ದಲಿತರು ವಿದ್ಯೆ ಕಲಿಯುವುದು ಅಪರಾಧವೇ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ರಾಜಸ್ಥಾನದ ಶಾಲೆಯೊಂದರಲ್ಲಿ ಕುಡಿಯುವ ನೀರು ಇರುವ ಮಡಕೆಯನ್ನು ಮುಟ್ಟಿದ ಕಾರಣಕ್ಕಾಗಿ ಶಿಕ್ಷಕನೇ ದಲಿತ ವಿದ್ಯಾರ್ಥಿಯೊಬ್ಬನನ್ನು ಥಳಿಸಿ ಕೊಂದ ಘಟನೆ ದೇಶಾದ್ಯಂತ ಸುದ್ದಿಯಾಯಿತು. ರಾಜಸ್ಥಾನದ ಸರಕಾರದೊಳಗಿರುವ ಕೆಲವು ನಾಯಕರು ಈ ಪ್ರಕರಣವನ್ನು ಮುಂದಿಟ್ಟು ರಾಜೀನಾಮೆಯ ನಾಟಕವನ್ನೂ ಆಡಿದರು. ಕೆಲವು ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳು ಕೂಡ ತಮ್ಮ ರಾಜೀನಾಮೆಯನ್ನು ನೀಡಿದರು. ಇದೀಗ ಪ್ರಕರಣ ತಣ್ಣಗಾಗಿದೆ. ರಾಜೀನಾಮೆಯ ಬೆದರಿಕೆಯೊಡ್ಡಿದವರಿಗೆ ಸರಕಾರವನ್ನು ಮುಜುಗರಕ್ಕೀಡು ಮಾಡುವುದು ಮುಖ್ಯ ಉದ್ದೇಶವಾಗಿತ್ತೇ ಹೊರತು, ಇಂತಹದೊಂದು ಅಸ್ಪಶ್ಯತೆಯನ್ನು ಸಂಪೂರ್ಣ ಇಲ್ಲವಾಗಿಸುವುದು ಗುರಿಯೇ ಆಗಿರಲಿಲ್ಲ. ರಾಜಸ್ಥಾನದ ಸರಕಾರ ನಿಂತಿರುವುದೇ ಮೇಲ್‌ಜಾತಿಯ ದಬ್ಬಾಳಿಕೆಗಳ ತಳಹದಿಯಲ್ಲಿ. ಸರಕಾರದೊಳಗಿರುವ ನಾಯಕರೇ ಇಲ್ಲಿ ಬಹಿರಂಗವಾಗಿ ಅತ್ಯಾಚಾರಗಳನ್ನು ಬೆಂಬಲಿಸುವಂತಹ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಹೀಗಿರುವಾಗ, ದಲಿತರ ಮೇಲೆ ನಡೆಯುವ ದೌರ್ಜನ್ಯಗಳನ್ನು ಈ ಸರಕಾರ ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎಂದು ನಿರೀಕ್ಷಿಸುವುದು ತಪ್ಪಾಗುತ್ತದೆ. ನೀರಿನ ಮಡಕೆ ಮುಟ್ಟಿದ ಕಾರಣಕ್ಕಾಗಿ ಭೀಕರವಾಗಿ ಥಳಿಸಿ ಕೊಲ್ಲಲ್ಪಟ್ಟ ವಿದ್ಯಾರ್ಥಿಯ ಪ್ರಕರಣ ರಾಜಸ್ಥಾನಕ್ಕಷ್ಟೇ ಸೀಮಿತವಾದುದಲ್ಲ.
ಶಾಲೆಗಳಲ್ಲಿ ವಿದ್ಯಾರ್ಥಿಗಳು ಈಗಲೂ ಮೇಲ್‌ಜಾತಿಯಿಂದ ದೌರ್ಜನ್ಯಗಳನ್ನು ಎದುರಿಸುತ್ತಲೇ ವಿದ್ಯೆಯನ್ನು ಕಲಿಯಬೇಕಾಗುತ್ತದೆ ಎನ್ನುವ ಅಂಶವನ್ನು ಇಂತಹ ಪ್ರಕರಣಗಳು ಜಗತ್ತಿಗೆ ತೆರೆದಿಡುತ್ತವೆ. ಅವರ ಮೊದಲ ಅಸಹನೆಯೇ, ದಲಿತರು ವಿದ್ಯೆ ಕಲಿಯುವುದು. ಅದರ ಸಿಟ್ಟನ್ನು ಅವರು ಬೇರೆ ಬೇರೆ ನೆಪಗಳಲ್ಲಿ ತೀರಿಸುವ ಯತ್ನವನ್ನು ಮಾಡುತ್ತಾರೆ. ಇಲ್ಲಿ ಥಳಿಸಲ್ಪಟ್ಟ ವಿದ್ಯಾರ್ಥಿ ಮೃತಪಟ್ಟ ಕಾರಣಕ್ಕಾಗಿ ಪ್ರಕರಣ ಬೆಳಕಿಗೆ ಬಂದಿದೆ. ಆತ ಗಾಯಾಳುವಾಗಿ ಶಾಶ್ವತ ಮನೆಯಲ್ಲಿರುತ್ತಿದ್ದರೆ ಮಾಧ್ಯಮಗಳಿಗೆ ಸುದ್ದಿಯೇ ಆಗುತ್ತಿರಲಿಲ್ಲ. ಇದೀಗ ಇನ್ನೊಂದು ಪ್ರಕರಣ ಉತ್ತರ ಪ್ರದೇಶದಲ್ಲಿ ಸಂಭವಿಸಿದೆ. ಸಮವಸ್ತ್ರ ಧರಿಸಿಲ್ಲ ಎನ್ನುವ ಒಂದೇ ಒಂದು ಕಾರಣವನ್ನು ಮುಂದಿಟ್ಟುಕೊಂಡು, ಸ್ಥಳೀಯ ಗ್ರಾಮದ ಮುಖಂಡನೊಬ್ಬ ದಲಿತ ವಿದ್ಯಾರ್ಥಿನಿಯೊಬ್ಬಳನ್ನು ಬರ್ಬರವಾಗಿ ಥಳಿಸಿ, ಶಾಲೆಯಿಂದ ಹೊರಗೆ ದಬ್ಬಿದ್ದಾನೆ. ‘ಸಮವಸ್ತ್ರ ಹೊಲಿದು ಸಿಕ್ಕಿದ ಬಳಿಕ ಧರಿಸಿಕೊಂಡು ಬರುತ್ತೇನೆ’ ಎಂದರೂ ಅವಳಿಗೆ ವಿನಾಯಿತಿ ದೊರಕಲಿಲ್ಲ. ಇಷ್ಟಕ್ಕೂ ಥಳಿಸಿರುವುದು ಶಾಲೆಯ ಉಪನ್ಯಾಸಕರಲ್ಲ, ಸ್ಥಳೀಯ ಗ್ರಾಮದ ಮೇಲ್‌ಜಾತಿಯ ಮುಖಂಡ. ಮೇಲ್‌ಜಾತಿ ಎನ್ನುವ ಅರ್ಹತೆ ಬಿಟ್ಟರೆ ಶಾಲೆಯೊಳಗೆ ಪ್ರವೇಶಿಸುವ ಅರ್ಹತೆಯೇ ಈತನಿಗೆ ಇದ್ದಿರಲಿಲ್ಲ. ಇಷ್ಟಾದರೂ ಶಾಲೆಯೊಳಗೆ ಪ್ರವೇಶಿಸಿ, ವಿದ್ಯಾರ್ಥಿನಿಯ ಜಾತಿ ನಿಂದನೆಗೈದು, ಥಳಿಸಿ ಶಾಲೆಯಿಂದ ಹೊರಹಾಕಿದ್ದಾನೆ. ಉತ್ತರ ಪ್ರದೇಶದ ಗ್ರಾಮೀಣ ಪ್ರದೇಶವೊಂದರ ಶಾಲೆಯಲ್ಲಿ ‘ಸಮವಸ್ತ್ರ’ದ ನೆಪವೊಡ್ಡಿ ದಲಿತ ವಿದ್ಯಾರ್ಥಿನಿಯನ್ನು ಹೊರ ಹಾಕುವುದೇ ಶಿಕ್ಷಣದ ಅಣಕವಾಗಿದೆ. ದಲಿತ ವಿದ್ಯಾರ್ಥಿಗಳು ಶಾಲೆ ತೊರೆಯುವ ಪ್ರಕರಣ ಹೆಚ್ಚುತ್ತಿರುವ ಈ ದಿನಗಳಲ್ಲಿ ಸಮವಸ್ತ್ರ ಮುಂದಿಟ್ಟು ವಿದ್ಯಾರ್ಥಿನಿಯನ್ನು ಶಿಕ್ಷಣ ಪಡೆಯದಂತೆ ತಡೆಯುವುದರ ಹಿಂದಿನ ಉದ್ದೇಶವೇ ಬೇರೆಯಿದೆ.
ಅವರಿಗೆ ಸಮವಸ್ತ್ರಕ್ಕಿಂತಲೂ ದಲಿತ ವಿದ್ಯಾರ್ಥಿನಿ ಕಲಿಯುತ್ತಿರುವುದೇ ಅಸಹನೆಯ ವಿಷಯವಾಗಿದೆ. ಸಮವಸ್ತ್ರವನ್ನು ಮುಂದಿಟ್ಟು ತಮ್ಮ ಅಸಹನೆಯನ್ನು ಪ್ರದರ್ಶಿಸಿದ್ದಾರೆ. ಇಂದಿನ ದಿನಗಲಲ್ಲಿ ಬಡತನ, ಅನಕ್ಷರತೆಯಿಂದ ನರಳುತ್ತಿರುವ ಒಂದು ಸಮುದಾಯದಿಂದ ವಿದ್ಯಾರ್ಥಿನಿಯೊಬ್ಬಳು ಶಾಲೆಯ ಮೆಟ್ಟಿಲು ತುಳಿದಿರುವುದೇ ಸ್ವಾಗತಾರ್ಹ ವಿದ್ಯಮಾನವಾಗಿರುವಾಗ, ಆಕೆಯನ್ನು ಸಮವಸ್ತ್ರದ ಹೆಸರಿನಲ್ಲಿ ಶಿಕ್ಷಣದಿಂದ ಹೊರಗಿಡುವುದು ಎಷ್ಟು ಸರಿ? ನೀರಿನ ಮಡಕೆ ಮುಟ್ಟಿದ ಕಾರಣಕ್ಕೆ ಕೊಲೆಯಾದ ವಿದ್ಯಾರ್ಥಿಗೂ, ಈಕೆಗೂ ದೊಡ್ಡ ವ್ಯತ್ಯಾಸವೇನೂ ಇಲ್ಲ. ಇಲ್ಲಿ ಹಲ್ಲೆ ನಡೆದ ಬಳಿಕ ಆಕೆ ಜೀವಂತವಾಗಿದ್ದಾಳೆ ಎನ್ನುವುದಷ್ಟೇ ಸಮಾಧಾನ ತರುವ ವಿಷಯ. ಖೈರ್ಲಾಂಜಿ ಘಟನೆಯನ್ನು ಈ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳಬೇಕಾಗಿದೆ. ಅಲ್ಲಿ, ದಲಿತ ಹೆಣ್ಣು ಮಕ್ಕಳು ಸೈಕಲ್‌ಗಳಲ್ಲಿ ಶಾಲೆಗೆ ತೆರಳುವುದೇ ಊರಿನ ಜನರಿಗೆ ಸಹಿಸುವುದಕ್ಕೆ ಅಸಾಧ್ಯವಾಯಿತು. ಅಂತಿಮವಾಗಿ ಇಡೀ ಕುಟುಂಬವನ್ನೇ ಗ್ರಾಮಸ್ಥರು ಸೇರಿ ಬರ್ಬರವಾಗಿ ಕೊಂದು ಹಾಕಿದರು. ದಲಿತರು ಮದುವೆಯಲ್ಲಿ ಕುದುರೆಯ ಮೇಲೆ ಕೂರುವುದು ಅಪರಾಧ, ಮೀಸೆ ಬೆಳೆಸುವುದು ಅಪರಾಧ, ಬೈಕ್ ಏರುವುದು ಅಪರಾಧ ಎನ್ನುವ ಮನಸ್ಥಿತಿ ದೇಶಾದ್ಯಂತ ಬೆಳೆಯುತ್ತಿದೆ. ಇದೀಗ ದಲಿತರು ಕಲಿಯುವುದು ಕೂಡ ಅಪರಾಧ ಎನ್ನುವ ವಾತಾವರಣವೊಂದು ಸೃಷ್ಟಿಯಾಗುತ್ತಿದೆ.
ಅದರ ಪರಿಣಾಮವಾಗಿಯೇ ಬೇರೆ ಬೇರೆ ನೆಪಗಳನ್ನು ಮುಂದಿಟ್ಟುಕೊಂಡು ಶಾಲೆಗಳಲ್ಲಿ ದಲಿತ ವಿದ್ಯಾರ್ಥಿಗಳ ಮೇಲೆ ಹಲ್ಲೆಗಳು ನಡೆಯುತ್ತಿವೆ. ಎಲ್ಲ ಅಸ್ಪಶ್ಯತೆಗಳನ್ನು ಸಹಿಸಿದರೆ ಮಾತ್ರ ಶಿಕ್ಷಣ ಎನ್ನುವಂತಹ ಸ್ಥಿತಿ ಶಾಲೆಗಳಲ್ಲಿ ನಿರ್ಮಾಣವಾಗುತ್ತಿದೆ.ಇಂದಿಗೂ ಉತ್ತರ ಭಾರತದ ರಾಜ್ಯಗಳಲ್ಲಿ ದಲಿತರು ಮೇಲ್‌ಜಾತಿ ವಿದ್ಯಾರ್ಥಿಗಳ ಜೊತೆಗೆ ಊಟ ಮಾಡುವಂತಿಲ್ಲ. ಅವರು ಕುಡಿಯುವ ನೀರಿನ ಮಡಕೆಯನ್ನು ಬಳಸುವಂತಿಲ್ಲ. ಅವರ ಶೌಚಾಲಯಗಳನ್ನು ಇವರು ಬಳಸುವಂತಿಲ್ಲ. ಇವನ್ನೆಲ್ಲ ಪ್ರತಿಭಟಿಸಿದರೆ ಮೇಲ್‌ಜಾತಿಯ ಶಿಕ್ಷಕರಿಂದ, ಸಮಾಜದ ಮುಖಂಡರಿಂದ ಹಲ್ಲೆಗಳನ್ನು ಎದುರಿಸುವುದಕ್ಕೆ ಸಿದ್ಧರಾಗಬೇಕಾಗುತ್ತದೆ. 2016ರಲ್ಲಿ ನಡೆದ ರಾಷ್ಟ್ರೀಯ ಮಾದರಿ ಸಮೀಕ್ಷೆಯೊಂದರ ಪ್ರಕಾರ, ಶಾಲೆಯಿಂದ ಹೊರಗುಳಿದ ದಲಿತ ವಿದ್ಯಾರ್ಥಿಗಳ ಸಂಖ್ಯೆ 20 ಲಕ್ಷಕ್ಕೂ ಅಧಿಕ. ಸಾಮಾಜಿಕ ಕಾರಣಗಳೇ ಇವರು ಶಿಕ್ಷಣದಿಂದ ಹೊರಗುಳಿಯಲು ಮುಖ್ಯ ಕಾರಣ ಎನ್ನುವುದನ್ನು ವರದಿ ಬಹಿರಂಗ ಪಡಿಸಿದೆ. ಶಿಕ್ಷಣ ಸಚಿವಾಲಯದ ವರದಿಯೊಂದರ ಪ್ರಕಾರ, 2019-20ರಲ್ಲಿ ಶಿಕ್ಷಣ ವಂಚಿತ ದಲಿತ ಮತ್ತು ಬುಡಕಟ್ಟು ವಿದ್ಯಾರ್ಥಿಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಿವೆ. ಸರಕಾರಿ ಶಾಲೆಗಳಲ್ಲಿ ಶೇ. 30ರಷ್ಟು ವಿದ್ಯಾರ್ಥಿಗಳು ಶಾಲೆಗೆ ಮತ್ತೆ ಮರಳಲೇ ಇಲ್ಲ. ಕೊರೋನೋತ್ತರ ದಿನಗಳಲ್ಲಿ ಶಾಲೆಯಿಂದ ಹೊರದಬ್ಬಲ್ಪಟ್ಟವರ ಸಂಖ್ಯೆ ಮಿತಿ ಮೀರಿದೆ. ಈ ಸ್ಥಿತಿಗೆ ಆರ್ಥಿಕ ಕಾರಣಗಳೂ ಸೇರಿಕೊಂಡಿವೆ. ಲಾಕ್‌ಡೌನ್ ಅವಧಿಯಲ್ಲಿ ಹಸಿವು, ಬಡತನ, ನಿರುದ್ಯೋಗ ಕಾರಣಗಳಿಂದ ಮಕ್ಕಳು ಅನಿವಾರ್ಯವಾಗಿ ಕೆಲಸಕ್ಕೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಯಿತು. ಜೀತ ಪದ್ಧತಿಯಂತಹ ಉರುಳಿಗೆ ಅವರು ಸಿಲುಕಿಕೊಂಡರು. ಲಾಕ್‌ಡೌನ್ ಬಳಿಕ ಅವರನ್ನು ಮರಳಿ ಶಾಲೆಗೆ ಕರೆತರುವಲ್ಲಿ ಸರಕಾರ ಯಾವುದೇ ಯೋಜನೆಯನ್ನು ರೂಪಿಸಿಲ್ಲ.
ಇಂತಹ ಹೊತ್ತಿನಲ್ಲಿ ಶಾಲೆಗಳಲ್ಲಿ ಸಮವಸ್ತ್ರದ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಹೊರ ಹಾಕುವುದೆಂದರೆ, ಸರಕಾರದ ನೇತೃತ್ವದಲ್ಲೇ ವಿದ್ಯಾರ್ಥಿಗಳನ್ನು ಶಿಕ್ಷಣ ವಂಚಿತರನ್ನಾಗಿಸುವುದು ಎಂದು ಅರ್ಥ. ಜೊತೆಗೆ ಬಿಸಿಯೂಟದಂತಹ ಯೋಜನೆಗಳಿಗೂ ಕಲ್ಲು ಹಾಕುವುದಕ್ಕೆ ಸರಕಾರ ಯೋಚಿಸುತ್ತಿವೆ. ಇವೆಲ್ಲವೂ ಅಂತಿಮವಾಗಿ ದೊಡ್ಡ ಸಂಖ್ಯೆಯ ದಲಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶಾಲೆಯಿಂದ ಹೊರದಬ್ಬಲ್ಪಡಲಿದ್ದಾರೆ. ಇದು ಹೀಗೇ ಮುಂದುವರಿದರೆ, ಮುಂದೊಂದು ದಿನ ದಲಿತರು ಶಾಲೆ ಕಲಿಯುವುದೇ ಅಪರಾಧ ಎಂದು ಘೋಷಿಸುವಂತಹ ಕಾಯ್ದೆಯೊಂದು ಜಾರಿಗೆ ಬಂದರೆ ಅದರಲ್ಲಿ ಅಚ್ಚರಿಯಿಲ್ಲ.