆರ್ಥಿಕ ಸಮಸ್ಯೆಗಳಿಗೆ ದೂರಗಾಮಿ ಪರಿಹಾರವನ್ನು ಕಂಡುಹುಡುಕುವ ಸಾಮರ್ಥ್ಯ ಎಲ್ಲರಲ್ಲಿಯೂ ಇಲ್ಲವೆಂಬುದು ನೆರೆಯ ಶ್ರೀಲಂಕೆಯ ವಿದ್ಯಮಾನಗಳಿಂದ ಸ್ಪಷ್ಟವಾಗುತ್ತದೆ. ಯಾರಿಗೆ ಆ ಸಾಮರ್ಥ್ಯವಿದೆ ಎಂದು ಗುರುತಿಸಿ ರಾಷ್ಟ್ರದ ಮುತ್ಸದ್ದಿಗಳು ಮುಂದಿನ ದಾರಿಯನ್ನು ಶೋಧಿಸಬೇಕಾಗುತ್ತದೆ. ಸ್ವತಂತ್ರ ಭಾರತದ ವಿಭಿನ್ನ ಕಾಲಘಟ್ಟಗಳಲ್ಲಿ ಈ ಮಾರ್ಗವನ್ನು ಅಂದಿನ ನಾಯಕರು ಆಯ್ದುಕೊಂಡಿದ್ದರು.. ಉದಾಹರಣೆಗಾಗಿ ಕೆಲವೊಂದು ದೂರಗಾಮಿ ಕ್ರಮಗಳಿಂದಾಗಿ 2001-2011ರ ದಶಕದಲ್ಲಿ ಡಾಲರ್-ರೂಪಾಯಿಯ ವಿನಿಮಯ ದರ 47ರೂಪಾಯಿಯ ಮಟ್ಟದಲ್ಲಿ ಸ್ಥಿರವಾಗಿಯೇ ಉಳಿದಿತ್ತು. 2007-08ರ ಜಾಗತಿಕ ಆರ್ಥಿಕ ಬಿಕ್ಕಟ್ಟು ನಮ್ಮ ದೇಶಕ್ಕೆ ವಿಶೇಷವಾದ ಹಾನಿಯನ್ನು ಉಂಟುಮಾಡದಿರಲು ಕಾರಣ ಅಂದಿನ ಆರ್ಥಿಕ ತಜ್ಞರ ಹಾಗೂ ಆರ್‌ಬಿಐ ಗವರ್ನರರ ದೂರದೃಷ್ಟಿ ಎಂದು ಬಲ್ಲವರ ಒಮ್ಮತಾಭಿಪ್ರಾಯವಾಗಿತ್ತು.

ಕೋವಿಡ್ ಮಹಾಮಾರಿಯ ಆಘಾತದಿಂದ ಚೇತರಿಸುವ ಸೂಚನೆಗಳು ಕಂಡುಬರುತ್ತಿದ್ದಂತೆ ಭಾರತದ ಆರ್ಥಿಕತೆಗೆ ಮತ್ತೊಂದು ತೀವ್ರವಾದ ಹೊಡೆತ ಸಂಭವಿಸುವ ಸಾಧ್ಯತೆ ಈಗ ಬಹುತೇಕ ನಿಚ್ಚಳವಾಗಿದೆ. ಅಮೆರಿಕದ ಡಾಲರಿನ ಮೌಲ್ಯದ ಮುಂದೆ ಭಾರತದ ರೂಪಾಯಿ ಬೆಲೆ ಹಿಂದೆಂದೂ ಕೇಳದ ಮಟ್ಟಕ್ಕೆ ಇಳಿದಿದೆ. ವರದಿಗಳ ಪ್ರಕಾರ 2019ರಲ್ಲಿ 69.9 ರೂಪಾಯಿಗೆ 1 ಡಾಲರ್ ಲಭ್ಯವಾಗುತ್ತಿದ್ದರೆ ಈ ಜುಲೈಯಲ್ಲಿ ಅದೇ ಡಾಲರಿಗೆ 80ರೂಪಾಯಿ ತೆರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ರೀತಿಯ ಅಪಮೌಲ್ಯ ಪ್ರಗತಿಶೀಲ ದೇಶದಲ್ಲಿ ಆಗುವುದು ಸ್ವಾಭಾವಿಕ. ಅಪಮೌಲ್ಯ ತೀವ್ರವಾದಾಗ ಮಾತ್ರ ಅದರ ಪರಿಣಾಮ ಗಂಭೀರವಾಗುತ್ತದೆ.

ಈ ಬೆಳವಣಿಗೆಯಿಂದಾಗಿ ದೇಶದ ಅರ್ಥಿಕ ವ್ಯವಸ್ಥೆಯು ಮತ್ತಷ್ಟು ಏರುಪೇರಾಗುವ ಆತಂಕ ಈಗ ಉಂಟಾಗಿದೆ. ಈ ಆತಂಕವನ್ನು ಗಮನಿಸಲು ಮೊದಲಾಗಿ ಎರಡು ವಿಷಯಗಳನ್ನು ಅರಿತುಕೊಳ್ಳುವುದು ಅಗತ್ಯ. ಒಂದು, ವಿದೇಶಿ ವಿನಿಮಯದ ದರವನ್ನು ಯಾವ ಆಧಾರದಲ್ಲಿ ನಿರ್ಣಯಿಸಲಾಗುತ್ತದೆ? ಎರಡು, ಈ ದರದಲ್ಲಿ ಏರಿಳಿತ ಯಾಕೆ ಉಂಟಾಗುತ್ತದೆ?

ವಿದೇಶಿ ವಿನಿಮಯದ ದರ:

ಒಂದು ದೇಶದಲ್ಲಿ ಚಲಾವಣೆಯಲ್ಲಿರುವ ಅಧಿಕೃತವಾದ ವಿನಿಮಯ ಮಾಧ್ಯಮ, ಅಂದರೆ ಅದರ ‘ಕರೆನ್ಸಿ’, ಬೇರೆ ದೇಶದಲ್ಲಿ ಚಲಾವಣೆಯಾಗುವುದಿಲ್ಲ. ಉದಾಹರಣೆಗೆ ನೀವು ಅಮೆರಿಕಕ್ಕೆ ಹೋಗುವಾಗ ಅಲ್ಲಿನ ಕರೆನ್ಸಿಯಾದ ಡಾಲರನ್ನು ನೀವು ಭಾರತದಲ್ಲಿ ಮೊದಲಾಗಿಯೇ ಖರೀದಿಸಿಕೊಂಡು ಅಲ್ಲಿ ಬಳಸಬೇಕಾಗುತ್ತದೆ. ‘ಒಂದು ಡಾಲರ್ ಖರೀದಿಗೆ ನೀವು ಎಷ್ಟು ರೂಪಾಯಿ ಕೊಡಬೇಕು’ ಎಂಬುದೇ ಅವುಗಳ ಪರಸ್ಪರ ವಿನಿಮಯ ದರ. ಈ ದರವನ್ನು ಯಾರು ನಿಗದಿಮಾಡುತ್ತಾರೆ? 1993ರ ತನಕ ಭಾರತೀಯ ರಿಸರ್ವ್ ಬ್ಯಾಂಕು (ಆರ್‌ಬಿಐ) ಡಾಲರ್-ರೂಪಾಯಿ ವಿನಿಮಯ ದರವನ್ನು ನಿಗದಿಪಡಿಸುತ್ತಿತ್ತು. ಆ ದಿನಗಳಲ್ಲಿ ರೂಪಾಯಿಯ ಮೌಲ್ಯವು ನಿರಂತರವಾಗಿ ಕುಸಿದಾಗ, ಔಪಚಾರಿಕವಾಗಿ ರೂಪಾಯಿಯ ಅಪಮೌಲ್ಯ ಮಾಡಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಆರ್‌ಬಿಐ ಪ್ರಯತ್ನಿಸುತ್ತಿತ್ತು. 1993ರಲ್ಲಿ, ಅಂದರೆ ಉದಾರೀಕರಣದ ಆರಂಭದ ದಿನಗಳಲ್ಲಿ, ಆ ಪದ್ಧತಿಯನ್ನು ಕೈಬಿಟ್ಟು ವಿನಿಮಯ ದರದ ನಿರ್ಧಾರವನ್ನು ಮಾರುಕಟ್ಟೆಯ ವಿವೇಚನೆಗೆ ಬಿಡಲಾಯಿತು. ಇದರಿಂದಾಗಿ, ದರ ನಿರ್ಣಯದಲ್ಲಿ ಸರಕಾರವಾಗಲೀ, ಆರ್‌ಬಿಐ ಆಗಲೀ ನೇರ ಹಸ್ತಕ್ಷೇಪ ನಡೆಸಲು ಅವಕಾಶವಿಲ್ಲ. ಬದಲಾಗಿ ವಿನಿಮಯ ದರವು ತರಕಾರಿ ಮಾರುಕಟ್ಟೆಯಲ್ಲಿ ಬೇಡಿಕೆ-ಪೂರೈಕೆಗೆ ಅನುಗುಣವಾಗಿ ಗ್ರಾಹಕರು ತೆರಬೇಕಾದ ಬೆಲೆಯಂತೆ ಬದಲಾಗುತ್ತದೆ. ಭಾರತದಲ್ಲಿ ಡಾಲರಿಗೆ ಬೇಡಿಕೆ ಹೆಚ್ಚಾದಂತೆ ಅಥವಾ ಡಾಲರ್‌ಗಳ ಸಂಗ್ರಹ ಕಡಿಮೆಯಾದಂತೆ ಅದರ ಬೆಲೆ ಏರಿಕೆಯಾಗುತ್ತದೆ- ಅರ್ಥಾತ್ ರೂಪಾಯಿಯ ಮೌಲ್ಯ ಕುಸಿಯುತ್ತದೆ. ಇದನ್ನು ರೂಪಾಯಿಯ ಅನೌಪಚಾರಿಕವಾದ ಅಪಮೌಲ್ಯ ಎನ್ನಬಹುದು.

ಡಾಲರಿನ ಬೆಲೆ ಯಾಕೆ ಏರುತ್ತದೆ? 

ಆರ್ಥಿಕವಾಗಿ ಪ್ರಗತಿಹೊಂದಿದ ದೇಶಗಳ ಕರೆನ್ಸಿಯ ಬೆಲೆ ಸಾಮಾನ್ಯವಾಗಿ ಸ್ಥಿರವಾಗಿಯೇ ಇರುತ್ತದೆ. ಉದಾಹರಣೆಗೆ ಅಮೆರಿಕದ ಡಾಲರ್, ಯುರೋಪಿನ ಯೂರೊ, ಇಂಗ್ಲೆಂಡಿನ ಪೌಂಡು, ಜಪಾನಿನ ಯೆನ್ ಇವುಗಳ ಮೌಲ್ಯ ತಾತ್ಕಾಲಿಕವಾಗಿ ಏರಿಳಿತವನ್ನು ಕಂಡರೂ ದೀರ್ಘಾವಧಿಯಲ್ಲಿ ಏರುತ್ತಲೇ ಇರುತ್ತವೆ. ಇದಕ್ಕೆ ಕಾರಣ ಈ ದೇಶಗಳು ಆರ್ಥಿಕವಾಗಿ ಪ್ರಗತಿ ಹೊಂದಿದ್ದು ಅವುಗಳೊಡನೆ ಇತರ ದೇಶಗಳು ವ್ಯವಹಾರ ನಡೆಸಲು ಅವರ ಕರೆನ್ಸಿಗಳು ಅಗತ್ಯ. ಭಾರತದಂತಹ ಪ್ರಗತಿಶೀಲ ದೇಶಗಳಿಗೆ ಡಾಲರಿನಂತಹ ಕರೆನ್ಸಿಯ ಅಗತ್ಯ ಬಹಳಷ್ಟಿದೆ. ಅಮೆರಿಕದಿಂದ ಆಮದು ಮಾಡುವ ವಸ್ತುಗಳಿಗೆ ಮತ್ತು ಸೇವೆಗಳಿಗೆ ಡಾಲರಿನಲ್ಲಿ ಪಾವತಿ ಮಾಡಬೇಕು. ಆ ದೇಶದಿಂದ ಹಿಂದೆ ಪಡೆದ ಸಾಲಗಳ ಬಡ್ಡಿ ಮತ್ತು ಅಸಲನ್ನು ಸಾಮಾನ್ಯವಾಗಿ ಡಾಲರಿನಲ್ಲಿಯೇ ವಾಪಾಸು ಮಾಡಬೇಕಾಗುತ್ತದೆ. ಇವೂ ಅಲ್ಲದೆ, ವಿದೇಶ ಪ್ರಯಾಣದ ಸಂದರ್ಭದಲ್ಲಿ ಹಾಗೂ ವಿದೇಶದಲ್ಲಿ ಉಚ್ಚ ಶಿಕ್ಷಣಕ್ಕೆ ಅಥವಾ ವೈದ್ಯಕೀಯ ಚಿಕಿತ್ಸೆಗೆ ಡಾಲರ್ ಅಗತ್ಯ. ಇತ್ತೀಚೆಗಿನ ದಿನಗಳಲ್ಲಿ ಡಾಲರಿನ ಬೇಡಿಕೆ ಏರಲು ಎರಡು ಮುಖ್ಯ ಕಾರಣಗಳನ್ನು ಗುರುತಿಸಬಹುದು: ಉಕ್ರೇನ್-ರಶ್ಯದ ಯುದ್ಧದಿಂದಾಗಿ ಕಚ್ಚಾ ತೈಲದ ಬೆಲೆ ತೀವ್ರವಾಗಿ ಏರಿದೆ. ಡಿಸೆಂಬರ್, 2021ರಲ್ಲಿ ಕಚ್ಚಾ ತೈಲದ ಬೆಲೆ ಒಂದು ಬ್ಯಾರೆಲ್ (42 ಗ್ಯಾಲನ್)ಗೆ 70 ಡಾಲರ್ ಇತ್ತು; ಆ ಬಳಿಕ ಬೆಲೆ ಏರುತ್ತಾ, ಮೇ 2022ರಲ್ಲಿ ಅದು 110 ಡಾಲರಿಗೆ, ಜೂನ್‌ನಲ್ಲಿ 122ಕ್ಕೆ ಏರಿತು. ಭಾರತದ ತೈಲ ಹಾಗೂ ಪೆಟ್ರೋಲಿಯಂ ಆಧಾರಿತ ಉದ್ದಿಮೆಗಳಿಗೆ ಬೇಕಾದ ತೈಲದ ಶೇ.80ರಷ್ಟು ಆಮದಿನ ಮೂಲಕವೇ ಬರಬೇಕು. ಅಂದರೆ ಕಚ್ಚಾ ತೈಲದ ಬೆಲೆ ಏರಿದ ಕೂಡಲೇ ಡಾಲರಿಗೆ ಬೇಡಿಕೆ ಹೆಚ್ಚಾಗುತ್ತದೆ. ಎರಡನೆಯ ಕಾರಣ, ಅಮೆರಿಕದ ಹಣಕಾಸು ವ್ಯವಸ್ಥೆಯ ನಿಯಂತ್ರಕ ಸಂಸ್ಥೆ, ಫೆಡರಲ್ ರಿಸರ್ವ್ ಬೋರ್ಡ್, ಆ ದೇಶದ ಬೆಲೆ ಏರಿಕೆಯನ್ನು ಹತ್ತಿಕ್ಕುವ ಉದ್ದೇಶದಿಂದ ಬಡ್ಡಿ ದರಗಳನ್ನು ಇತ್ತೀಚೆಗಷ್ಟೇ ಏರಿಸಿತು. ಅಮೆರಿಕದಲ್ಲಿ ಬಡ್ಡಿ ಹೆಚ್ಚಾದಾಗ ಭಾರತದಲ್ಲಿ ಹೂಡಿಕೆ ಮಾಡಿದ ವಿದೇಶಿಮೂಲದ ಸಾಂಸ್ಥಿಕ ಹೂಡಿಕೆದಾರರು ಹೆಚ್ಚು ಬಡ್ಡಿಯ ಆಕರ್ಷಣೆಗೆ ಒಳಗಾಗಿ ಹೂಡಿಕೆಗಳನ್ನು ಹಿಂಪಡೆದು ಅಮೆರಿಕಕ್ಕೆ ವರ್ಗಾಯಿಸಲು ಮುಂದಾದರು. ಈ ವಿತ್ತ ವರ್ಷದಲ್ಲಿ ಈಗಾಗಲೇ ಸುಮಾರು 28.4 ಬಿಲಿಯ ಡಾಲರ್ ಮೌಲ್ಯದ ಹೂಡಿಕೆಗಳು ಭಾರತದಿಂದ ವರ್ಗಾಯಿಸಲ್ಪಟ್ಟಿವೆ. ಅಧಿಕ ಹೊರಹರಿವಿನಿಂದಾಗಿ ಡಾಲರಿಗೆ ಬೇಡಿಕೆ ಮತ್ತಷ್ಟು ಹೆಚ್ಚಾಯಿತು. 2007-08ರ ಜಾಗತಿಕ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಭಾರತ ಹೊರಹರಿವು ಕೇವಲ 11.8 ಬಿಲಿಯ ಡಾಲರ್ ಆಗಿತ್ತಷ್ಟೆ ಎಂಬುದು ಗಮನಾರ್ಹ.

ರೂಪಾಯಿಯ ಅಪಮೌಲ್ಯದ ಪರಿಣಾಮಗಳು:

ರೂಪಾಯಿಯ ಅಪಮೌಲ್ಯದ ನೇರ ಪರಿಣಾಮ ಆಮದಿನ ಮೇಲೆ ಆಗುತ್ತದೆ. ದೇಶದಲ್ಲಿಂದು ಆಮದಾಗುವ ಸರಕುಗಳಲ್ಲಿ ಸಿಂಹಪಾಲು ಕಚ್ಚಾ ತೈಲ ಮತ್ತು ಅದಕ್ಕೆ ಸಂಬಂಧಿಸಿದ ಅನಿಲಗಳದ್ದು. ಉಷ್ಣವಿದ್ಯುತ್ ಉತ್ಪಾದನೆಗೆ ಅಗತ್ಯವಾದ ಕಲ್ಲಿದ್ದಲು ಕೂಡಾ ಸಾಕಷ್ಟು ಪ್ರಮಾಣದಲ್ಲಿ ಆಮದಾಗುತ್ತದೆ. ಇವುಗಳ ಆಮದಿನ ವೆಚ್ಚ ಹೆಚ್ಚಾದಾಗ ಅವುಗಳ ಉಪಯೋಗದಿಂದ ತಯಾರಿಸಲ್ಪಡುವ ಸರಕುಗಳ ಬೆಲೆಗಳು ಏರುತ್ತವೆ. ಡೀಸೆಲ್ ಮತ್ತು ಸಿಎನ್‌ಜಿ, ಅಡುಗೆ ಅನಿಲ ಕಳೆದ ಹಲವಾರು ವರ್ಷಗಳಿಂದ ತುಟ್ಟಿಯಾಗುತ್ತಲೇ ಇವೆ. ಕಲ್ಲಿದ್ದಲು ಬಳಸುವ ಸ್ಥಾವರಗಳಲ್ಲಿ ಉತ್ಪಾದಿಸಲಾಗುವ ವಿದ್ಯುತ್ತಿನ ದರವನ್ನು ಕೂಡಾ ವಿತರಣಾ ಕಂಪೆನಿಗಳು ಏರಿಸಿವೆ, ಮುಂದೆಯೂ ಹೆಚ್ಚಿಸಲಿವೆ. ಅದೇ ರೀತಿ, ಗಣನೀಯ ಪ್ರಮಾಣದಲ್ಲಿ ಖಾದ್ಯ ತೈಲ, ಬಂಗಾರ ಮತ್ತು ರಸಗೊಬ್ಬರವನ್ನೂ ದೇಶ ಆಮದು ಮಾಡಿಕೊಳ್ಳುತ್ತದೆ. ಡಾಲರ್ ತುಟ್ಟಿಯಾದಾಗ ಇವುಗಳ ಬೆಲೆ ಏರಲಿದೆ.

ಭಾರತದ ಅನೇಕ ಬೃಹತ್ ಹಾಗೂ ಮಧ್ಯಮ ಗಾತ್ರದ ಉತ್ಪಾದನಾ ಘಟಕಗಳು ತಮಗೆ ಅಗತ್ಯವಿರುವ ಕಚ್ಚಾ ವಸ್ತುಗಳಿಗೆ ಆಮದನ್ನು ಅವಲಂಬಿಸಿವೆ. ಕಚ್ಚಾವಸ್ತುಗಳ ಬೆಲೆ ಏರಿಕೆಯಾದಾಗ ಅವುಗಳಿಂದ ತಯಾರಾಗುವ ಸಿದ್ಧವಸ್ತುಗಳ ಬೆಲೆಯೂ ಹೆಚ್ಚಾಗಲಿದೆ. ಜೊತೆಗೆ, ಇಂಧನ, ವಿದ್ಯುಚ್ಛಕ್ತಿ ಮತ್ತು ಸಾರಿಗೆಯ ವೆಚ್ಚದ ಹೆಚ್ಚಳದಿಂದ ಉತ್ಪಾದನಾ ವೆಚ್ಚ ಮೇಲ್ಮುಖವಾಗುತ್ತದೆ. ನಮ್ಮ ದೇಶವು ಇಂದಿಗೂ ಕೆಲವು ಸಿದ್ಧವಸ್ತುಗಳನ್ನು ಸಂಪೂರ್ಣವಾಗಿ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಬೇಕು. ವೈದ್ಯಕೀಯ ಚಿಕಿತ್ಸೆಗೆ ಅಗತ್ಯವಿರುವ ಸಲಕರಣೆಗಳು, ಔಷಧಗಳು, ಅಣುಶಕ್ತಿ ಆಧಾರಿತ ಸ್ಥಾವರಗಳು, ಕೆಲವು ಯಂತ್ರೋಪಕರಣಗಳು, ಕಾರ್ಖಾನೆಗಳಿಗೆ ಬೇಕಾದ ಕೆಲವು ತರದ ಬಾಯ್ಲರುಗಳು, ಇಲೆಕ್ಟ್ರೋನಿಕ್ ಉದ್ದಿಮೆಗಳಿಗೆ ಬೇಕಾದ ವಸ್ತುಗಳು, ಕಾರುಗಳ ಉತ್ಪಾದನೆಗೆ ಅಗತ್ಯವಾದ ಕೆಲವು ಬಿಡಿ ಭಾಗಗಳು- ಹೀಗೆ ಅನೇಕ ವಸ್ತುಗಳಿಗೆ ಭಾರತವು ವಿದೇಶಗಳನ್ನು ಅವಲಂಬಿಸಿದೆ.

ಹಿಂದೆ ಡಾಲರಿನ ರೂಪದಲ್ಲಿ ಪಡೆದಿದ್ದ ಸಾಲಗಳನ್ನು ಮರುಪಾವತಿ ಮಾಡುವಾಗಲೂ, ತೆರಬೇಕಾದ ಬಡ್ಡಿಯನ್ನು ಪಾವತಿಸುವಾಗಲೂ ಬೇಕಾದ ಡಾಲರ್ ದುಬಾರಿಯಾಗುತ್ತದೆ; ದೇಶದ ಹೊರೆ ಜಾಸ್ತಿಯಾಗುತ್ತದೆ (ಶ್ರೀಲಂಕೆಯ ಸಮಸ್ಯೆಗೆ ಇದೂ ಕಾರಣವಾಗಿತ್ತು.)

ಉಚ್ಚ ಶಿಕ್ಷಣಕ್ಕೆ ಹೋಗುವ ಯುವಕ-ಯುವತಿಯರು ವಿಶ್ವವಿದ್ಯಾನಿಲಯಗಳಲ್ಲಿ ತೆರಬೇಕಾದ ಶುಲ್ಕಗಳು, ಅವರ ಓದಿನ ಅವಧಿಯಲ್ಲಿ ಆಗುವ ವೆಚ್ಚ ಮತ್ತು ಪ್ರಯಾಣ ಶುಲ್ಕಗಳು ಏರಿ, ಅವರ ಮೇಲಿನ ಹೊರೆ ಹೆಚ್ಚಾಗಲಿದೆ. ಮಾತ್ರವಲ್ಲ, ವಿದೇಶದಲ್ಲಿ ವಿದ್ಯಾರ್ಜನೆಗೆ ಹೆಚ್ಚು ಸಾಲವನ್ನು ಮಾಡಬೇಕಾದ ಒತ್ತಡವೂ ಅವರ ಮೇಲಾಗುತ್ತದೆ. ರೂಪಾಯಿಯ ಮೌಲ್ಯ ಕಡಿತವಾದಾಗ ದೇಶದ ಆಮದುವೆಚ್ಚ ಹೆಚ್ಚುತ್ತದೆ; ಆದರೆ, ಅದೇ ಪ್ರಮಾಣದಲ್ಲಿ ರಫ್ತು ಹೆಚ್ಚಾಗುವುದಿಲ್ಲ. ಅದರ ಪರಿಣಾಮವಾಗಿ ಚಾಲ್ತಿ ಖಾತೆಯಲ್ಲಿ ಕೊರತೆ ಉಂಟಾಗುತ್ತದೆ (ರಫ್ತಿನ ಮೌಲ್ಯಕ್ಕಿಂತ ಆಮದಿನ ಮೌಲ್ಯ ಹೆಚ್ಚಾದಾಗ ಉಂಟಾಗುವ ಕೊರತೆ). ಈ ಕೊರತೆಯಿಂದಾಗುವ ಪ್ರಮುಖ ತೊಂದರೆ ಎಂದರೆ ಆಮದು ಮಾಡಿಕೊಳ್ಳಲು ಅಗತ್ಯವಾದ ವಿದೇಶಿವಿನಿಮಯ ಅಲಭ್ಯವಾಗುವುದು. ಮಾತ್ರವಲ್ಲ ವಿದೇಶಿವಿನಿಮಯದಲ್ಲಿಯೇ ಪಾವತಿಸಬೇಕಾದ ಹಣವನ್ನು ತುಂಬಲು ಕಷ್ಟ ಆಗುವುದು. ಇತ್ತೀಚೆಗಿನ ಆರ್‌ಬಿಐಯ ವರದಿಯಂತೆ, 2021ನೇ ಹಣಕಾಸು ವರ್ಷದಲ್ಲಿ ನಮ್ಮ ದೇಶದ ಚಾಲ್ತಿ ಖಾತೆಯಲ್ಲಿ 23.9 ಬಿಲಿಯ ಡಾಲರ್ ಮಿಗತೆಯಾಗಿತ್ತು; ಆದರೆ ಇದಕ್ಕೆ ವಿರುದ್ಧವಾಗಿ 2022ನೇ ವರ್ಷದಲ್ಲಿ38.7 ಬಿಲಿಯ ಡಾಲರ್ ಕೊರತೆಯಾಗಿದೆ. ಹೋದ ವರ್ಷದ ಆದಿಯಿಂದಲೇ ನಮ್ಮ ಆಮದು ಹೆಚ್ಚಿ, ರಫ್ತು ಕಡಿಮೆಯಾಗಿ ಡಾಲರಿನ ಬೇಡಿಕೆ ಏರಲು ಆರಂಭವಾಗಿತ್ತು. ಈ ಸನ್ನಿವೇಶಗಳ ಒಟ್ಟು ಪರಿಣಾಮವಾಗಿ ದೇಶದ ಅರ್ಥವ್ಯವಸ್ಥೆ ಮತ್ತೆ ಏರುಪೇರಾಗಬಹುದು. ರೂಪಾಯಿಯ ಮೌಲ್ಯ ಕಡಿಮೆಯಾದಾಗ ಕೆಲವು ಪ್ರಯೋಜನಗಳೂ ಆಗುತ್ತವೆ. ನಮ್ಮ ದೇಶದಿಂದ ರಫ್ತಾಗುವ ಸರಕುಗಳ ಬೆಲೆ ಡಾಲರಿಗೆ ಹೋಲಿಸಿದಾಗ ಅಗ್ಗವಾಗಿ ರಫ್ತಿಗೆ ಉತ್ತೇಜನ ಸಿಗುವ ಸಾಧ್ಯತೆ ಇದೆ. ಮಾಹಿತಿ ತಂತ್ರಜ್ಞಾನ ರಂಗದ ಕಂಪೆನಿಗಳು ತಾವು ಹೊರದೇಶದ ಗ್ರಾಹಕರಿಗೆ ನೀಡುವ ಸೇವೆಗಳಿಗೆ ಶುಲ್ಕವನ್ನು ಸಾಮಾನ್ಯವಾಗಿ ಡಾಲರ್ ರೂಪದಲ್ಲಿ ಪಡೆಯುತ್ತವೆ; ಅದನ್ನು ರೂಪಾಯಿಗೆ ಪರಿವರ್ತಿಸಿದಾಗ ದೇಶೀಯ ಆಯ ವೃದ್ಧಿಸುತ್ತದೆ. ಡಾಲರಿನ ಬೆಲೆ ಏರಿದಾಗ, ಆಮದು ದುಬಾರಿಯಾಗುವ ಕಾರಣ ದೇಶೀಯ ಉದ್ದಿಮೆಗಳಿಗೆ ಉತ್ತೇಜನ ಸಿಗುತ್ತದೆ. ಸ್ವದೇಶಿ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿ ವಿದೇಶಿ ಕಂಪೆನಿಗಳಿಗೆ ಭಾರತದಲ್ಲಿ ಈಗಿರುವ ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಹೊಸ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಉತ್ತೇಜನ ಲಭಿಸಬಹುದು. ಆದರೆ ಈ ಸಾಧ್ಯತೆಗಳು ಕಾರ್ಯರೂಪಕ್ಕೆ ಬರುವ ಬಗ್ಗೆ ಪ್ರಬಲವಾದ ಶಂಕೆಯೂ ಇದೆ: ವಿಶ್ವದ ವಿವಿಧ ದೇಶಗಳಲ್ಲಿ ಕೊರೋನದ ಬಳಿಕದ ಆರ್ಥಿಕ ಚೇತರಿಕೆ ಇನ್ನೂ ದೃಢವಾಗಿಲ್ಲ. ಅವುಗಳ ಅರ್ಥವ್ಯವಸ್ಥೆ ಸುಧಾರಿಸಿದರೆ ಮಾತ್ರ ಭಾರತದಿಂದ ಸರಕುಗಳನ್ನು ಮತ್ತು ಸೇವೆಗಳನ್ನು ತರಿಸಿಕೊಳ್ಳಬಹುದು. ಈ ಅನಿಶ್ಚಿತತೆಯಿಂದಾಗಿ ನಮ್ಮ ರಫ್ತು ಹೆಚ್ಚಾಗಬಹುದೆಂಬುದು ಸದ್ಯಕ್ಕೆ ಊಹಾತ್ಮಕವಾಗಿಯೇ ಕಾಣುತ್ತದೆ.

ಮುಂದಿನ ದಿನಗಳು:

ಬೇಡಿಕೆ ಮತ್ತು ಪೂರೈಕೆಯ ಅಂತರವನ್ನು ಹತೋಟಿಯಲ್ಲಿಟ್ಟು ರೂಪಾಯಿ ಮತ್ತಷ್ಟು ಅಪಮೌಲ್ಯಗೊಳ್ಳದಂತೆ ತಡೆಯುವ ಉದ್ದೇಶದಿಂದ ಆರ್‌ಬಿಐಯು ತನ್ನ ಸಂಗ್ರಹದಲ್ಲಿರುವ ವಿದೇಶಿವಿನಿಮಯ ನಿಧಿಯಿಂದ ಡಾಲರನ್ನು ಮಾರುಕಟ್ಟೆಯಲ್ಲಿ ಮಾರುತ್ತಿದೆ. ಉಕ್ರೇನ್ ಬಿಕ್ಕಟ್ಟು ಆರಂಭವಾದ ಸಮಯದಿಂದ ಇತ್ತೀಚೆಗಿನ ವರೆಗೆ ಸುಮಾರು 40 ಬಿಲಿಯ ಡಾಲರ್‌ಗಳನ್ನು ಈಗಾಗಲೇ ಮಾರಿದೆ. ಈ ಕ್ರಮವನ್ನು ಅನುಸರಿಸದೆ ಇದ್ದಿದ್ದರೆ ಬಹುಷಃ ರೂಪಾಯಿ ಬೆಲೆ 90ಕ್ಕೆ ಇಳಿಯುತ್ತಿತ್ತು ಎಂದು ವಿಶ್ಲೇಷಕರ ಅಭಿಪ್ರಾಯ. ಸರಕಾರ ಮತ್ತು ಆರ್‌ಬಿಐ ಏನು ಮಾಡಬಹುದು ಎಂಬುದರ ಬಗ್ಗೆ ಒಮ್ಮತವಿಲ್ಲ. ಬಂಡವಾಳವು ನಮ್ಮಲ್ಲೇ ಉಳಿಯುವಂತೆ ಮಾಡಲು ಹಾಗೂ ಅದರ ಒಳಹರಿವು ಹೆಚ್ಚಲು ನಮ್ಮ ಬಡ್ಡಿದರವನ್ನು ಅಮೆರಿಕದಲ್ಲಿ ಮಾಡಿದಂತೆ ಏರಿಸಬೇಕೆಂಬ ಅಭಿಪ್ರಾಯವಿದೆ. ಆದರೆ, ಬಡ್ಡಿದರದ ಹೆಚ್ಚಳದ ದುಷ್ಪರಿಣಾಮವೂ ಇದೆ: ಸಾಲಗಳ ಬಡ್ಡಿಯ ಹೊರೆ ಹೆಚ್ಚಾದಂತೆ ಉದ್ದಿಮೆಗಳು ವ್ಯವಹಾರಗಳಲ್ಲಿ ಹೂಡಿಕೆ ಮಾಡಲು ಹಿಂದೇಟು ಹಾಕುವುದು ಸಾಮಾನ್ಯ ಅನುಭವ. ವಿಶೇಷ ಆರ್ಥಿಕ ಸಮಸ್ಯೆಗಳಿಗೆ ದೂರಗಾಮಿ ಪರಿಹಾರವನ್ನು ಕಂಡುಹುಡುಕುವ ಸಾಮರ್ಥ್ಯ ಎಲ್ಲರಲ್ಲಿಯೂ ಇಲ್ಲವೆಂಬುದು ನೆರೆಯ ಶ್ರೀಲಂಕೆಯ ವಿದ್ಯಮಾನಗಳಿಂದ ಸ್ಪಷ್ಟವಾಗುತ್ತದೆ. ಯಾರಿಗೆ ಆ ಸಾಮರ್ಥ್ಯವಿದೆ ಎಂದು ಗುರುತಿಸಿ ರಾಷ್ಟ್ರದ ಮುತ್ಸದ್ದಿಗಳು ಮುಂದಿನ ದಾರಿಯನ್ನು ಶೋಧಿಸಬೇಕಾಗುತ್ತದೆ. ಸ್ವತಂತ್ರ ಭಾರತದ ವಿಭಿನ್ನ ಕಾಲಘಟ್ಟಗಳಲ್ಲಿ ಈ ಮಾರ್ಗವನ್ನು ಅಂದಿನ ನಾಯಕರು ಆಯ್ದುಕೊಂಡಿದ್ದರು.. ಉದಾಹರಣೆಗಾಗಿ ಕೆಲವೊಂದು ದೂರಗಾಮಿ ಕ್ರಮಗಳಿಂದಾಗಿ 2001-2011ರ ದಶಕದಲ್ಲಿ ಡಾಲರ್-ರೂಪಾಯಿಯ ವಿನಿಮಯ ದರ 47ರೂಪಾಯಿಯ ಮಟ್ಟದಲ್ಲಿ ಸ್ಥಿರವಾಗಿಯೇ ಉಳಿದಿತ್ತು. 2007-08ರ ಜಾಗತಿಕ ಆರ್ಥಿಕ ಬಿಕ್ಕಟ್ಟು ನಮ್ಮ ದೇಶಕ್ಕೆ ವಿಶೇಷವಾದ ಹಾನಿಯನ್ನು ಉಂಟುಮಾಡದಿರಲು ಕಾರಣ ಅಂದಿನ ಆರ್ಥಿಕ ತಜ್ಞರ ಹಾಗೂ ಆರ್‌ಬಿಐ ಗವರ್ನರರ ದೂರದೃಷ್ಟಿ ಎಂದು ಬಲ್ಲವರ ಒಮ್ಮತಾಭಿಪ್ರಾಯವಾಗಿತ್ತು.

ಸದ್ಯದ ಸರಕಾರದ ಪ್ರಮುಖ ಆರ್ಥಿಕ ನಿರ್ಧಾರಗಳು ವ್ಯವಸ್ಥೆಯನ್ನು ಸುಧಾರಿಸುವ ಬದಲು ಮತ್ತಷ್ಟು ಹದಗೆಡಿಸಿವೆ ಎಂಬುದು ಸ್ವತಂತ್ರ ಅರ್ಥಶಾಸ್ತ್ರಜ್ಞರ ಅಭಿಪ್ರಾಯ. ನೋಟು ರದ್ದತಿ, ಸರಕು ಮತ್ತು ಸೇವಾ ತೆರಿಗೆಯ ಕಾರ್ಯವೈಖರಿಯಲ್ಲಿನ ಗೊಂದಲಗಳು, 2020ರ ದೇಶವ್ಯಾಪಿ ‘ಲಾಕ್‌ಡೌನ್’ ಮತ್ತು 70ವರ್ಷಗಳಲ್ಲಿ ಆರ್ಥಿಕ ಪ್ರಗತಿಗೆ ಕಾರಣೀಭೂತವಾಗಿದ್ದ ಬೃಹತ್ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣದ ನಿರ್ಧಾರಗಳು ಸರಕಾರದ ಆರ್ಥಿಕ ನೀತಿಯ ಬಗ್ಗೆ ಕನ್ನಡಿ ಹಿಡಿದಿವೆ. ಈ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ಭದ್ರತೆಯನ್ನು ಕಾಪಾಡುವ ದಾರಿಗಳನ್ನು ಸರಕಾರ ಹೇಗೆ ಕಂಡುಹುಡುಕುತ್ತದೆ ಎಂಬುದು ಸದ್ಯಕ್ಕೆ ಯಕ್ಷ ಪ್ರಶ್ನೆಯಾಗಿಯೇ ಉಳಿಯುವಂತಿದೆ.

Writer - ಟಿ.ಆರ್. ಭಟ್

contributor

Editor - ಟಿ.ಆರ್. ಭಟ್

contributor

Similar News