ದಲಿತ ಬಾಲಕಿಯರ ಶಿಕ್ಷಣಕ್ಕೆ ಕೊಳ್ಳಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಜಾತಿ ವ್ಯವಸ್ಥೆಯ ಸರಪಳಿಗಳಿಂದ ಕಳಚಿಕೊಳ್ಳುವುದಕ್ಕೆ ಶಿಕ್ಷಣವೇ ದಲಿತರ ಪಾಲಿನ ಕೀಲಿ ಕೈ ಎಂದು ಅಂಬೇಡ್ಕರ್ ಭಾವಿಸಿದ್ದರು. ಸ್ವಾತಂತ್ರೋತ್ತರ ದಿನಗಳಲ್ಲಿ ದಲಿತರನ್ನು ಮುಖ್ಯವಾಹಿನಿಗೆ ತರುವ ಉದ್ದೇಶವಿಟ್ಟು ಅವರನ್ನು ಶೈಕ್ಷಣಿಕವಾಗಿ ಮೇಲೆತ್ತಲು ಹಲವು ಯೋಜನೆಗಳನ್ನು ಸರಕಾರಗಳು ಹಮ್ಮಿಕೊಂಡವು. ಆದರೆ ಇಂದಿಗೂ, ದೇಶದ ಬಹುಸಂಖ್ಯಾತ ದಲಿತ ಸಮುದಾಯದ ಜನರಿಗೆ ಶಿಕ್ಷಣ ತಲುಪಿಯೇ ಇಲ್ಲ. ಯಾಕೆಂದರೆ ದಲಿತರನ್ನು ಶಿಕ್ಷಿತರನ್ನಾಗಿಸುವ ಹೊಣೆಗಾರಿಕೆಯನ್ನು ಮತ್ತೆ ಮೇಲ್ವರ್ಗದ ಜನರ ಕೈಗೇ ನೀಡಲಾಗಿತ್ತು. ದಲಿತರು ಶಿಕ್ಷಿತರಾಗಿ ಸಮಾಜದಲ್ಲಿ ಘನತೆಯಿಂದ ಬದುಕುವ ಬಗ್ಗೆ ಆಳದಲ್ಲಿ ಆಕ್ಷೇಪವನ್ನು ಹೊಂದಿರುವ ಈ ಜನರು, ದಲಿತರನ್ನು ಉದ್ಧರಿಸುವ ನಾಟಕವನ್ನಷ್ಟೇ ಆಡುತ್ತಾ ಬಂದರು.
ಇದು ದಲಿತರಿಗೆ ಸಂಬಂಧಿಸಿದ ಸರ್ವ ಯೋಜನೆಗಳಿಗೂ ಅನ್ವಯವಾಗುತ್ತದೆ. ಮೀಸಲಾತಿಯೂ ಸೇರಿದಂತೆ ದಲಿತರನ್ನು ಸಬಲರನ್ನಾಗಿಸುವ ಇನ್ನಿತರ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ವಿಫಲವಾಗಿರುವ ವ್ಯವಸ್ಥೆಯೇ ಇಂದು, ಈ ಯೋಜನೆಗಳನ್ನು ಬೇರೆ ಬೇರೆ ನೆಪಗಳನ್ನು ಮುಂದೊಡ್ಡಿ ಹಿಂದೆಗೆಯುವುದಕ್ಕೆ ಹೊರಟಿದೆ. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಸೇರಿದ ಬಾಲಕಿಯರ ಶಿಕ್ಷಣಕ್ಕೆ ಉತ್ತೇಜನ ನೀಡುವುದಕ್ಕಾಗಿ, ಕೇಂದ್ರ ಸರಕಾರವು 'ರಾಷ್ಟ್ರೀಯ ಬಾಲಕಿಯರ ಹೈಸ್ಕೂಲ್ ಶಿಕ್ಷಣಕ್ಕೆ ಉತ್ತೇಜನ ನೀಡುವ ಯೋಜನೆ(ಎನ್‌ಎಸ್‌ಐಜಿಎಸ್‌ಇ)'ಯೊಂದನ್ನು ಹಮ್ಮಿಕೊಳ್ಳುತ್ತಾ ಬರುತ್ತಿತ್ತು. ಈ ಯೋಜನೆಯನ್ನು ಜಾರಿಗೊಳಿಸುವಲ್ಲಿ ಅದೆಷ್ಟು ಯಶಸ್ವಿಯಾಗಿದೆ ಎನ್ನುವುದು ಬದಿಗಿರಲಿ, 2018-19ರ ಸಾಲಿಗೆ ಅನ್ವಯವಾಗುವಂತೆ ಈ ಯೋಜನೆಯನ್ನು ಸರಕಾರ ಅನಿರೀಕ್ಷಿತವಾಗಿ ಹಿಂದೆಗೆದುಕೊಂಡಿತು.
''ವೆಚ್ಚ ಹಣಕಾಸು ಸಮಿತಿ (ಇಎಫ್‌ಸಿ)ಯ ಶಿಫಾರಸಿನಂತೆ 2018-19ರ ಸಾಲಿನಿಂದ ಅನ್ವಯವಾಗುವಂತೆ ಎನ್‌ಎಸ್‌ಐಜಿಎಸ್‌ಇ ಕಾರ್ಯಕ್ರಮವನ್ನು 2017ರಲ್ಲಿ ನಿಲ್ಲಿಸಲಾಗಿದೆ. ಇನ್ನೂ ಹೆಚ್ಚು ಪರಿಣಾಮಕಾರಿ ರೀತಿಯಲ್ಲಿ ಜಾರಿಗೆ ತರಲು ಸಾಧ್ಯವಾಗುವಂತೆ ಯೋಜನೆಯನ್ನು ಪುನರ್ರೂಪಿಸುವುದಕ್ಕಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ'' ಎಂದು ಕೇಂದ್ರ ಸಚಿವರು ಈ ಬಗ್ಗೆ ಸ್ಪಷ್ಟೀಕರಣವನ್ನೂ ನೀಡಿದ್ದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಾಲಕಿಯರು ಶಾಲೆ ತೊರೆಯುವ ಪ್ರಮಾಣವನ್ನು ಕಡಿಮೆ ಮಾಡುವ ಹಾಗೂ ಅವರು ಶಾಲೆಗೆ ಸೇರ್ಪಡೆಗೊಳ್ಳುವ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ 2008ರಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಈ ಪಂಗಡಗಳಿಗೆ ಸೇರಿದ ಬಾಲಕಿಯರು ಹೈಸ್ಕೂಲ್ ಶಿಕ್ಷಣವನ್ನು ಪೂರ್ತಿಗೊಳಿಸುವಂತೆ ಮಾಡುವುದು ಯೋಜನೆಯ ಮುಖ್ಯ ಉದ್ದೇಶವಾಗಿತ್ತು. ಯೋಜನೆಯಡಿ, 8ನೇ ತರಗತಿ ಪೂರೈಸಿ ಹೈಸ್ಕೂಲ್‌ಗೆ ಸೇರ್ಪಡೆಯಾಗಿರುವ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ 3,000 ರೂಪಾಯಿ ಮೊತ್ತವನ್ನು ಜಮಾ ಮಾಡಲಾಗುತ್ತಿತ್ತು. ಈ ಬಾಲಕಿಯರಿಗೆ 18 ವರ್ಷವಾದಾಗ ಮತ್ತು ಹೈಸ್ಕೂಲ್ (10ನೇ ತರಗತಿ) ಪಾಸಾದರೆ ಹಾಗೂ ಅಲ್ಲಿಯವರೆಗೆ ಅವಿವಾಹಿತರಾಗಿ ಉಳಿದಿದ್ದರೆ ಅವರು ಆ ಹಣವನ್ನು ಬಡ್ಡಿ ಸಮೇತ ಪಡೆಯಬಹುದಾಗಿತ್ತು. ಅವರಿಗೆ ಹೈಯರ್ ಸೆಕೆಂಡರಿ (ಪಿಯುಸಿ) ಶಿಕ್ಷಣವನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೂ ಈ ಹಣವನ್ನು ಅವರು ಪಡೆಯಬಹುದಾಗಿತ್ತು. ಈ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸುವ ಉದ್ದೇಶದಿಂದ ರದ್ದುಗೊಳಿಸಲಾಗಿದೆ ಎಂದ ಸರಕಾರ, ಈ ವರೆಗೆ ಅದಕ್ಕೆ ಪುನರುಜ್ಜೀವ ನೀಡುವ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ.
ಇದೀಗ ಈ ಯೋಜನೆಯ ಬಗ್ಗೆ ಲೋಕಸಭೆಯಲ್ಲಿ ಪ್ರಶ್ನಿಸಿದಾಗ ಸರಕಾರದಿಂದ ಸಿಕ್ಕಿದ ಉತ್ತರ ಅತ್ಯಂತ ನಿರಾಶದಾಯಕವಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಬಾಲಕಿಯರ ಶಾಲಾ ಶಿಕ್ಷಣವನ್ನು ಉತ್ತೇಜಿಸಲು ಪ್ರೋತ್ಸಾಹಕ ಆಧಾರಿತ ಯೋಜನೆಯ ಅನುಷ್ಠಾನದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗದೇ ಇರುವುದರಿಂದ ಅದನ್ನು ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ಸಂಸತ್ತಿನಲ್ಲಿ ಒಪ್ಪಿಕೊಂಡಿದೆ. ಅಂದರೆ, ಇರುವ ಯೋಜನೆಯನ್ನು ಸಮರ್ಥವಾಗಿ ಜಾರಿಗೊಳಿಸಲು ಸರಕಾರ ವಿಫಲವಾಗಿರುವುದರಿಂದ, ಇಡೀ ಯೋಜನೆಯನ್ನೇ ಸರಕಾರ ರದ್ದುಗೊಳಿಸಿದೆ. ಅದನ್ನು ಮತ್ತೆ ಪರಿಣಾಮಕಾರಿಯಾಗಿ ಜಾರಿಗೆ ತರುವ ಯಾವ ಉದ್ದೇಶವೂ ಸರಕಾರದ ಬಳಿ ಇಲ್ಲ ಎನ್ನುವುದು ಇದರಿಂದ ಸಾಬೀತಾಗಿದೆ. ಯೋಜನೆಯನ್ನು ಸಮರ್ಥವಾಗಿ ಜಾರಿಗೊಳಿಸುವುದರಲ್ಲಿ ಸರಕಾರದ ಮುಂದಿರುವ ಸಮಸ್ಯೆ ಏನು ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ.
ಈ ಯೋಜನೆಗೆ ಬೇಕಾಗಿರುವ ಅನುದಾನವನ್ನು ಒದಗಿಸಲು ಸರಕಾರ ಹಿಂದೇಟು ಹಾಕಿರುವುದೇ ಮುಖ್ಯ ಕಾರಣವಾಗಿದೆ. ಯೋಜನೆಯನ್ನು ಹಿಂದೆಗೆಯುವ ಮುನ್ನ, ಸರಕಾರ ಇದಕ್ಕೆ ನೀಡುವ ಅನುದಾನವನ್ನು ಇಳಿಸುತ್ತಾ ಬಂತು. 2017-18 ಮತ್ತು ಪ್ರಸಕ್ತ ಹಣಕಾಸು ವರ್ಷದ ನಡುವಿನ ಅವಧಿಯಲ್ಲಿ, ಸರಕಾರವು ಯೋಜನೆಗೆ ಮಾಡುವ ಖರ್ಚನ್ನು 320 ಕೋಟಿ ರೂಪಾಯಿಯಿಂದ ಒಂದು ಕೋಟಿ ರೂಪಾಯಿಗೆ ಇಳಿಸಿತು. ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯ ಯೋಜನೆಯ ಯಶಸ್ಸಿನ ಬಳಿಕ ಎನ್‌ಎಸ್‌ಐಜಿಎಸ್‌ಇ ಯೋಜನೆಯನ್ನು ಪರಿಚಯಿಸಲಾಗಿತ್ತು. ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗ (ಒಬಿಸಿ)ಗಳು, ಅಲ್ಪಸಂಖ್ಯಾತ ಸಮುದಾಯಗಳು ಮತ್ತು ಆರ್ಥಿಕವಾಗಿ ದುರ್ಬಲ ಕುಟುಂಬಗಳು ಮುಂತಾದ ಶೋಷಿತ ಸಮುದಾಯಗಳಿಗೆ ಸೇರಿದ ಬಾಲಕಿಯರ 8ನೇ ತರಗತಿಯವರೆಗಿನ ವಸತಿ ಶಾಲೆಗಳಾಗಿದ್ದವು.
ಈ ಶಾಲೆಗಳನ್ನು ದುರ್ಗಮ, ಅಭಿವೃದ್ಧಿ ಕಾಣದ ವಲಯಗಳು/ಹಳ್ಳಿಗಳಲ್ಲಿ ಸ್ಥಾಪಿಸಲಾಗಿತ್ತು. ಎನ್‌ಎಸ್‌ಐಜಿಎಸ್‌ಇ ಮುಂತಾದ ಯೋಜನೆಗಳು ಶೋಷಿತ ಸಮುದಾಯಗಳ ಬಾಲಕಿಯರ ಶಿಕ್ಷಣ ಮತ್ತು ಒಟ್ಟಾರೆ ಸಾಧನೆಗಾಗಿ ಅಗತ್ಯವಾಗಿವೆ. ಇಷ್ಟಾಗಿಯೂ ಎಲ್ಲಾ ಬಾಲಕಿಯರಿಗೆ ಹೈಸ್ಕೂಲ್ ಶಿಕ್ಷಣವನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಅಂಕಿಅಂಶಗಳ ಪ್ರಕಾರ, 2019-20ರ ಶೈಕ್ಷಣಿಕ ವರ್ಷದಲ್ಲಿ, ಕಡ್ಡಾಯ ಪ್ರಾಥಮಿಕ ಶಿಕ್ಷಣ (8ನೇ ತರಗತಿವರೆಗೆ)ದಲ್ಲಿ ಬಾಲಕಿಯರ ಒಟ್ಟು ದಾಖಲಾತಿ ಇಳಿಕೆಯಾಗುತ್ತಿವೆ. ಕೊರೋನ ಮತ್ತು ಲಾಕ್‌ಡೌನ್ ಪರಿಣಾಮವಾಗಿ ಕಳೆದ ಎರಡು ವರ್ಷಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ಮೇಲೆ ಭಾರೀ ದುಷ್ಪರಿಣಾಮಗಳಾಗಿವೆ. ದಲಿತ ಸಮುದಾಯದ ಹೆಣ್ಣು ಮಕ್ಕಳಂತೂ ಶಾಶ್ವತವಾಗಿ ಶಾಲೆಗಳಿಂದ ಹೊರದಬ್ಬಲ್ಪಟ್ಟಿದ್ದಾರೆ. ಇವರನ್ನು ಮತ್ತೆ ಶಾಲೆಗೆ ಕರೆ ತರಬೇಕಾದರೆ ಹೊಸ ಯೋಜನೆಯನ್ನು ಆಂದೋಲನ ರೂಪದಲ್ಲಿ ಜಾರಿಗೊಳಿಸಬೇಕಾಗಿದೆ. ಇಂತಹ ಹೊತ್ತಿನಲ್ಲಿ, ಇರುವ ಯೋಜನೆಯನ್ನೇ ಸರಕಾರ ರದ್ದುಗೊಳಿಸುತ್ತದೆಯೆಂದರೆ, ಶೋಷಿತ ಸಮುದಾಯದ ಹೆಣ್ಣು ಮಕ್ಕಳು ಶಿಕ್ಷಣವನ್ನು ಪಡೆಯುವುದರ ಬಗ್ಗೆಯೇ ಸರಕಾರಕ್ಕೆ ಆಸಕ್ತಿಯಿಲ್ಲ ಎಂದಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಅಲ್ಪಸಂಖ್ಯಾತ, ಶೋಷಿತ ಸಮುದಾಯದ ಹೆಣ್ಣು ಮಕ್ಕಳ ಕಲಿಕೆಗೆ ಸರಕಾರವೇ ವಿವಿಧ ನೆಪಗಳನ್ನು ಮುಂದಿಟ್ಟು ಅಡ್ಡಿ ಮಾಡುತ್ತಿದೆ. ಮುಸ್ಲಿಮ್ ಹೆಣ್ಣು ಮಕ್ಕಳು ಶಾಲೆ, ಕಾಲೇಜುಗಳಲ್ಲಿ ಉನ್ನತ ಸಾಧನೆಗಳನ್ನು ಮಾಡುತ್ತಿರುವ ಹೊತ್ತಿನಲ್ಲೇ ಸಮವಸ್ತ್ರದ ನೆಪವೊಡ್ಡಿ ಅವರನ್ನು ಶಾಲೆಗಳಿಂದ ಬಹಿಷ್ಕರಿಸುವ ಕೆಲಸವನ್ನು ಕರ್ನಾಟಕ ಸರಕಾರ ಮಾಡಿತು. ಇಂದು ಈ ಹೆಣ್ಣು ಮಕ್ಕಳ ಶಾಲಾ ಕಾಲೇಜು ಭವಿಷ್ಯ ನ್ಯಾಯಾಲಯದಲ್ಲಿ ಧೂಳು ತಿನ್ನುತ್ತಿದೆ. ಸರಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುತ್ತಿದ್ದಂತೆಯೇ ಅದರ ನೇರ ಸಂತ್ರಸ್ತರು ಗ್ರಾಮೀಣ ಪ್ರದೇಶದ ಶೋಷಿತ ಸಮುದಾಯದ ಹೆಣ್ಣು ಮಕ್ಕಳು. ಆದರೆ ಈ ಬಗ್ಗೆ ಸರಕಾರಕ್ಕೆ ಯಾವ ಚಿಂತೆಯೂ ಇದ್ದಂತಿಲ್ಲ. ಇದೀಗ ಎನ್‌ಎಸ್‌ಐಜಿಎಸ್‌ಇ ಯೋಜನೆಯನ್ನು ಶಾಶ್ವತವಾಗಿ ರದ್ದು ಮಾಡುವ ಮೂಲಕ ದಲಿತ ಬಾಲಕಿಯರ ಶಿಕ್ಷಣದ ಕುರಿತಂತೆ ತನ್ನ ನಿಲುವೇನು ಎನ್ನುವುದನ್ನು ಸ್ಪಷ್ಟಪಡಿಸಿದೆ. ಒಂದೆಡೆ ದಲಿತ, ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದೇನೆ ಎಂದು ಹೇಳಿಕೊಳ್ಳುತ್ತಿರುವ ಸರಕಾರವೇ ಇನ್ನೊಂದೆಡೆ ದಲಿತ ಬಾಲಕಿಯರ ಶಿಕ್ಷಣಕ್ಕೆ ಕೊಳ್ಳಿ ಇಡಲು ಮುಂದಾಗಿರುವುದು ವಿಪರ್ಯಾಸವಾಗಿದೆ.