ವೈದ್ಯಕೀಯ ಶಿಕ್ಷಣ ಜಗತ್ತಿನಲ್ಲಿ ಜಾತಿ ತಾರತಮ್ಯ

Update: 2022-08-16 06:42 GMT

ವರ್ಷ ಕಳೆದಂತೆ ವಿದ್ಯಾರ್ಥಿಗಳ ಹೊಸ ಹೊಸ ತಂಡಗಳು ಈ ಕಾಲೇಜುಗಳಿಗೆ ಬರುತ್ತವೆ ಮತ್ತು ಹೋಗುತ್ತವೆ. ಆದರೆ ಕಾಲೇಜುಗಳಲ್ಲಿರುವ ‘ಸಾಂಸ್ಥಿಕ ವರ್ಣಭೇದ ನೀತಿ’ ಹಾಗೆಯೇ ಮುಂದುವರಿಯುತ್ತದೆ. ಅದು ತಾರಕಕ್ಕೇರಿದಾಗ ಅಲ್ಲೊಬ್ಬ ಇಲ್ಲೊಬ್ಬ ಬಾಲ ಮುಕುಂದ ಭಾರತಿ (2010) ಅಥವಾ ಅನಿಲ್ ಮೀನಾ (2011) ಅಥವಾ ಪಾಯಲ್ ತಾಡ್ವಿ (2019) ತಮ್ಮ ಬದುಕಿನ ಜ್ಯೋತಿಗಳನ್ನೇ ನಂದಿಸುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

‘‘ಹೆಚ್ಚೆಚ್ಚು ಬದಲಾವಣೆಯಾದಂತೆ, ಸ್ಥಿತಿಗತಿಗಳು ಹೆಚ್ಚೆಚ್ಚು ಮೊದಲಿನಂತೆಯೇ ಉಳಿಯುತ್ತವೆ’’

-ಫ್ರೆಂಚ್ ವಿಮರ್ಶಕ, ಪತ್ರಕರ್ತ ಮತ್ತು ಕಾದಂಬರಿಕಾರ ಜೀನ್-ಬ್ಯಾಪ್ಟಿಸ್ಟ್ ಆಲ್ಫೋನ್ಸ್‌ಕರ್ (1808-1890)

ದೇಶದ ಪ್ರಮುಖ ವೈದ್ಯಕೀಯ ಸಂಸ್ಥೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಮ್‌ಎಸ್) ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಬಾರಿ ತಪ್ಪು ಕಾರಣಗಳಿಗಾಗಿ.

ನಿರ್ದಿಷ್ಟ ಸಂಸ್ಥೆಗಳಲ್ಲಿ ನಡೆಯುವ ಜಾತಿ ತಾರತಮ್ಯದ ಪ್ರಕರಣಗಳ ಬಗ್ಗೆ ಗಮನ ಹರಿಸುವುದಕ್ಕಾಗಿ ನೇಮಿಸಲ್ಪಟ್ಟಿರುವ ಕಿರಿತ್ ಪ್ರೇಮ್‌ಜಿಭಾಯ್ ಸೋಳಂಕಿ ನೇತೃತ್ವದ ಸಂಸದೀಯ ಸಮಿತಿಯು, ಎಐಐಎಮ್‌ಎಸ್‌ನ ಕಾರ್ಯನಿರ್ವಹಣೆ ಬಗ್ಗೆ ಕಟು ವರದಿಯೊಂದನ್ನು ನೀಡಿದೆ. ಈ ಸಂಸ್ಥೆಯಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ಪ್ರೊಫೆಸರ್‌ಗಳು ಮತ್ತು ವಿದ್ಯಾರ್ಥಿಗಳ ವಿರುದ್ಧ ಹೇಗೆ ತಾರತಮ್ಯ ಮಾಡಲಾಗುತ್ತಿದೆ ಎನ್ನುವುದನ್ನು ಅದು ವಿವರಿಸಿದೆ. ಈ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳನ್ನು ಹೇಗೆ ಪರೀಕ್ಷೆಗಳಲ್ಲಿ ಪದೇ ಪದೇ ಅನುತ್ತೀರ್ಣಗೊಳಿಸಲಾಗುತ್ತಿದೆ ಹಾಗೂ ‘ಅರ್ಹ ಅಭ್ಯರ್ಥಿಗಳ ಅನುಪಸ್ಥಿತಿಯಿಂದಾಗಿ’ ಈ ಸಂಸ್ಥೆಯಲ್ಲಿ ಖಾಲಿ ಹುದ್ದೆಗಳನ್ನು ಹೇಗೆ ಖಾಲಿಯಾಗಿಯೇ ಇರಿಸಲಾಗುತ್ತದೆ ಎಂಬ ಬಗ್ಗೆ ವರದಿ ಬೆಳಕು ಚೆಲ್ಲಿದೆ. ಸಾಮಾನ್ಯವಾಗಿ ಈ ಕಾರಣವನ್ನು ಕೊಟ್ಟು ಈ ಸಂಸ್ಥೆಯಲ್ಲಿ ಮೀಸಲು ಹುದ್ದೆಗಳನ್ನು ವರ್ಷಗಳ ಕಾಲ ಖಾಲಿಯಾಗಿಯೇ ಇರಿಸಲಾಗುತ್ತದೆ.

ಎಐಐಎಮ್‌ಎಸ್‌ನಲ್ಲಿ 1,111 ಬೋಧಕ ಹುದ್ದೆಗಳು, 275 ಸಹಾಯಕ ಪ್ರೊಫೆಸರ್ ಹುದ್ದೆಗಳು ಮತ್ತು 92 ಪ್ರೊಫೆಸರ್ ಹುದ್ದೆಗಳು ಖಾಲಿಯಿವೆ ಎಂದು ವರದಿ ಹೇಳುತ್ತದೆ.

 ವಿವಿಧ ಎಐಐಎಮ್‌ಎಸ್‌ಗಳಲ್ಲಿರುವ ಶೋಷಿತ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳ ಸಂಖ್ಯೆಯು ಆ ವರ್ಗಗಳಿಗೆ ಮೀಸಲಿಡಲಾಗಿರುವ ಪ್ರಮಾಣಕ್ಕಿಂತ ಕಡಿಮೆಯಿದೆ ಎನ್ನುವುದನ್ನು ವರದಿ ಗಮನಿಸಿದೆ. ಪರಿಶಿಷ್ಟ ಜಾತಿಗಳ ವಿದ್ಯಾರ್ಥಿಗಳಿಗಾಗಿ ಶೇ. 15 ಮೀಸಲಾತಿಯನ್ನು ನೀಡಿದರೆ, ಪರಿಶಿಷ್ಟ ಪಂಗಡಗಳಿಗಾಗಿ ಶೇ. 7.5 ಮೀಸಲಾತಿ ನೀಡಲಾಗಿದೆ. ಸೂಪರ್ ಸ್ಪೆಶಾಲಿಟಿ ಕೋರ್ಸ್‌ಗಳಿಗೆ ಶೋಷಿತ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರವೇಶವನ್ನೇ ನಿರಾಕರಿಸಲಾಗಿದೆ ಎಂಬುದಾಗಿಯೂ ವರದಿ ತಿಳಿಸಿದೆ. ಈ ಕೋರ್ಸ್‌ಗಳಲ್ಲಿ ಮೀಸಲಾತಿ ಇಲ್ಲ. ಹಾಗಾಗಿ, ಇಂಥ ಎಲ್ಲಾ ಕೋರ್ಸ್‌ಗಳು ‘ಮೇಲ್ಜಾತಿಗಳ ಏಕಸ್ವಾಮ್ಯ’ದಂತಾಗಿದೆ.

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ಥಿಯರಿ ಪರೀಕ್ಷೆಗಳು ಮತ್ತು ಪ್ರಾಕ್ಟಿಕಲ್ ಪರೀಕ್ಷೆಗಳ ನಿರ್ವಹಣೆಗಳ ನಡುವೆ ಅಗಾಧ ಅಂತರವಿರುವುದನ್ನು ವರದಿಯು ಮುಖ್ಯವಾಗಿ ಗಮನಿಸಿದೆ. ಇದು ‘‘ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ ಸೇರಿದ ವಿದ್ಯಾರ್ಥಿಗಳ ಬಗ್ಗೆ ಅನುಸರಿಸಲಾಗುತ್ತಿರುವ ಪಕ್ಷಪಾತ ಧೋರಣೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂಬುದಾಗಿ ವರದಿ ಅಭಿಪ್ರಾಯಪಟ್ಟಿದೆ.

ಮೀಸಲು ವಿಭಾಗದ ಅಭ್ಯರ್ಥಿಗಳ ಬಗ್ಗೆ ಎಐಐಎಮ್‌ಎಸ್‌ನ ವ್ಯವಸ್ಥೆಯಲ್ಲಿ ಪಕ್ಷಪಾತ ತುಂಬಿ ಹೋಗಿದೆ ಎಂದು ಹೇಳಿರುವ ವರದಿಯು, ಖಾಲಿಯಿರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ ಸೇರಿದ ಬೋಧಕ ಹುದ್ದೆಗಳನ್ನು ಕಾಲಮಿತಿಯಲ್ಲಿ ತುಂಬಿಸುವಂತೆ ಶಿಫಾರಸು ಮಾಡಿದೆ. ಅದೂ ಅಲ್ಲದೆ, ವಿದ್ಯಾರ್ಥಿಗಳ ಹೆಸರು ಮರೆಮಾಚಿ ವೌಲ್ಯಮಾಪನ ಮಾಡುವಂತೆ, ಸಫಾಯಿ ಕರ್ಮಾಚಾರಿಗಳು, ಚಾಲಕರು ಮತ್ತು ಡಾಟಾ ಎಂಟ್ರಿ ಆಪರೇಟರ್‌ಗಳು ಮುಂತಾದ ಕೆಲಸಗಳನ್ನು ಹೊರಗುತ್ತಿಗೆಗೆ ನೀಡುವುದನ್ನು ನಿಲ್ಲಿಸುವಂತೆ ಹಾಗೂ ಸಂಸ್ಥೆಯ ನಿರ್ದೇಶಕರ ಮಂಡಳಿಯಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಸದಸ್ಯರನ್ನು ಸೇರಿಸಿಕೊಳ್ಳುವಂತೆಯೂ ಅದು ಶಿಫಾರಸು ಮಾಡಿದೆ.

30 ಸದಸ್ಯರ ಸಮಿತಿಯು ಸಿದ್ಧಪಡಿಸಿರುವ ಈ ವರದಿಯು, ಎಐಐಎಮ್‌ಎಸ್‌ನಲ್ಲಿ ಅನುಸರಿಸಲಾಗುತ್ತಿರುವ ‘ಸಾಂಸ್ಥಿಕ ವರ್ಣಭೇದ ವ್ಯವಸ್ಥೆ’ಗೆ ಇನ್ನೊಂದು ಪುರಾವೆಯಾಗಿದೆ ಎಂಬುದಾಗಿ ಮಾನವಹಕ್ಕುಗಳ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ವರದಿಯು ಎಐಐಎಮ್‌ಎಸ್‌ನ ಉಸ್ತುವಾರಿಗಳಿಗೆ ಅಥವಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಲ್ಲಿ ಕುಳಿತಿರುವವರಿಗೆ ಎಚ್ಚರಿಕೆಯ ಕರೆಗಂಟೆಯಾಗಿಬಹುದೇ ಎನ್ನುವುದು ಪ್ರಶ್ನೆಯಾಗಿಯೇ ಉಳಿಯುತ್ತದೆ.

ಹಿಂದಿನ ಅನುಭವದ ಆಧಾರದಲ್ಲಿ ಹೇಳುವುದಾದರೆ, ಇಂತಹ ಸಾಧ್ಯತೆಯು ಅತ್ಯಂತ ಕಡಿಮೆ ಎಂದೇ ಹೇಳಬೇಕಾಗುತ್ತದೆ.

ಸಮಿತಿಯ ವರದಿಗಳು ಮತ್ತು ಶಿಫಾರಸುಗಳನ್ನು ಗಮನಿಸುವಾಗ ಇದೇ ಎಐಐಎಮ್‌ಎಸ್‌ನಲ್ಲಿ 15 ವರ್ಷಗಳ ಹಿಂದೆ ಇದ್ದ ಇದೇ ಪರಿಸ್ಥಿತಿ ನೆನಪಾಗುತ್ತದೆ. ಸಂಸ್ಥೆಯಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳನ್ನು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ಕೋಲಾಹಲ ಎಬ್ಬಿಸಿದವು. ಆಗ ಎಚ್ಚೆತ್ತುಕೊಂಡ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗವು, ದೂರುಗಳ ಬಗ್ಗೆ ತನಿಖೆ ನಡೆಸುವುದಕ್ಕಾಗಿ ಪ್ರೊಫೆಸರ್ ಸುಖ್‌ದೇವ್ ತೋರಟ್ ನೇತೃತ್ವದಲ್ಲಿ ಸಮಿತಿಯೊಂದನ್ನು ನೇಮಿಸಿತು.

ಅಂದು ಎಐಐಎಮ್‌ಎಸ್‌ನಲ್ಲಿ ಯಾವ ಪರಿಸ್ಥಿತಿ ಇತ್ತು ಎನ್ನುವುದನ್ನು ರಾಷ್ಟ್ರೀಯ ದೈನಿಕವೊಂದರ ವರದಿಯಿಂದ ತಿಳಿದುಕೊಳ್ಳಬಹುದು. ‘‘ಎಐಐಎಮ್‌ಎಸ್‌ನ ಹಾಸ್ಟೆಲ್‌ಗಳ ಕೆಲವು ಭಾಗಗಳನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಕೇರಿಗಳನ್ನಾಗಿ ಪರಿವರ್ತಿಸಲಾಗುತ್ತಿದೆ’’ ಎಂಬುದಾಗಿ ಪತ್ರಿಕೆಯು ಅಂದು ವರದಿ ಮಾಡಿತ್ತು. ತಮ್ಮನ್ನು ಮೇಲ್ಜಾತಿಗಳಿಗೆ ಸೇರಿದ ವಿದ್ಯಾರ್ಥಿಗಳು ಎಲ್ಲಾ ಕೋಣೆಗಳಿಂದ ಹೊರಹಾಕಿ ಹಾಸ್ಟೆಲ್‌ಗಳ ಎರಡು ಮಹಡಿಗಳಿಗೆ ಅಟ್ಟುತ್ತಿದ್ದಾರೆ ಎಂಬುದಾಗಿ ಮೀಸಲಾತಿ ಪಡೆಯುವ ವರ್ಗಗಳ ವಿದ್ಯಾರ್ಥಿಗಳು ಹೇಳಿರುವುದಾಗಿ ‘ದ ಟೆಲಿಗ್ರಾಫ್’ 2006 ಜುಲೈ 5ರಂದು ವರದಿ ಮಾಡಿತ್ತು. ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಯೊಬ್ಬನ ಹಾಸ್ಟೆಲ್ ಕೋಣೆಯ ಗೋಡೆಯಲ್ಲಿ ‘ಹಾಸ್ಟೆಲ್‌ನ ಈ ಭಾಗದಿಂದ ತೊಲಗು’ ಎಂಬ ಎಚ್ಚರಿಕೆಯನ್ನು ಬರೆಯಲಾಗಿತ್ತು. ಈ ತಾರತಮ್ಯದ ವಿರುದ್ಧ ದೂರು ಸಲ್ಲಿಸುವ ಧೈರ್ಯವನ್ನು ತೋರಿಸಿದರೆ ತಮ್ಮನ್ನು ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಳಿಸಲಾಗುತ್ತದೆ ಎಂದು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳು ಅಂದು ಪತ್ರಿಕಾ ವರದಿಗಾರನಿಗೆ ಹೇಳಿದ್ದರು. ಸ್ವತಃ ಪರಿಶಿಷ್ಟ ಜಾತಿಗೆ ಸೇರಿದ ಸಂಸ್ಥೆಯ ಸಬ್-ಡೀನ್, ವಿದ್ಯಾರ್ಥಿಗಳು ಹೇಳಿದುದನ್ನು ದೃಢೀಕರಿಸಿದ್ದರು.

ತನಿಖಾ ಸಮಿತಿಯ ನೇತೃತ್ವ ವಹಿಸಿದ್ದ ಅಂದಿನ ಯುಜಿಸಿ ಅಧ್ಯಕ್ಷ ಸುಖ್‌ದೇವ್ ತೋರಟ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ವಿದ್ಯಾರ್ಥಿಗಳು ತಾರತಮ್ಯ ಎದುರಿಸುತ್ತಿದ್ದುದನ್ನು ಒಪ್ಪಿಕೊಂಡರು ಹಾಗೂ ಕೆಲವು ಶಿಫಾರಸುಗಳನ್ನು ಮಾಡಿದ್ದರು.

ಬಳಿಕ ತೋರಟ್ ಸಮಿತಿಯ ಶಿಫಾರಸುಗಳು ಏನಾದವು ಎಂಬ ಬಗ್ಗೆ ಇಲ್ಲಿ ಹೇಳುವುದು ಅಗತ್ಯವಾಗಿದೆ.

ಮಾಜಿ ನಿರ್ದೇಶಕರೊಬ್ಬರು ಸೇರಿದಂತೆ ಹಲವು ಅಧಿಕಾರಿಗಳ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುವಂತೆ ಶಿಫಾರಸುಗಳನ್ನು ಮಾಡಿದ್ದ ವರದಿಯನ್ನು ಕಸದ ಬುಟ್ಟಿಗೆ ಎಸೆಯಲು ಎಐಐಎಮ್‌ಎಸ್ ನಿರ್ಧರಿಸಿತು. 2008ರಲ್ಲಿ ಸಲ್ಲಿಸಿದ ತನ್ನ ವರದಿಯಲ್ಲಿ ಆಯೋಗವು ಅಂದಿನ ನಿರ್ದೇಶಕ ಡಾ. ಪಿ. ವೇಣುಗೋಪಾಲ್‌ರನ್ನು ಹೆಸರಿಸಿತ್ತು. ಅವರು ಜಾತಿ ತಾರತಮ್ಯದಲ್ಲಿ ತೊಡಗಿದ್ದಾರೆ ಮತ್ತು ಸಂಸ್ಥೆಯಲ್ಲಿ ಹಲವು ದಿನಗಳ ಕಾಲ ನಡೆದಿದ್ದ ಮೀಸಲಾತಿ ವಿರೋಧಿ ಮುಷ್ಕರದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ವರದಿ ಹೇಳಿತ್ತು (‘Caste Aside: AIIMS Junks Report Nailing Discrimination at Institute’, Mail Today, May 15, 2012).ಅಂದಿನ ನಿರ್ದೇಶಕರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಬೇಕೆಂದು ಸಮಿತಿಯು ಬಲವಾದ ಶಿಫಾರಸು ಮಾಡಿದ್ದರೂ, ವರದಿಯನ್ನು ಕಸದ ಬುಟ್ಟಿಗೆ ಹಾಕಲು ಎಐಐಎಮ್‌ಎಸ್ ನಿರ್ಧರಿಸಿತು. ಅದಕ್ಕಾಗಿ ಅದು ‘‘ಸಂಸ್ಥೆಯು ಅಶಾಂತಿಯ ಹಂತವನ್ನು ದಾಟಿ ಬಂದಿದೆ ಹಾಗೂ ಈಗ ಸೌಹಾರ್ದ ವಾತಾವರಣ ನೆಲೆಸಿದೆ’’ ಎಂಬ ವಿಚಿತ್ರ ವಾದವನ್ನು ಮುಂದಿಟ್ಟತು.

ಎಐಐಎಮ್‌ಎಸ್‌ನಲ್ಲಿನ ಪರಿಸ್ಥಿತಿ ಸುಧಾರಿಸಬೇಕಾದರೆ ಏನಾದರೂ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ ಎಂಬುದಾಗಿ ಜನರು ಭಾವಿಸುತ್ತಾರೆ. ಈಗ ಸಂಸದೀಯ ಸಮಿತಿ ಮಾಡಿರುವ ಶಿಫಾರಸುಗಳ ಹಿನ್ನೆಲೆಯಲ್ಲಿ, ರಾಷ್ಟ್ರ ರಾಜಧಾನಿ ಸೇರಿದಂತೆ ಎಲ್ಲೆಡೆಯಿರುವ ವೈದ್ಯಕೀಯ ಸಂಸ್ಥೆಗಳತ್ತ ಒಮ್ಮೆ ಗಮನ ಹರಿಸಿದರೆ, ಅಲ್ಲಿ ಜಾತಿ ಆಧಾರಿತ ತಾರತಮ್ಯವು ಆಳವಾಗಿ ಬೇರು ಬಿಟ್ಟಿರುವುದು ಕಂಡುಬರುತ್ತದೆ. ಇದಕ್ಕೆ ಎಐಐಎಮ್‌ಎಸ್ ಹೊರತಾಗಿಲ್ಲ.

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನ ‘ಕೇರಿಗಳಿಗೆ ತಳ್ಳಿದಾಗ’ ಎಐಐಎಮ್‌ಎಸ್‌ನಲ್ಲಿ ಏನು ನಡೆಯುತ್ತಿತ್ತೋ, ಅದು ಅದಕ್ಕಿಂತಲೂ ಮೊದಲು ದಿಲ್ಲಿಯ ವಿಶ್ವವಿದ್ಯಾನಿಲಯ ವೈದ್ಯಕೀಯ ವಿಜ್ಞಾನಗಳ ಕಾಲೇಜಿನಲ್ಲೂ ಸಂಭವಿಸಿತ್ತು. ಆಗ ಅದು ಪರಿಶಿಷ್ಟ ವಿಭಾಗಗಳಿಗೆ ಸೇರಿದ ವಿದ್ಯಾರ್ಥಿಗಳು ಮತ್ತು ದಲಿತೇತರ ವಿದ್ಯಾರ್ಥಿಗಳ ನಡುವಿನ ಸಂಘರ್ಷಕ್ಕೆ ವೇದಿಕೆಯಾಗಿ ಪರಿಣಮಿಸಿತ್ತು. ಕಾಲೇಜಿನ ಇತರ ವಿದ್ಯಾರ್ಥಿಗಳು ತಮಗೆ ಮಾಡುತ್ತಿರುವ ಅವಮಾನವನ್ನು ವಿರೋಧಿಸಿ ದಲಿತ ವಿದ್ಯಾರ್ಥಿಗಳು ಸಮಾನ ಮನಸ್ಕ ಗುಂಪುಗಳ ಬೆಂಬಲದೊಂದಿಗೆ ತೀವ್ರ ಪ್ರತಿಭಟನೆ ನಡೆಸಿದರು. ತಮ್ಮನ್ನು ಹಾಸ್ಟೆಲ್‌ನ ನಿರ್ದಿಷ್ಟ ಮಹಡಿಯೊಂದರಲ್ಲಿ ಕೂಡಿ ಹಾಕಲಾಗುತ್ತಿದೆ ಮತ್ತು ಮೆಸ್‌ನಲ್ಲಿ ತಮಗೆ ಕೆಲವೇ ಟೇಬಲ್‌ಗಳನ್ನು ‘ಮೀಸಲು’ ಇರಿಸಲಾಗುತ್ತಿದೆ ಎಂಬುದಾಗಿ ಶೋಷಿತ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ಆರೋಪಿಸಿದರು.

ಥೋರಟ್ ಸಮಿತಿ ಸಲ್ಲಿಸಿದ ವರದಿಯನ್ನು ಎಐಐಎಮ್‌ಎಸ್ ಕಸದ ಬುಟ್ಟಿಗೆ ಎಸೆದಿರುವುದಕ್ಕೆ ಸಂಬಂಧಿಸಿದ ಸುದ್ದಿಗಳು ಪತ್ರಿಕೆಗಳ ಮುಖಪುಟಗಳಲ್ಲಿ ರಾರಾಜಿಸುತ್ತಿದ್ದ ಸಮಯದಲ್ಲೇ (2012), ದಿಲ್ಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ಸೇರಿದ ವರ್ಧಮಾನ ವೈದ್ಯಕೀಯ ಕಾಲೇಜಿನಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳು ಎದುರಿಸುತ್ತಿದ್ದ ಜಾತಿ ತಾರತಮ್ಯದ ಆರೋಪಗಳ ಬಗ್ಗೆ ಬಾಂಬೆ ವಿಶ್ವವಿದ್ಯಾನಿಲಯದ ಮಾಜಿ ಉಪ ಚಾನ್ಸಲರ್ ಪ್ರೊ. ಬಾಲಚಂದ್ರ ಮುಂಗೇಕರ್‌ರ ಏಕ ಸದಸ್ಯ ಸಮಿತಿಯು ತನಿಖೆ ನಡೆಸುತ್ತಿತ್ತು.

ಪರಿಶಿಷ್ಟ ಜಾತಿಗಳಿಗೆ ಸೇರಿದ 35 ವಿದ್ಯಾರ್ಥಿಗಳನ್ನು ಒಂದು ನಿರ್ದಿಷ್ಟ ವಿಷಯದಲ್ಲಿ (ಫಿಸಿಯಾಲಜಿ) ಪದೇ ಪದೇ ಅನುತ್ತೀರ್ಣಗೊಳಿಸಲಾಗುತ್ತಿತ್ತು ಮಾತ್ರವಲ್ಲ, ಅವರು ಸಲ್ಲಿಸಿದ ದೂರುಗಳ ಬಗ್ಗೆ ಪರಿಶೀಲಿಸಲು ಅವರನ್ನು ಭೇಟಿ ಮಾಡುವ ಪ್ರಯಾಸವನ್ನೇ ಅಧಿಕಾರಿಗಳು ತೆಗೆದುಕೊಂಡಿರಲಿಲ್ಲ ಎನ್ನುವುದನ್ನು ಡಾ. ಮುಂಗೇಕರ್ ಕಂಡುಕೊಂಡರು. ಇದರಿಂದಾಗಿ ದಲಿತ ವಿದ್ಯಾರ್ಥಿಗಳು ತಮ್ಮ ವರ್ಷಗಳನ್ನು ಕಳೆದುಕೊಂಡರು. ಆದರೆ, ಅದೇ ಅಧಿಕಾರಿಗಳು ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಬಗ್ಗೆ ಮೃದು ನಿಲುವನ್ನು ತಾಳಿದ್ದರು.

 ಜಾತಿ ಆಧಾರಿತ ತಾರತಮ್ಯ ಮಾಡಿದ ಮತ್ತು ತಮಗೆ ವಹಿಸಿದ ಕರ್ತವ್ಯಗಳನ್ನು ನಿರ್ಲಕ್ಷಿಸಿದ ಅಧಿಕಾರಿಗಳನ್ನು ಗುರಿಯಾಗಿಸಿ ಪ್ರೊ. ಬಾಲಚಂದ್ರ ಮುಂಗೇಕರ್ ತನ್ನ ವರದಿಯನ್ನು ಸಲ್ಲಿಸಿದರು. ಕಿಡಿಗಾರಿದರು. ಅವರು ತನ್ನ ವರದಿಯಲ್ಲಿ ಹಲವಾರು ಶಿಫಾರಸುಗಳನ್ನು ಮಾಡಿದರು. ನೊಂದ ವಿದ್ಯಾರ್ಥಿಗಳಿಗೆ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು. ಆದರೆ, ವಿದ್ಯಾರ್ಥಿಗಳು ಅನುಭವಿಸಿದ ಮಾನಸಿಕ ಕ್ಲೇಶವನ್ನು ಹಣದಿಂದ ಅಳೆಯಲು ಸಾಧ್ಯವಿಲ್ಲ ಎಂದರು. ಮಾಜಿ ಪ್ರಾಂಶುಪಾಲ ಮತ್ತು ಅವರ ಅಂದಿನ ಸಹೋದ್ಯೋಗಿಗಳ ವಿರುದ್ಧ 1989ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಂತೆ ಕ್ರಮ ತೆಗೆದುಕೊಳ್ಳುವಂತೆ ಅವರು ತನ್ನ ವರದಿಯಲ್ಲಿ ಶಿಫಾರಸು ಮಾಡಿದರು.

ಅತ್ಯಂತ ಪ್ರಮುಖ ವೈದ್ಯಕೀಯ ಸಂಸ್ಥೆಯಿಂದ ಹಿಡಿದು ರಾಜಧಾನಿಯಲ್ಲಿರುವ ಇತರ ವೈದ್ಯಕೀಯ ಕಾಲೇಜುಗಳವರೆಗೆ, ಅಲ್ಲಿನ ಶೋಷಿತ ವರ್ಗಗಳ ವಿದ್ಯಾರ್ಥಿಗಳು ಅನುಭವಿಸಿದ ನೋವಿನಲ್ಲಿ ಸಾಮ್ಯತೆಯಿದೆ.

ವರ್ಷ ಕಳೆದಂತೆ ವಿದ್ಯಾರ್ಥಿಗಳ ಹೊಸ ಹೊಸ ತಂಡಗಳು ಈ ಕಾಲೇಜುಗಳಿಗೆ ಬರುತ್ತವೆ ಮತ್ತು ಹೋಗುತ್ತವೆ. ಆದರೆ ಕಾಲೇಜುಗಳಲ್ಲಿರುವ ‘ಸಾಂಸ್ಥಿಕ ವರ್ಣಭೇದ ನೀತಿ’ ಹಾಗೆಯೇ ಮುಂದುವರಿಯುತ್ತದೆ. ಅದು ತಾರಕಕ್ಕೇರಿದಾಗ ಅಲ್ಲೊಬ್ಬ ಇಲ್ಲೊಬ್ಬ ಬಾಲ ಮುಕುಂದ ಭಾರತಿ (2010) ಅಥವಾ ಅನಿಲ್ ಮೀನಾ (2011) ಅಥವಾ ಪಾಯಲ್ ತಾಡ್ವಿ (2019) ತಮ್ಮ ಬದುಕಿನ ಜ್ಯೋತಿಗಳನ್ನೇ ನಂದಿಸುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

ನಾವೀಗ ಭಾರತೀಯ ಸ್ವಾತಂತ್ರದ 75ನೇ ವರ್ಷವನ್ನು ಆಚರಿಸುತ್ತಿದ್ದೇವೆ. ‘ಮಾನವರನ್ನು ಒಂದೇ ಆಗಿ ಕಾಣುವ ವೌಲ್ಯ’ದ ಕನಸು ಯಾವಾಗ ಈಡೇರುತ್ತದೆ ಎನ್ನುವ ಪ್ರಶ್ನೆಗೆ ಉತ್ತರ ಬೇಕಾಗಿದೆ.

ಕೃಪೆ: countercurrents.org

Writer - ಸುಭಾಶ್ ಗಟಾಡೆ

contributor

Editor - ಸುಭಾಶ್ ಗಟಾಡೆ

contributor

Similar News