ಮಧ್ಯಪ್ರದೇಶ: ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಸಾಮಾಜಿಕ ಕಾರ್ಯಕರ್ತ ಝೈದ್ ಪಠಾಣ್ ಬಂಧನ

Update: 2022-08-16 14:24 GMT
Photo: Twitter

ಭೋಪಾಲ್:‌ ಮಧ್ಯಪ್ರದೇಶದ 'ಬುಲ್ಡೋಜರ್ ನ್ಯಾಯ'ದ ಪ್ರಬಲ ವಿಮರ್ಶಕ, ಸಾಮಾಜಿಕ ಕಾರ್ಯಕರ್ತ ಝೈದ್ ಪಠಾಣ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯಿದೆ (NSA) ಅಡಿಯಲ್ಲಿ ಆಗಸ್ಟ್ 15  ರಂದು ಖರ್ಗೋನ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ.

ಸಮುದಾಯಗಳ ನಡುವೆ ದ್ವೇಷವನ್ನು ಹರಡುವುದು, ಕೋಮು ಸೌಹಾರ್ದತೆಯನ್ನು ಕದಡುವುದು, ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ ಎಂದು ಇಂದೋರ್ ಕಲೆಕ್ಟರ್ ಮನೀಶ್ ಸಿಂಗ್ ಅವರು APNlive.com ಗೆ ತಿಳಿಸಿದ್ದಾರೆ.

ಪಠಾಣ್ ವಿರುದ್ಧ ಇಂದೋರ್‌ನ ಬಂಗಂಗಾ ಪೊಲೀಸ್ ಠಾಣೆಯಲ್ಲಿ ಮತ್ತು ಖಾರ್ಗೋನ್ ಪೊಲೀಸ್ ಠಾಣೆಯಲ್ಲಿ ಆರೋಪಗಳನ್ನು ದಾಖಲಿಸಲಾಗಿದೆ.

ಮಧ್ಯಪ್ರದೇಶದಲ್ಲಿ ಸ್ಥಳೀಯ ಅಧಿಕಾರಿಗಳು ನಡೆಸುತ್ತಿರುವ ಬುಲ್ಡೋಝರ್‌ ನ್ಯಾಯದ ವಿರುದ್ಧ ಮುಸ್ಲಿಂ ಸಮುದಾಯದ ಮುಖಂಡರೂ ಆಗಿರುವ ಪಠಾಣ್‌ ಮಾತನಾಡಿದ್ದರು.

ಖಾರ್ಗೋನ್‌ನಲ್ಲಿ ರಾಮನವಮಿ ಮೆರವಣಿಗೆಯಲ್ಲಿ ಹಿಂಸಾಚಾರ ನಡೆದ ಬಳಿಕ, ಸ್ಥಳೀಯ ಆಡಳಿತವು ಆರೋಪಿಗಳೆಂದು ಗುರುತಿಸಲ್ಪಟ್ಟವರಿಗೆ ಸೇರಿದ ಅಂಗಡಿಗಳು ಮತ್ತು ಕಟ್ಟಡಗಳನ್ನು ಧ್ವಂಸ ಮಾಡಲು ಪ್ರಾರಂಭಿಸಿತ್ತು, ಅವುಗಳಲ್ಲಿ ಹೆಚ್ಚಿನವು ಆರ್ಥಿಕವಾಗಿ ಹಿಂದುಳಿದ ಮುಸ್ಲಿಂ ಕುಟುಂಬಗಳ ಒಡೆತನದಲ್ಲಿದೆ.‌ ಗಲಭೆಗೆ ಸಂಬಂಧಿಸಿದಂತೆ 80 ಜನರನ್ನು ಬಂಧಿಸಲಾಗಿದೆ.

ವಾಸ್ತವವಾಗಿ, ಎಂಟು ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಒಳಗೊಂಡ ಸತ್ಯಶೋಧನಾ ತಂಡದ ಪ್ರಕಾರ, ರಾಮನವಮಿ ಸಮಯದಲ್ಲಿ ಈ ಪ್ರದೇಶದಲ್ಲಿ ನಡೆದ ಕೋಮು ಹಿಂಸಾಚಾರಕ್ಕೆ ಭಾರತೀಯ ಜನತಾ ಪಕ್ಷದ ಸರ್ಕಾರ ಮತ್ತು ಜಿಲ್ಲಾಡಳಿತ ನೇರ ಹೊಣೆ ಎಂದು ದಿ ವೈರ್ ವರದಿ ಮಾಡಿದೆ. ಈ ಕ್ರಮವು ಬಹುಪಾಲು ಏಕಪಕ್ಷೀಯವಾಗಿದೆ, ಅಂದರೆ ಮುಸ್ಲಿಮರ ವಿರುದ್ಧವಾಗಿದೆ ಎಂದು ಸತ್ಯಶೋಧನಾ ತಂಡವು ಹೇಳಿತ್ತು.
 

ಇದನ್ನೂ ಓದಿ | ʼಬುಲ್ಡೋಝರ್‌ ನ್ಯಾಯʼ: ಶೀಘ್ರ ಮಧ್ಯಪ್ರವೇಶಿಸುವಂತೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಮಾಜಿ ಅಧಿಕಾರಿಗಳ ಪತ್ರ

ಆಡಳಿತವು ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದೆ ಎಂದು ಪಠಾಣ್ ಸುದ್ದಿವಾಹಿನಿಗಳೊಡನೆ ಮತನಾಡುತ್ತಾ ಹೇಳಿದ್ದರು. ರಾಮನವಮಿ ಹಿಂಸಾಚಾರದ ಅಪರಾಧಿಗಳು ನಕಲಿ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ ಎಂದೂ ಅವರು ಹೇಳಿದ್ದರು.

ಕಳೆದ ವರ್ಷ ಆಗಸ್ಟ್‌ನಲ್ಲಿ, ಇಂದೋರ್‌ನಲ್ಲಿ ಹಗಲು ಹೊತ್ತಿನಲ್ಲಿ ಜನಸಮೂಹವೊಂದು ಮುಸ್ಲಿಂ ಬಳೆ ಮಾರಾಟಗಾರನನ್ನು ಥಳಿಸಿ ದರೋಡೆ ಮಾಡಿದ ಘಟನೆಯ ವಿರುದ್ಧ ಝೈದ್ ಪ್ರತಿಭಟಿಸಿದ್ದರು. ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಘಟನೆಯ ಬಗ್ಗೆ ಪ್ರತಿಕ್ರಿಯಿಸಿ, ಜನರು "ತನ್ನ ವ್ಯವಹಾರವನ್ನು ನಡೆಸಲು ನಕಲಿ ಹೆಸರನ್ನು ಬಳಸುತ್ತಿದ್ದಾರೆ ಎಂದು ತಿಳಿದ ನಂತರ" ಸಂತ್ರಸ್ತನ ಮೇಲೆ ದಾಳಿ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದರು.

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಕ್ಕಾಗಿ ಪಠಾಣ್ ಅವರನ್ನು ಇತರ ಇಬ್ಬರೊಂದಿಗೆ ಬಂಧಿಸಲಾಗಿದೆ ಎಂದು ನ್ಯೂಸ್‌ಕ್ಲಿಕ್ ವರದಿ ಮಾಡಿದೆ.

ಏತನ್ಮಧ್ಯೆ, ಹಲವಾರು ಕಾರ್ಯಕರ್ತರು ಪಠಾಣ್ ಬಂಧನದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ, ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಕೇಳಿದ್ದಾರೆ. ಖಾರ್ಗೋನ್ ಆಡಳಿತದಿಂದ ಮುಸ್ಲಿಮರ ಆಸ್ತಿಗಳನ್ನು ಅಕ್ರಮವಾಗಿ ಧ್ವಂಸಗೊಳಿಸುವುದರ ವಿರುದ್ಧ ಪಠಾಣ್ ಅವರು ನಿಲುವು ತೆಗೆದುಕೊಂಡಾಗಿನಿಂದ ಅವರನ್ನು ಗುರಿಯಾಗಿಸಲಾಗುತ್ತಿದೆ ಎಂದು ಕಾರ್ಯಕರ್ತರೊಬ್ಬರು ಟ್ವೀಟ್ ಮಾಡಿದ್ದಾರೆ.

ಗಂಭೀರ ಅಪರಾಧಗಳನ್ನು ಮಾಡುವವರಿಗೆ ತಕ್ಷಣವೇ ಜಾಮೀನು ಸಿಗುತ್ತದೆ ಆದರೆ ಸತ್ಯವನ್ನು ಮಾತನಾಡುವವರು ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ಮತ್ತೊಬ್ಬ ಕಾರ್ಯಕರ್ತ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News