ವಾಸ್ತವಕ್ಕೆ ಬೆನ್ನು ತಿರುಗಿಸಿ ನಿಂತ ವಿತ್ತ ಸಚಿವರು
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ದೇಶದ ಆರ್ಥಿಕ ಹಿಂಜರಿತದ ಕುರಿತಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗೊಂದಲಮಯ ಹೇಳಿಕೆಗಳನ್ನು ನೀಡಿದ್ದಾರೆ. ದೇಶದ ಆರ್ಥಿಕ ಹಿಂಜರಿತವನ್ನು ಸಂಪೂರ್ಣವಾಗಿ ತಿರಸ್ಕರಿಸಿರುವ ಅವರು, ಸರಕಾರದ ಆರ್ಥಿಕ ವೈಫಲ್ಯಗಳನ್ನು ಯಾರ್ಯಾರದೋ ತಲೆಗೆ ಕಟ್ಟಿ ತಮ್ಮ ತಲೆ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಒಂದೆಡೆ ಬೆಲೆಯೇರಿಕೆಯನ್ನು ಸಮರ್ಥಿಸುತ್ತಾರೆ. ಮಗದೊಂದೆಡೆ ಕೋವಿಡ್, ಒಮೈಕ್ರಾನ್, ಉಕ್ರೇನ್ ಯುದ್ಧಗಳ ಕಡೆಗೆ ಕೈ ತೋರಿಸುತ್ತಾರೆ. ತಮ್ಮ ಹೇಳಿಕೆಯನ್ನು ಸಮರ್ಥಿಸಲು ಸಂಪೂರ್ಣ ವಿಫಲವಾದಾಗ, ಹಿಂದಿನ ಯುಪಿಎ ಸರಕಾರವೇ ಎಲ್ಲಕ್ಕೂ ಕಾರಣ ಎಂದು ಕೈ ತೊಳೆದುಕೊಳ್ಳುತ್ತಾರೆ.
ದೇಶದಲ್ಲಿ ಆರ್ಥಿಕ ಹಿಂಜರಿತ ಸಾಧ್ಯತೆಯೇ ಇಲ್ಲ ಎನ್ನುವ ನಿರ್ಮಲಾ ಸೀತಾರಾಮನ್, ಇದೇ ಸಂದರ್ಭದಲ್ಲಿ ಏರುತ್ತಿರುವ ತೈಲ ಬೆಲೆ, ಹಣದುಬ್ಬರ ಇತ್ಯಾದಿಗಳ ಬಗ್ಗೆ ಪ್ರಸ್ತಾಪಿಸಿದಾಗ ಬಡ ದೇಶಗಳ ಕಡೆಗೆ ಕೈ ತೋರಿಸಿ, ಭಾರತವನ್ನು ಸಮರ್ಥಿಸಿಕೊಳ್ಳುತ್ತಾರೆ. ನಮ್ಮ ದೇಶದ ಆರ್ಥಿಕತೆಯನ್ನು ನಮಗಿಂತ ದುರ್ಬಲವಾಗಿರುವ ಇತರ ದೇಶಗಳ ಆರ್ಥಿಕತೆಯನ್ನು ತೋರಿಸಿ ಸಮರ್ಥಿಸಿಕೊಳ್ಳುವ ಸ್ಥಿತಿ ಭಾರತಕ್ಕೆ ಹಿಂದೆಂದೂ ಬಂದಿರಲಿಲ್ಲ. ಭಾರತದ ಆರ್ಥಿಕತೆ ಯಾವ ದಿಕ್ಕಿಗೆ ಸಾಗಿದೆ ಎನ್ನುವುದನ್ನು ನಾವು ಭಾರತದ ಈ ಹಿಂದಿನ ಆರ್ಥಿಕ ಸ್ಥಿತಿಗತಿಯನ್ನು ಮುಂದಿಟ್ಟುಕೊಂಡು ಚರ್ಚಿಸಬೇಕಾಗಿದೆ. ಇಂದಿನ ಆರ್ಥಿಕ ಹಿಂಜರಿತಕ್ಕೆ ಮುಖ್ಯ ಕಾರಣ ಏನು ಎನ್ನುವುದನ್ನು ನಾವು ಗುರುತಿಸದೇ ಅದನ್ನು ಎದುರಿಸುವ ದಾರಿಯನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಎಲ್ಲಿಯವರೆಗೆ ಭಾರತದ ಆರ್ಥಿಕತೆಯ ವಾಸ್ತವವನ್ನು ಸರಕಾರ ಒಪ್ಪಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಭಾರತ ಆರ್ಥಿಕ ಹಿಂಜರಿತದ ಪ್ರಪಾತಕ್ಕೆ ಒಂದಲ್ಲ ಒಂದು ದಿನ ಹೋಗಿ ಬೀಳಲೇಬೇಕಾಗಿದೆ. ಈಗಾಗಲೇ ಶ್ರೀಲಂಕಾದಲ್ಲಿ ಆಗಿರುವ ಅನಾಹುತಗಳು ನಮ್ಮ ಕಣ್ಣು ತೆರೆಸಬೇಕು. ಆರ್ಥಿಕ ವೈಫಲ್ಯಗಳನ್ನು ಮುಚ್ಚಿ ಹಾಕಲು, ಭಾವನಾತ್ಮಕ ರಾಜಕೀಯ ನಡೆಸಿ ದಿನ ದೂಡಿದ ಪರಿಣಾಮವಾಗಿ ಶ್ರೀಲಂಕಾ ನರಿ, ನಾಯಿಗಳ ಪಾಲಾಗಿದೆ. ಒಂದೆಡೆ ಚೀನಾ, ಇನ್ನೊಂದೆಡೆ ಭಾರತದಂತಹ ದೇಶಗಳು ಬಹಿರಂಗವಾಗಿಯೇ ಅದರ ಮೇಲೆ ತನ್ನ ನಿಯಂತ್ರಣವನ್ನು ಸಾಧಿಸುವ ಮಟ್ಟಿಗೆ ಪರಿಸ್ಥಿತಿ ಚಿಂತಾಜನಕವಾಗಿದೆ. ಇತ್ತ ನೆರೆಯ ಪಾಕಿಸ್ತಾನದ ಸ್ಥಿತಿಯೂ ಭಿನ್ನವಾಗಿಲ್ಲ. ಭಾರತ ಆ ಸ್ಥಿತಿ ತಲುಪುವ ಹಾದಿ ಒಂದಿಷ್ಟು ದೂರವಿರಬಹುದು. ಆ ದೂರವನ್ನು ಬಳಸಿಕೊಂಡು ಭಾರತದ ಆರ್ಥಿಕತೆಯನ್ನು ಎತ್ತಿ ನಿಲ್ಲಿಸಬೇಕಾದರೆ, ‘ಸಬ್ ಚಂಗಾಸಿ’ ಮನಸ್ಥಿತಿಯಿಂದ ಮೊದಲು ಸರಕಾರ ಹೊರಬರಬೇಕು.
ಇಂಧನ, ಅವಶ್ಯವಸ್ತುಗಳ ಬೆಲೆ ಏರಿಕೆಯೂ ಸೇರಿದಂತೆ ಹಲವು ಆರ್ಥಿಕ ಅವಘಡಗಳಿಗೆ ಹಿಂದಿನ ಯುಪಿಎ ಸರಕಾರದ ನೀತಿಗಳೇ ಕಾರಣ ಎಂದು ಲೋಕಸಭೆಯಲ್ಲಿ ವಿತ್ತ ಸಚಿವರು ಹೇಳಿಕೆ ನೀಡಿದ್ದಾರೆ. ಈ ಹಿಂದೆ ಇದ್ದ ಸರಕಾರವೂ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಎನ್ನುವ ಕನಿಷ್ಠ ಅರಿವಾದರೂ ವಿತ್ತ ಸಚಿವರಿಗೆ ಇರಬೇಕಾಗಿತ್ತು. ಅದಕ್ಕಿಂತಲೂ ಹಿಂದೆ ಇದ್ದ ಯುಪಿಎ ಸರಕಾರದ ವೈಫಲ್ಯಗಳನ್ನು ಖಂಡಿಸಿ ಬಿಜೆಪಿಯನ್ನು ಭರ್ಜರಿ ಬಹುಮತದೊಂದಿಗೆ ಆರಿಸಲಾಯಿತು. ಈ ಹಿಂದಿನ ಯುಪಿಎ ಸರಕಾರದ ಆರ್ಥಿಕ ನೀತಿಗಳನ್ನು ಸರಿಪಡಿಸಲು ಕನಿಷ್ಠ ಐದು ವರ್ಷಗಳು ಸಂದಿತು ಎಂದಿಟ್ಟುಕೊಳ್ಳೋಣ. ಅಚ್ಛೇದಿನ್ ಆಗಮಿಸುತ್ತದೆ ಎನ್ನುತ್ತಾ ಅಧಿಕಾರ ಏರಿ ಈಗ ಎಂಟು ವರ್ಷಗಳು ಕಳೆದಿವೆ. ಈ ಹಿಂದಿನ ಯುಪಿಎ ಸರಕಾರ ಮಾಡಿದ ತಪ್ಪುಗಳನ್ನು ತಿದ್ದುವುದಕ್ಕೆ ಐದು ವರ್ಷಗಳು ಪೋಲಾಯಿತು, ಆದುದರಿಂದ ಇನ್ನೊಂದು ಅವಕಾಶ ನೀಡಬೇಕು ಎಂದು ಮತ್ತೊಮ್ಮೆ ಮೋದಿ ನೇತೃತ್ವದ ಸರಕಾರವನ್ನು ಆರಿಸಲಾಯಿತು. ಆದರೆ ಈಗಲೂ ಕೇಂದ್ರ ಸರಕಾರ ಹಿಂದಿನ ಯುಪಿಎ ಸರಕಾರವನ್ನೇ ಟೀಕಿಸುತ್ತಾ ಕಾಲ ಕಳೆಯುತ್ತಿದೆ ಎಂದರೆ, ಸರಕಾರ ಬದಲಿಸುವ ಅಗತ್ಯವೇ ಇದ್ದಿರಲಿಲ್ಲ. ಕನಿಷ್ಠ ಯುಪಿಎ ಸರಕಾರದ ಅವಧಿಯಲ್ಲಿ ಆರ್ಥಿಕ ಪರಿಸ್ಥಿತಿ ಇಷ್ಟೊಂದು ಹದಗೆಟ್ಟಿರಲಿಲ್ಲ. ದೇಶದಲ್ಲಿಂದು, ನಮಗೆ ‘ಅಚ್ಛೇದಿನ್’ ಬೇಡ, ಈ ಹಿಂದಿದ್ದ ಬುರೇ ದಿನಗಳನ್ನು ವಾಪಸ್ ಕೊಡಿ ಎಂದು ಬೇಡಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಕಾರಣಕ್ಕಾಗಿ ಸರಕಾರ ತನ್ನ ಅಧಿಕಾರಾವಧಿಯ ಆರ್ಥಿಕ ನೀತಿಗಳ ಬಗ್ಗೆ ಪುನರಾವಲೋಕನ ನಡೆಸಬೇಕು.
ಸದ್ಯದ ದೇಶದ ಸ್ಥಿತಿಗೆ ಕೊರೋನ, ರಶ್ಯ-ಉಕ್ರೇನ್ ಯುದ್ಧವನ್ನು ಕೂಡ ವಿತ್ತ ಸಚಿವರು ಗುರಾಣಿಯಾಗಿ ಬಳಸಿದ್ದಾರೆ. ಯಾವಾಗ ಸರಕಾರ ನೋಟು ನಿಷೇಧವನ್ನು ಮಾಡಿತೋ ಅಂದಿನಿಂದ ಭಾರತದ ಆರ್ಥಿಕತೆ ಹಿಂದಕ್ಕೆ ಚಲಿಸಲಾರಂಭಿಸಿತು. ನೋಟು ನಿಷೇಧದಿಂದಾಗಿ ಅಪಾರ ಪ್ರಮಾಣದ ಕಪ್ಪು ಹಣ ಹೊರಬರುತ್ತದೆ, ದೇಶದ ಹಣದುಬ್ಬರ ಇಳಿಮುಖವಾಗುತ್ತದೆ, ಡಾಲರ್ ಮುಂದೆ ರೂಪಾಯಿಯ ಮೌಲ್ಯ ಹೆಚ್ಚುತ್ತದೆ ಎಂದು ಸರಕಾರ ನಂಬಿಸಿತು. ದೇಶವೂ ನಂಬಿತು. ಆ ನಂಬಿಕೆಯಿಂದಲೇ ನೋಟು ನಿಷೇಧದಿಂದಾದ ಎಲ್ಲ ಹಾನಿ, ನಷ್ಟಗಳನ್ನು ಜನರು ಸಹಿಸಿಕೊಂಡರು. ಬ್ಯಾಂಕ್‌ನಲ್ಲಿ ಕ್ಯೂ ನಿಂತು ಹೃದಯಾಘಾತದಿಂದ ಹಲವರು ಸತ್ತರು. ಕಟ್ಟಡ ನಿರ್ಮಾಣಗಳಂತಹ ಚಟುವಟಿಕೆಗಳು ಏಕಾಏಕಿ ನಿಂತು ದೇಶದ ದೊಡ್ಡ ಮಟ್ಟದ ಕಾರ್ಮಿಕರು ಕೆಲಸ ಕಳೆದುಕೊಂಡರು. ಆದರೆ ಇವೆಲ್ಲದರಿಂದ ಒಳ್ಳೆಯದಾಗುತ್ತದೆ ಎಂಬ ಒಂದೇ ಒಂದು ಭರವಸೆಯಿಂದ ಸರಕಾರದ ವಿರುದ್ಧ ಪ್ರತಿಭಟನೆ ನಡೆಸದೆ ಜನರು ಸುಮ್ಮಗಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ‘‘ನನಗೆ ಐವತ್ತು ದಿನಗಳನ್ನು ಕೊಡಿ. ಎಲ್ಲವನ್ನು ಸರಿ ಮಾಡುತ್ತೇನೆ’’ ಎಂದರು. ಐವತ್ತು ಮಾತ್ರವಲ್ಲ, ಇನ್ನೊಂದು ಅವಧಿಯ ಅಧಿಕಾರವನ್ನೂ ಮೋದಿ ನೇತೃತ್ವದ ಸರಕಾರಕ್ಕೆ ನೀಡಿದರು. ಆದರೆ ಯಾವುದೂ ಸರಿಯಾಗಲಿಲ್ಲ. ಇಂದಿಗೂ ಪ್ರಧಾನಿ ಮೋದಿಯವರು, ನೋಟು ನಿಷೇಧದಿಂದಾಗಿ ಸರಕಾರಕ್ಕಾಗಿರುವ ಲಾಭವೇನು? ಎಷ್ಟು ಕಪ್ಪು ಹಣ ಖಜಾನೆಗೆ ಬಂದಿದೆ? ಎನ್ನುವ ಲೆಕ್ಕಾಚಾರವನ್ನು ನೀಡಲೇ ಇಲ್ಲ. ಆದರೆ ಇದೇ ಸಂದರ್ಭದಲ್ಲಿ ನೋಟು ನಿಷೇಧದಿಂದಾಗಿ ದೇಶದ ಆರ್ಥಿಕ ಚಟುವಟಿಕೆ ಏಕಾಏಕಿ ಹತ್ತು ವರ್ಷ ಹಿಂದಕ್ಕೆ ಚಲಿಸಿತು. ಆಗ ಮಲಗಿದ ಆರ್ಥಿಕತೆ ಮತ್ತೆ ತಲೆಯೆತ್ತಲೇ ಇಲ್ಲ. ದೇಶದ ಬಹುತೇಕ ಆರ್ಥಿಕ ತಜ್ಞರು ‘ನೋಟು ನಿಷೇಧ ಒಂದು ಮಹಾ ಪ್ರಮಾದ’ ಎಂದು ಬಣ್ಣಿಸಿದ್ದಾರೆ.
ವಿಶ್ವಸಂಸ್ಥೆ ಎಚ್ಚರಿಸಿದಾಗಲೇ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ನಿರ್ಬಂಧಗಳನ್ನು ವಿಧಿಸಿದ್ದರೆ ಕೊರೋನ ದೇಶದಲ್ಲಿ ಈ ಮಟ್ಟಿಗೆ ದುಷ್ಪರಿಣಾಮ ಬೀರುತ್ತಿರಲಿಲ್ಲ. ಸರಕಾರ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಮೈಮರೆಯಿತು. ಲಾಕ್‌ಡೌನ್ ಸಂದರ್ಭದಲ್ಲೂ ಆ ಬೇಜವಾಬ್ದಾರಿ ಮುಂದುವರಿಯಿತು. ಬಹುಶಃ ಭಾರತದ ಆರ್ಥಿಕತೆ ಸುಸ್ಥಿತಿಯಲ್ಲಿದ್ದರೆ, ಕೊರೋನ, ಲಾಕ್‌ಡೌನ್ ಪರಿಣಾಮ ಇಷ್ಟು ಭೀಕರವಾಗುತ್ತಿರಲಿಲ್ಲ. ನೋಟು ನಿಷೇಧದಿಂದ ಭಾರತದ ಆರ್ಥಿಕತೆ ಹಿಂದಕ್ಕೆ ಚಲಿಸಿದ ಪರಿಣಾಮವಾಗಿ, ಕೊರೋನವನ್ನು ತಾಳಿಕೊಳ್ಳುವ ಸ್ಥಿತಿಯಲ್ಲಿ ಭಾರತ ಇರಲಿಲ್ಲ. ಇದೇ ಸಂದರ್ಭದಲ್ಲಿ ಅಂಬಾನಿ, ಅದಾನಿಗಳಿಗೆ ಅಂದರೆ ಕಾರ್ಪೊರೇಟ್ ದೊರೆಗಳಿಗೆ ಪೂರಕವಾದ ಆರ್ಥಿಕ ನೀತಿಯ ಹೆಬ್ಬಾಗಿಲನ್ನು ಸರಕಾರ ಪೂರ್ಣ ಪ್ರಮಾಣದಲ್ಲಿ ತೆರೆಯಿತು. ಇದರಿಂದ ಉದ್ಯೋಗಗಳು ಹೆಚ್ಚುತ್ತವೆ ಎನ್ನುವ ಸರಕಾರದ ತರ್ಕವೂ ಹುಸಿಯಾಯಿತು. ಇಂದು ದೇಶದಲ್ಲಿ ಬಡತನ, ನಿರುದ್ಯೋಗಗಳು ಹೆಚ್ಚುತ್ತಿವೆ. ಉದ್ಯಮಿಗಳೇ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯಲ್ಲಿದ್ದಾರೆ. ಡಾಲರ್ ಮುಂದೆ ರೂಪಾಯಿ ಮೌಲ್ಯ ಇಳಿಕೆ ದಾಖಲೆಯನ್ನು ಮುರಿದಿದೆ. ಹೀಗಿರುವಾಗ, ‘ದೇಶ ಆರ್ಥಿಕ ಹಿಂಜರಿತಕ್ಕೆ ಹೆದರಬೇಕಾಗಿಲ್ಲ’ ಎನ್ನುವ ವಿತ್ತ ಸಚಿವರ ಹೇಳಿಕೆಯನ್ನು ದೇಶ ನಂಬುವುದಾದರೂ ಹೇಗೆ? ಈ ಹಿಂಜರಿತದಿಂದ ಭಾರತವನ್ನು ರಕ್ಷಿಸುವ ಯಾವ ಭರವಸೆಯನ್ನೂ ನೀಡದೆ ‘ಸಬ್ ಚಂಗಾಸಿ’ ಎಂದು ಸಮಾಧಾನಿಸುವುದರಿಂದ ದೇಶದ ಆರ್ಥಿಕತೆಯನ್ನು ಮೇಲೆತ್ತಲು ಹೇಗೆ ಸಾಧ್ಯ?