ಸರಕಾರಿ ಶಾಲೆಗಳ ವಿಲೀನ: ನೆಲ ಡೊಂಕೇ ಸಚಿವರೇ?
ವಿಲೀನದ ಹೆಸರಿನಲ್ಲಿ ಶಾಲೆಗಳನ್ನು ಮುಚ್ಚುತ್ತಿರುವ ತಮ್ಮ ಇಲಾಖೆಯ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಶಿಕ್ಷಣ ಸಚಿವರ ಬಳಿ ಪರ್ಯಾಯ ಮಾರ್ಗಗಳ ಕುರಿತು, ತಾರ್ಕಿಕತೆ ಕುರಿತು ಯಾವುದೇ ತಿಳುವಳಿಕೆಯಿಲ್ಲ. ತಮ್ಮ ಇಲಾಖೆಯ ಅಧಿಕಾರಿಗಳು ಕೊಡುವ ಮಾಹಿತಿಯನ್ನು ಆಧರಿಸಿ ಯಥಾವತ್ತಾಗಿ ಜಾರಿಗೊಳಿಸುತ್ತಿರುವ ನಾಗೇಶ್ ಅವರು ತಮ್ಮ ನಿರ್ಧಾರದ ಮೂಲಕ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನೇ ನಾಶ ಮಾಡುತ್ತಿದ್ದಾರೆ.
2018-19ರ ಬಜೆಟ್ ಭಾಷಣದ ಸಂದರ್ಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು 28,000 ಸರಕಾರಿ ಶಾಲೆಗಳನ್ನು ಮಕ್ಕಳ ಕೊರತೆಯ ಕಾರಣಕ್ಕಾಗಿ ಮುಚ್ಚುವುದಾಗಿಯೂ ಅವುಗಳನ್ನು ಇತರ 8,000 ಸರಕಾರಿ ಶಾಲೆಗಳಲ್ಲಿ ವಿಲೀನಗೊಳಿಸುವುದಾಗಿ ಪ್ರಕಟಿಸಿದ್ದರು. ಈ ನೀತಿಯು ಒಂದು ಕಿ.ಮೀ. ವ್ಯಾಪ್ತಿಯ ಒಳಗೆ ಬರುವ ಸರಕಾರಿ ಶಾಲೆಗೆ ಅನ್ವಯಿಸುತ್ತದೆ ಎಂದು ಹೇಳಿದರು. ಇದರ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾದ ಬಳಿಕ ಆಗಿನ ಶಿಕ್ಷಣ ಸಚಿವರಾದ ಎನ್. ಮಹೇಶ್ ಅವರು ಯಾವುದೇ ಸರಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ, ಗುಣಮಟ್ಟದ ಶಿಕ್ಷಣಕ್ಕಾಗಿ ಮಕ್ಕಳ ಕೊರತೆ ಇರುವ ಶಾಲೆಗಳನ್ನು ವಿಲೀನಗೊಳಿಸುತ್ತೇವೆ ಎಂದು ಹೇಳಿದ್ದರು. ಸಚಿವರ ಹೇಳಿಕೆಯ ಬೆನ್ನಲ್ಲೇ ಶಿಕ್ಷಣ ಇಲಾಖೆಯು ಗಡಿ ಜಿಲ್ಲೆ ಬೀದರ್‌ನಲ್ಲಿ 9 ಸರಕಾರಿ ಶಾಲೆಗಳು, 8 ಉರ್ದು ಶಾಲೆಗಳಿಗೆ ಬೀಗ ಹಾಕಿತ್ತು.
ಆದರೆ ವಾಮಮಾರ್ಗದಲ್ಲಿ ಅನೈತಿಕವಾಗಿ ಅಧಿಕಾರಕ್ಕೆ ಬಂದ ಬಿಜೆಪಿಯಿಂದ ಹಿಂದಿನ ಸರಕಾರಕ್ಕಿಂತಲೂ ಭಿನ್ನವಾದ ನಡೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. 19, ಜುಲೈ 2022ರ ದಿನಪತ್ರಿಕೆಗಳಲ್ಲಿ ವರದಿಯಾದಂತೆ 25ಕ್ಕಿಂತಲೂ ಕಡಿಮೆ ಮಕ್ಕಳಿರುವ 13,800 ಸರಕಾರಿ ಶಾಲೆಗಳನ್ನು ಇತರ ಶಾಲೆಗಳಲ್ಲಿ ವಿಲೀನಗೊಳಿಸಲಾಗುವುದು. ಈ ಪೈಕಿ 1,800 ಶಾಲೆಗಳಲ್ಲಿ 10ಕ್ಕೂ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ವಿಲೀನದ ಹೆಸರಿನಲ್ಲಿ ಶಾಲೆಗಳನ್ನು ಮುಚ್ಚುತ್ತಿರುವ ತಮ್ಮ ಇಲಾಖೆಯ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಶಿಕ್ಷಣ ಸಚಿವರ ಬಳಿ ಪರ್ಯಾಯ ಮಾರ್ಗಗಳ ಕುರಿತು, ತಾರ್ಕಿಕತೆ ಕುರಿತು ಯಾವುದೇ ತಿಳುವಳಿಕೆಯಿಲ್ಲ. ತಮ್ಮ ಇಲಾಖೆಯ ಅಧಿಕಾರಿಗಳು ಕೊಡುವ ಮಾಹಿತಿಯನ್ನು ಆಧರಿಸಿ ಯಥಾವತ್ತಾಗಿ ಜಾರಿಗೊಳಿಸುತ್ತಿರುವ ನಾಗೇಶ್ ಅವರು ತಮ್ಮ ನಿರ್ಧಾರದ ಮೂಲಕ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನೇ ನಾಶ ಮಾಡುತ್ತಿದ್ದಾರೆ.
ತಾತ್ವಿಕ, ಪ್ರಜಾತಾಂತ್ರಿಕ, ಸಾಂವಿಧಾನಿಕ ಪ್ರಶ್ನೆಗಳು
ಗ್ರಾಮಗಳಲ್ಲಿ ಶಾಲೆಗಳನ್ನು ಮುಚ್ಚುವುದೆಂದರೆ ಆ ಹಳ್ಳಿಯನ್ನು ಹೊರಗಿನ ಜಗತ್ತಿನೊಂದಿಗೆ ಸಂಪರ್ಕ ಕಡಿತಗೊಳಿಸಿದಂತಾಗುತ್ತದೆ. ನಾಗರಿಕತೆಯನ್ನು ನಿರಾಕರಿಸಿದಂತಾಗುತ್ತದೆ. ಒಂದು ಮಗುವಿದ್ದರೂ ಅಲ್ಲಿ ಒಬ್ಬ ಶಿಕ್ಷಕ ಬೇಕು, ಮಕ್ಕಳು ಸ್ಥಳೀಯ ಪರಿಸರದಲ್ಲಿ ವ್ಯಾಸಂಗ ಮಾಡಬೇಕು ಎನ್ನುವ ಪ್ರಜಾಪ್ರಭುತ್ವದ ಮೌಲ್ಯ, ವೈಜ್ಞಾನಿಕ ತತ್ವ ಇವರಿಗೆ ಅರ್ಥವಾಗುವುದಿಲ್ಲ. ಶಾಲೆಗಳು ಮುಚ್ಚಿದರೆ ಹತ್ತಾರು ಕಿ.ಮೀ. ದೂರದ ಶಾಲೆಗೆ ಪಯಣಿಸಲು ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಆ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಇವರಲ್ಲಿಯೂ ಬಾಲಕಿಯರು ಮೊದಲ ಬಲಿಪಶುಗಳು. ಒಂದೆಡೆ ಮಕ್ಕಳ ಕೊರತೆ ಎನ್ನುವ ಸರಕಾರ ಮತ್ತೊಂದೆಡೆ ಶಾಲಾ ಸೌಲಭ್ಯವಿಲ್ಲದೆ ಹತ್ತಾರು ಕಿ.ಮೀ. ನಡೆದು ಪಕ್ಕದ ಊರಿಗೆ ಹೋಗಬೇಕಾದ ಅನಿವಾರ್ಯತೆ. ಯಾಕಿಂತಹ ವೈರುಧ್ಯಗಳು ಮಿನಿಸ್ಟರ್?
26, ಜುಲೈ 2022ರ ದಿನಪತ್ರಿಕೆಯ ವರದಿಯ ಪ್ರಕಾರ ಚಿತ್ರದುರ್ಗ ಜಿಲ್ಲೆಯ ಬೆನಕನಹಳ್ಳಿ ಗ್ರಾಮಕ್ಕೆ ವಾಹನ ಸೌಲಭ್ಯವಿಲ್ಲದ ಕಾರಣ ಅಲ್ಲಿನ ಮಕ್ಕಳು 8 ಕಿ.ಮೀ. ದೂರ ನಡೆದು ಪಕ್ಕದ ಧರ್ಮಪುರಕ್ಕೆ ಬಂದು ಶಿಕ್ಷಣ ಪಡೆಯಬೇಕಾದ ಅನಿವಾರ್ಯತೆಯಿದೆ. ಆದರೆ ಇದು ಕಾರ್ಯಸಾಧುವಲ್ಲದ ಕಾರಣ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಈ ಕಾರಣದಿಂದ ಅಲ್ಲಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇನ್ನೂ ನೂರಾರು ಹಳ್ಳಿಗಳ ಕತೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಶಿಕ್ಷಣ ಇಲಾಖೆಗೆ, ಸಚಿವರಿಗೆ ಇದರ ಅರಿವಿಲ್ಲವೇ? ಗೊತ್ತಿದ್ದೂ ಶೇ.25ರಷ್ಟು ಸರಕಾರಿ ಶಾಲೆಗಳನ್ನು ವಿಲೀನದ ನೆಪದಲ್ಲಿ ಮುಚ್ಚಿ ಮಕ್ಕಳ ಶೈಕ್ಷಣಿಕ ಭವಿಷ್ಯ ಹಾಳು ಮಾಡುತ್ತಿದ್ದಾರೆಯೇ? ತಮ್ಮ ಹೊಣೆಗಾರಿಕೆ ನಿಭಾಯಿಸುವಲ್ಲಿ ವಿಫಲರಾದ ಇವರು ಉತ್ತರದಾಯಿತ್ವದಿಂದ ನುಣುಚಿಕೊಳ್ಳಲು ಮಕ್ಕಳನ್ನು ಬಲಿಪಶು ಮಾಡುತ್ತಿದ್ದಾರೆಯೇ? ಎಲ್ಲವೂ ನಿಜ. ಯಾಕೆ ಮಕ್ಕಳು ಶಾಲೆಗೆ ಬರುತ್ತಿಲ್ಲ ಎನ್ನುವ ಪ್ರಶ್ನೆ ಕೇಳಿಕೊಳ್ಳದ, ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಯಾಕೆ ಮಕ್ಕಳು ಹತ್ತಾರು ಕಿ.ಮೀ. ನಡೆದು ಶಾಲೆಗೆ ಬರುವಂತಹ ದುಸ್ಥಿತಿಯಿದೆ ಎಂದು ಪ್ರಶ್ನೆ ಕೇಳಿಕೊಳ್ಳದ ಸರಕಾರ ಆತ್ಮವಂಚನೆಯಲ್ಲಿ ಮುಳುಗಿದೆ.
ಸಂವಿಧಾನದ ಪರಿಚ್ಛೇದ 21(ಎ) ಅನುಸಾರ 6-14ರ ವಯಸ್ಸಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕನ್ನು ಪ್ರತಿಪಾದಿಸಿದೆ. ಪರಿಚ್ಛೇದ 45ರ ಅನುಸಾರ 0-6ನೇ ವಯಸ್ಸಿನ ಮಕ್ಕಳಿಗೆ ಕಡ್ಡಾಯ, ಉಚಿತ ಶಿಶುಪಾಲನೆ ಮತ್ತು ಶಿಕ್ಷಣ ಕೊಡಬೇಕೆಂದು ಹೇಳಿದೆ. 2002ರಲ್ಲಿ ಸಂಸತ್ತಿನಲ್ಲಿ ಮಂಡಿಸಿದ 86ನೇ ತಿದ್ದುಪಡಿಯ ಅನುಸಾರ ಈ ಹಕ್ಕಿನ ಅನುಷ್ಠಾನದ ಜವಾಬ್ದಾರಿಯನ್ನು ರಾಜ್ಯ ಸರಕಾರಗಳಿಗೆ ವಹಿಸಲಾಗಿದೆ. ಇದನ್ನು ಸಂಪೂರ್ಣವಾಗಿ ರಾಜ್ಯ ಸರಕಾರಗಳ ವಿವೇಚನೆಗೆ ತಕ್ಕಂತೆ ಅನುಷ್ಠಾನಗೊಳಿಸಲು ಅನುವು ಮಾಡಿಕೊಡಲಾಗಿದೆ. ಪರಿಚ್ಛೇದ 41ರ ಅನುಸಾರ ರಾಜ್ಯ ಸರಕಾರಗಳು ತಮ್ಮ ಅಧಿಕಾರವನ್ನು ಬಳಸಿಕೊಂಡು ನಾಗರಿಕರಿಗೆ ಶಿಕ್ಷಣದ ಹಕ್ಕು, ಕೆಲಸದ ಹಕ್ಕುಗಳಿಗೆ ಪೂರಕವಾದ ಅವಕಾಶಗಳನ್ನು ಕಲ್ಪಿಸಬೇಕೆಂದು ಹೇಳಿದೆ. 2002ರಲ್ಲಿನ 86ನೇ ತಿದ್ದುಪಡಿಯ ಅನುಸಾರ ಪರಿಚ್ಛೇದ 51(ಎ)ಗೆ ಕಲಮು ‘ಕೆ’ಯನ್ನು ಸೇರಿಸಿ ಅದರಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವ ಅಧಿಕಾರವನ್ನು ಪೋಷಕರ ವಿವೇಚನೆಗೆ ಬಿಡಲಾಗಿದೆ. ಪರಿಚ್ಛೇದ 46ರ ಅನುಸಾರ ದುರ್ಬಲ ವರ್ಗಗಳ, ಪ.ಜಾತಿ/ಪ.ಪಂಗಡದ ಮಕ್ಕಳ ಶೈಕ್ಷಣಿಕ, ಆರ್ಥಿಕ ಹಿತಾಸಕ್ತಿ ಕಾಪಾಡುವ ಹೊಣೆಗಾರಿಕೆ ಪ್ರಭುತ್ವದ ಮೇಲಿದೆ.
ಆದರೆ 13,800 ಶಾಲೆಗಳನ್ನು ವಿಲೀನದ ನೆಪದಲ್ಲಿ ಶಾಶ್ವತವಾಗಿ ಮುಚ್ಚಲು ಮುಂದಾಗಿರುವ ಸರಕಾರದ ನಿರ್ಧಾರವು ಮೇಲಿನ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ವಂಚಿತ ಸಮುದಾಯಗಳ ಮಕ್ಕಳ ಶಿಕ್ಷಣದ ಹಕ್ಕನ್ನು ರಕ್ಷಿಸಬೇಕಾದ ಸರಕಾರ ಅವರನ್ನು ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿದೆ.
ಖಾಸಗೀಕರಣದ ಪರವಾದ ಶಿಕ್ಷಣ ನೀತಿ
ಸರಕಾರಿ ಶಾಲೆಗಳನ್ನು ಹಂತಹಂತವಾಗಿ ಮುಚ್ಚುತ್ತಿರುವ ಈ ದುರಂತಕ್ಕೆ ಮುಖ್ಯಕಾರಣ ಪ್ರಭುತ್ವದ ಖಾಸಗೀಕರಣದ ಪರವಾದ ಒಲವು. ಸರಕಾರ ಸಾರ್ವಜನಿಕ ಶಿಕ್ಷಣದಿಂದ ಹೊರಬರುವ ತವಕ ಮತ್ತು ಕಾರ್ಯತಂತ್ರ. ಈ ಕಾರಣಕ್ಕಾಗಿಯೇ ರಾಜ್ಯ ಸರಕಾರ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯು ಮುಂಚೂಣಿಯಲ್ಲಿ ನಿಂತು ಸಮಾನ ಶಿಕ್ಷಣದ ನೇತೃತ್ವವನ್ನು ವಹಿಸಿಕೊಳ್ಳಬೇಕಾದಂತಹ ಸಂದರ್ಭದಲ್ಲಿ ಸರಕಾರವೇ ತನ್ನ ಸರಕಾರಿ ಶಾಲೆಗಳನ್ನು ಮುಚ್ಚುತ್ತಿದೆ. ಖಾಸಗಿ ಶಾಲೆಗಳಿಗೆ ಪ್ರೋತ್ಸಾಹಿಸುತ್ತಿದೆ. ರಾಜ್ಯದ ಎಲ್ಲಾ ಜಾತಿಯ, ವರ್ಗಗಳ ಮಕ್ಕಳಿಗೆ ಸಮಾನ ಶಿಕ್ಷಣವನ್ನು ಕೊಡಬೇಕೆನ್ನುವ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ರಾಜ್ಯ ಸರಕಾರ ಕಳೆದ 30 ವರ್ಷಗಳಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ಕ್ರಮೇಣವಾಗಿ ಖಾಸಗೀಕರಣಗೊಳಿಸುತ್ತ ಆ ಮೂಲಕ ಶಿಕ್ಷಣ ಮತ್ತು ಮಾನವ ಸಂಪನ್ಮೂಲ ಕ್ಷೇತ್ರಗಳನ್ನು ವ್ಯಾಪಾರೀಕರಣಗೊಳಿಸಿದೆ. ರಾಜಕಾರಣಿಗಳ ವೈಯಕ್ತಿಕ ಹಿತಾಸಕ್ತಿ ಮತ್ತು ಭ್ರಷ್ಟಾಚಾರದ ಪರಿಣಾವವಾಗಿ ಇಡೀ ಶಿಕ್ಷಣ ವ್ಯವಸ್ಥೆಯೇ ಇಂದು ಖಾಸಗಿ ಸಂಸ್ಥೆಗಳ ಕೈಯಲ್ಲಿದೆ. ಈ ಖಾಸಗೀಕರಣದಿಂದ ಶಿಕ್ಷಣವು ವ್ಯಾಪಾರೀಕರಣಗೊಂಡು ಪ್ರಾಥಮಿಕ ಶಿಕ್ಷಣವೂ ಒಂದು ಉದ್ಯಮವಾಗಿ ಮಾರ್ಪಟ್ಟಿದೆ. ಪ್ರಾಥಮಿಕ ಶಿಕ್ಷಣದ ಈ ಖಾಸಗೀಕರಣ ಮತ್ತು ವ್ಯಾಪಾರೀಕರಣದ ಫಲವಾಗಿ ಶಿಕ್ಷಣದ ಹಕ್ಕುಗಳು, ಕಡ್ಡಾಯವಾಗಿ ಉಚಿತ ಶಿಕ್ಷಣ ಎನ್ನುವ ಸಂವಿಧಾನದ ನೀತಿ ಸಂಪೂರ್ಣವಾಗಿ ಮೂಲೆಗುಂಪಾಗಿದೆ.
ಶಿಕ್ಷಣ ಹಕ್ಕಿನ ಕುರಿತಾಗಿ ವಿಶ್ವಸಂಸ್ಥೆಯ ವಿಶೇಷ ವರದಿಗಾರರಾಗಿರುವ ಕಿಶೋರ್ ಸಿಂಗ್ ಅವರು 2014ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಂಡಿಸಿದ ಪ್ರಬಂಧದಲ್ಲಿ ಖಾಸಗೀಕರಣವು ಅಧಿಕಾರಕ್ಕೆ ಮತ್ತು ಸಬಲೀಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಹಕ್ಕಿಗೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಇದು ಪ್ರತ್ಯೇಕತೆಯನ್ನು, ಅಸಮಾನತೆಯನ್ನು ಹುಟ್ಟುಹಾಕುತ್ತದೆ. ಇದು ಮೂಲಭೂತ ಆದರ್ಶವಾದ ಸಮಾನ ಶಿಕ್ಷಣವನ್ನು ಭಗ್ನಗೊಳಿಸುತ್ತದೆ. ಇದು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಹೂಡಿಕೆ ಹಿಂದೆಗೆತ(ಜisiಟಿvesಣmeಟಿಣ) ಪ್ರಕ್ರಿಯೆಯನ್ನು ಪುಷ್ಟೀಕರಿಸುತ್ತದೆ ಎಂದು ವಿವರಿಸಿದ್ದರು.
ಆದರೆ ಇಂದು ಎಲ್ಲವೂ ಅರಣ್ಯರೋದನವಾಗಿದೆ.
ಆಡಳಿತಾತ್ಮಕ ಬಿಕ್ಕಟ್ಟುಗಳು
ಕರ್ನಾಟಕ ರಾಜ್ಯದಲ್ಲಿ 42,767 ಸರಕಾರಿ ಪ್ರಾಥಮಿಕ ಶಾಲೆಗಳಿವೆ. 5,240 ಸರಕಾರಿ ಪ್ರೌಢ ಶಾಲೆಗಳಿವೆ. ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 22,60,736 ಬಾಲಕಿಯರು ಮತ್ತು 21,31,328 ಬಾಲಕರು ವ್ಯಾಸಂಗ ಮಾಡುತ್ತಿದ್ದಾರೆ. ಸಚಿವರು ಹೇಳಿದಂತೆ 13,800 ಶಾಲೆಗಳನ್ನು ವಿಲೀನಗೊಳಿಸಿದರೆ ಶೇ.32.5 ಪ್ರಮಾಣದ ಸರಕಾರಿ ಶಾಲೆಗಳನ್ನು ಮುಚ್ಚಿದಂತಾಗುತ್ತದೆ. ಹಾಗಿದ್ದರೆ ನೀವು ಶಾಲೆಗಳನ್ನು ಉತ್ತಮಗೊಳಿಸಿ ಆರೋಗ್ಯಪೂರ್ವಕವಾಗಿ ನಡೆಸಲು ಸಚಿವರಾದವರಲ್ಲ, ಬದಲಿಗೆ ಶಾಲೆಗಳನ್ನು ಮುಚ್ಚಲು ಆಯ್ಕೆಯಾಗಿ ಬಂದಿರುವಿರಿ ಎಂದು ಹೇಳಬೇಕಾಗುತ್ತದೆ. ನೆಲ ಡೊಂಕಾಗಿದೆಯೇ ಮಂತ್ರಿಗಳೇ?
ಶಿಕ್ಷಣ ಸಚಿವರಿಗೆ ಕೆಲ ಮುಖ್ಯ ಪ್ರಶ್ನೆಗಳು.
ಶಾಲೆಗಳನ್ನು ವಿಲೀನಗೊಳಿಸುತ್ತಿರುವ ಹಳ್ಳಿಗಳಲ್ಲಿ ಓದುತ್ತಿರುವ ಮಕ್ಕಳ ಸಂಖ್ಯೆ ಎಷ್ಟು? ಶಾಲೆಗೆ ಬರದೆ ಇರುವ ಮಕ್ಕಳ ಸಂಖ್ಯೆ ಎಷ್ಟು?
ತಾವು ಪ್ರಸ್ತಾಪಿಸಿದ ಶೇ.32.5ರಷ್ಟು ಗ್ರಾಮೀಣ ಭಾಗದ ಸರಕಾರಿ ಶಾಲೆಗಳಿಗೆ ಯಾವ ಕಾರಣಕ್ಕೆ ಮಕ್ಕಳು ಬರುತ್ತಿಲ್ಲ? ಅವರು ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆಯೇ? ಅಥವಾ ಮತ್ಯಾವ ಕಾರಣಗಳಿವೆ?
ವಕ್ಕಳ ಕೊರತೆಗೆ ತಮ್ಮ ಇಲಾಖೆಯ ಶಾಲೆಗಳಲ್ಲಿನ ಮೂಲಭೂತ ಸೌಲಭ್ಯಗಳ ಕಳಪೆ ಗುಣಮಟ್ಟ, ಶಿಕ್ಷಕರ ಕೊರತೆ, ಶಿಕ್ಷಕರ ಬದ್ಧತೆಯ ಕೊರತೆಗಳು ಮುಖ್ಯ ಕಾರಣವೆಂದು ತಮಗೆ ಪ್ರಾಮಾಣಿಕವಾಗಿ ಅನಿಸಿದೆಯೇ?
ಮುಚ್ಚುತ್ತೇವೆಂದು ಹೇಳಿದ ಸರಕಾರಿ ಶಾಲೆಗಳ ಆಸುಪಾಸು ಎಷ್ಟು ಸಂಖ್ಯೆಯಲ್ಲಿ ಖಾಸಗಿ ಶಾಲೆಗಳಿವೆ?
ಈ ಖಾಸಗಿ ಶಾಲೆಗಳಲ್ಲಿನ ಮಕ್ಕಳ ಸಂಖ್ಯೆ ಎಷ್ಟು?
ಇನ್ನು ವಿಲೀನ ಮಾಡಿಕೊಳ್ಳಲಿರುವ ಶಾಲೆಗಳ ಗುಣಮಟ್ಟ ಹೇಗಿದೆ?
ಅಲ್ಲಿ ಶಿಕ್ಷಕರಿದ್ದಾರೆಯೇ? ಮೂಲಭೂತ ಸೌಕರ್ಯಗಳಿವೆಯೇ?
ಒಂದು ವೇಳೆ ಸರಕಾರಿ ಶಾಲೆಗಳನ್ನು ಮುಚ್ಚಿದ ನಂತರ ಆ ಜಾಗದಲ್ಲಿ ಖಾಸಗಿ ಶಾಲೆಗಳು ತಲೆ ಎತ್ತಲಾರವು ಎನ್ನುವ ಭರವಸೆ ಕೊಡುತ್ತೀರ?
ವಿಲೀನಗೊಳಿಸಿದ ಗ್ರಾಮ, ಹೋಬಳಿಯ ಮಕ್ಕಳನ್ನು ಪಕ್ಕದ ಊರುಗಳಲ್ಲಿನ ಶಾಲೆಗೆ ಕಳುಹಿಸಲು ವಾಹನ ವ್ಯವಸ್ಥೆ ಮಾಡುತ್ತೇವೆ ಎನ್ನುವ ಸಚಿವರು ಅದಕ್ಕೆ ತಗಲುವ ವೆಚ್ಚವನ್ನು ಅಂದಾಜು ಮಾಡಿದ್ದಾರೆಯೇ?
ಏಕೆಂದರೆ,
ರಾಜ್ಯ ಸರಕಾರಗಳ ಬಜೆಟ್‌ನ ಶೇ.72 ಪ್ರಮಾಣದ ಮೊತ್ತವು ಶಿಕ್ಷಕರ ವೇತನಕ್ಕೆ ಖರ್ಚಾಗುತ್ತದೆ. ಶೇ.3ರಷ್ಟು ಮೊತ್ತ ಆಡಳಿತದ ವೆಚ್ಚ, ಶೇ.10ರಷ್ಟು ಶಾಲೆಯ ಮೂಲಭೂತ ಸೌಕರ್ಯ, ಗುಣಮಟ್ಟಕ್ಕೆ ಮತ್ತು ಶಿಕ್ಷಕರ ತರಬೇತಿಗೆ ಶೇ.1ರಷ್ಟು ವೆಚ್ಚವಾಗುತ್ತಿದೆ. ಅಂದರೆ ಗುಣಮಟ್ಟದ ಶಿಕ್ಷಣ, ಶಿಕ್ಷಕರ ತರಬೇತಿ, ಮೂಲಭೂತ ಸೌಕರ್ಯಗಳಿಗೆ ಶೇ.30ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಹಣಕಾಸು ನೆರವು ದೊರಕಬೇಕಿತ್ತು. ಆದರೆ ಕೇವಲ ಶೇ.11ರಷ್ಟು ಮಾತ್ರ ಕೊಡುತ್ತಿದ್ದಾರೆ.
ಮತ್ತೊಂದೆಡೆ 2016ರಲ್ಲಿ ಕರ್ನಾಟಕದ ಬಜೆಟ್‌ನ ಶೇ. 13.4ರಷ್ಟು ಮತ್ತು ಜಿಡಿಪಿಯ 2.2ರಷ್ಟು ಶಿಕ್ಷಣಕ್ಕೆ ಹಂಚಿಕೆ ಮಾಡಲಾಗಿದೆ. ಏಳು ವರ್ಷಗಳ ನಂತರ 2022ರಲ್ಲಿ ಕರ್ನಾಟಕದ ಬಜೆಟ್‌ನ ಶೇ.11.65ರಷ್ಟು ಮತ್ತು ಜಿಡಿಪಿಯ 1.72ರಷ್ಟು ಶಿಕ್ಷಣಕ್ಕೆ ಹಂಚಿಕೆ ಮಾಡಲಾಗಿದೆ. ಅಂದರೆ ಕ್ರಮವಾಗಿ ಶೇ.1.75 ಮತ್ತು ಶೇ.0.48ರಷ್ಟು ಕಡಿತಗೊಳಿಸಲಾಗಿದೆ. ಇದು ಪ್ರಭುತ್ವವು ಸಾರ್ವಜನಿಕ ಶಿಕ್ಷಣದಿಂದ ತನ್ನ ಜವಾಬ್ದಾರಿಯನ್ನು ಕಳಚಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಸೂಚಿಸುತ್ತದೆ.
ಇದು ಪ್ರಸ್ತುತ ಸಂದರ್ಭದ ಪ್ರಾಥಮಿಕ, ಪ್ರೌಢ ಶಿಕ್ಷಣದ ಹಣಕಾಸು ಪರಿಸ್ಥಿತಿ. ಹಾಗಿದ್ದ ಪಕ್ಷದಲ್ಲಿ ಗ್ರಾಮೀಣ ಭಾಗದಲ್ಲಿರುವ ಮಕ್ಕಳನ್ನು ಹೋಬಳಿಯ ಮಾದರಿ ಶಾಲೆಗೆ ಕರೆದೊಯ್ಯಲು ಅಗತ್ಯವಾದ ಆರ್ಥಿಕ ಸಂಪನ್ಮೂಲವನ್ನು ಸಚಿವರು ಹೇಗೆ ಕ್ರೋಡೀಕರಿಸುತ್ತಾರೆ?
ಮೇಲಿನ ಪ್ರಶ್ನೆಗಳಿಗೆ ಉತ್ತರಿಸಲು ಸರಕಾರದ ಬಳಿ, ಇಲಾಖೆ ಮತ್ತು ಶಿಕ್ಷಣ ಸಚಿವರ ಬಳಿ ಯಾವುದೇ ನೈತಿಕತೆ ಉಳಿದಂತಿಲ್ಲ ಮತ್ತು ಅವರಿಗೆ ಆಸಕ್ತಿಯೂ ಇಲ್ಲ.
ಇನ್ನು ಸಚಿವ ನಾಗೇಶ್ ಪದೇ ಪದೇ ಉದ್ಧರಿಸುವ ಹೋಬಳಿ ಮಟ್ಟದ ಮಾದರಿ ಶಾಲೆಗಳು ಎಂಬುದು ಒಂದು ಮರೀಚಿಕೆ. ಅದೊಂದು ಮೃಗಜಲ. 2018-19ರ ಬಜೆಟ್ ಮಂಡನೆ ಸಂದರ್ಭದಲ್ಲಿ ಕುಮಾರಸ್ವಾಮಿಯವರು 176 ಪಬ್ಲಿಕ್ ಶಾಲೆಗಳಿವೆ. ಮುಂದಿನ ವರ್ಷದೊಳಗೆ 1,000 ಪಬ್ಲಿಕ್ ಶಾಲೆಗಳನ್ನು ಆರಂಭಿಸುತ್ತೇವೆ ಎಂದು ಹೇಳಿದ್ದರು. ಅದು ಸಹ ಹುಸಿ ಭರವಸೆಯಾಗಿ ಉಳಿದುಕೊಂಡಿದೆ. ಶಿಕ್ಷಣ ಇಲಾಖೆಯ ಅಂತರ್ಜಾಲದಲ್ಲಿನ ಮಾಹಿತಿ ಅನುಸಾರ (ತಮಾಷೆಯೆಂದರೆ ಇದು 2020ರಿಂದ ಅಪ್‌ಡೇಟ್ ಆಗಿಲ್ಲ) 2019-20ರಿಂದ 276 ಪಬ್ಲಿಕ್ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಮತ್ತು ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸಲಾಗಿದೆ ಎಂದು ಹೇಳಲಾಗಿದೆ.
ಮತ್ತೆ ಶಿಕ್ಷಣ ಸಚಿವರಿಗೆ ಪ್ರಶ್ನೆಗಳು
ಈ ಪಬ್ಲಿಕ್ ಶಾಲೆಗಳನ್ನು ಆರಂಭಿಸಲು ಅಗತ್ಯವಾದ ನೀತಿ ನಿಯಮಾವಳಿಗಳನ್ನು ರೂಪಿಸಲಾಗಿದೆಯೇ?
ಪ್ರತೀ ಹೋಬಳಿಗೊಂದು ಪಬ್ಲಿಕ್ ಶಾಲೆ ಎಂದು ನಿರ್ಧರಿಸಲಾಗಿದೆಯೇ? ಹೌದಾದರೆ ಯಾವ ಆಧಾರದಲ್ಲಿ? ಇಲ್ಲವೆಂದಾದರೆ ಮತ್ತಿನ್ನಾವ ಆಧಾರದಲ್ಲಿ?
ಪಬ್ಲಿಕ್ ಶಾಲೆಗಳು ಎಂದು ಕರೆಯಲು ಅಗತ್ಯವಾದ ಮಾನದಂಡಗಳೇನು? ಇಲ್ಲಿ ಪಬ್ಲಿಕ್ ಶಾಲೆ ಆರಂಭಿಸಲು ಇತರ ರಾಜ್ಯ, ದೇಶಗಳಲ್ಲಿನ ಯಾವುದೇ ಬಗೆಯ ಮಾದರಿ ಶಾಲೆಗಳನ್ನು ಅಧ್ಯಯನ ಮಾಡಿದ್ದೀರಾ? ನಿಮ್ಮ ಇಲಾಖೆಯಲ್ಲಿ ಯಾರಿಗಾದರೂ ಅನುಭವವಿದೆಯೇ?
ಹೋಬಳಿಗೊಂದು ಪಬ್ಲಿಕ್ ಶಾಲೆ ಆರಂಭಿಸಿದ ನಂತರ ಅದರ ಸುತ್ತಮುತ್ತ ಲಿನ ಗ್ರಾಮಗಳಲ್ಲಿನ ಶಾಲೆಗಳನ್ನು ಮುಚ್ಚಬೇಕೆಂದು ನಿಯಮವಿದೆಯೇ?
ಈ ಪಬ್ಲಿಕ್ ಶಾಲೆಗಳಿಗೆ ಅಗತ್ಯವಾದ ಸುಸಜ್ಜಿತ ಕಟ್ಟಡ, ಕಲಿಕಾ ಉಪಕರಣಗಳು ಮತ್ತಿತರ ಅವಶ್ಯಕ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆಯೇ?
ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಶಿಕ್ಷಕರ ನೇಮಕಾತಿ ಆಗಿದೆಯೇ? 1-5ರವರೆಗೆ ತರಗತಿಗೊಬ್ಬ ಶಿಕ್ಷಕರು, 6-12ರ ವರಗೆ ವಿಷಯಕ್ಕೊಬ್ಬ ಶಿಕ್ಷಕರ ನೇಮಕಾತಿ ಆಗಿದೆಯೇ?
ಸಚಿವರೇ, ಮೇಲಿನ ಪ್ರಶ್ನೆಗಳಿಗೆ ನಿಮ್ಮ ಬಳಿ ಯಾವುದೇ ಉತ್ತರವಿಲ್ಲ ಎಂದು ನಮಗೆ ತಿಳಿದಿದೆ. ಯಾಕೆಂದರೆ ಮೇಲಿನ ಯಾವುದರ ಕುರಿತು ನೀವು ಮತ್ತು ಇಲಾಖೆ ತಲೆ ಕೆಡಿಸಿಕೊಂಡಿಲ್ಲ. ನಿಮಗೆಲ್ಲ ಪಬ್ಲಿಕ್ ಶಾಲೆಗಳೆನ್ನುವುದು ಒಂದು ಗಿಮಿಕ್. ನಿಮ್ಮ ವೈಫಲ್ಯಗಳನ್ನು ಮರೆಮಾಚಲು, ಗ್ರಾಮೀಣ ಭಾಗದ ಶಾಲೆಗಳನ್ನು ಮುಚ್ಚಲು ಬೇಕಾದ ಒಂದು ಊರುಗೋಲು ಮಾತ್ರ. ಯಾವುದೇ ಬದ್ಧತೆಯಿಲ್ಲದ ನಿಮ್ಮಿಂದ ಇದರಾಚೆ ಮತ್ತೇನು ನಿರೀಕ್ಷೆ ಮಾಡಲು ಸಾಧ್ಯ?