ಹಬ್ಬ ಮುಗಿದ ಬಳಿಕದ ರಾಜಕೀಯ

Update: 2022-08-18 18:36 GMT

ಭಾರತ ಸ್ವಾತಂತ್ರ್ಯದ ಎಪ್ಪತ್ತೈದರ ಸಂಭ್ರಮ, ಜನ ಸಾಮಾನ್ಯರ ನಡುವೆ ಪರಂಪರಾಗತ ವಿಧಾನದಂತೆ ಅನೇಕತೆಯಲ್ಲಿ ಏಕತೆಯ ಪ್ರತಿಬಿಂಬ ಕಂಡು ವಿವಿಧ ರೀತಿಯ ಸಡಗರದೊಂದಿಗೆ ಇದೀಗ ಮುಗಿದಿದೆ. ಒಂದೆಡೆ ಪ್ರಧಾನಿ ಹೇಳಿದರು ಎಂಬ ಒಂದೇ ಕಾರಣಕ್ಕೆ ಜೀವಮಾನದಲ್ಲಿ ಈವರೆಗೂ ರಾಷ್ಟ್ರ ಧ್ವಜವನ್ನು ಕೈಯಲ್ಲಿ ಹಿಡಿಯದ ಅನೇಕರೂ ಮೂರು ದಿನ ತಿರಂಗಾದೆದುರು ನಿಂತರೆ, ಮತ್ತೊಂದೆಡೆ ಒಂದಿಷ್ಟು ಮಂದಿ ಅವರ ಬಯಸುವ ಬಣ್ಣದ ಧ್ವಜ ಕಾಣದೆ ತಿರಂಗಾದಿಂದ ವಿಮುಖರಾದದ್ದಿದೆ.... ಇಂತಹ ರಾಜಕೀಯ ದೊಂಬರಾಟದ ಹೊರತಾಗಿಯೂ ನೈಜ ಭಾರತೀಯ ಭಾರತದ ಎಲ್ಲ ಆಗು ಹೋಗುಗಳನ್ನು ನೋಡುತ್ತ, ಮತ್ತಷ್ಟು ದೇಶದ ಭವಿಷ್ಯವನ್ನು ಸಂವಿಧಾನದ ಚೌಕಟ್ಟಿನಲ್ಲಿ ಭದ್ರಗೊಳಿಸುವತ್ತ ಆಚರಣೆ, ಭಾಷಣ, ತಲೆಗೆ ಮೈಗೆ ಕಟ್ಟಿಕೊಂಡ ಭೂಷಣ ಎಲ್ಲವೂ ಸಾಂಕೇತಿಕ ...ನಿತ್ಯ ಜೀವನದ ಜಂಜಾಟದೆದುರೆಂಬ ಸತ್ಯ ಮನಗಂಡು ಹಬ್ಬ ಮುಗಿಸಿ ಮತ್ತೆ ಮುನ್ನಡಿಯಿಟ್ಟಿದ್ದಾನೆ....

 ಅದು ಮನೆಯೇ ಇರಲಿ ಅಥವಾ ದೇಶವೇ ಆಗಿರಲಿ ಅದೆಂತಹ ಬಡತನ, ಅಸಹಾಯಕತೆಯ ನಡುವೆಯೂ ಭರ್ಜರಿ ಹಬ್ಬ ಮಾಡುವ ಮಾನಸಿಕತೆ ನಮ್ಮ ಒಂದು ಅವಿಭಾಜ್ಯತೆ. ಆದರೆ ಅದೇ ಹಬ್ಬ ಮುಗಿದ ಮರುದಿನ ತಮ್ಮೆದುರಿನ ಯಾವುದೇ ಸಮಸ್ಯೆಗೆ ಶಾಶ್ವತ ಪರಿಹಾರಕಾಣದೆ ಪರಿತಪಿಸುವ ಪರಿಯೂ ನಮ್ಮದೇ. ಮೊನ್ನೆಯೂ ಆದದ್ದಷ್ಟೇ, ಎಪ್ಪತ್ತೈದೆಂಬ ಆಕರ್ಷಣೆ ನಮ್ಮೆದುರಿಗೆ ಕೆಲವು ಕ್ಷಣಗಳು ಎಲ್ಲವನ್ನೂ ಮರೆಸಿ ದೇಶವನ್ನು ಮೆರೆಸುವ ಹಂತಕ್ಕೆ ಕೊಂಡೊಯ್ದಿತ್ತು ನಿಜ. ಇದೀಗ ನಮ್ಮ ಗುರಿ ನೂರಕ್ಕೆ ಮುಟ್ಟಿದೆ. ದೇಶವೊಂದಕ್ಕೆ ನೂರೇನೂ ಸಾವಿರಾರು ವರ್ಷಗಳ ಸದೃಢ ಗುರಿ ತಪ್ಪಲ್ಲ, ಆದರೆ ಆ ಗುರಿ ಮತ್ತು ಅದನ್ನು ಸಾಧಿಸುವ ಪರಿ ನಿಚ್ಚಳವಾಗಿರಬೇಕಷ್ಟೆ ನಮ್ಮ ನಡುವಿನ ರಾಜಕೀಯ ಪಕ್ಷಗಳಿಗೆ.
 ರಾಜಕೀಯವಾಗಿ ಭಾರತ ಇನ್ನೂ ಒಂದರ್ಥದಲ್ಲಿ ಬಹಳಷ್ಟು ಸಮರ್ಪಕವಾಗಿ ಬೆಳೆಯಬೇಕಾದ ರಾಷ್ಟ್ರ ಎನ್ನಬಹುದು ನಮ್ಮ ನಡುವಿನ ಹಲವು ಅನುಭವಗಳಿಂದ. ಶತಮಾನ ಕಂಡ, ಜತೆಗೆ ನಿನ್ನೆ ಮೊನ್ನೆಯ ಅನೇಕ ರಾಜಕೀಯ ಪಕ್ಷಗಳು ನಮ್ಮ ಎದುರಿಗಿದ್ದರೂ ಜನರಲ್ಲಿ ರಾಜಕೀಯ ಪ್ರಬುದ್ಧತೆ ಸಂಪೂರ್ಣವಾಗಿ ಬೆಳೆಸಲು ಅವುಗಳಿನ್ನೂ ಯಶಸ್ವಿಯಾಗಿಲ್ಲ ಮತ್ತು ಅಂತಹ ಪ್ರಯತ್ನ ಮತ್ತು ಫಲಿತಾಂಶವೂ ಅವುಗಳಿಗೆ ಬೇಕಾಗಿಯೂ ಇಲ್ಲ. ಮತೀಯ ವಿಂಗಡನೆ, ಜಾತಿ ಪ್ರಭಾವ, ಭಾಷೆಯ ಪರಿಣಾಮದಂತಹ ವಿಚಾರಗಳಲ್ಲೇ ಆಡಳಿತ ಸೂತ್ರವನ್ನು ಸುಲಭವಾಗಿ ಕೈಗೆತ್ತಿಕೊಳ್ಳಬಹುದಾದ ಪ್ರಸ್ತುತ ದಿನಗಳಲ್ಲಂತೂ ಇಂತಹ ನಿರೀಕ್ಷೆಯೂ ಸಲ್ಲ ಜನಸಾಮಾನ್ಯರಿಂದ. ಎಪ್ಪತ್ತೈದರ ಸಂಭ್ರಮವು, ಸಂವಿಧಾನದ ಮೂಲಕ್ಕೆ ಧಕ್ಕೆ ಬರದೆ ದಿನಮಾನಗಳು ಸಾಂಗವಾಗಿ ಸಾಗಬೇಕಾದರೆ ರಾಜಕೀಯ ವ್ಯವಸ್ಥೆಗೊಂದು ಕಾಯಕಲ್ಪ ಬೇಕೇ ಬೇಕೆನ್ನುವ ಅಗತ್ಯತೆಯನ್ನು ಮಾತ್ರ ಒತ್ತಿ ಹೇಳಿದೆ.
  ಭಾರತದ ಮುಂದಿನ ಇಪ್ಪತ್ತೈದು ಮತ್ತು ತನ್ಮೂಲಕದ ನೂರು ಜಗತ್ತಿಗೆ ಮಾದರಿಯಾಗುವ ಮೊದಲು ನಮ್ಮಿಳಗಿನ ನೂರಾರು ಮಾರಿಯನ್ನು ಮೊದಲು ನಾವು ಒದ್ದೋಡಿಸಬೇಕಾಗಿದೆ. ಒಂದು ಕಾಲದ ಕಾಂಗ್ರೆಸ್ ಕೂಸಾಗಿದ್ದ ಭ್ರಷ್ಟಾಚಾರ, ಬಿಜೆಪಿಯ ಈ ದಿನಗಳಲ್ಲಂತೂ ರೌದ್ರಾವತಾರವನ್ನೇ ತಾಳಿದೆ. ನೀರು ಮುಟ್ಟಿದರೂ ಜಾತಿ ಹೆಸರಿನಲ್ಲಿ ರೌರವ ಹತ್ಯೆಯಾಗುವ ಕಾಲಘಟ್ಟದಲ್ಲಿ ಪರಧರ್ಮ ಸಹಿಷ್ಣುತೆಯ ಮಾತಂತೂ ರಾಜಕೀಯ ನೆಲೆಗಟ್ಟಿನಲ್ಲಿ ಶೂನ್ಯವಾಗಿದೆ. ಪರಿಸ್ಥಿತಿ ಹೀಗಿರುವಾಗ ವರ್ಷದಿಂದ ವರ್ಷಕ್ಕೆ ಕೇಳಿ ಬರುವ ಯೋಜನೆಗಳ ಸರಮಾಲೆ ಕೆಂಪು ಕೋಟೆಯ ಕಲ್ಲು ಕಲ್ಲುಗಳಿಗೂ ಭ್ರಮನಿರಸನವನ್ನುಂಟು ಮಾಡುವ ದಿನಗಳೂ ದೂರವಿಲ್ಲ ...ಮಹಾಜನತೆ ನಿದ್ದೆಯಿಂದ ಏಳದಿದ್ದರೆ.
   ದೇಶದ ಕಾನೂನಿನ ಕೆಲವು ಆಮೂಲಾಗ್ರ ಬದಲಾವಣೆಗಳು ಸಹ, ಯಾವುದೇ ರಾಜಕೀಯ ಪಕ್ಷಗಳ ಹಿಡಿತಕ್ಕೆ ತುರ್ತು ಬೇಕಾಗಿರುವ ಒಂದು ಅಸ್ತ್ರ. ಸಂವಿಧಾನದ ಮೂಲಭೂತ ತತ್ವಗಳನ್ನು ಬಿಟ್ಟ ಯಾವ ಚುನಾವಣಾ ಪ್ರಣಾಳಿಕೆಗೂ ಆಸ್ಪದವಿಲ್ಲದ ಮತ್ತು ಪ್ರಣಾಳಿಕೆ ಅನುಷ್ಠಾನದ ಕುಣಿಕೆ ರಾಜಕೀಯ ಪಕ್ಷಗಳ ಮೇಲಿರಬೇಕಾದ ಒಂದು ತೂಗುಗತ್ತಿ ಸಿದ್ಧವಾಗಲೇಬೇಕಾಗಿದೆ. ಇದೀಗ ಬೆಕ್ಕಿಗೆ ಗಂಟೆ ಕಟ್ಟಬೇಕಾದವರು, ಅದರಲ್ಲೂ ಕಳ್ಳ ಬೆಕ್ಕಿಗಂತೂ, ಮನೆಯ ಯಜಮಾನನೇ ಆಗಿರುವಂತೆ ಈ ದೇಶದ ಯಜಮಾನರಾಗಿರುವ ಸಮಸ್ತ ನಾಗರಿಕರು ಈ ದಿಸೆಯಲ್ಲಿ ಸಾಗಿದರೆ ಮಾತ್ರ ನಮ್ಮ ನೂರರ ಪಯಣ ಸುಖಕರವಾಗಿರಬಹುದೇ ವಿನಹ ರಾಜಕೀಯ ಪಕ್ಷಗಳಿಗೊಂದು ಸುಪ್ಪತ್ತಿಗೆಯ ಕಾಣಿಕೆಯಾಗಬಹುದಷ್ಟೇ ಅದು. ಈ ಎಚ್ಚರ ದೇಶದ ಎಪ್ಪತ್ತೈದರಲ್ಲಿ ನಮಗೆ ಮೂಡಿದರೆ ನೂರಾಗುವಾಗ, ಈಗಿನ ಇಪ್ಪತ್ತೈದಿನವರು ಯಾರು ಹೇಳದೆಯೇ ತಿರಂಗಾ ಎತ್ತಿ ಕೊಂಡಾಡಿಯಾರು ಜಾತಿ, ಮತ, ಧರ್ಮ, ಭಾಷೆಯ ಭೇದ ಮರೆತು ಒಂದೇ ಬಾವಿಯ ನೀರು ಕುಡಿಯುತ್ತ!

Writer - ಕಲ್ಲಚ್ಚು ಮಹೇಶ ಆರ್. ನಾಯಕ್

contributor

Editor - ಕಲ್ಲಚ್ಚು ಮಹೇಶ ಆರ್. ನಾಯಕ್

contributor

Similar News