ʼಸರ್ವಿಸ್‌ ಚಾರ್ಜ್ ವಿಧಿಸುವ ಬದಲು, ಆಹಾರದ ಬೆಲೆ ಏರಿಸಿʼ: ರೆಸ್ಟೋರೆಂಟ್‍ಗಳಿಗೆ ಹೇಳಿದ ದಿಲ್ಲಿ ಹೈಕೋರ್ಟ್

Update: 2022-08-16 12:59 GMT

ಹೊಸದಿಲ್ಲಿ: ರೆಸ್ಟಾರೆಂಟ್‍ಗಳು ಸೇವಾ ಶುಲ್ಕ (Service Charge) ವಿಧಿಸುವ ಬದಲು ಗ್ರಾಹಕರಿಗೆ ಒದಗಿಸುವ ಆಹಾರದ ಬೆಲೆಯನ್ನು ಏರಿಸಬಹುದಾಗಿದೆ ಎಂದು ದಿಲ್ಲಿ ಹೈಕೋರ್ಟ್ ಇಂದು ಹೇಳಿದೆ.

ಗ್ರಾಹಕರಿಗೆ ಸೇವಾ ಶುಲ್ಕ ವಿಧಿಸುವುದರಿಂದ  ರೆಸ್ಟಾರೆಂಟ್‍ಗಳನ್ನು(Restaurant) ನಿರ್ಬಂಧಿಸುವಂತಿಲ್ಲ ಎಂಬ ತನ್ನ ಸೂಚನೆ ಜಾರಿಗೆ ನೀಡಲಾದ ತಡೆಯಾಜ್ಞೆಯನ್ನು ಪ್ರಶ್ನಿಸಿ ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರವು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ವೇಳೆ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ಮತ್ತು ಜಸ್ಟಿಸ್ ಸುಬ್ರಮಣಿಯಂ ಪ್ರಸಾದ್ (Justice Subramaniam Prasad) ಅವರ ವಿಭಾಗೀಯ ಪೀಠ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.

ಜುಲೈ 4ರಂದು ಪ್ರಾಧಿಕಾರ ಜಾರಿಗೊಳಿಸಿದ ಮಾರ್ಗದರ್ಶಿಯಲ್ಲಿ ರೆಸ್ಟಾರೆಂಟ್‍ಗಳು ಬಿಲ್‍ಗಳಲ್ಲಿ ಸ್ವಯಂಚಾಲಿತವಾಗಿ ಅಥವಾ ಡೀಫಾಲ್ಟ್ ಆಗಿ ಸೇವಾ ಶುಲ್ಕ ವಿಧಿಸುವಂತಿಲ್ಲ ಹಾಗೂ  ಸೇವಾಶುಲ್ಕವನ್ನು ಪಾವತಿಸುವುದು ಐಚ್ಛಿಕ ಎಂದು ರೆಸ್ಟಾರೆಂಟ್‍ಗಳು ಗ್ರಾಹಕರಿಗೆ ತಿಳಿಸಬೇಕು ಎಂದು ಹೇಳಿತ್ತು.

ಆದರೆ ಜುಲೈ 20ರಂದು ದಿಲ್ಲಿ ಹೈಕೋರ್ಟ್‍ನ (Delhi High court) ಏಕಸದಸ್ಯ ಪೀಠವು ರಾಷ್ಟ್ರೀಯ ರೆಸ್ಟಾರೆಂಟ್ ಅಸೋಸಿಯೇಶನ್ ಆಫ್ ಇಂಡಿಯಾ ಮತ್ತು ಫೆಡರೇಶನ್ ಆಫ್ ಹೋಟೆಲ್ ರೆಸ್ಟಾರೆಂಟ್ ಅಸೋಸಿಯೇಶನ್ಸ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಮಾರ್ಗಸೂಚಿ ಜಾರಿಗೆ ತಡೆ ಹೇರಿತ್ತು.

ಇದನ್ನು ಪ್ರಶ್ನಿಸಿ ಪ್ರಾಧಿಕಾರ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಅಪೀಲು ಸಲ್ಲಿಸಿತ್ತು.

ಇಂದು ನಡೆದ ವಿಚಾರಣೆ ವೇಳೆ ಹಾಜರಿದ್ದ ರೆಸ್ಟಾರೆಂಟ್ ಸಂಘದ ವಕೀಲರು ತಮ್ಮ ವಾದ ಮಂಡಿಸಿ, ಸೇವಾ ಶುಲ್ಕವು ರೆಸ್ಟಾರೆಂಟ್ ಉದ್ಯೋಗಿಗಳಿಗಾಗಿ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ "ರೆಸ್ಟಾರೆಂಟ್‍ಗಳು ಬೆಲೆಗಳನ್ನೇಕೆ ಏರಿಸಬಾರದು? ಸಿಬ್ಬಂದಿ ಬಗ್ಗೆ ಕಾಳಜಿಯಿದ್ದರೆ ವೇತನ ಹೆಚ್ಚಿಸಿ" ಎಂದು ಹೇಳಿದೆ.

ಮುಂದಿನ ವಿಚಾರಣೆ ಆಗಸ್ಟ್ 18ರಂದು ನಡೆಯಲಿದೆ.

ಇದನ್ನೂ ಓದಿ: ಕೇರಳ ಐಪಿಎಸ್ ಅಧಿಕಾರಿಯ ನೇತೃತ್ವದಲ್ಲಿ ಹೊರಹೊಮ್ಮಿದ ವಿಶಿಷ್ಟ ಪರಿಕಲ್ಪನೆ 'ಸ್ಟೂಡೆಂಟ್ ಪೊಲೀಸ್ ಕೆಡೆಟ್ಸ್'

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News