ಅರಾಜಕತೆ ಮತ್ತು ಅಸಮಾಧಾನ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ರಾಜ್ಯದ ಅಧಿಕಾರ ಸೂತ್ರ ಹಿಡಿದಿರುವ ಬಿಜೆಪಿಯು ಸುಳ್ಯದ ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ ಆನಂತರ ಒಡೆದ ಮನೆಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ವಿರುದ್ಧ ಪಕ್ಷದೊಳಗಿನ ಆರೆಸ್ಸೆಸ್ ಮೂಲದ ಕಾರ್ಯಕರ್ತರು ಮತ್ತು ನಾಯಕರು ಸಿಡಿದೆದ್ದಿದ್ದಾರೆ. ಒಂದೆಡೆ ಯುವ ಮೋರ್ಚಾ ಪದಾಧಿಕಾರಿಗಳ ರಾಜೀನಾಮೆ ಪತ್ರಗಳ ಸುರಿಮಳೆಯಾಗುತ್ತಿದ್ದರೆ,ಇನ್ನೊಂದೆಡೆ ಎಬಿವಿಪಿ ಮುಂತಾದ ಸಂಘಟನೆಗಳ ಕಾರ್ಯಕರ್ತರು ಬಹಿರಂಗ ಪ್ರತಿಭಟನೆಗೆ ಇಳಿದಿದ್ದಾರೆ. ರಾಜ್ಯದಲ್ಲಿ ಅದರಲ್ಲೂ ಕರಾವಳಿ ಪ್ರದೇಶದಲ್ಲಿ ಸರಣಿ ಹತ್ಯೆಗಳಾಗುತ್ತಿದ್ದರೂ ಅದನ್ನು ತಡೆಯುವಲ್ಲಿ ವಿಫಲವಾಗಿರುವ ಸರಕಾರದ ಶಿಕ್ಷಣ ಮಂತ್ರಿ ಅಶ್ವತ್ಥನಾರಾಯಣ ಅವರು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಎನ್‌ಕೌಂಟರ್ ಮಾತುಗಳನ್ನು ಆಡುತ್ತಿದ್ದಾರೆ. ‘‘ಕ್ರಿಯೆಗೆ ಪ್ರತಿಕ್ರಿಯೆ’’ ಎಂದು ಹೇಳಿದವರಿಂದ ‘‘ಹತ್ಯೆಗೆ ಪ್ರತಿ ಹತ್ಯೆ’’ಯಂಥ ಉದ್ರೇಕಕಾರಿ ಮಾತುಗಳು ಬಂದರೆ ಅಚ್ಚರಿ ಪಡಬೇಕಾಗಿಲ್ಲ. ಹಿರಿಯಕ್ಕನ ಚಾಳಿ ಮನೆ ಮಂದಿಗೆ ಎಂಬಂತೆ ಬಿಜೆಪಿಯ ಮಂತ್ರಿಗಳು, ನಾಯಕರು ಕೂಡ ಸೇಡಿಗೆ ಸೇಡು ಎಂಬಂಥ ಅವಿವೇಕದ ಮಾತುಗಳನ್ನು ಆಡುತ್ತಿದ್ದಾರೆ. ರಾಜ್ಯದಲ್ಲಿ ಅರಾಜಕ ಪರಿಸ್ಥಿತಿ ನಿರ್ಮಾಣವಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಜನತಾ ಪರಿವಾರದ ಮೂಲದಿಂದ ಬಂದವರು, ಅವರು ಪಕ್ಷದ ಮೂಲ ಕಾರ್ಯಕರ್ತರ ಹಿತರಕ್ಷಣೆಗೆ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಸಂಘ ಪರಿವಾರದ ಹಿರಿಯ ನಾಯಕರು ದಿಲ್ಲಿಯವರೆಗೆ ದೂರು ಕೊಂಡೊಯ್ದಿದ್ದಾರೆ ಎಂಬ ವದಂತಿ ದಟ್ಟವಾಗಿ ಹರಡಿದೆ. ಹೀಗಾಗಿ ಬೊಮ್ಮಾಯಿಯವರು ಸಂಘ ಪರಿವಾರದ ಹಿರಿಯ ತಲೆಗಳನ್ನು ಓಲೈಸುವ ಪ್ರಯತ್ನವಾಗಿ ತನ್ನ ಪದವಿಗೆ ಸಲ್ಲದ ಇಂತಹ ಮಾತುಗಳನ್ನಾಡುತ್ತಿದ್ದಾರೆನ್ನಲಾಗಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾದ ಮುಖ್ಯಮಂತ್ರಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಮಾದರಿ ಆಡಳಿತವನ್ನು ರಾಜ್ಯಕ್ಕೆ ತರುವುದಾಗಿ ಹೇಳಿದ್ದಾರೆ. ದೇಶದಲ್ಲೇ ಹಿಂದುಳಿದಿರುವ ಅರಾಜಕತೆಯ ತಾಣವಾದ ಉತ್ತರ ಪ್ರದೇಶ ದಕ್ಷಿಣ ರಾಜ್ಯಗಳಿಗೆ ಅದರಲ್ಲೂ ಕರ್ನಾಟಕಕ್ಕೆ ಎಂದೂ ಮಾದರಿಯಾಗಲು ಸಾಧ್ಯವಿಲ್ಲ. ಶಾಂತಿ, ಸೌಹಾರ್ದ ಮತ್ತು ದಕ್ಷ ಆಡಳಿತಕ್ಕೆ ಹೆಸರಾಗಿರುವ ಕರ್ನಾಟಕ ಉತ್ತರ ಪ್ರದೇಶದಿಂದ ಏನನ್ನೂ ಕಲಿಯಬೇಕಾಗಿಲ್ಲ. ಸರಕಾರದ ನೀತಿ ಧೋರಣೆಗಳ ಬಗ್ಗೆ ಶಾಂತಿಯುತ ಪ್ರತಿಭಟನೆ ನಡೆಸಿದವರ ಮನೆಗಳನ್ನು ಬುಲ್ಡೋಜರ್ ಬಿಟ್ಟು ನೆಲಸಮಗೊಳಿಸುವ ಸಂಸ್ಕೃತಿ ಕರ್ನಾಟಕದ್ದಲ್ಲ.
ಸ್ವಾತಂತ್ರಾನಂತರ ಭಾರತದ ಉಳಿದ ರಾಜ್ಯಗಳಿಗಿಂತ ಕರ್ನಾಟಕ ಅಭಿವೃದ್ಧಿ, ಆರ್ಥಿಕ ಪ್ರಗತಿ, ತಾಂತ್ರಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳ ಸಾಧನೆಗಾಗಿ ಹೆಸರು ಮಾಡಿದೆ. ದೇಶದ ಉಳಿದ ರಾಜ್ಯಗಳಿಗೆ ಕರ್ನಾಟಕ ಮಾದರಿಯಾಗಿದೆ. ಇಂತಹ ರಾಜ್ಯದ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿಯವರು ಉತ್ತರ ಪ್ರದೇಶ ಮಾದರಿಯನ್ನು ಅನುಸರಿಸುವುದಾಗಿ ಹೇಳಿ ಕರ್ನಾಟಕದ ಪ್ರತಿಷ್ಠೆ ಮತ್ತು ಸಾಧನೆಗೆ ಅಪಚಾರ ಮಾಡಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಕೋಮು ಸೌಹಾರ್ದ ಮತ್ತು ಭಾವೈಕ್ಯವನ್ನು ಕಾಪಾಡುವಲ್ಲಿ ಕರ್ನಾಟಕ ಉಳಿದ ರಾಜ್ಯಗಳಿಗೆ ಮಾದರಿಯಾಗಿದೆ. ದಕ್ಷಿಣ ಕನ್ನಡದ ಕೆಲ ಘಟನೆಗಳನ್ನು ಹೊರತು ಪಡಿಸಿದರೆ ಕರ್ನಾಟಕ ಸುರಕ್ಷಿತ ಪ್ರದೇಶವಾಗಿದೆ. ಹಾಗಾಗಿಯೇ ಉತ್ತರ ಪ್ರದೇಶ, ಬಿಹಾರ ಹಾಗೂ ರಾಜಸ್ಥಾನದ ಯುವಕರು ಉದ್ಯೋಗ ಅರಸಿಕೊಂಡು ಕರ್ನಾಟಕಕ್ಕೆ ಬರುತ್ತಿದ್ದಾರೆ. ತನ್ನ ರಾಜ್ಯದ ಯುವಕರಿಗೆ ಕನಿಷ್ಠ ಒಂದು ಉದ್ಯೋಗ ಕೊಡದ ಯೋಗಿಯ ಬುಲ್ಡೋಜರ್ ರಾಜ್ಯದಿಂದ ಕರ್ನಾಟಕ ಏನನ್ನೂ ಕಲಿಯುವುದು ಬೇಡ.
ಸಂವಿಧಾನಕ್ಕೆ ನಿಷ್ಠೆ ಹೊಂದಿರುವುದಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದ ಮಂತ್ರಿ ಅಶ್ವತ್ಥನಾರಾಯಣ ಎನ್‌ಕೌಂಟರ್ ಬೆದರಿಕೆ ಹಾಕುವುದು ಯಾರಿಗೆ? ಈ ದೇಶದಲ್ಲಿ ಶಿಕ್ಷೆ ಕೊಡುವ ಅಧಿಕಾರ ನ್ಯಾಯಾಲಯಕ್ಕೆ ಮಾತ್ರವಿದೆ. ಅದೂ ತನಿಖೆ ಮುಗಿದ ನಂತರ, ಆರೋಪಿಯ ಪರ ವಾದ ಆಲಿಸಿದ ಆನಂತರ ನ್ಯಾಯಾಲಯ ತೀರ್ಪು ನೀಡುತ್ತದೆ. ಇದೆಲ್ಲ ವೈದ್ಯಕೀಯ ಪದವೀಧರರಾದ ಸಚಿವರಿಗೆ ಗೊತ್ತಿಲ್ಲವೆಂದಲ್ಲ. ತಮ್ಮ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಲು, ಅವರ ಕೋಪವನ್ನು ಶಮನ ಮಾಡಲು ಇವರು ಎನ್‌ಕೌಂಟರ್ ಮಾತನ್ನು ಆಡಿದ್ದಾರೆ. ಮುಖ್ಯಮಂತ್ರಿಗಳು ತಮ್ಮ ಸಚಿವರನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಜೊತೆಗೆ ತಾವೂ ಕೂಡ ಅತ್ಯಂತ ಎಚ್ಚರದಿಂದ ಮಾತಾಡಬೇಕು.
ಶಾಂತಿ ಸೌಹಾರ್ದಕ್ಕೆ ಹೆಸರಾದ ಕರ್ನಾಟಕದಲ್ಲಿ ಕೋಮು ಧ್ರುವೀಕರಣ ಅತ್ಯಂತ ಅಪಾಯಕಾರಿಯಾಗಿ ನಡೆದಿದೆ. ಇದನ್ನು ನಿಯಂತ್ರಿಸುವಲ್ಲಿ ಸರಕಾರ ವಿಫಲಗೊಂಡಿದೆ. ನಾಗರಿಕರ ಜೀವ ಮತ್ತು ಆಸ್ತಿಪಾಸ್ತಿಗಳನ್ನು ಯಾವುದೇ ಪಕ್ಷಪಾತವಿಲ್ಲದೆ ರಕ್ಷಿಸುವುದು ಸರಕಾರದ ಸಂವಿಧಾನಾತ್ಮಕ ಕರ್ತವ್ಯ. ತನ್ನ ಕರ್ತವ್ಯ ನಿರ್ವಹಣೆಯಲ್ಲಿ ಸರಕಾರ ವಿಫಲಗೊಂಡಿದೆ. ಎಲ್ಲ ಪ್ರಜೆಗಳನ್ನೂ ಸಮಾನವಾಗಿ ನೋಡಿಕೊಳ್ಳಬೇಕಾದ ಸರಕಾರ ಒಂದು ಕೋಮಿನ, ಪಕ್ಷದ ಸಂಘಟನೆಯ ಪರವಾಗಿ ವರ್ತಿಸುತ್ತಿರುವುದು ವಿಷಾದದ ಸಂಗತಿಯಾಗಿದೆ.
ಇತ್ತೀಚೆಗೆ ಹಿಜಾಬ್, ಮುಸ್ಲಿಮರ ವ್ಯಾಪಾರ ನಿರ್ಬಂಧ, ಮತಾಂತರ ನಿಷೇಧ ಕಾಯ್ದೆ.. ಹೀಗೆ ಸಮಾಜವನ್ನು, ಕನ್ನಡಿಗರನ್ನು ಒಡೆಯುವ ಮತ್ತು ವೈಷಮ್ಯದ ವಿಷಬೀಜ ಬಿತ್ತುವ ಕಾರ್ಯ ನಿರಾತಂಕವಾಗಿ ನಡೆದಿದೆ. ಕರ್ನಾಟಕದ ಜನ ಮೂರ್ಖರಲ್ಲ. ಸರಕಾರ ಮಾಡುವುದನ್ನು, ಮಾತಾಡುವುದನ್ನು ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅವರ ಸಹನೆಯ ಕಟ್ಟೆ ಒಡೆದರೆ ಮುಂದಿನ ಚುನಾವಣೆಯಲ್ಲಿ ಇದರ ಪ್ರತಿಫಲ ಉಣ್ಣಬೇಕಾದೀತು. ಹಾಗಾಗಿ ಅಧಿಕಾರದಲ್ಲಿ ಇರುವವರ ನಡೆ ಮತ್ತು ನುಡಿ ಸೌಜನ್ಯದ, ಸಜ್ಜನಿಕೆಯ ಗಡಿಯನ್ನು ದಾಟದಿರಲಿ. ಅಧಿಕಾರ ಶಾಶ್ವತವಲ್ಲ ಎಂಬುದು ನೆನಪಿನಲ್ಲಿರಲಿ.