ಮಳೆ ಸಂತ್ರಸ್ತರ ನೆರವಿಗೆ ಬನ್ನಿ

Update: 2022-08-09 03:59 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಅನೇಕ ಕಡೆ ಭೂ ಕುಸಿತ ಉಂಟಾಗಿ ಸಾಕಷ್ಟು ನಷ್ಟವಾಗಿದೆ. ನದಿಗಳು ಮತ್ತು ಹಳ್ಳಗಳು ತುಂಬಿ ಹರಿಯುತ್ತಿವೆ. ಅಪಾರ ಪ್ರಮಾಣದ ಹಾನಿ ಮತ್ತು ಸಾವು, ನೋವುಗಳುಂಟಾಗಿರುವುದನ್ನು ಸರಕಾರವೂ ಒಪ್ಪಿಕೊಂಡಿದೆ. ಕಂದಾಯ ಮಂತ್ರಿ ಆರ್. ಅಶೋಕ್ ಈ ಕುರಿತು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ. ಸಚಿವರು ಬಿಡುಗಡೆ ಮಾಡಿದ ಅಂಕಿ ಅಂಶಗಳಿಗಿಂತ ಹೆಚ್ಚು ಪ್ರಮಾಣದ ಹಾನಿಯುಂಟಾಗಿರುವುದು ಕಂಡು ಬರುತ್ತಿದೆ.

ಮಳೆ ಮತ್ತು ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಲು ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ ಸಾಕಷ್ಟು ಹಣವಿದೆ, ಪರಿಹಾರ ಕಾರ್ಯಕ್ಕೆ ತೊಂದರೆಯಾಗುವುದಿಲ್ಲ ಎಂದು ಮಂತ್ರಿಗಳು ಹೇಳಿದ್ದಾರೆ. ಆದರೆ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣವಿದ್ದ ಮಾತ್ರಕ್ಕೆ ಬೀದಿಗೆ ಬಿದ್ದಿರುವ ಜನಸಾಮಾನ್ಯರ ಸಮಸ್ಯೆಗಳು ಬಗೆಹರಿಯುತ್ತವೆಂದಲ್ಲ. ಜನರಿಗೆ ತಕ್ಷಣಕ್ಕೆ ಅವಶ್ಯವಿರುವ ಪರಿಹಾರ, ಆಶ್ರಯ, ಆಹಾರ, ಬಟ್ಟೆ, ಮಕ್ಕಳ ಓದಿಗೆ ಅಗತ್ಯವಿರುವ ಸೌಕರ್ಯ ಇವುಗಳನ್ನು ಸಕಾಲದಲ್ಲಿ ಒದಗಿಸಲು ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಯಬೇಕು. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಸ್ವತಃ ಪ್ರವಾಹ ಪೀಡಿತ ಪ್ರದೇಶಗಳಿಗೆ ಹೋಗಿ ಪರಿಹಾರ ಕಾರ್ಯದ ಉಸ್ತುವಾರಿ ವಹಿಸಿಕೊಂಡರೆ ಮಾತ್ರ ಪ್ರಯೋಜನವಾಗುತ್ತದೆ.ಕೇವಲ ಅಧಿಕಾರಿಗಳ ಮೇಲೆ ಬಿಟ್ಟರೆ ಕಾಟಾಚಾರದ ಕೆಲಸಗಳಾಗುತ್ತವೆ.

ಈ ಹಿಂದೆ 2019ರಲ್ಲಿ ಇದೇ ರೀತಿ ವರ್ಷಧಾರೆ ಮತ್ತು ನೆರೆ ಹಾವಳಿ ಉಂಟಾದಾಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರಿಗೆ ಮಂತ್ರಿ ಮಂಡಲ ವಿಸ್ತರಣೆ ಮಾಡಲು ದಿಲ್ಲಿಯ ಬಿಜೆಪಿಯ ವರಿಷ್ಠ ನಾಯಕತ್ವ ಅವಕಾಶ ನೀಡಿರಲಿಲ್ಲ. ಆಗ ಕೈ ಚೆಲ್ಲಿ ಕುಳಿತುಕೊಳ್ಳದ ಯಡಿಯೂರಪ್ಪನವರು ಏಕಾಂಗಿಯಾಗಿ ದಣಿವರಿಯದೆ ರಾಜ್ಯವನ್ನು ಸುತ್ತಾಡಿ ಪ್ರವಾಹ ಪರಿಹಾರ ಕಾರ್ಯ ಸುಗಮವಾಗಿ ನಡೆಯುವಂತೆ ನೋಡಿಕೊಂಡಿದ್ದರು. ದಕ್ಷ ನೋಡಲ್ ಅಧಿಕಾರಿಗಳನ್ನು ನೇಮಿಸಿ ನೊಂದವರಿಗೆ ತೊಂದರೆಯಾಗದಂತೆ ನೋಡಿಕೊಂಡಿದ್ದರು. ಇಂತಹ ಪರಿಸ್ಥಿತಿ ನಿರ್ಮಾಣವಾದಾಗ ಉಸ್ತುವಾರಿ ಮಂತ್ರಿಗಳು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ವಾಸ್ತವ್ಯ ಮಾಡಬೇಕು. ಆದರೆ ಈ ಸಲ ಉಸ್ತುವಾರಿ ಮಂತ್ರಿಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತಂಗಿ ಪರಿಹಾರ ಕಾರ್ಯಗಳಲ್ಲಿ ಪಾಲ್ಗೊಂಡಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್.ಅಶೋಕ್ ಅವರೇನೋ ಕೆಲವೆಡೆ ಭೇಟಿ ನೀಡಿದ್ದಾರೆ. ಆದರೆ ಒಮ್ಮೆ ಬಂದು ಹೋಗುವುದರಿಂದ ಜನರ ಸಮಸ್ಯೆಗಳು ಬಗೆಹರಿಯುವುದಿಲ್ಲ.

ರಾಜ್ಯದ ಬಿಜೆಪಿ ಸರಕಾರಕ್ಕೆ ಲವ್ ಜಿಹಾದ್, ಹಿಜಾಬ್, ಮತಾಂತರ ಮುಂತಾದ ಭಾವನಾತ್ಮಕ, ಪ್ರಚೋದನಕಾರಿ ವಿಷಯಗಳ ಬಗ್ಗೆ ಇರುವ ಆಸಕ್ತಿ ಮಳೆ ಹಾನಿ ಹಾಗೂ ಪ್ರವಾಹದಂತಹ ವಿಷಯಗಳ ಬಗ್ಗೆ ಇರುವುದು ಕಂಡು ಬರುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕೇಂದ್ರದ ನೆರವಿಗೆ ಆಗ್ರಹಪಡಿಸಬೇಕು.ಮಳೆ ಮತ್ತು ನೆರೆ ಹಾವಳಿ ಹೊಸದಲ್ಲ. ಪ್ರತೀ ವರ್ಷ ಮಳೆಗಾಲದಲ್ಲಿ ಈ ಸಮಸ್ಯೆ ಉದ್ಭವಿಸುತ್ತದೆ. ಸರಕಾರದ ಅಂದಾಜಿನಂತೆ 2019ರಿಂದ 2021 ರವರೆಗೆ ಮೂರು ವರ್ಷಗಳ ಕಾಲಾವಧಿಯಲ್ಲಿ ಮಳೆ- ಪ್ರವಾಹದಿಂದ ಆಗಿರುವ ನಷ್ಟ 2 ಲಕ್ಷ ಕೋಟಿ ರೂಪಾಯಿ. ಇಂತಹ ಸಂದರ್ಭದಲ್ಲಿ ಕೇಂದ್ರ ಸರಕಾರ ನೆರವಿಗೆ ಬರಬೇಕು. ರಾಷ್ಟ್ರೀಯ ವಿಪತ್ತು ಪರಿಹಾರ ಮಾರ್ಗ ಸೂಚಿಯ ಪ್ರಕಾರ ನೀಡಬೇಕಾದ ನೆರವನ್ನು ಕೇಂದ್ರ ಸರಕಾರ ನೀಡಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಸಂಕಷ್ಟಗಳಿಗೆ ನೆರವಾಗಬೇಕಾದ ಕೇಂದ್ರ ಸರಕಾರ ಕಾಟಾಚಾರದ ಅಲ್ಪಮೊತ್ತದ ಪರಿಹಾರ ನೀಡಿ ಹೊಣೆ ಜಾರಿಸಿಕೊಳ್ಳುತ್ತಲೇ ಬಂದಿದೆ.

 ವಾಸ್ತವವಾಗಿ ಕೃಷಿ ಉತ್ಪನ್ನ ಹಾಗೂ ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಳಿತ ಆಧರಿಸಿ ಕೇಂದ್ರ ಸರಕಾರ ಐದು ವರ್ಷಗಳಿಗೊಮ್ಮೆ ರಾಜ್ಯಗಳಿಗೆ ನೀಡುವ ಪರಿಹಾರದ ಮೊತ್ತವನ್ನು ಪರಿಷ್ಕರಿಸಬೇಕು. ಇದರ ಪ್ರಕಾರ 2015ರಲ್ಲಿ ಪರಿಷ್ಕಾರಗೊಂಡು ನಿಗದಿಯಾಗಿದ್ದ ದರ 2020ಕ್ಕೆ ಪರಿಷ್ಕಾರವಾಗಬೇಕಾಗಿತ್ತು. ಈ ಅವಧಿ ಮುಗಿದು ಎರಡು ವರ್ಷಗಳಾದರೂ ಕೇಂದ್ರ ಸರಕಾರ ಪರಿಹಾರ ಮೊತ್ತವನ್ನು ಪರಿಷ್ಕರಿಸಲು ಆಸಕ್ತಿ ತೋರಿಸುತ್ತಿಲ್ಲ.

ಪರಿಹಾರ ಮೊತ್ತವನ್ನು ಪರಿಷ್ಕರಿಸದಿರುವ ಕೇಂದ್ರ ಸರಕಾರದ ನೀತಿಯಿಂದಾಗಿ ರಾಜ್ಯ ಸರಕಾರ ಸಾಲದ ಸುಳಿಗೆ ಸಿಲುಕಿದೆ. ಸಾಲದ ಮೊತ್ತ ಹೆಚ್ಚಾಗುತ್ತಲೇ ಇದೆ. 15ನೇ ಹಣಕಾಸು ಆಯೋಗದ ಪ್ರಾಥಮಿಕ ವರದಿಯಲ್ಲಿ ಕರ್ನಾಟಕವು ಪ್ರವಾಹ ಪೀಡಿತ ರಾಜ್ಯಗಳಲ್ಲಿ ಒಂದಾಗಿದೆ ಎಂದು ಉಲ್ಲೇಖಿಸಲಾಗಿದೆ.ಅನುದಾನ ನೀಡುವಾಗ ಹೆಚ್ಚಿನ ಆದ್ಯತೆಯನ್ನು ನೀಡಬೇಕೆಂದು ತಿಳಿಸಲಾಗಿದೆ.ಆದರೆ ಇದು ಕಾಗದದಲ್ಲಿ ಮಾತ್ರ ಉಳಿದಿದೆ. ನೈಸರ್ಗಿಕ ವಿಕೋಪ ಮತ್ತು ಇತರ ಖರ್ಚು ವೆಚ್ಚಗಳಿಗಾಗಿ 5,495 ಕೋಟಿ ರೂಪಾಯಿ ನೆರವು ನೀಡಬೇಕೆಂದು ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ ಸೂಚಿಸಲಾಗಿದೆ. ಆದರೆ ಅಂತಿಮ ವರದಿಯಲ್ಲಿ ಇದು ಕಣ್ಮರೆಯಾಗಿದೆ.

ರಾಜ್ಯದ ಪ್ರವಾಹ ಪೀಡಿತ ಜನರಿಗೆ ಪರಿಹಾರ ಕೊಡಿಸುವ ಹೊಣೆಗಾರಿಕೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರದಾಗಿದೆ. ಆದ ಅವರು ಆಸಕ್ತಿ ತೋರಿಸುತ್ತಿಲ್ಲ. ರಾಜ್ಯದ ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳು ಹಾಗೂ ಆಡಳಿತ ಪಕ್ಷದ ನೇತಾರರು ಮತ್ತು ಕೇಂದ್ರ ಸಂಪುಟದಲ್ಲಿ ಇರುವ ರಾಜ್ಯದ ಮಂತ್ರಿಗಳು ಗಟ್ಟಿಯಾದ ಧ್ವನಿಯಲ್ಲಿ ಕೇಳಿದರೆ ಮಾತ್ರ ರಾಜ್ಯಕ್ಕೆ ಸೂಕ್ತ ನೆರವು ಬರಬಹುದು. ರಾಜ್ಯದ ಪ್ರತಿಪಕ್ಷ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೆರವಿಗಾಗಿ ಕೇಂದ್ರದ ಮೇಲೆ ಒತ್ತಡ ತರಲು ರಾಜ್ಯ ಸರಕಾರ ಮುಂದಾಗಬೇಕು.

ಮಳೆಗಾಲ ಬಂದರೆ, ಕರ್ನಾಟಕದ ಉಳಿದ ಕಡೆ ನೆರೆ ಹಾವಳಿ ಉಂಟಾದರೆ ಮಲೆನಾಡಿನ ಪಶ್ಚಿಮ ಘಟ್ಟ ಸಾಲಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಭೂ ಕುಸಿತ ಪದೇ ಪದೇ ಸಂಭವಿಸುತ್ತದೆ. ಅದರಲ್ಲೂ ಶಿರಾಡಿ, ಚಾರ್ಮಾಡಿ, ಆಗುಂಬೆ ಘಾಟಿ, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಭೂ ಕುಸಿತದ ವರದಿಗಳು ಬರುತ್ತಲೇ ಇವೆ.

 ಭೂ ಕುಸಿತಕ್ಕೆ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳೇ ಕಾರಣ ಎಂದು ತಜ್ಞರ ಸಮಿತಿಯೂ ಹೇಳಿದೆ. ಹಾಗಾಗಿ ಸರಕಾರ ಲಂಗು ಲಗಾಮಿಲ್ಲದ ಗಣಿಗಾರಿಕೆ ಮತ್ತು ಪರಿಸರ ಮಾರಕ ಅಭಿವೃದ್ಧಿ ಚಟುವಟಿಕೆಗಳಿಗೆ ಕಡಿವಾಣ ಹಾಕಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News