ನಾನು ಕಂಡಂತೆ ಸ್ವಾತಂತ್ರ್ಯದ ಅಮೃತ ಮಹೋತ್ಸವ
ನಾವು ಶಾಲೆಯಲ್ಲಿದ್ದಾಗ ಕಯ್ಯಾರ ಕಿಞ್ಞಣ್ಣ ರೈರವರ “ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ, ತೋರುತಿಹುದು ಹೊಡೆದು ಹೊಡೆದು ಬಾನಿನಗಲ ಪಟ ಪಟ ……..” ಎಂದು ಜೋರಾಗಿ ಕೂಗಿ ಹಾಡುತ್ತಿದ್ದೆವು. ಇದನ್ನು ಒತ್ತಾಯಕ್ಕಾಗಲಿ ಅಥವಾ ಯಾರೋ ಹೇಳಿದರೆಂದು ಮಾಡುತ್ತಿರಲಿಲ್ಲ. ಅಂದು ರಾಷ್ಟ್ರೀಯತೆ ಅಥವಾ ದೇಶಪ್ರೇಮ ಎಂದರೆ, ಹೆಚ್ಚು ತಿಳಿಯದಿದ್ದರೂ ಸಹಜವಾಗಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ ದಿನಗಳನ್ನು ಯಾರು ಮರೆಯುವಂತಿಲ್ಲ.
ಗಾಂಧೀಜಿ ಹಾಗು ಹಲವು ಸ್ವಾತಂತ್ರ್ಯಹೋರಾಟಗಾರರ ಭಾವಚಿತ್ರಗಳ ಪೋಟೋಗಳನ್ನು ಎತ್ತಿನ ಗಾಡಿಯಲ್ಲಿಟ್ಟು, ತಿರಂಗ ಬಾವುಟವನ್ನು ಎತ್ತರಕ್ಕೆ ಹಾರಿಸುತ್ತಾ ನಮ್ಮೂರ ಬೀದಿ ಬೀದಿಯಲ್ಲಿ ಮೆರವಣಿಗೆ ಮಾಡಿ ಸ್ವಾತಂತ್ರ್ಯವನ್ನು ಸಂಭ್ರಮಿಸಿದ್ದೂ ಇಂದಿಗೂ ಅಚ್ಚಳಿಯದ ನೆನಪು.
ಅಂದು ಯಾರೂ ನಮ್ಮ ದೇಶ ಪ್ರೇಮವನ್ನು ಪ್ರಶ್ನಿಸಿದ್ದಾಗಲಿ ಅಥವಾ ಸಂಶಯಪಟ್ಟ ಉದಾಹರಣೆಗಳು ಇರಲಿಲ್ಲ. ಎತ್ತ ತಾಯಿಗೆ ಮಕ್ಕಳು ಸಹಜವಾಗಿ ತೋರುವ ಪ್ರೇಮದಂತೆ, ದೇಶ ಪ್ರೇಮ ಎಲ್ಲರಲ್ಲೂ ಸಹಜವಾಗಿ ಇತ್ತು, ಇಂದಿಗೂ ಇದೆ, ಮುಂದೆಯೂ ಇರುತ್ತದೆ. ಇದಕ್ಕಾಗಿ ದೇಶ ಪ್ರೇಮದ ಪರೀಕ್ಷೆ ಒಡ್ಡುವ ಅವಶ್ಯಕತೆ ಇಲ್ಲ. ಪ್ರೇಮ - ಪ್ರೀತಿ ಎದೆ ಬಗೆದು ಬಾಹ್ಯವಾಗಿ ತೋರಿಸುವುದಲ್ಲ. ಬದಲಿಗೆ ಎದೆ ಉಬ್ಬಿಸಿ ಆಂತರಿಕವಾಗಿ ಹೇಳುವುದು. ಹೇಳಬೇಕೆಂದರೆ, ದೇಶ ಪ್ರೇಮ ಅಳತೆ- ಆಳಕ್ಕೆ ಸಿಗುವುದಿಲ್ಲ.
ಈ ದೇಶ ಪ್ರೇಮ ನಮ್ಮ ಮಕ್ಕಳಲ್ಲಿ ಮತ್ತಷ್ಟು ಗಟ್ಟಿಯಾಗಿ ನೆಲೆಯೂರಿ ಅಭಿವ್ಯಕ್ತಗೊಳ್ಳಬೇಕಾದರೆ, ಇಂದು ಶಿಕ್ಷಣ ಕ್ಷೇತ್ರದಲ್ಲಿ ಅದರಲ್ಲೂ ಮುಖ್ಯವಾಗಿ ಶಾಲಾ ಹಂತದ ಶಿಕ್ಷಣದಲ್ಲಿ ಇರುವ ಅಸಮಾನತೆ, ತಾರತಮ್ಯ ಮತ್ತು ಪ್ರತ್ಯೇಕತೆಯನ್ನು ತೊಡೆದು ಹಾಕಬೇಕು. ನಮ್ಮ ಮಕ್ಕಳಿಗೆ ದೇಶದ ಬಗ್ಗೆ ಪ್ರೇಮ, ಪ್ರೀತಿ, ಗೌರವ, ಅಭಿಮಾನ ಮತ್ತು ಹೆಮ್ಮೆ ಮತ್ತಷ್ಟು ಹೆಚ್ಚಬೇಕಾದರೆ, ನಾವೆಲ್ಲರೂ ಒಂದೇ, ನಮ್ಮಲ್ಲಿ ಭೇದ-ಭಾವ ತಾರತಮ್ಯ ಇಲ್ಲವೆಂಬ ಭಾವನೆ ಮೂಡಬೇಕು. ಅದು ಚಿಕ್ಕ ವಯಸ್ಸಿನಿಂದಲೇ ಶಾಲಾ ಹಂತದಿಂದ ಬೆಳೆಯಬೇಕು. ಆ ಬಗೆಯ ಭೂಮಿಕೆ, ಕನಿಷ್ಠ ಶಿಕ್ಷಣದಲ್ಲಾದರೂ ಇರಬೇಕು. ಇಂದು ಶಿಕ್ಷಣ ವ್ಯವಸ್ಥೆಯನ್ನು ಪಠ್ಯಕ್ರಮ ಆಧಾರದಲ್ಲಿ ಐಬಿ, ಅಂತಾರಾಷ್ಟ್ರೀಯ, ಸಿಬಿಎಸ್ಇ, ಐಸಿಎಸ್ಇ, ರಾಜ್ಯ, ಇತ್ಯಾದಿಗಳಾಗಿ ವಿಭಜಿಸಿ ಬಾಲ್ಯದಿಂದಲೇ ಮಕ್ಕಳಲ್ಲಿ ಮೇಲು-ಕೀಳು, ಬಡವ-ಬಲ್ಲಿದ ಎಂಬ ಭಾವನೆ ಬೆಳೆಸುತ್ತಿದ್ದೇವೆ.
ಪ್ರತೀ ಮನೆಯಲ್ಲೂ ತ್ರಿವರ್ಣ ಬಾವುಟ ಹಾರಲಿ (ಹರ್ ಘರ್ ತಿರಂಗ) ಎಂದು ಕರೆ ನೀಡಿರುವ ಈ ಸಂದರ್ಭದಲ್ಲಿ, ಭಾರತದ ಪ್ರತೀ ಮಗುವಿಗೂ ಸಮಾನ ಶಿಕ್ಷಣದ (ಸಬ್ಕೋ ಶಿಕ್ಷಾ ಸಮಾನ್ ಶಿಕ್ಷಾ) ಕರೆಯೂ ಮೊಳಗಬೇಕಿದೆ. ಶಿಕ್ಷಣ ಹಕ್ಕು ಕಾಯಿದೆ ಜಾರಿಯಾಗಿ 12 ವರ್ಷ ಕಳೆದರೂ, ರಾಜ್ಯದಲ್ಲಿ ಆರ್ ಟಿ ಇ ಅನ್ವಯ ಮೂಲಭೂತ ಸೌಕರ್ಯಗಳ ಮಾನಕ ಗುಣಮಟ್ಟಗಳ ಅನುಪಾಲನೆ ಕೇವಲ 23.6%. ಅಂದರೆ 100 ಶಾಲೆಗಳಲ್ಲಿ ಕೇವಲ 23 ಶಾಲೆಗಳಲ್ಲಿ ಮಾತ್ರ ಆರ್ ಟಿ ಇ ನಿಗದಿಪಡಿಸಿದ ಮೂಲಭೂತ ಸೌಕರ್ಯಗಳ ಲಭ್ಯತೆ ಇದೆ.
ಈ ನಿಟ್ಟಿನಲ್ಲಿ, ಪ್ರತಿಯೊಂದು ಸರ್ಕಾರಿ ಕನ್ನಡ ಶಾಲೆ ಗಟ್ಟಿಗೊಳ್ಳಬೇಕಿದೆ. ಪ್ರತೀ ಮನೆಯಲ್ಲಿ ಬಾವುಟ ಎಂಬಂತೆ, ಪ್ರತೀ ಶಾಲೆಯಲ್ಲಿ, ಅಗತ್ಯ ಮೂಲಭೂತ ಸೌಕರ್ಯ, ಅಗತ್ಯ ಸಂಖ್ಯೆಯ ಶಿಕ್ಷಕರು, ಅಗತ್ಯ ಸಂಖ್ಯೆಯ ಪಾಠೋಪಕರಣ, ಅಗತ್ಯ ಸಂಖ್ಯೆಯ ಪೀಠೋಪಕರಣ, ಶಾಲಾ ನಿರ್ವಹಣೆಗಾಗಿ ಎಸ್ ಡಿ ಎಂ ಸಿ ಗಳಿಗೆ ಅಗತ್ಯ ಆರ್ಥಿಕ ಸಂಪನ್ಮೂಲ, ಪ್ರತೀ ಮಗುವಿಗೆ ಪೌಷ್ಠಿಕ ಆಹಾರ, ಪ್ರತೀ ಮಗುವಿಗೆ ಗುಣಾತ್ಮಕ ಶಿಕ್ಷಣ, ಪ್ರತೀ ಶಿಕ್ಷಕನಿಗೆ ಸೇವಾ ಭದ್ರತೆ, ಇತ್ಯಾದಿಗಳನ್ನು ಒದಗಿಸಲು ಪ್ರಭುತ್ವ ಮುಂದಾಗಬೇಕಿದೆ. ನನ್ನ ಭಾವನೆಯಲ್ಲಿ, ಪ್ರತೀ ಮಗುವಿಗೆ ಗುಣಾತ್ಮಕ ಶಿಕ್ಷಣ ಖಾತರಿಗೊಳಿಸಿ ಜಾರಿಗೊಳಿಸುವುದೇ ನಿಜವಾದ ದೇಶ ಪ್ರೇಮ. ನಮ್ಮ ಪ್ರಭುತ್ವಗಳು ಇಂದು ಈ ಬಗೆಯ ದೇಶ ಪ್ರೇಮ ಮೆರೆಯಬೇಕಿದೆ.
ಇದರ ಜೊತೆ ಜೊತೆಗೆ, ನಮ್ಮ ಸಂವಿಧಾನ ಸ್ವಾತಂತ್ರ್ಯ ಚಳುವಳಿಯ ಬಹು ದೊಡ್ಡ ಉತ್ಪನ್ನ. ಅದನ್ನು ಉಳಿಸಿ ಪರಿಪೂರ್ಣವಾಗಿ ಜಾರಿಗೊಳಿಸುವುದು, ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಎಲ್ಲಾ ಹುತಾತ್ಮರಿಗೆ ಹೋರಾಟಗಾರರಿಗೆ ಪ್ರತಿಯೊಬ್ಬ ಭಾರತೀಯನು ಸಲ್ಲಿಸಬಹುದಾದ ದೊಡ್ಡ ಗೌರವ.
ಸ್ವಾತಂತ್ರ್ಯ ಅಮೃತ ಮಹೋತ್ಸವ ಎಂದರೆ ಪ್ರತಿ ಮನೆಯಲ್ಲೂ ಸಂವಿಧಾನ - ಜನ ಮನದಲ್ಲೂ ಸಂವಿಧಾನ. ಸಂವಿಧಾನಕ್ಕೆ ಹಾಗು ಸಂವಿಧಾನದ ಮೌಲ್ಯಗಳಿಗೆ ಅಪಾಯ ಬಂದೊದಗಿರುವ ಇಂದಿನ ಸಂದರ್ಭದಲ್ಲಿ, ಸಂವಿಧಾನವನ್ನು ಎದೆಗವಚಿಕೊಂಡು, ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತ ಅದನ್ನು ಪೂರ್ಣವಾಗಿ ಜಾರಿಗೊಳಿಸಲು ಸಂಕಲ್ಪ ತೊಡುವ ಮೂಲಕ ಭಾರತದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುವ ಸಂಕಲ್ಪ ಮಾಡಬೇಕಿದೆ.
ಅಂದು ಸ್ವಾತಂತ್ರ್ಯಕ್ಕಾಗಿ ಹೊರಗಿನ ಬ್ರಿಟಿಷರ ವಿರುದ್ಧ ಹೋರಾಡಿದಂತೆ, ಇಂದು ಸಂವಿಧಾನವನ್ನು ಉಳಿಸಿ ಜಾರಿಗೊಳಿಸುವುದಕ್ಕಾಗಿ ಒಳಗಿನ ವಿಭಜಕ ಹಾಗು ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡುವ ಮೂಲಕ, ಗಳಿಸಿರುವ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕಿದೆ. ನನ್ನ ದೃಷ್ಟಿಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವವೆಂದರೆ ಸಂವಿಧಾನದ ರಕ್ಷಣೆ ಹಾಗು ಪರಿಪೂರ್ಣ ಜಾರಿಗಾಗಿ ಪ್ರತಿಯೊಂದು ಮಗುವಿಗೂ ಸಮಾನ ಶಿಕ್ಷಣ. ಶಾಲೆಗಳು ಸಮಾನತೆಯನ್ನು ಸಾರುವ ಸಂವಿಧಾನದ ತೊಟ್ಟಿಲುಗಳು.
ನಿರಂಜನಾರಾಧ್ಯ ವಿ ಪಿ, ಅಭಿವೃದ್ಧಿ ಶಿಕ್ಷಣ ತಜ್ಞ