ಬಿಜೆಪಿಯೊಳಗೆ ಇನ್ನೂ ಉಸಿರು ಉಳಿಸಿಕೊಂಡಿರುವ ಕೆಜೆಪಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕೆಲವು ದಿನಗಳ ಹಿಂದೆ ‘ನಾನು ರಾಜಕೀಯವಾಗಿ ನಿವೃತ್ತನಾಗುತ್ತಿದ್ದೇನೆ. ಶಿಕಾರಿಪುರದಲ್ಲಿ ನನ್ನ ಪುತ್ರ ವಿಜಯೇಂದ್ರ ಸ್ಪರ್ಧಿಸಲಿದ್ದಾನೆ’ ಎನ್ನುವ ಮೂಲಕ ಯಡಿಯೂರಪ್ಪ ಮಾಧ್ಯಮಗಳಲ್ಲಿ ಮುಖಪುಟ ಸುದ್ದಿಯಾದರು. ‘ಯಡಿಯೂರಪ್ಪ ರಾಜಕೀಯ ನಿವೃತ್ತಿ ಘೋಷಣೆ’ಗಿಂತ ‘ಶಿಕಾರಿಪುರದ ಮುಂದಿನ ಅಭ್ಯರ್ಥಿಯ ಘೋಷಣೆ’ ಬಿಜೆಪಿಗೆ ಮುಜುಗರ ಸೃಷ್ಟಿಸಿತು. ಯಡಿಯೂರಪ್ಪ ಅವರ ರಾಜಕೀಯ ನಿವೃತ್ತಿಯನ್ನು ಒಳಗೊಳಗೆ ಹಾರ್ದಿಕವಾಗಿ ಸ್ವಾಗತಿಸಿದ ಬಿಜೆಪಿ, ‘ಶಿಕಾರಿಪುರದ ಅಭ್ಯರ್ಥಿ ಘೋಷಣೆ’ಯನ್ನು ಮಾತ್ರ ಸ್ಪಷ್ಟ ಮಾತಿನಲ್ಲಿ ನಿರಾಕರಿಸಿತು. ‘ಶಿಕಾರಿಪುರದ ಅಭ್ಯರ್ಥಿ ಯಾರಾಗುತ್ತಾರೆ?’ ಎನ್ನುವುದನ್ನು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ ಎಂದು ರಾಜ್ಯದ ಹಲವು ಮುಖಂಡರು ತಕ್ಷಣ ಪ್ರತಿಕ್ರಿಯೆ ರೂಪದಲ್ಲಿ ಹೇಳಿಕೆ ನೀಡಿದರು. ಮರುದಿನ ಯಡಿಯೂರಪ್ಪ ಕೂಡ ತಮ್ಮ ಹೇಳಿಕೆಯನ್ನು ಬೇಕೋ ಬೇಡವೋ ಎಂಬಂತೆ ಹಿಂದೆಗೆದುಕೊಂಡರು.
ಇದೇ ಸಂದರ್ಭದಲ್ಲಿ ‘ಯಡಿಯೂರಪ್ಪ ಅವರ ನೇತೃತ್ವದಲ್ಲೇ ಪಕ್ಷ ಮುನ್ನಡೆಯುತ್ತದೆ’ ಎನ್ನುವ ಹೇಳಿಕೆಯನ್ನು ಒಬ್ಬನೇ ಒಬ್ಬ ಬಿಜೆಪಿ ನಾಯಕನೂ ನೀಡಲಿಲ್ಲ. ಕಾಂಗ್ರೆಸ್‌ನ ಮಾಜಿ ನಾಯಕ, ಸದ್ಯಕ್ಕೆ ಬಿಜೆಪಿಯ ವೃದ್ಧಾಶ್ರಮದಲ್ಲಿ ದಿನಗಳೆಯುತ್ತಿರುವ ಎಸ್. ಎಂ. ಕೃಷ್ಣ ಮಾತ್ರ ‘ಯಡಿಯೂರಪ್ಪ ಮುಂದೆಯೂ ಪಕ್ಷ ರಾಜಕೀಯದಲ್ಲಿ ಮುಂದುವರಿಯುತ್ತಾರೆ’ ಎಂದು ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡಿದರು. ಯಾವಾಗ ಭ್ರಷ್ಟಾಚಾರದ ಹೆಸರಿನಲ್ಲಿ ಯಡಿಯೂರಪ್ಪ ಅವರನ್ನು ಕೆಳಗಿಳಿಸಲಾಯಿತೋ, ಅಲ್ಲಿಗೇ ಬಿಜೆಪಿಯೊಳಗೆ ಯಡಿಯೂರಪ್ಪ ಅವರ ರಾಜಕೀಯ ಬದುಕು ಅಂತ್ಯವಾಗಿತ್ತು. ಆತುರಾತುರವಾಗಿ ಬಿಜೆಪಿಯ ವರಿಷ್ಠರು ಯಡಿಯೂರಪ್ಪ ಅವರನ್ನು ಕೆಳಗಿಳಿಸುವುದಕ್ಕೆ ಕಾರಣ ಇಲ್ಲದಿಲ್ಲ. ಬಿಜೆಪಿಯು ಭ್ರಷ್ಟಾಚಾರವನ್ನು ತನ್ನ ರಾಜಕೀಯದ ಒಂದು ಭಾಗವಾಗಿ ಎಂದೋ ಒಪ್ಪಿಕೊಂಡಿದೆ. ಆದುದರಿಂದ, ಯಡಿಯೂರಪ್ಪ ಅವರ ಭ್ರಷ್ಟಾಚಾರ ಅದಕ್ಕೆ ಒಂದು ಸಮಸ್ಯೆಯೇ ಆಗಿರಲಿಲ್ಲ.
ಯಡಿಯೂರಪ್ಪ ರಾಜಕೀಯವಾಗಿ ನಿವೃತ್ತಿಯಾಗುವುದನ್ನು ಆರೆಸ್ಸೆಸ್‌ನ ಒಂದು ಗುಂಪು ಬಕ ಪಕ್ಷಿಯಂತೆ ಕಾದು ಕುಳಿತಿತ್ತು. ಲಿಂಗಾಯತ ಲಾಬಿ ಬೆನ್ನಿಗಿರುವುದರಿಂದ, ವೈದಿಕ ರಾಜಕೀಯ ಶಕ್ತಿಗಳಿಗೆ ಯಡಿಯೂರಪ್ಪರನ್ನು ನೇರವಾಗಿ ಮೂಲೆಗುಂಪು ಮಾಡುವ ಧೈರ್ಯವಿರಲಿಲ್ಲ. ಹೇಗೂ ವಯಸ್ಸಾಗಿದೆ, ನಿವೃತ್ತರಾಗುವ ಸಮಯ ಹತ್ತಿರದಲ್ಲಿದೆ ಎನ್ನುವ ಧೈರ್ಯದಲ್ಲಿ ಆರೆಸ್ಸೆಸ್ ನಾಯಕರಿದ್ದರು. ಆದರೆ, ಯಡಿಯೂರಪ್ಪ ಅವರ ನೆರಳಿನಲ್ಲೇ ಅವರ ಪುತ್ರ ವಿಜಯೇಂದ್ರ ಪಕ್ಷದಲ್ಲಿ ವರ್ಚಸ್ಸು ಬೆಳೆಸುತ್ತಿರುವುದರ ಬಗ್ಗೆ ಆರೆಸ್ಸೆಸ್‌ಗೆ ಆತಂಕವಿತ್ತು. ಯಡಿಯೂರಪ್ಪ ಅವರು ತಮ್ಮ ಆನಂತರದ ಸ್ಥಾನಕ್ಕೆ ವಿಜಯೇಂದ್ರ ಅವರನ್ನು ಸಿದ್ಧಗೊಳಿಸುತ್ತಿದ್ದಾರೆ ಎನ್ನುವ ಭಯದಲ್ಲೇ ಯಡಿಯೂರಪ್ಪರನ್ನು ಅಧಿಕಾರದಿಂದ ಆತುರಾತುರವಾಗಿ ಕೆಳಗಿಳಿಸಲಾಯಿತು. ಯಡಿಯೂರಪ್ಪ ಅವರ ಸ್ಥಾನವನ್ನು ಬಳಸಿಕೊಂಡು ವಿಜಯೇಂದ್ರ ಅವರು ಆರ್ಥಿಕವಾಗಿ ಸಬಲರಾಗುತ್ತಿರುವುದು ಮುಂದೆ ಪಕ್ಷದ ಚುಕ್ಕಾಣಿ ಕೈವಶ ಮಾಡಿಕೊಳ್ಳಲು ಸಮಸ್ಯೆಯಾಗಬಹುದು ಎನ್ನುವ ಕಾರಣಕ್ಕಾಗಿ ಯಡಿಯೂರಪ್ಪ ಅವರಿಗೆ ನಿವೃತ್ತಿಯನ್ನು ನೀಡಲಾಗಿತ್ತು. ಬೊಮ್ಮಾಯಿಯವರು ಯಡಿಯೂರಪ್ಪ ಸೂಚಿಸಿದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಆರಂಭದಲ್ಲಿ ನಂಬಿಸಲಾಯಿತು. ಯಡಿಯೂರಪ್ಪ ಅವರಿಗೆ ನಿಷ್ಠರಂತೆ ಬೊಮ್ಮಾಯಿ ವರ್ತಿಸಿದರು ಕೂಡ. ಆದರೆ, ಬೊಮ್ಮಾಯಿಗೆ ಮುಖ್ಯಮಂತ್ರಿ ಹುದ್ದೆ ದಕ್ಕಿದ್ದೇ ಆಕಸ್ಮಿಕವಾಗಿ.
ಸಿಕ್ಕಿದ್ದನ್ನು ಇರುವಷ್ಟು ಕಾಲ ಅನುಭವಿಸುವುದು ಮತ್ತು ಅದಕ್ಕಾಗಿ ಯಾರಿಗೆಲ್ಲ ನಿಷ್ಠರಾಗಿರಬೇಕೋ ಅವರಿಗೆಲ್ಲ ನಿಷ್ಠರಾಗಿರುತ್ತಾ ಅಧಿಕಾರದಲ್ಲಿ ಮುಂದುವರಿಯುವುದು ಅವರ ಲೆಕ್ಕಾಚಾರ. ಪಕ್ಷದಲ್ಲಿ ಯಡಿಯೂರಪ್ಪ ಮೂಲೆಗೆ ಸರಿದಂತೆ, ಬೊಮ್ಮಾಯಿ ಆರೆಸ್ಸೆಸ್‌ಗೆ ಹೆಚ್ಚು ನಿಷ್ಠರಾಗುತ್ತಾ ಹೋದರು. ಆರೆಸ್ಸೆಸ್ ಕಾಲ ಬೆರಳಲ್ಲಿ ತೋರಿಸಿದ್ದನ್ನು, ತಲೆ ಮೇಲೆ ಹೊತ್ತು ಮಾಡುತ್ತಿದ್ದಾರೆ. ಯಾವ ಸ್ವಂತಿಕೆಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಕಾಶ ಅಥವಾ ಸಾಮರ್ಥ್ಯವಿಲ್ಲದ ಮುಖ್ಯಮಂತ್ರಿಯ ಕೈಯಲ್ಲಿ ರಾಜ್ಯವಿದೆ. ಅದರ ಪರಿಣಾಮವನ್ನು ರಾಜ್ಯ ಇಂದು ಅನುಭವಿಸುತ್ತಿದೆ. ನಿವೃತ್ತಿಯನ್ನು ಮೊನ್ನೆಯವರೆಗೂ ಯಡಿಯೂರಪ್ಪ ಸ್ವಯಂ ಒಪ್ಪಿಕೊಂಡಿರಲಿಲ್ಲ. ‘ರಾಜ್ಯಾದ್ಯಂತ ಪ್ರವಾಸಗೈಯುತ್ತೇನೆ’ ಎಂದು ಯಡಿಯೂರಪ್ಪ ಆಗಾಗ ಮಾಧ್ಯಮಗಳಲ್ಲಿ ಘೋಷಣೆ ಮಾಡುತ್ತಾ, ಪಕ್ಷದ ನೇತೃತ್ವದಿಂದ ತಾನಿನ್ನೂ ಹಿಂದೆ ಸರಿದಿಲ್ಲ ಎಂದು ವರಿಷ್ಠರಿಗೆ ನೆನಪಿಸುತ್ತಾ ಬರುತ್ತಿದ್ದರು. ‘ಮುಂದಿನ ಚುನಾವಣೆ ನನ್ನ ನೇತೃತ್ವದಲ್ಲೇ ನಡೆಯುತ್ತದೆ’ ಎನ್ನುವ ಸಂದೇಶವನ್ನೂ ಅವರು ಈ ಮೂಲಕ ಆರೆಸ್ಸೆಸ್ ಸಹಿತ ಉಳಿದ ನಾಯಕರಿಗೆ ನೀಡುತ್ತಾ ಬರುತ್ತಿದ್ದರು. ಇದು ರಾಜ್ಯ ಬಿಜೆಪಿಗೆ ನುಂಗಲಾರದ ತುತ್ತಾಗಿತ್ತು. ರಾಜಕೀಯದಲ್ಲಿ ಮುಂದುವರಿಯಲು ಮನಸ್ಸಿದ್ದರೂ, ವಯಸ್ಸು ಯಡಿಯೂರಪ್ಪ ಅವರಿಗೆ ಸಹಕರಿಸುತ್ತಿಲ್ಲ. ಇದು ನಿಧಾನಕ್ಕೆ ಯಡಿಯೂರಪ್ಪ ಅವರ ಅರಿವಿಗೂ ಬಂದಂತಿದೆ. ಆದುದರಿಂದಲೇ, ಅವರು ಬಿಜೆಪಿ ವರಿಷ್ಠರ ಬಳಿ ರಾಜಕೀಯ ಚೌಕಾಶಿಯನ್ನು ಮಾಡಲು ಮುಂದಾಗಿದ್ದಾರೆ.
ಪರೋಕ್ಷವಾಗಿ ‘‘ನಾನು ರಾಜಕೀಯವಾಗಿ ನಿವೃತ್ತಿಯಾಗಬೇಕಾದರೆ, ತನ್ನ ಪುತ್ರನಿಗೆ ಶಿಕಾರಿಪುರದಲ್ಲಿ ಟಿಕೆಟ್ ನೀಡಬೇಕು’’ ಎನ್ನುವ ಬೇಡಿಕೆಯನ್ನು ಅವರು ಮುಂದಿಟ್ಟಿದ್ದಾರೆ. ಅಂದರೆ ಮರೆಯಲ್ಲಿ ನಿಂತು ಪುತ್ರನ ಮೂಲಕವೇ ಬಿಜೆಪಿಯ ನಿಯಂತ್ರಣವನ್ನು ಕೈಗೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಇದಕ್ಕೆ ರಾಜ್ಯ ಬಿಜೆಪಿ ಅದರಲ್ಲೂ ಆರೆಸ್ಸೆಸ್ ಎಷ್ಟರಮಟ್ಟಿಗೆ ಅವಕಾಶ ಮಾಡಿಕೊಡುತ್ತದೆ ಎನ್ನುವುದನ್ನು ಕಾದು ನೋಡಬೇಕು. ಒಟ್ಟಿನಲ್ಲಿ ಈ ರಾಜಕೀಯ ಬೆಳವಣಿಗೆ ‘ಬಿಜೆಪಿಯೊಳಗೆ ಕೆಜೆಪಿ ಇನ್ನೂ ತನ್ನ ಜೀವವನ್ನು ಉಳಿಸಿಕೊಂಡಿದೆ’ ಎನ್ನುವುದನ್ನು ಹೇಳುತ್ತಿದೆ. ಶಿಕಾರಿಪುರದಲ್ಲಿ ತನ್ನ ಪುತ್ರನಿಗೆ ಟಿಕೆಟ್ ಸಿಗದೇ ಇದ್ದರೆ, ಯಡಿಯೂರಪ್ಪ ಸುಮ್ಮಗಿರುವುದು ಕಷ್ಟ.
ಟಿಕೆಟ್ ಸಿಕ್ಕಿದ್ದೇ ಆದರೆ, ಯಡಿಯೂರಪ್ಪ ಅವರ ವರ್ಚಸ್ಸು ಮತ್ತು ಹಣದ ಬಲದಿಂದ ಪುತ್ರ ಮತ್ತೆ ಬಿಜೆಪಿಯೊಳಗೆ ಪ್ರಾಬಲ್ಯ ಸಾಧಿಸಲು ಯತ್ನಿಸಬಹುದು. ಲಿಂಗಾಯತ ಶಕ್ತಿಯನ್ನು ಬಳಸಿ ವಿಜಯೇಂದ್ರ ಕೆಜೆಪಿಯನ್ನು ಬಿಜೆಪಿಯೊಳಗೆ ಪುನರ್ ಸಂಘಟಿಸುವ ಕೆಲಸವನ್ನು ಮಾಡಿದ್ದೇ ಆದಲ್ಲಿ ಅದು ಆರೆಸ್ಸೆಸ್‌ಗೆ ಮತ್ತೆ ಹಿನ್ನಡೆಯನ್ನು ತರಬಹುದು. ಈ ಕಾರಣದಿಂದ, ವಿಜಯೇಂದ್ರ ಅವರನ್ನು ಬೆಳೆಸುವುದಕ್ಕೆ ಆರೆಸ್ಸೆಸ್‌ಅವಕಾಶ ಮಾಡಿಕೊಡುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ. ವಿಜಯೇಂದ್ರ ಭವಿಷ್ಯಕ್ಕೆ ಆರೆಸ್ಸೆಸ್ ಅಡ್ಡಿ ಪಡಿಸಿದ್ದೇ ಆದಲ್ಲಿ, ಬಿಜೆಪಿ ಮತ್ತೆ ಒಡೆಯುವ ಸಾಧ್ಯತೆಗಳಿವೆ. ಇತ್ತ ಕಾಂಗ್ರೆಸ್‌ನಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ‘ಈ ಬಾರಿ ಮುಖ್ಯಮಂತ್ರಿಯಾಗದೇ ಇದ್ದರೆ ಇನ್ನೆಂದೂ ಇಲ್ಲ’ ಎನ್ನುವಂತಹ ಮನಸ್ಥಿತಿಗೆ ಡಿಕೆಶಿ ಬಂದು ತಲುಪಿದ್ದಾರೆ. ಕಾಂಗ್ರೆಸ್‌ಗೆ ಸಣ್ಣ ಮಟ್ಟದ ಬಹುಮತ ಬಂದು, ಡಿಕೆಶಿಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಗದೇ ಇದ್ದರೆ ಅವರು ಪಕ್ಷವನ್ನು ಒಡೆದು ಯಡಿಯೂರಪ್ಪ ಬಣದೊಂದಿಗೆ ಕೈ ಜೋಡಿಸುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ. ಸಿದ್ಧಾಂತಕ್ಕಿಂತ ಹಣ ಮತ್ತು ಜನಬಲದ ಮೇಲೆ ಹೆಚ್ಚು ನಂಬಿಕೆಯನ್ನು ಹೊಂದಿರುವ ಡಿಕೆಶಿ, ಮುಳುಗುವ ಸಂದರ್ಭದಲ್ಲಿ ಸಿಕ್ಕಿದ ಹುಲ್ಲುಕಡ್ಡಿಯನ್ನು ಕೈ ಚೆಲ್ಲಲಾರರು. ಕಾಂಗ್ರೆಸ್ ಮತ್ತು ಬಿಜೆಪಿಯೊಳಗಿರುವ ತಿಕ್ಕಾಟ ಅಂತಿಮವಾಗಿ ಯಡಿಯೂರಪ್ಪ ಬಣ ಮತ್ತು ಡಿಕೆಶಿ ಬಣವನ್ನು ಒಂದು ಮಾಡಿದರೆ, ಭವಿಷ್ಯದಲ್ಲಿ ರಾಜ್ಯ ರಾಜಕಾರಣ ಮಹತ್ವದ ತಿರುವೊಂದನ್ನು ಪಡೆದುಕೊಳ್ಳಲಿದೆ.