ಮರವಾಗಿ ಬಗ್ಗದು
ಮನೆಯ ಕಾಂಪೌಂಡಿಗೆ ತೀರಾ ಸನಿಹವಾಗಿ ಬೆಳೆಯುತ್ತಿರುವ ಒಂದು ಅರಳೀಮರವನ್ನು ನೋಡಿದರು ಮನೆಯ ಯಜಮಾನ. ಅದನ್ನು ಅವರೇನೂ ಹಾಕಿದ್ದಲ್ಲ. ಹಕ್ಕಿಯ ಹಿಕ್ಕೆಯಲ್ಲಿ ಬಿದ್ದು ಹುಟ್ಟನ್ನು ಪಡೆದುಕೊಂಡಿರುವಂತಹ ಸಸಿ. ಮಗನೆಂದ, ‘‘ಅದು ತುಂಬಾ ಪುಟ್ಟದು. ಕಾಂಪೌಂಡಿಗೆ ಒಂದು ಸೌಂದರ್ಯ ಕೂಡಾ ಸಿಗುತ್ತದೆ.
‘‘ಅದು ಈಗ ಸಣ್ಣದು. ಅದು ಬೆಳೆಯುತ್ತದೆ. ಆ ಬೆಳವಣಿಗೆಯಲ್ಲಿ ನಮಗೆ ಹರಡಿಕೊಳ್ಳುತ್ತಿರುವ ಬೇರುಗಳು ಕಾಣುವುದೇ ಇಲ್ಲ. ಒಳಗೊಳಗೇ ಬಲಶಾಲಿಯಾಗುವುದು ಮಾತ್ರವಲ್ಲದೇ ಗಟ್ಟಿಯಾಗಿ, ಅಗಲವಾಗಿ ಕಾಂಡ, ರೆಂಬೆ, ಕೊಂಬೆಗಳು ಹರಡಿಕೊಳ್ಳುತ್ತಾ ನಿನ್ನ ಮನೆಯ ಕಾಂಪೌಂಡನ್ನೇ ಬೀಳಿಸುತ್ತದೆ. ಅದರ ಕೆಳಗೆ ಬೇರೆ ಗಿಡ ಮರಗಳು ಬೆಳೆಯಲು ಸಾಧ್ಯವಾಗದು. ಈಗ ಹೇಗೋ ಬೀಜ ಬಿದ್ದು ಬೆಳೆದಿರುವಂತೆ ಅದು ಮನೆಯ ಮೇಲೂ, ಮನೆಯ ಗೋಡೆಗಳ ಬದಿಗೂ ಬಿದ್ದು, ಅಲ್ಲೂ ಹೊಸ ಹೊಸ ಸಸಿಗಳು ಮೊಳೆತು ಬೆಳೆಯುತ್ತವೆ. ಹಾಗಾಗಿ, ಸಸಿಯಾಗಿರುವಾಗಲೇ ಕಿತ್ತು ಬಿಸಾಡಬೇಕು. ಅಥವಾ ಬೇರೆ ಕಡೆ ಸ್ಥಳಾಂತರ ಮಾಡಬೇಕು. ಮರವಾದ ಮೇಲೆ ಬಗ್ಗದು.’’
ತಂದೆ ಸರಿಯಾಗಿಯೇ ಹೇಳಿದ್ದಾರೆ. ಸಸಿಯಿರುವಾಗಲೇ ಬಗ್ಗದ್ದು, ಮರವಾದ ಮೇಲೆ ಬಗ್ಗದು. ಇದೇ ವಿಷಯವನ್ನು ವ್ಯಕ್ತಿಯ ಮನಸ್ಸಿನ ಬಗ್ಗೆ ಅನ್ವಯಿಸಿ ನೋಡಲೇಬೇಕಿದೆ. ವ್ಯಕ್ತಿಯು ಸಣ್ಣವನಿರುವಾಗ ಅವನ ಆಲೋಚನೆಗಳು, ವರ್ತನೆಗಳು, ಧೋರಣೆಗಳು ಮತ್ತು ನಡವಳಿಕೆಗಳು ಅಷ್ಟೇನೂ ಪ್ರಮಾದಕರವಾಗಿ ಕಾಣುವುದಿಲ್ಲ. ‘‘ಈಗ ಗೊತ್ತಾಗೋದಿಲ್ಲ. ಮಗೂ ಅಲ್ವಾ. ಮುಗ್ದತೆ ಇರತ್ತೆ. ದೊಡ್ಡವನಾಗುತ್ತಾ ತಿಳುವಳಿಕೆ ಬರುತ್ತೆ. ಸರಿ ಹೋಗುತ್ತಾನೆ’’ ಹೀಗೆ ಸಾಮಾನ್ಯವಾಗಿ ಪೋಷಕರು ಉದಾಸೀನ ಮಾಡುವುದು. ಕಹಿ ಕಾಯಿ ಬಿಡುತ್ತಿರುವ ಪುಟ್ಟ ಗಿಡ ಬೆಳೆಬೆಳೆದಂತೆ ಸಿಹಿಯಾದ ಹಣ್ಣುಗಳನ್ನು ಬಿಡುವುದು ಎಂದು ಭ್ರಮಿಸಿದಂತೆ. ಅದು ಎಂದಿಗೂ ಆಗದು. ಈಗ ಹತ್ತು ಕಾಯಿಗಳನ್ನು ಬಿಡುವ ಸಸಿ, ಮರವಾದ ಮೇಲೆ ನೂರು, ಸಾವಿರ ಕಾಯಿಗಳನ್ನು ಬಿಡುವುದು. ಯಾವುದ್ಯಾವುದೋ ಅವಘಡಗಳು, ಅಪರಾಧಗಳು, ವಿದ್ರೋಹದ ಸಂಗತಿಗಳು, ಭಯಾನಕ ಪ್ರಸಂಗಗಳು ನಡೆದಾಗ, ಈ ಜಿಲ್ಲೆಗೆ ಏನಾಗಿದೆ? ಈ ಜನಕ್ಕೆ ಏನಾಗಿದೆ? ಈ ಜನ ಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ? ಇಲ್ಲಿನ ಕಾನೂನು ಮತ್ತು ಪೋಲಿಸ್ ವ್ಯವಸ್ಥೆ ಏನು ಮಾಡ್ತಿದೆ? ಎಂದೆಲ್ಲಾ ಪ್ರಶ್ನಿಸುವ ಮಂದಿ ಆಲೋಚಿಸಲೇ ಬೇಕಾದ ಬಹು ಮುಖ್ಯವಾದ ಅಂಶವಿದೆ. ಅಪರಾಧಗಳ, ಅವಘಡಗಳ, ವಿಧ್ವಂಸಕ ಕೃತ್ಯಗಳ ಮಾಡಿದವರ ಬಾಲ್ಯ ಹೇಗಿತ್ತು? ಅವರಿಗೆ ಎಂತಹ ಶಿಕ್ಷಣ ಸಿಕ್ಕಿದೆ? ಅವರ ಆರ್ಥಿಕ ಪರಿಸ್ಥಿತಿ ಯಾವ ಮಟ್ಟದಲ್ಲಿ ಇತ್ತು? ಅವರ ಕುಟುಂಬದವರು ಮತ್ತು ಇತರರು ಆ ಮಗುವಿನ ಮಾನಸಿಕ ಬೆಳವಣಿಗೆಯಲ್ಲಿ, ಭಾವನೆಗಳನ್ನು ರೂಪಿಸುವಲ್ಲಿ ಎಂತಹ ಪಾತ್ರವಹಿಸಿದ್ದರು. ಅವರದ್ದೇ ದೋಷಪೂರ್ಣವಾಗಿತ್ತೇ? ದೋಷಪೂರ್ಣ ಪರಿಸರವನ್ನೇ ರೂಪಿಸಿಕೊಂಡು ವಿಷಮಯವಾದ ಮನಸ್ಥಿತಿಗಳು ರೂಪುಗೊಂಡವೇ? ಬೇರಿನ ಸಾಮರ್ಥ್ಯ ಮತ್ತು ಗುಣಮಟ್ಟವೇ ಚಿಗುರುಗಳ ಗುಣಮಟ್ಟವನ್ನು ನಿರ್ಧರಿಸುವುದು. ಅದರಲ್ಲಿ ಅನುಮಾನವೇ ಇಲ್ಲ. ಅದು ಅತ್ಯಂತ ನೈಸರ್ಗಿಕ, ಸ್ವಾಭಾವಿಕ, ವೈಜ್ಞಾನಿಕ ಮತ್ತು ವೈಚಾರಿಕ. ಹಾಗಿರುವಾಗ ನಮ್ಮ ಪ್ರತಿಯೊಂದು ನಡೆ, ನುಡಿ, ಯೋಚನೆ, ಯೋಜನೆ; ಇವುಗಳೆಲ್ಲವೂ ಶಿಶುಪ್ರಧಾನವಾದರೆ ಮಾತ್ರವೇ ಒಂದಷ್ಟು ವರ್ಷಗಳ ನಂತರ ವ್ಯಕ್ತಿಗತ, ಕೌಟುಂಬಿಕ ಮತ್ತು ಸಾಮಾಜಿಕ ಅನಾಹುತಗಳೂ ಗಮನೀಯ ಪ್ರಮಾಣದಲ್ಲಿ ಇಳಿಯಬಹುದು. ಇಲ್ಲವಾದರೆ ಬರೀ ತೌಡು ಕುಟ್ಟುವ ಕೆಲಸವಾಗುತ್ತದೆ ಅಷ್ಟೇ!