ಸಮಾಜ ಸೇವೆಯೇ ಧರ್ಮವೆಂದ ನುಲಿಯ ಚಂದು

Update: 2022-08-12 05:51 GMT

ಇಂದುನುಲಿಯ ಚಂದಯ್ಯ ಜಯಂತಿ. ಆ ಪ್ರಯುಕ್ತ ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ರಂಜಾನ್ ದರ್ಗಾ ಅವರ ‘ದಾಸೋಹ ಜ್ಞಾನಿ ನುಲಿಯ ಚಂದಯ್ಯ’ ಸಂಶೋಧನಾ ಗ್ರಂಥವನ್ನು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಬಿಡುಗಡೆ ಮಾಡಲಿದ್ದಾರೆ. 

 ಭಾರತದಲ್ಲಿ ಜನಿಸಿದ ಮೊದಲ ಏಕದೇವೋಪಾಸನೆಯ ಧರ್ಮ ಎಂದರೆ ಲಿಂಗಾಯತ ಧರ್ಮ. 12ನೇ ಶತಮಾನದಲ್ಲಿ ಬಸವಾದಿ ಪ್ರಮಥರು ಮೊದಲು ಮಾಡಿ 770 ಅಮರಗಣಗಳಿಂದ ಈ ಧರ್ಮದ ಸ್ಥಾಪನೆಯಾಗಿದೆ. ಅವರಲ್ಲಿ ನುಲಿಯ ಚಂದಯ್ಯನವರು ಕೂಡ ಒಬ್ಬ ಗಣನಾಯಕರಾಗಿದ್ದಾರೆ. ಈ ಅಮರಗಣಗಳಲ್ಲಿನ 16 ಶರಣರನ್ನು ಷೋಡಶವೀರರೆಂದು ಕರೆಯಲಾಗಿದೆ. ಅವರಲ್ಲಿ ನುಲಿಯ ಚಂದಯ್ಯನವರೂ ಒಬ್ಬರಾಗಿದ್ದಾರೆ. ನುಲಿಯ ಕಾಯಕ ಮಾಡುತ್ತಿದ್ದುದರಿಂದ ಅವರು ಕುಳುವ ಸಮಾಜಕ್ಕೆ ಸೇರಿದವರು. ಕೊರಮ, ಕೊರಚ, ಕೊರವ, ಭಜಂತ್ರಿ ಮುಂತಾದ ಹೆಸರುಗಳಿಂದ ಈ ಸಮಾಜವನ್ನು ಕರೆಯಲಾಗುತ್ತಿದೆ. ಈ ಸಮಾಜದವರು ತಮಿಳಿಗೆ ಸಮೀಪವಾದ ಕುಳುವ (ಕುಳಿರ್) ಭಾಷೆಯನ್ನು ಆಡುವುದರಿಂದ ಒಟ್ಟಾರೆಯಾಗಿ ಕುಳುವ ಸಮಾಜದವರೆಂದು ಗುರುತಿಸುವುದು ಯೋಗ್ಯವಾಗಿದೆ. ಕುಳುವರು ವಿವಿಧ ಕಾಯಕಗಳಲ್ಲಿ ಪರಿಣತರಿದ್ದಾರೆ. ಬಿದಿರುಬುಟ್ಟಿ, ಚಂದ್ರಿಕೆ, ಬಿದರಿನ ಆಲಂಕಾರಿಕ ವಸ್ತುಗಳು, ತಟ್ಟಿ, ಈಚಲುಬುಟ್ಟಿ, ಪೊರಕೆ, ಚಾಪೆ, ಗಿಲಕಿ, ತೊಟ್ಟಿಲು, ಏಣಿ, ಮೊರ, ಮೆದೆಹುಲ್ಲಿನ ಕಣ್ಣಿ, ಹಗ್ಗ ತಯಾರಿಸುವುದು, ಚಿಂದಿ ಆಯುವುದು, ಹಂದಿ ಸಾಕುವುದು, ತಲೆಗೂದಲು ಸಂಗ್ರಹಿಸುವುದು, ಹಚ್ಚೆ ಹಾಕುವುದು, ಪಾತ್ರೆ, ಬಟ್ಟೆ, ಬೀದಿಬದಿ ಬಾಚಣಿಕೆ, ಕನ್ನಡಿ, ಬೀಗ ಮುಂತಾದ ವಸ್ತುಗಳ ಮಾರಾಟ ಮಾಡುವುದು, ಬಾಜಾಭಜಂತ್ರಿ, ಮಂಗಳವಾದ್ಯ (ಸನಾದಿ) ನುಡಿಸುವುದು, ಗಾಯನ, ನೃತ್ಯದ ಮೂಲಕ ಮನರಂಜನೆ ನೀಡುವುದು, ನೇಕಾರರಿಗೆ ಬೇಕಾದ ಕುಂಚಿಗಳನ್ನು ಕಟ್ಟಿ ಮಾರುವುದು, ಕಣಿ ಹೇಳುವುದು, ಮೋಡಿ ಆಟ, ಕೋಲೆಬಸವ, ಹಾವು ಆಡಿಸುವುದು ಮುಂತಾದ ಕಾಯಕಗಳನ್ನು ಮಾಡುತ್ತಾರೆ. ಇಷ್ಟೊಂದು ವೈವಿಧ್ಯಮಯವಾದ ಕಾಯಕಗಳನ್ನು ಮಾಡುವ ಇನ್ನೊಂದು ಸಮಾಜ ಕಂಡುಬಂದಿಲ್ಲ.

ನುಲಿಯ ಚಂದಯ್ಯನವರು ಕೈಕಾಣ್ಯ ದೇಶದ ಅರಸರಾಗಿದ್ದರು ಎಂದು ಕಾಡಸಿದ್ಧೇಶ್ವರರು ತಮ್ಮ ವಚನವೊಂದರಲ್ಲಿ ಹೇಳಿದ್ದಾರೆ. ವಿವಿಧ ವಿದ್ವಾಂಸರ ಲೆಕ್ಕಾಚಾರದಿಂದಾಗಿ ಇವರ ಕಾಲಾವಧಿ 14ನೇ ಶತಮಾನದಿಂದ 18ನೇ ಶತಮಾನದವರೆಗೆ ಹರಿದಾಡುತ್ತಿದೆ. ಕಾಡಸಿದ್ಧೇಶ್ವರರು ಈ ವಚನದಲ್ಲಿ ಮುಖ್ಯವಾದ ಮಾತೊಂದನ್ನು ಹೇಳುತ್ತಾರೆ. ಅನೇಕರು ಹೀಗೆ ತಮ್ಮ ವೈಭವವನ್ನು ಬಿಟ್ಟು ಬಸವಣ್ಣನವರ ಸಿದ್ಧಾಂತವನ್ನು ಮೆಚ್ಚಿ ಬಂದವರೆಂದು ತಿಳಿಸುತ್ತಾರೆ.

 ಆ ಕಾಲದಲ್ಲಿ ಕೈಕಾಣ್ಯ ದೇಶವೆಂಬ ಪುಟ್ಟ ಪಾಳೆಯಪಟ್ಟವೊಂದು ತಮಿಳುನಾಡು ಪ್ರದೇಶದಲ್ಲಿ ಇದ್ದಿರಬಹುದು. ಕುಳುವ ಭಾಷೆಯ ಹಿನ್ನೆಲೆಯಲ್ಲಿ ಹೀಗೆ ತರ್ಕಿಸಬಹುದು. ಆದರೆ ಈ ಕುರಿತು ಬೇರೆ ಯಾವುದೇ ದಾಖಲೆ ಸಿಗುವುದಿಲ್ಲ. ನುಲಿಯ ಚಂದಯ್ಯನವರು ವೀರಪುರುಷರೂ ತತ್ತ್ವಬದ್ಧರೂ ಸಮಾಜದಲ್ಲಿ ದೇವರನ್ನು ಕಾಣುವವರೂ ಆಗಿದ್ದರು ಎಂಬುದನ್ನು ಅವರ ಸಮಕಾಲೀನ ಅನೇಕ ಶರಣರು ಗುರುತಿಸಿದ್ದಾರೆ.

 ಶಿವಣಗಿ: ವಿಜಯಪುರ ನಗರದಿಂದ 30 ಕಿಲೋ ಮೀಟರ್ ದೂರದಲ್ಲಿ, ಕಲ್ಯಾಣದ ಕಡೆಗೆ ಹೋಗುವ ದಾರಿಯಲ್ಲಿರುವ ಶಿವಣಗಿ ಗ್ರಾಮದಲ್ಲಿ ನುಲಿಯ ಚಂದಯ್ಯನವರು ಇದ್ದ ಬಗ್ಗೆ ಐತಿಹ್ಯಗಳಿವೆ. ಅಲ್ಲಿ ಚಿಕ್ಕದಾದ ಕಲ್ಲುಮಂಟಪವಿದ್ದು ಒಳಗೆ ಸ್ಥಾವರಲಿಂಗವಿದೆ. ಕುಳುವ ಸಮಾಜದವರು ಜನರ ಮತ್ತು ಸರಕಾರದ ಸಹಾಯದೊಂದಿಗೆ ಪಕ್ಕದಲ್ಲೇ ನುಲಿಯ ಚಂದಯ್ಯನವರ ತೋರುಗದ್ದುಗೆ ನಿರ್ಮಿಸಿದ್ದಾರೆ. ಗರ್ಭಗುಡಿಯಲ್ಲಿ ಚಂದಯ್ಯನವರ ಹಗ್ಗ ಹೊಸೆಯುವ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಚಂದಯ್ಯನವರು ಕಲ್ಯಾಣಕ್ಕೆ ಹೋಗುವ ಮೊದಲು ಬೇರೆ ಕಡೆಯಿಂದ ಬಂದು ಇಲ್ಲಿ ನೆಲೆಸಿರಬಹುದು.

ಕಲ್ಯಾಣ:

 ಬಸವಣ್ಣನವರಿಂದಾಗಿ ಕಲ್ಯಾಣದಲ್ಲಿ ವರ್ಗ, ವರ್ಣ, ಜಾತಿ, ಅಸ್ಪಶ್ಯತೆ ಮತ್ತು ಲಿಂಗಭೇದಗಳಿಲ್ಲದ ಹಾಗೂ ಕರ್ಮಸಿದ್ಧಾಂತವನ್ನು ಅಲ್ಲಗಳೆದು ಕಾಯಕ ಸಿದ್ಧಾಂತದ ಮೇಲೆ ರೂಪುಗೊಳ್ಳುತ್ತಿರುವ ನವಸಮಾಜವೊಂದರ ನಿರ್ಮಾಣವಾಗುತ್ತಿತ್ತು. ಈ ಆಕರ್ಷಣೆಯಿಂದಾಗಿಯೇ ಚಂದಯ್ಯನವರು ಎಲ್ಲ ಬಿಟ್ಟು ಕಲ್ಯಾಣಕ್ಕೆ ಬಂದು ನುಲಿಯ ಕಾಯಕವನ್ನು ಮುಂದುವರಿಸಿದರು. ಭಾರತೀಯ ಸಮಾಜ ಕನ್ನಡದ ನೆಲದಲ್ಲಿ ಮೊದಲ ಬಾರಿಗೆ ಕಾಯಕದ ಮಹತ್ವವನ್ನು ಅರಿತ ಸಮಯವದು. ಪ್ರತಿಯೊಬ್ಬ ಕಾಯಕಜೀವಿ ತನ್ನ ಕೌಶಲದ ಬಗ್ಗೆ ಹೆಮ್ಮೆಪಟ್ಟ ಕ್ಷಣವದು. ಇತರ ಕಾಯಕಜೀವಿಗಳ ಮಹತ್ವವನ್ನು ಅರಿತುಕೊಂಡ ಕಾಲವದು.

 ಇಂತಹ ಅಗಾಧವಾದ ಪ್ರಭಾವದೊಂದಿಗೆ ನುಲಿಯ ಚಂದಯ್ಯನವರು ರಾಜಧಾನಿ ಕಲ್ಯಾಣವನ್ನು ಸೇರಿ, ಕಾಯಕದ ಅನುಭವದ ಮೂಲಕ ಅನುಭವ ಮಂಟಪದ ಚರ್ಚೆಯಲ್ಲಿ ಭಾಗವಹಿಸುತ್ತ ಅನುಭಾವದ ಮಟ್ಟಕ್ಕೆ ಏರುವ ಸಾಧನೆ ಮಾಡಿದರು. ಹೀಗೆ ಅನುಭವ ಮಂಟಪದಲ್ಲಿ ಕಾಯಕ ಜೀವಿಗಳ ಅನುಭವದ ಮೂಲಕ ಲಿಂಗವಂತ ಧರ್ಮದ ಅನುಭಾವ ಎಂಬ ತತ್ವಜ್ಞಾನ ಜಗತ್ತಿಗೆ ಲಭಿಸಿತು. ಇದು ನುಲಿಯ ಚಂದಯ್ಯನವರಲ್ಲಿ ಅಪೂರ್ವವಾದ ಬದಲಾವಣೆ ತಂದಿತು.

ನುಲಿಯ ಚಂದಯ್ಯನವರು ಚಂದೇಶ್ವರಲಿಂಗ ವಚನಾಂಕಿತದೊಂದಿಗೆ ಬರೆದ 49 ವಚನಗಳು ಸಿಕ್ಕಿವೆ. ಅವುಗಳಲ್ಲಿ 27 ವಚನಗಳನ್ನು ಶೂನ್ಯಸಂಪಾದನೆಯಲ್ಲಿ ಬಳಸಿಕೊಳ್ಳಲಾಗಿದೆ.

 ಕಲ್ಯಾಣ ಹತ್ಯಾಕಾಂಡ: ಕಲ್ಯಾಣದಲ್ಲಿ ಸರ್ವರೀತಿಯಿಂದಲೂ ಸಮಾನತೆ ಸಾಧಿಸುತ್ತ ವೈಚಾರಿಕ ನೆಲೆಯಲ್ಲಿ ಹೊಸ ಸಮಾಜವೊಂದರ ನಿರ್ಮಾಣವಾಗುತ್ತಿತ್ತು. ಅನುಭವ ಮಂಟಪದಂಥ ಸಮಾಜೋ ಧಾರ್ಮಿಕ ಸಂಸತ್ತಿನ ನಿರ್ಮಾಣವಾಗಿತ್ತು. ಎಲ್ಲ ತಳಸಮುದಾಯಗಳಿಂದ ಬಂದ 770 ಪುರುಷರು ಮತ್ತು ಮಹಿಳೆಯರು ಈ ಸಂಸತ್ತಿನ ಸದಸ್ಯರಾಗಿ ಅಮರಗಣಂಗಳು ಎನಿಸಿದರು. ಅವರಲ್ಲಿ ಅಲ್ಲಮಪ್ರಭುಗಳು, ಬಸವಣ್ಣನವರು, ಅಕ್ಕನಾಗಮ್ಮ, ಚನ್ನಬಸವಣ್ಣ, ಅಕ್ಕಮಹಾದೇವಿ, ಸಿದ್ಧರಾಮ ಮತ್ತು ಮಡಿವಾಳ ಮಾಚಿದೇವರು ಸಪ್ತಗಣಾಧೀಶರೆನಿಸಿದರು. ಅಲ್ಲಮಪ್ರಭುಗಳು ಅನುಭವ ಮಂಟಪದ ಸಭಾಧ್ಯಕ್ಷರಾಗಿ ಶೂನ್ಯಸಿಂಹಾಸನದಲ್ಲಿ ಕಂಗೊಳಿಸಿದರು. ವಚನ ಚಳವಳಿಯ ಗಾಳಿ ಎಲ್ಲೆಡೆ ಬೀಸತೊಡಗಿತು. ದಲಿತರು, ಹಿಂದುಳಿದವರು, ಮಹಿಳೆಯರು ಬಸವಣ್ಣನವರ ಕೃಪೆಯಿಂದ ನವಸಾಕ್ಷರರಾಗಿ ಸಮಾಜ ಪರಿವರ್ತನೆಯ ವಚನ ಚಳವಳಿಯಲ್ಲಿ ತೊಡಗಿದರು. ಅವರು ಬರೆದ ವಚನಗಳಿಗೆ ಆಕರ್ಷಿತರಾಗಿ, ನವಸಮಾಜದ ನಿರ್ಮಾಣಕ್ಕಾಗಿ ಲಕ್ಷದ ಮೇಲೆ ತೊಂಭತ್ತಾರು ಸಾವಿರ ಕಾಯಕಜೀವಿಗಳು ಬಂದು ಶರಣಸಂಕುಲದ ಭಾಗವಾದರು.

ಅಭಿವ್ಯಕ್ತಿ ಸ್ವಾತಂತ್ರ್ಯದ ಹೊಸ ವಾತಾವರಣದಲ್ಲಿ ಕಾಯಕಜೀವಿಗಳು ಜಾತಿಸಂಕರಗೊಂಡು ದುಡಿಯುವ ವರ್ಗವಾಗಿ ರೂಪುಗೊಂಡಿದ್ದಕ್ಕೆ ಮನುವಾದಿ ಪಟ್ಟಭದ್ರ ಹಿತಾಸಕ್ತಿಗಳು ಭಯಪಟ್ಟವು. ಬ್ರಾಹ್ಮಣ ಮೂಲದ ಮಧುವರಸ ಮತ್ತು ಸಮಗಾರ ಮೂಲದ ಹರಳಯ್ಯನವರು ಜಾತಿ, ಕುಲ ಮತ್ತು ವರ್ಣ ತೊರೆದು ಇಷ್ಟಲಿಂಗ ದೀಕ್ಷೆ ಪಡೆದು ಲಿಂಗವಂತರಾಗಿದ್ದರು. ಮಧುವರಸರ ಮಗಳು ಲಾವಣ್ಯ ಮತ್ತು ಹರಳಯ್ಯನವರ ಮಗ ಶೀಲವಂತನ ಮದುವೆ ಜಾತಿ ಕುಲಗಳಿಲ್ಲದ ಲಿಂಗಾಯತ ಧರ್ಮದ ಪ್ರಕಾರ ನಡೆಯಿತು. ಆದರೆ ಮನುವಾದಿಗಳು ಇದು ಧರ್ಮಬಾಹಿರವಾದ ವಿಲೋಮ ವಿವಾಹ. ಬ್ರಾಹ್ಮಣ ಕನ್ಯೆ ಮತ್ತು ಸಮಗಾರ ವರ ಮದುವೆಯಾಗುವುದು ಧರ್ಮಕ್ಕೆ ಮಾಡುವ ಅಪಮಾನ. ಬಿಜ್ಜಳರಾಯ ಧರ್ಮ ರಕ್ಷಣೆ ಮಾಡಬೇಕು. ರಾಜಧರ್ಮ ಪಾಲಿಸಬೇಕು ಎಂದು ಹುಯಿಲೆಬ್ಬಿಸಿದರು. ಮನುವಾದಿಗಳು ಹೇಳಿದಂತೆ ಕೇಳುವ ಸ್ಥಿತಿ ಬಿಜ್ಜಳನಿಗಾಯಿತು. ಶಾಸ್ತ್ರಗಳು ಹೇಳಿದಂತೆ ಶಸ್ತ್ರಗಳು ಕೇಳಿದವು. ಹರಳಯ್ಯ ಮಧುವರಸರಿಗೆ ಎಳೆಹೂಟಿ ಶಿಕ್ಷೆ ನೀಡಿ ಕೊಲ್ಲಲಾಯಿತು. ಸೈನಿಕ ಕಾರ್ಯಾಚರಣೆಯಲ್ಲಿ ಅನೇಕ ಶರಣರ ಕೊಲೆಗಳಾದವು. ಅವರ ವಚನಕಟ್ಟುಗಳು ಬೆಂಕಿಗೆ ಆಹುತಿಯಾಗತೊಡಗಿದವು. ಲಕ್ಷದ ಮೇಲೆ ತೊಂಭತ್ತಾರು ಸಾವಿರ ಶರಣರು ದಿಕ್ಕಾಪಾಲಾಗಿ ಹೋದರು.

ಉಳವಿಯ ಕಡೆಗೆ: ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದರಿಂದ ಅಳಿದುಳಿದ ವಚನಕಟ್ಟುಗಳನ್ನಾದರೂ ಉಳಿಸಿಕೊಳ್ಳುವುದಕ್ಕಾಗಿ ಒಂದು ಶರಣರ ಗುಂಪು ಅಕ್ಕನಾಗಮ್ಮ, ಚನ್ನಬಸವಣ್ಣ, ಮಡಿವಾಳ ಮಾಚಿದೇವ ಮುಂತಾದ ಶರಣರ ನೇತೃತ್ವದಲ್ಲಿ ವಚನಕಟ್ಟುಗಳನ್ನು ಹೊತ್ತುಕೊಂಡು ಉಳವಿಯ ಕಡೆಗೆ ಹೊರಟಿತು. ಉಳವಿ ತಲುಪಿದ ಕೆಲ ಕಾಲದ ನಂತರ ಚನ್ನಬಸವಣ್ಣನವರು ಲಿಂಗೈಕ್ಯರಾದರು. ತದನಂತರ ನುಲಿಯ ಚಂದಯ್ಯನವರು ಅಕ್ಕನಾಗಮ್ಮನವರ ಜೊತೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಗೋಣಿಬೀಡು ಗ್ರಾಮದಲ್ಲಿ ಭದ್ರಾನದಿಯ ಎಡದಂಡೆಯಲ್ಲಿರುವ ಶೀಲಸಂಪಾದನಾ ಮಠಕ್ಕೆ ಹೋದರು. ಅಲ್ಲಿನ ಸಿದ್ಧವೀರಸ್ವಾಮಿಗಳು ಇವರನ್ನು ಬರಮಾಡಿಕೊಂಡರು. ಅಕ್ಕನಾಗಮ್ಮ, ನುಲಿಯ ಚಂದಯ್ಯ ಮತ್ತು ಅವರ ಜೊತೆಗಿದ್ದ ಶರಣರು ಬಹಳ ದಿನಗಳವರೆಗೆ ಅಲ್ಲಿ ಇದ್ದು ಶರಣಧರ್ಮ ಪ್ರಸಾರ ಮಾಡಿದರು.

ಎಣ್ಣೆಹೊಳೆ: ನಂತರ ಅಕ್ಕನಾಗಮ್ಮ, ನುಲಿಯ ಚಂದಯ್ಯ ಮುಂತಾದವರು ತರೀಕೆರೆ ಪಟ್ಟಣಕ್ಕೆ ಹೊಂದಿಕೊಂಡಿರುವ ಎಣ್ಣೆಹೊಳೆ ಪ್ರದೇಶದಲ್ಲಿರುವ ಶೀಲಸಂಪಾದನಾ ಶಾಖಾ ಮಠಕ್ಕೆ ಬಂದು ನೆಲೆಸಿದರು. ಅಲ್ಲಿಯೇ ಅಕ್ಕನಾಗಮ್ಮನವರು ಲಿಂಗೈಕ್ಯರಾದರು. ಅಲ್ಲಿ ಅವರ ಸಮಾಧಿ ಇದೆ.

 ನಂತರ ನುಲಿಯ ಚಂದಯ್ಯನವರು ಸಿದ್ಧವೀರಸ್ವಾಮಿಗಳ ಜೊತೆ ಸಮೀಪದ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಹೋಬಳಿಯಲ್ಲಿರುವ ನಂದಿ ಎಂಬ ಗ್ರಾಮದಲ್ಲಿ ಉಳಿದುಕೊಂಡರು. ನಂದಿ ಕ್ಷೇತ್ರದಲ್ಲಿ ಪ್ರತೀವರ್ಷ ದಸರಾ ಹಬ್ಬದಲ್ಲಿ ಒಂಭತ್ತು ದಿನಗಳವರೆಗೆ ಶಿವಶರಣ ಕಾಯಕಶೀಲ ಶ್ರೀ ನುಲಿಯ ಚಂದಯ್ಯನವರ ದಾಸೋಹ ಮತ್ತು ಸಿದ್ಧೇಶ್ವರಸ್ವಾಮಿ ಜಾತ್ರಾ ಮಹೋತ್ಸವ ನಡೆಯುತ್ತದೆ.

 ಸಿದ್ಧೇಶ್ವರಸ್ವಾಮಿಗಳು ಲಿಂಗೈಕ್ಯವಾದ ನಂತರ ನುಲಿಯ ಚಂದಯ್ಯನವರು ಕಲ್ಲತ್ತಗಿರಿಗೆ ಬರುವರು. ಅಲ್ಲಿಂದ ಮುಂದೆ ಧರ್ಮಪ್ರಸಾರಕ್ಕಾಗಿ ದೊಡ್ಡಬಳ್ಳಾಪುರ ಮುಂತಾದ ಕಡೆ ಸಂಚರಿಸಿ ಚೆನ್ನಗಿರಿ ತಾಲೂಕು ಬೆಂಕಿಕೆರೆ ಮಾರ್ಗವಾಗಿ ಶಾಂತಿಸಾಗರದ ಕಡೆಗೆ ಬರುವಾಗ, ಶಾಂತಿಸಾಗರ (ಸೂಳೆಕೆರೆ) ಬಳಿ ದುಮ್ಮಿಯ ಪಾಳೆಯಗಾರ ದುಮ್ಮಣ್ಣ ನಾಯಕರ ಭೇಟಿಯಾಗುತ್ತದೆ. ರಾಣಿ ಪದ್ಮಾವತಿಯ ಜೊತೆ ಅವರು ಕೆರೆಯ ಜೀರ್ಣೋದ್ಧಾರ ಕಾರ್ಯವನ್ನು ವೀಕ್ಷಿಸುತ್ತಿದ್ದರು. ಮಾತುಕತೆ ಸಂದರ್ಭದಲ್ಲಿ ಚಂದಯ್ಯನವರ ಶರಣ ತತ್ವದ ವಿಚಾರಧಾರೆಯಿಂದಾಗಿ ರಾಣಿ ಪದ್ಮಾವತಿಯ ಮನ ಪರಿವರ್ತನೆಯಾಗಿ ಲಿಂಗದೀಕ್ಷೆ ಪಡೆಯುತ್ತಾಳೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ತಮ್ಮ ರಾಜಧಾನಿ ದುಮ್ಮಿಯಲ್ಲಿ ಚಂದಯ್ಯನವರಿಗೆ ಆಶ್ರಯ ನೀಡುತ್ತಾಳೆ.

 ಚಂದಯ್ಯನವರು ಕೆಲ ಸಮಯ ದುಮ್ಮಿಯ ಅರಮನೆಯಲ್ಲಿ ಉಳಿಯುವರು. ಆದರೆ ಅವರಿಗೆ ಅರಮನೆಯ ವ್ಯವಸ್ಥೆ ಹಿಡಿಸಲಿಲ್ಲ. ತಮ್ಮ ಕಣ್ಣಿ ಹೊಸೆಯುವ ಕಾಯಕದ ಕಚ್ಚಾವಸ್ತುವಾದ ಮೆದೆಹುಲ್ಲು ಸಿಗುವ ಸ್ಥಳ ಬೇಕಾಗಿತ್ತು. ಆಗ ರಾಣಿ ಪದ್ಮಾವತಿ, ದುಮ್ಮಿಯಿಂದ ಐದು ಮೈಲಿ ದೂರದಲ್ಲಿರುವ ತನ್ನ ತವರೂರಾದ ಪದ್ಮಾವತಿ ಪಟ್ಟಣಕ್ಕೆ ಚಂದಯ್ಯನವರನ್ನು ಕರೆತಂದಳು. ಅಲ್ಲಿನ ಪದ್ಮಾವತಿ ಕೆರೆಯ ದಂಡೆಯ ಮೇಲೆ ಚಂದಯ್ಯನವರಿಗಾಗಿ ಚಿಕ್ಕ ಮಠವೊಂದನ್ನು ಕಟ್ಟಿಸಿ ಕಾಯಕ ದಾಸೋಹಕ್ಕೆ ವ್ಯವಸ್ಥೆ ಮಾಡುತ್ತಾಳೆ. ಅಲ್ಲಿನ ಜನರಿಗೆ ಚಂದಯ್ಯನವರ ಕಾಯಕ ದಾಸೋಹ ತತ್ವ ಹಿಡಿಸುತ್ತದೆ. ಆದರೆ ಸಂಪ್ರದಾಯವಾದಿಗಳಿಗೆ ಹಿಡಿಸುವುದಿಲ್ಲ. ಚಂದಯ್ಯನವರು ಕೊರಮ ಜನಾಂಗಕ್ಕೆ ಸೇರಿದವರು ಎಂಬ ಕಾರಣ ಹೇಳಿ ನೀರಿನ ಬಳಕೆಗೆ ಬಿಡುವುದಿಲ್ಲ. ನಂತರ ಕೆರೆಯ ಪಕ್ಕದಲ್ಲೇ ಅವರಿಗಾಗಿ ಬಾವಿ ತೋಡಿಸಲಾಯಿತು.

 ಕೆಲ ಕಾಲದ ನಂತರ ಚಂದಯ್ಯನವರು ಅಲ್ಲಿಯೇ ಲಿಂಗೈಕ್ಯರಾಗುತ್ತಾರೆ. ಜನರು ಪದ್ಮಾವತಿ ಪಟ್ಟಣಕ್ಕೆ ನುಲಿಯಯ್ಯನೂರು ಎಂದು ಕರೆಯತೊಡಗುತ್ತಾರೆ. ಮುಂದೆ ಅದು ಜನಗಳ ಬಾಯಲ್ಲಿ ನುಲೇನೂರು ಎಂದು ಪ್ರಸಿದ್ಧವಾಯಿತು. ಈಗ ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲೂಕು ರಾಮಗಿರಿ ಹೋಬಳಿಯಲ್ಲಿರುವುದರಿಂದ ಅದಕ್ಕೆ ಆರ್. ನುಲೇನೂರು ಎಂದು ಕರೆಯುವರು.

 ನುಲಿಯ ಚಂದಯ್ಯನವರು ತಮ್ಮ ತತ್ವಾದರ್ಶದಿಂದ ಅಮರರಾಗಿದ್ದಾರೆ.

Writer - ರಂಜಾನ್ ದರ್ಗಾ

contributor

Editor - ರಂಜಾನ್ ದರ್ಗಾ

contributor

Similar News