​ಹಾವಿಗೆ ಆಹಾರವಾಗುವ ಮುನ್ನವೇ ಎಚ್ಚೆತ್ತುಕೊಂಡ ಬಿಹಾರ

Update: 2022-08-10 07:48 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಹಾವು ಮತ್ತು ಕಪ್ಪೆ ಅದೆಷ್ಟು ಸೌಹಾರ್ದ ಜೀವನ ನಡೆಸಿದರೂ, ಒಂದಲ್ಲ ಒಂದು ದಿನ ಕಪ್ಪೆಗಳು ಹಾವಿಗೆ ಆಹಾರವಾಗಲೇ ಬೇಕು. ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿ ಪ್ರಾದೇಶಿಕ ಪಕ್ಷದ ಜೊತೆಗೆ ಸಂಗ ಬೆಳೆಸಿತು ಎಂದರೆ ಶೀಘ್ರದಲ್ಲೇ ಆ ಪ್ರಾದೇಶಿಕ ಪಕ್ಷವನ್ನು ಬಿಜೆಪಿ ಆಹುತಿ ತೆಗೆದುಕೊಳ್ಳಲಿದೆ ಎಂದರ್ಥ. ಬಾಲ ಬಿಚ್ಚುವುದಕ್ಕೆ ಅಸಾಧ್ಯವಾಗಿರುವ ರಾಜ್ಯಗಳಲ್ಲಿ ಬಿಜೆಪಿ ಪ್ರಾದೇಶಿಕ ಪಕ್ಷಗಳ ಜೊತೆಗೆ ಮೈತ್ರಿಯನ್ನು ಮುಂದಿಡುತ್ತದೆ. ನಿಧಾನಕ್ಕೆ ಅಲ್ಲಿ ತನ್ನ ವರ್ಚಸ್ಸನ್ನು ಬೆಳೆಸುತ್ತಾ, ಪ್ರಾದೇಶಿಕ ಪಕ್ಷವನ್ನು ನುಂಗಿ, ಅದರ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತದೆ. ಮಹಾರಾಷ್ಟ್ರದಲ್ಲಿ ಶಿವಸೇನೆಯ ನೆರಳಲ್ಲಿ ಬೆಳೆದ ಬಿಜೆಪಿ ಅಂತಿಮವಾಗಿ ಆ ಪಕ್ಷಕ್ಕೆ ಯಾವ ಗತಿ ತಂದಿಟ್ಟಿತು ಎನ್ನುವುದನ್ನು ನೋಡಿದ್ದೇವೆ. ಕರ್ನಾಟಕದಲ್ಲೂ, ಜೆಡಿಎಸ್ ಎನ್ನುವ ಪಕ್ಷದ ನೆರವಿನಿಂದಲೇ ಬಿಜೆಪಿ ಅಧಿಕಾರ ಹಿಡಿಯಿತು. ತಮಿಳು ನಾಡನ್ನು ನುಂಗಿ ಹಾಕಲು, ಅಲ್ಲಿನ ಸ್ಥಳೀಯ ಪಕ್ಷದ ಜೊತೆಗೆ ರಾಜಕೀಯ ತಂತ್ರಗಾರಿಕೆಯನ್ನು ನಡೆಸುತ್ತಿದೆ. ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯುವನ್ನು ಬಳಸಿಕೊಂಡು, ಪೂರ್ಣ ಪ್ರಮಾಣದಲ್ಲಿ ಅಧಿಕಾರ ಹಿಡಿಯಬೇಕು ಎನ್ನುವಷ್ಟರಲ್ಲಿ ನಿತೀಶ್ ಎಚ್ಚೆತ್ತುಕೊಂಡಿದ್ದಾರೆ. ಬಿಜೆಪಿಯ ಬಗ್ಗೆ ನಿತೀಶ್ ಕುಮಾರ್ ಅಮಾಯಕರೇನೂ ಅಲ್ಲ. ಈ ಹಿಂದೆ ಎನ್‌ಡಿಎ ತ್ಯಜಿಸಿದಾಗಲೇ ನಿತೀಶ್ ಅವರು, ಮೋದಿ ನೇತೃತ್ವದ ಬಿಜೆಪಿಯ ಅಪಾಯಗಳನ್ನು ಮನಗಂಡಿದ್ದರು.

2013ರಲ್ಲಿ ಮೋದಿ ನೇತೃತ್ವದಲ್ಲಿ ಬಿಹಾರದ ಪಾಟ್ನಾದಲ್ಲಿ 'ಹೂಂಕಾರ್ ರ್ಯಾಲಿ'ಯೊಂದು ನಡೆಯಿತು. ಇದನ್ನು ನಿತೀಶ್ ಅವರು ಸ್ಪಷ್ಟ ಧ್ವನಿಯಲ್ಲಿ ಪ್ರತಿರೋಧಿಸಿದ್ದರು. ''ಹೂಂಕಾರದ ಅರ್ಥವೇನು? ಹೂಂಕಾರವೆಂದರೆ ಗರ್ವ, ಅಹಂಕಾರವಾಗಿದೆ. ನಾವು ಒಂದಾಗಿ ಹೋಗಬೇಕೆಂದು ಬಯಸಿದೆವು. ಆದರೆ ನೀವು ಹೂಂಕರಿಸಿದಿರಿ'' ಎಂದು ಹೂಂಕಾರ್ ರ್ಯಾಲಿಗೆ ಪ್ರತಿಕ್ರಿಯಿಸಿದ್ದರು. ವಿಪರ್ಯಾಸವೆಂದರೆ, ಅದೇ ಅಹಂಕಾರದ ಗೂಳಿಯ ಜೊತೆಗೆ 2020ರಲ್ಲಿ ಮರಳಿ ಮೈತ್ರಿಯನ್ನು ಮಾಡಿಕೊಂಡರು. ಹಲವು ಜನಪರವಾದ ಕಾರ್ಯಕ್ರಮಗಳ ಮೂಲಕ ಉತ್ತಮ ಮುಖ್ಯಮಂತ್ರಿಯಾಗಿ ಗುರುತಿಸಲ್ಪಟ್ಟಿದ್ದ ನಿತೀಶ್ ಕುಮಾರ್, ಹೇಗಾದರೂ ಸರಿ, ಚುನಾವಣೆಯಲ್ಲಿ ಗೆಲ್ಲಲೇಬೇಕು ಎನ್ನುವ ಅನಿವಾರ್ಯಕ್ಕೆ ಬಿದ್ದು ಬಿಜೆಪಿಯೊಂದಿಗೆ ಸ್ನೇಹಕ್ಕೆ ಹಸ್ತ ಚಾಚಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಕಾಏಕಿ ನಿತೀಶ್ ಹಿಂದೆ ಸರಿದು, ಬಿಹಾರದಲ್ಲಿ ನರೇಂದ್ರ ಮೋದಿ ಮುನ್ನೆಲೆಗೆ ಬಂದರು. ಜೆಡಿಯುಗಿಂತ ಬಿಜೆಪಿ ಅಧಿಕ ಸ್ಥಾನಗಳನ್ನು ತನ್ನದಾಗಿಸಿಕೊಂಡಿತು. ಬಿಹಾರದ ಮುಖ್ಯಮಂತ್ರಿ ಸ್ಥಾನವನ್ನು ಭಿಕ್ಷೆಯಂತೆ ನಿತೀಶ್ ಅವರಿಗೆ ನೀಡಲಾಯಿತು. ಯಾವ ಮೋದಿಯವರನ್ನು ನಿತೀಶ್ ಕುಮಾರ್ 'ದುರಹಂಕಾರಿ' ಎಂದು ಕರೆದಿದ್ದರೋ, ಅದೇ ಮೋದಿಯ ಮುಂದೆ ನಡುಬಗ್ಗಿಸಿ ನಿಂತುಕೊಳ್ಳಬೇಕಾದ ಪರಿಸ್ಥಿತಿಯನ್ನು ನಿತೀಶ್ ತಾವಾಗಿಯೇ ಆಹ್ವಾನಿಸಿಕೊಂಡರು. ಏಕಾಏಕಿ ನಿತೀಶ್ ಅವರನ್ನು ಬದಿಗೆ ಸರಿಸಿ, ಬಿಹಾರದ ಚುಕ್ಕಾಣಿಯನ್ನು ಕೈಗೆ ತೆಗೆದುಕೊಳ್ಳುವುದು ಬಿಜೆಪಿಗೆ ಸಾಧ್ಯವಿರಲಿಲ್ಲ. ಮೈತ್ರಿ ಆರಂಭದಲ್ಲೇ ಮುರಿದು ಬೀಳುವ ಅಪಾಯವಿತ್ತು. ಈ ಕಾರಣದಿಂದಲೇ, ಅಧಿಕ ಸ್ಥಾನ ಪಡೆದುಕೊಂಡರೂ ನಿತೀಶ್‌ರನ್ನೇ ಮುಖ್ಯಮಂತ್ರಿಯಾಗಿಸುವ ಧಾರಾಳತನವನ್ನು ತೋರಿಸಿತು. ಆದರೆ ಮಹಾರಾಷ್ಟ್ರದಲ್ಲಿ ನಡೆದ ವಿದ್ಯಮಾನ ಬಿಹಾರ ಬಿಜೆಪಿಯ ತಲೆಕೆಡಿಸಿದೆ.

ಜೆಡಿಯುಗಿಂತ ಅಧಿಕ ಸ್ಥಾನಗಳನ್ನು ಗಳಿಸಿದ್ದರೂ ಮುಖ್ಯಮಂತ್ರಿಯಾಗಲು ಸಾಧ್ಯವಾಗದ ಅಸಹಾಯಕತೆ ಅಲ್ಲಿನ ನಾಯಕರನ್ನು ಚಡಪಡಿಸುವಂತೆ ಮಾಡಿದೆ. ನಿತೀಶ್ ಇರುವವರೆಗೆ ಆ ಸ್ಥಾನವನ್ನು ತನ್ನದಾಗಿಸುವ ಕನಸು ನನಸಾಗುವುದಿಲ್ಲ ಎನ್ನುವುದು ಅದಕ್ಕೆ ಮನವರಿಕೆಯಾಗಿದೆ. ಆದುದರಿಂದ, ನಿಧಾನಕ್ಕೆ ಜೆಡಿಯು ಶಾಸಕರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನವನ್ನು ಬಿಜೆಪಿ ಒಳಗೊಳಗೆ ಮಾಡುತ್ತಾ ಬಂದಿತ್ತು. 'ತನ್ನದು ಹಾವಿನ ಜೊತೆಗಿನ ಸಂಗ' ಎನ್ನುವ ಅರಿವು ನಿತೀಶ್ ಕುಮಾರ್ ಅವರಿಗೂ ಇತ್ತು. ಆದುದರಿಂದಲೇ ಆಗಾಗ ತನ್ನ ಸೆಕ್ಯುಲರ್ ನೀತಿಗಳ ಮೂಲಕ ಬಿಜೆಪಿಗೆ ಕಿರಿಕಿರಿಯುಂಟು ಮಾಡುತ್ತಾ ಬಂದಿದ್ದರು. 'ಜಾತಿ ಗಣತಿ'ಯ ಕುರಿತಂತೆ ಸ್ಪಷ್ಟ ಬೆಂಬಲವನ್ನು ಘೋಷಿಸಿದ್ದರು. ಬಿಹಾರದಲ್ಲಿ ಜಾತಿ ಗಣತಿ ನಡೆಸುವುದರ ಬಗ್ಗೆ ಅವರು ಅತ್ಯಾಸಕ್ತರಾಗಿದ್ದರು. ಇದು ಮಿತ್ರ ಪಕ್ಷವಾಗಿರುವ ಬಿಜೆಪಿಗೆ ನುಂಗಲಾರದ ತುತ್ತಾಗಿತ್ತು. ಕೆಲವು ತಿಂಗಳಿಂದ ಬಿಜೆಪಿ ಮತ್ತು ಜೆಡಿಯು ನಡುವಿನ ಸಂಬಂಧ ತೀರಾ ಹಳಸಿತ್ತು. ಇತ್ತೀಚೆಗೆ ಎರಡು ಪ್ರಮುಖ ಸಭೆಗೆ ನಿತೀಶ್ ಕುಮಾರ್ ಗೈರಾಗುವ ಮೂಲಕ ತನ್ನ ಅಸಮಾಧಾನವನ್ನು ಹೊರಗೆಡಹಿದ್ದರು. ಇನ್ನೇನು ಆಪರೇಷನ್ ಕಮಲ ಬಿಹಾರದಲ್ಲಿ ಆರಂಭವಾಗಬೇಕು ಎನ್ನುವಷ್ಟರಲ್ಲಿ ನಿತೀಶ್ ಕುಮಾರ್ ಮೈತ್ರಿಯಿಂದ ಹೊರ ಬಂದಿದ್ದಾರೆ. ಇದೀಗ ನಿತೀಶ್‌ರನ್ನು 'ಸಮಯ ಸಾಧಕ, ವಚನ ಭ್ರಷ್ಟ' ಎಂಬಿತ್ಯಾದಿಯಾಗಿ ಬಿಜೆಪಿ ನಿಂದಿಸುತ್ತಿದೆ.

ಜೆಡಿಯು ದ್ರೋಹ ಬಗೆಯಿತು ಎಂದು ಟೀಕಿಸುವ ಯಾವ ನೈತಿಕ ಹಕ್ಕನ್ನೂ ಬಿಜೆಪಿ ಉಳಿಸಿಕೊಂಡಿಲ್ಲ. ಇಡೀ ದೇಶ ಕೊರೋನದಿಂದ ತತ್ತರಿಸುತ್ತಿರುವ ಕಾಲದಲ್ಲಿ ಮಧ್ಯಪ್ರದೇಶದಲ್ಲಿ ತಾನು ಏನು ಮಾಡಿದೆ ಎನ್ನುವುದನ್ನು ಒಮ್ಮೆ ಬಿಜೆಪಿ ನೆನೆದುಕೊಳ್ಳಲಿ. ಕೊರೋನ, ಲಾಕ್‌ಡೌನ್ ಸಂತ್ರಸ್ತರಿಗೆ ಪರಿಹಾರ ನೀಡಲು ಸರಕಾರದ ಬಳಿ ಹಣವಿರಲಿಲ್ಲ. ಆದರೆ ಒಂದು ಪಕ್ಷದ ಶಾಸಕರನ್ನು ಕೋಟಿ ಕೋಟಿ ರೂಪಾಯಿ ಕೊಟ್ಟು ಕೊಂಡುಕೊಳ್ಳಲು ಅದರ ಬಳಿ ಹಣವಿತ್ತು. ಆ ಹಣದ ರಾಶಿಗಳ ಮೇಲೆ ಬಿಜೆಪಿ ತನ್ನ ಸರಕಾರವನ್ನು ನಿಲ್ಲಿಸಿತು. ಮಹಾರಾಷ್ಟ್ರದಲ್ಲಿ ಇದು ಮುಂದುವರಿಯಿತು. ಶಿವಸೇನೆಯನ್ನು ಒಡೆದು, ಅಲ್ಲಿರುವ ಒಂದು ಬಣವನ್ನು ಹಣದಿಂದ ಕೊಂಡು ಕೊಂಡು ಸರಕಾರ ರಚನೆ ಮಾಡಿತು. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಹಿಡಿದಿರುವುದು ಹೇಗೆ ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ. ಅಧಿಕಾರಕ್ಕಾಗಿ ಎಂತಹ ಮಟ್ಟಕ್ಕೂ ಇಳಿಯಬಲ್ಲೆ ಎನ್ನುವುದನ್ನು ಪದೇ ಪದೇ ಬಿಜೆಪಿ ಸಾಬೀತು ಮಾಡುತ್ತಾ ಬಂದಿದೆ. ಹೀಗಿರುವಾಗ ನಿತೀಶ್ ಅವರು ಬಿಜೆಪಿಯನ್ನು ಯಾವ ಧೈರ್ಯದಿಂದ ನಂಬಬೇಕು? ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆಗೆ ಆದುದು ಬಿಹಾರದಲ್ಲಿ ನಿತೀಶ್‌ಗೆ ಆಗಬಾರದು ಯಾಕೆ? ಬಿಜೆಪಿ ಆ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುತ್ತಿತ್ತು ಎನ್ನುವ ಆರೋಪವಿದೆ. ಜೆಡಿಯು ನಾಯಕ ಆರ್.ಸಿ.ಪಿ. ಸಿಂಗ್‌ನ್ನು ಬಳಸಿಕೊಂಡು ಬಿಜೆಪಿಯು ಜೆಡಿಯುನಲ್ಲಿ ನಿಯಂತ್ರಣ ಸಾಧಿಸುವ ಪ್ರಯತ್ನ ನಡೆಸುತ್ತಿತ್ತು ಮತ್ತು ಶೀಘ್ರದಲ್ಲೇ ಮಹಾರಾಷ್ಟ್ರದಲ್ಲಿ ಸಂಭವಿಸಿದ್ದು, ಬಿಹಾರದಲ್ಲಿ ಸಂಭವಿಸುವ ಅಪಾಯವಿತ್ತು . ಈ ಕಾರಣದಿಂದ ನಿತೀಶ್ ಅವರು ಬಿಜೆಪಿಯ ಮೈತ್ರಿಯಿಂದ ಹಿಂದೆ ಸರಿಯುವುದು ಅನಿವಾರ್ಯವಾಗಿತ್ತು. ಒಂದು ರೀತಿಯಲ್ಲಿ ಬಿಜೆಪಿಯ 'ದುರಹಂಕಾರ'ಕ್ಕೆ ನಿತೀಶ್ ಸರಿಯಾದ ಪಾಠವನ್ನೇ ಕಲಿಸಿದ್ದಾರೆ.

ಇದೀಗ ಬಿಹಾರದಲ್ಲಿ ಆರ್‌ಜೆಡಿ ಮತ್ತು ಜೆಡಿಯು ಒಂದಾಗಿ ಸರಕಾರ ರಚನೆ ಮಾಡುವ ಸಿದ್ಧತೆ ನಡೆಯುತ್ತಿದೆ. ಈ ಮೈತ್ರಿ ಯಶಸ್ವಿಯಾದರೆ ಭಾರತದ ಮುಂದಿನ ಲೋಕಸಭಾ ಚುನಾವಣೆಯ ಮೇಲೂ ತನ್ನ ಪರಿಣಾಮ ಬೀರುವ ಸಾಧ್ಯತೆಗಳಿವೆ. ಆದುದರಿಂದ ಸದ್ಯದ ಬೆಳವಣಿಗೆ ಕೇವಲ ಬಿಹಾರಕ್ಕಷ್ಟೇ ಸೀಮಿತವಾಗಿಲ್ಲ. ದೇಶದ ರಾಜಕೀಯಕ್ಕೆ ತಿರುವು ಕೊಡುವ ಶಕ್ತಿ ಈ ಬೆಳವಣಿಗೆಗಳಿಗಿದೆ. ಬಿಹಾರದಲ್ಲಿ ಆರ್‌ಜೆಡಿ ಮತ್ತು ಜೆಡಿಯು ಒಂದಾಗಿ ಲೋಕಸಭಾ ಚುನಾವಣೆಯನ್ನು ಎದುರಿಸಿದ್ದೇ ಆದರೆ ಭವಿಷ್ಯದಲ್ಲಿ ನಿತೀಶ್ ಕುಮಾರ್ ಅವರು ಪರ್ಯಾಯ ಶಕ್ತಿಯೊಂದರ ನೇತಾರನಾಗಿ ಹೊರ ಹೊಮ್ಮಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News