ಪಿಂಚಣಿ ಭಿಕ್ಷೆಯಲ್ಲ, ಹಿರಿಯರ ಹಕ್ಕು

Update: 2022-08-08 03:59 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಭಾರತ ಆರ್ಥಿಕವಾಗಿ ಹದಗೆಡುತ್ತಿರುವಂತೆಯೇ ಅದು ಮಕ್ಕಳನ್ನು, ಯುವಕರನ್ನು ಮಾತ್ರವಲ್ಲ ವೃದ್ಧರನ್ನೂ ಬಾಧಿಸತೊಡಗಿದೆ. ಭಾರತದಲ್ಲಿ ವೃದ್ಧರ ಸ್ಥಿತಿ ಈ ಹಿಂದೆಯೇನು ಚೆನ್ನಾಗಿತ್ತು ಎಂದು ಇದರ ಅರ್ಥವಲ್ಲ. ಅವಿಭಕ್ತ ಕುಟುಂಬದಲ್ಲಿ ವೃದ್ಧರು ಹೇಗೋ ಮೂಲೆಯಲ್ಲಿ ಒಂದಿಷ್ಟು ಜಾಗ ಹೊಂದಿಸಿಕೊಂಡು ಶೇಷ ದಿನಗಳನ್ನು ಕಳೆಯುತ್ತಿದ್ದರು. ಆದರೆ ಕುಟುಂಬ ಸಣ್ಣದಾಗುತ್ತಾ ಹೋದಂತೆಯೇ ಹಿರಿಯರು, ವೃದ್ಧರು ಕುಟುಂಬಕ್ಕೆ ಹೊರೆಯಾಗತೊಡಗಿದರು. ನಗರ ಪ್ರದೇಶಗಳಲ್ಲಂತೂ ಹಿರಿಯರ ಸ್ಥಿತಿ ಚಿಂತಾಜನಕವಾಗಿದೆ. ವೃದ್ಧಾಶ್ರಮಗಳು ಅಣಬೆಗಳಂತೆ ತಲೆಯೆತ್ತುತ್ತಿವೆ. ಹಲವು ವೃದ್ಧಾಶ್ರಮಗಳು ಹಣ ಮಾಡುವ ದಂಧೆಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಒಮ್ಮೆ ತಮ್ಮ ಹಿರಿಯರನ್ನು ಈ ವೃದ್ಧಾಶ್ರಮಕ್ಕೆ ತಳ್ಳಿ ಬಿಟ್ಟರೆ, ಮತ್ತೆಂದೂ ಕುಟುಂಬಸ್ಥರು ತಿರುಗಿ ನೋಡುವುದಿಲ್ಲ ಎನ್ನುವುದು ಬಹುತೇಕ ವೃದ್ಧಾಶ್ರಮಗಳ ಅಭಿಮತಗಳಾಗಿವೆ. ಇಂತಹ ಹೊತ್ತಿನಲ್ಲೂ, ಹಲವು ವೃದ್ಧರ ಬದುಕನ್ನು ಒಂದಿಷ್ಟು ಸಹ್ಯವಾಗಿಸಿರುವುದು ಸರಕಾರದಿಂದ ಅವರಿಗೆ ದೊರಕುತ್ತಿರುವ ಪಿಂಚಣಿ. ಆದರೆ ಇತ್ತೀಚಿನ ದಿನಗಳಲ್ಲಿ ಸರಕಾರದ ವೈಫಲ್ಯ, ಈ ಪಿಂಚಣಿಯನ್ನೂ ಅವರ ಕೈಯಿಂದ ಕಿತ್ತುಕೊಳ್ಳುತ್ತಿದೆ. ಸದ್ಯಕ್ಕೆ ಭಾರತದಲ್ಲಿ ಸುಮಾರು ಶೇ.10 ಹಿರಿಯ ವ್ಯಕ್ತಿಗಳು ಮಾತ್ರ ಸೂಕ್ತ ಮೊತ್ತದ ಪಿಂಚಣಿಯನ್ನು ನಿಯಮಿತವಾಗಿ ಪಡೆಯುತ್ತಿದ್ದಾರೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಸರಕಾರಿ ಉದ್ಯೋಗಿಗಳು, ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದವರು ಮತ್ತು ಔಪಚಾರಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರೇ ಈ ಶೇ.10ರ ಫಲಾನುಭವಿಗಳು. ಉಳಿದ ಶೇ.90 ಹಿರಿಯರಿಗೆ ಪಿಂಚಣಿಯೇ ಇಲ್ಲ. ಯಾರಿಗಾದರೂ ಇದ್ದರೂ ಅದು ಅನಿಯಮಿತ, ಅನಿಶ್ಚಿತ ಮತ್ತು ತುಂಬಾ ಕಡಿಮೆ ಮೊತ್ತದ ಪಿಂಚಣಿ.

ಅಸಂಘಟಿತ ಕ್ಷೇತ್ರದ ಕೆಲಸಗಾರರಿಗೆ ಪಿಂಚಣಿ ಕೊಡುವುದು ಮುಖ್ಯವಾಗಿ ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮಗಳು (ಎನ್‌ಎಸ್‌ಎಪಿ). ಅನೌಪಚಾರಿಕ ಕ್ಷೇತ್ರದಲ್ಲಿ ಸುಮಾರು 8.2 ಕೋಟಿ ಹಿರಿಯ ನಾಗರಿಕರಿದ್ದಾರೆ. ಆದರೆ, ಆ ಪೈಕಿ ಕೇವಲ 2.2 ಕೋಟಿ ಮಂದಿಯನ್ನು ತಲುಪುವಲ್ಲಿ ಕೇಂದ್ರ ಸರಕಾರದ ಈ ಕಾರ್ಯಕ್ರಮವು ಯಶಸ್ವಿಯಾಗಿದೆ. ಹಲವು ಅರ್ಹ ಮತ್ತು ಆಯ್ದ ವ್ಯಕ್ತಿಗಳಿಗೆ ಪಿಂಚಣಿಯನ್ನು ಆಧಾರ್ ದಾಖಲೆಗಳ ಲಭ್ಯತೆ, ಅಥವಾ ಇನ್ನಿತರ ತಾಂತ್ರಿಕ ಕಾರಣಗಳನ್ನು ನೀಡಿ ನಿರಾಕರಿಸಲಾಗಿದೆ. ಹಾಗಾಗಿ, ಸುಮಾರು 6 ಕೋಟಿ ಹಿರಿಯ ವ್ಯಕ್ತಿಗಳು ಪಿಂಚಣಿಗಾಗಿ ಈಗಲೂ ಕಾಯುತ್ತಿದ್ದಾರೆ. ಎನ್‌ಎಸ್‌ಎಪಿ ಅಡಿಯಲ್ಲಿ ವಿಧವೆಯರಿಗೆ ಪ್ರತ್ಯೇಕ ಪಿಂಚಣಿ ಯೋಜನೆಗಳಿವೆ. ಈ ಯೋಜನೆಯು ಹಿರಿಯ ನಾಗರಿಕರನ್ನು ಎರಡು ವಯೋಗುಂಪುಗಳಲ್ಲಿ ವಿಂಗಡಿಸುತ್ತದೆ- 60ರಿಂದ 79ರವರೆಗಿನ ವರ್ಷದವರು ಹಾಗೂ 80 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು. 80 ಮತ್ತು ಅದಕ್ಕಿಂತ ಹೆಚ್ಚಿನ ವರ್ಷದವರಿಗೆ ಕೇಂದ್ರ ಸರಕಾರವು ತಿಂಗಳಿಗೆ ರೂ. 500 ಪಿಂಚಣಿ ನೀಡುತ್ತದೆ. ಆದರೆ, ಅತಿ ಹೆಚ್ಚಿನ ಸಂಖ್ಯೆಯ ವಯೋವೃದ್ಧರು ಇರುವುದು 60-79 ವಯೋಗುಂಪಿನಲ್ಲಿ. ಈ ವಯೋ ಗುಂಪಿನವರಿಗೆ ಕೇಂದ್ರ ಸರಕಾರ ನೀಡುವುದು ತಿಂಗಳಿಗೆ ಜುಜುಬಿ 200 ರೂಪಾಯಿ. ಈ 200 ರೂಪಾಯಿಗಾಗಿ ಕುಟುಂಬ ಈ ವೃದ್ಧರನ್ನು ಪ್ರೀತಿ ಪೂರ್ವಕವಾಗಿ ನೋಡುತ್ತದೆ ಎಂದು ಭಾವಿಸಲು ಸಾಧ್ಯವೆ? ಅಥವಾ ಈ ಹಣದಿಂದ ವೃದ್ಧರು ಸ್ವಾವಲಂಬಿಯಾಗಿ ಬದುಕಲು ಸಾಧ್ಯವೆ?

ಇಂದು ಹಿರಿಯ ಅಧಿಕಾರಿಗಳು ಮತ್ತು ರಾಜಕಾರಣಿಗಳ ಆದಾಯವು ನಿಯಮಿತವಾಗಿ ಅಗಾಧ ಪ್ರಮಾಣದಲ್ಲಿ ಏರುತ್ತಿವೆ; ದೇಶದಲ್ಲಿರುವ ಬಿಲಿಯಾಧೀಶರ ಸಂಖ್ಯೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಆದರೆ ರೈತರಾಗಿ ಮತ್ತು ಕಾರ್ಮಿಕರಾಗಿ ಬೆಳಗ್ಗಿನಿಂದ ರಾತ್ರಿಯವರೆಗೆ ಕನಿಷ್ಠ ನಾಲ್ಕು ದಶಕಗಳ ಕಾಲ ಬೆವರು ಸುರಿಸಿ ಈ ನಾಡನ್ನು ಕಟ್ಟಿ ಬೆಳೆಸಿದ ಹೆಚ್ಚಿನ ಹಿರಿಯರಿಗೆ ಕೇಂದ್ರ ಸರಕಾರ ನೀಡುತ್ತಿರುವುದು ತಿಂಗಳಿಗೆ ಜುಜುಬಿ 200 ರೂಪಾಯಿ. ಈ ಪಿಂಚಣಿ ಮೊತ್ತವನ್ನು ಸುಮಾರು ಒಂದು ದಶಕದ ಹಿಂದೆ ನಿಗದಿಪಡಿಸಲಾಗಿತ್ತು. ಪಿಂಚಣಿ ಮೊತ್ತವನ್ನು ಹೆಚ್ಚಿಸಬೇಕೆಂದು ಹಲವು ಪ್ರತಿಭಟನೆಗಳು ನಡೆದರೂ ಸರಕಾರ ಅವುಗಳಿಗೆ ಕಿವುಡಾಗಿದೆ. ಇಂದಿನ ಬೆಲೆಗಳ ಮಟ್ಟಕ್ಕೆ ಹೋಲಿಸಿದರೆ, ಈ 200 ರೂಪಾಯಿ ಮೊತ್ತದ ವೌಲ್ಯ ಸುಮಾರು 85 ರೂಪಾಯಿಗೆ ಕುಸಿದಿದೆ.

 ಈ ಯೋಜನೆಯಲ್ಲಿ, ಕೇಂದ್ರ ಸರಕಾರ ನೀಡುವ ಈ ಮೊತ್ತಕ್ಕೆ ರಾಜ್ಯ ಸರಕಾರವು ಸಾಮಾನ್ಯವಾಗಿ ತನ್ನ ಪಾಲನ್ನು ಸೇರಿಸುತ್ತದೆ. ಗೋವಾ, ಕೇರಳ ಮತ್ತು ದಿಲ್ಲಿಯಂಥ ಕೆಲವು ಸಣ್ಣ ರಾಜ್ಯಗಳಲ್ಲಿ, ರಾಜ್ಯ ಸರಕಾರಗಳು ಆಯ್ದ ಹಿರಿಯರಿಗೆ ಗಮನಾರ್ಹ ಪ್ರಮಾಣದ ಪಾಲನ್ನು ನೀಡುತ್ತವೆ. ಹಾಗಾಗಿ, ಈ ರಾಜ್ಯಗಳಲ್ಲಿ, ಇತರ ರಾಜ್ಯಗಳಿಗೆ ಹೋಲಿಸಿದರೆ ಆಯ್ದ ಹಿರಿಯರು ಹೆಚ್ಚಿ ನ ಮೊತ್ತದ ಪಿಂಚಣಿಗಳನ್ನು ಪಡೆಯುತ್ತಾರೆ. ಹಿರಿಯರ ಜನಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಇರುವ ಹಲವು ರಾಜ್ಯಗಳಲ್ಲಿ, ರಾಜ್ಯ ಸರಕಾರಗಳ ಪಾಲು ಕೂಡ ತುಂಬಾ ಕಡಿಮೆ ಇರುತ್ತದೆ. ಉದಾಹರಣೆಗೆ; ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಬಿಹಾರಗಳಲ್ಲಿ, ಈ ಯೋಜನೆಯ ಅಡಿಯಲ್ಲಿ ನೀಡುವ ಪಿಂಚಣಿಯು ರಾಜ್ಯ ಸರಕಾರಗಳ ಪಾಲನ್ನು ಸೇರಿಸಿದ ಬಳಿಕವೂ ತೀರಾ ನಿಕೃಷ್ಟ ಮೊತ್ತವನ್ನು ಒಳಗೊಂಡಿದೆ.

ಒಂದು ಕಡೆ, ಸುಮಾರು 6 ಕೋಟಿ ಹಿರಿಯರು ಯಾವುದೇ ಪಿಂಚಣಿ ಪಡೆಯುತ್ತಿಲ್ಲ, ಇನ್ನೊಂದು ಕಡೆ, ಪಿಂಚಣಿ ಪಡೆಯುವಲ್ಲಿ ಯಶಸ್ವಿಯಾಗಿರುವವರಲ್ಲಿ ಹೆಚ್ಚಿನವರು ಜುಜುಬಿ ಮೊತ್ತವನ್ನು ಪಡೆಯುತ್ತಿದ್ದಾರೆ. ಅದೂ ಕೂಡ ಸರಿಯಾದ ಸಮಯದಲ್ಲಿ ಅವರಿಗೆ ಲಭಿಸುತ್ತಿಲ್ಲ. ಅಲ್ಲದೆ, ಈ ಹಿರಿಯರ ಪೈಕಿ ಹೆಚ್ಚಿನವರು ತಮ್ಮ ಈ ಪಿಂಚಣಿಗಳನ್ನು ಪಡೆದುಕೊಳ್ಳುವುದಕ್ಕಾಗಿ ಭಾರೀ ಶ್ರಮ ಪಡಬೇಕಾಗುತ್ತದೆ, ಕಚೇರಿಗಳಿಗೆ ಅಲೆದಾಡ ಬೇಕಾಗುತ್ತದೆ. ಮತ್ತು ಹಲವು ಸಂದರ್ಭಗಳಲ್ಲಿ ಹಣವನ್ನೂ ವೆಚ್ಚ ಮಾಡಬೇಕಾಗುತ್ತದೆ. ಆಧಾರ್ ಮತ್ತು ಬಯೋಮೆಟ್ರಿಕ್ಸ್ ಆಧಾರಿತ ಗುರುತು ಪದ್ಧತಿಯನ್ನು ಜಾರಿಗೆ ತಂದ ಬಳಿಕ ಅವರ ಸಮಸ್ಯೆ ಮತ್ತಷ್ಟು ಹೆಚ್ಚಿದೆ. ಈಗ ಅಸ್ತಿತ್ವದಲ್ಲಿರುವ ಕುಂದು ಕೊರತೆ ನಿವಾರಣಾ ವ್ಯವಸ್ಥೆಯು ಹಲವು ನ್ಯೂನತೆಗಳನ್ನು ಹೊಂದಿದೆ. ಈ ವ್ಯವಸ್ಥೆಯಲ್ಲಿ, ದೂರುಗಳನ್ನು ಸಲ್ಲಿಸಿ ಅದಕ್ಕೆ ಪರಿಹಾರ ಪಡೆಯುವುದು ಹಿರಿಯ ವ್ಯಕ್ತಿಗಳಿಗೆ ಅಸಾಧ್ಯದ ಮಾತು. ಹಲವು ಸಂದರ್ಭಗಳಲ್ಲಿ ಹಿರಿಯ ವ್ಯಕ್ತಿಗಳ ಪಿಂಚಣಿಗಳನ್ನು ಸ್ವೇಚ್ಛಾನುಸಾರ ನಿಲ್ಲಿಸಲಾಗುತ್ತದೆ ಹಾಗೂ ಅವುಗಳನ್ನು ನವೀಕರಿಸಲು ವೃದ್ಧರು ಕಚೇರಿಯಿಂದ ಕಚೇರಿಗೆ ಅಲೆದಾಡಬೇಕಾಗುತ್ತದೆ ಎನ್ನುವ ಆರೋಪಗಳಿವೆ. ಇದಕ್ಕೆ ಒಂದು ನ್ಯಾಯೋಚಿತ ಪರಿಹಾರವೆಂದರೆ, ಕನಿಷ್ಠ ಸರಕಾರಿ ವೇತನದ ಅರ್ಧದಷ್ಟನ್ನು ಎಲ್ಲ ಹಿರಿಯ ನಾಗರಿಕರಿಗೆ ಪಿಂಚಣಿಯಾಗಿ ನೀಡುವುದು.

ಪ್ರಸಕ್ತ ಆರ್ಥಿಕ ಮುಗ್ಗಟ್ಟಿನ ಸಂದರ್ಭದಲ್ಲಿ ಇದು ನ್ಯಾಯಯುತ ಮೊತ್ತವಾಗಿದೆ. ಅಗಾಧ ಸಂಪತ್ತು ಮತ್ತು ಆದಾಯ ಇರುವ ವರ್ಗವನ್ನು ಹೊರತುಪಡಿಸಿ ಈ ಪಿಂಚಣಿಯನ್ನು ನಿಶ್ಶರ್ತವಾಗಿ ಎಲ್ಲಾ ಹಿರಿಯ ನಾಗರಿಕರಿಗೂ ನೀಡಬೇಕು. ಕನಿಷ್ಠ ವೇತನವು ದಿನಕ್ಕೆ 300 ರೂಪಾಯಿ ಆಗಿದ್ದರೆ, ಓರ್ವ ವೃದ್ಧ ವ್ಯಕ್ತಿಯು ತಿಂಗಳಿಗೆ 4,500 ರೂ. ಮತ್ತು ವೃದ್ಧ ದಂಪತಿ 9,000 ರೂಪಾಯಿ ಪಿಂಚಣಿ ಪಡೆಯುವಂತಾಗಬೇಕು. ಇದಕ್ಕೆ ಬೇಕಾದ ಇಚ್ಛಾಶಕ್ತಿಯನ್ನು ತನ್ನದಾಗಿಸಿಕೊಳ್ಳಬೇಕಾದರೆ ಮೊತ್ತಮೊದಲು ಪಿಂಚಣಿ ಕುರಿತಂತೆ ಸರಕಾರ ತನ್ನ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕು. ಪಿಂಚಣಿ, ವೃದ್ಧರಿಗೆ ನೀಡುವ ಭಿಕ್ಷೆಯಲ್ಲ. ಪಿಂಚಣಿ ಈ ದೇಶದ ಹಿರಿಯರ ಹಕ್ಕು. ಈ ಹಿರಿಯರೇ ದೇಶವನ್ನು ಕಟ್ಟಿ ಬೆಳೆಸಿದವರು. ದೇಶಕ್ಕಾಗಿ ತಮ್ಮ ಬೆವರನ್ನು ಸುರಿಸಿದವರು. ತಮ್ಮ ಬದುಕಿನುದ್ದಕ್ಕೂ ತೆರಿಗೆಗಳನ್ನು ಕಟ್ಟಿ, ಸರಕಾರಕ್ಕೆ ಸಹಾಯವಾದವರು. ಇಳಿ ವಯಸ್ಸಿನಲ್ಲಿ ಅವರ ಬದುಕಿನ ಕುರಿತಂತೆ ಕಾಳಜಿ ವಹಿಸುವುದು ಸರಕಾರದ ಹೊಣೆಗಾರಿಕೆಯಾಗಿದೆ. ಇಂದು ಯುವಕರಾಗಿದ್ದವರು ನಾಳೆ ವೃದ್ಧರಾಗುವ ದಿನ ಬರಲಿದೆ. ಯುವಕರು ತಮ್ಮ ಹಿರಿಯರಿಗಾಗಿ ಯೋಗ್ಯ ಪಿಂಚಣಿ ದೊರಕಲು ಹೋರಾಟಕ್ಕಿಳಿದರೆ, ಮುಂದೊಂದು ದಿನ ಅವರಿಗೂ ಅದು ನೆರವಾಗಲಿದೆ ಎನ್ನುವ ದೂರದೃಷ್ಟಿ ಇಂದಿನ ಯುವ ಜನತೆಯಲ್ಲಿರಬೇಕು. ಹಳೆ ಬೇರು, ಹೊಸ ಚಿಗುರು ಜೊತೆಗಿದ್ದರೆ ಮಾತ್ರ ವೃಕ್ಷಕ್ಕೆ ಭವಿಷ್ಯ. ಭಾರತವೆನ್ನುವ ವೃಕ್ಷ ಇಂದು ಉಳಿದಿರುವುದು ಈ ಹಿರಿಯರಿಂದ ಎನ್ನುವ ವಿವೇಕ ನಮ್ಮನ್ನಾಳುವವರಲ್ಲಿ ಇದ್ದಾಗ, ಈ ಹಿರಿಯರಿಗೆ ಪಿಂಚಣಿ ನೀಡುವುದಕ್ಕೆ ಯಾವುದೇ ಆರ್ಥಿಕ ಅಡಚಣೆಗಳು ಎದುರಾಗಲಾರದು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News