ದ್ವೇಷದ ಪುನರುತ್ಥಾನಕ್ಕಾಗಿ ಸರಕಾರದ ಜಮೀನು ಕಬಳಿಕೆ

Update: 2022-08-26 05:01 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಬೃಹತ್ ಕೈಗಾರಿಕೆಗಳು, ಉದ್ಯಮಗಳ ಹೆಸರಿನಲ್ಲಿ ರೈತರ ಭೂಮಿಯನ್ನು ಕಿತ್ತುಕೊಳ್ಳುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇದೆ. ಹಣದ ಆಮಿಷ, ಪೊಲೀಸರ ಲಾಠಿ, ಕಾನೂನು ಕಾಯ್ದೆಗಳ ಮೂಲಕ ಬೃಹತ್ ಉದ್ಯಮಿಗಳು ಕೃಷಿ ಭೂಮಿಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ವಶಪಡಿಸಿಕೊಂಡ ಬಳಿಕ ಇಲ್ಲಿ ಕೈಗಾರಿಕೆಗಳು ತಲೆಯೆತ್ತಿದವೋ ಇಲ್ಲವೋ ಎನ್ನುವುದರ ಕುರಿತಂತೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಪರಿಣಾಮವಾಗಿ ಅಭಿವೃದ್ಧಿಯ ಹೆಸರಿನಲ್ಲಿ ಭೂಮಿಯನ್ನು ವಶಪಡಿಸಿಕೊಂಡು ಅದನ್ನು ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಬಳಸಿಕೊಳ್ಳುತ್ತಿರುವ ಪ್ರಕರಣಗಳೂ ಹೆಚ್ಚುತ್ತಿವೆ. ಕೃಷಿ ಭೂಮಿಯ ಒತ್ತುವರಿಯ ವಿರುದ್ಧ ವಿವಿಧೆಡೆ ಆಗಾಗ ಪ್ರತಿಭಟನೆಗಳು ಭುಗಿಲೇಳುತ್ತವೆ. ಅವುಗಳು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತ್ತವೆ. ಆಗ ಸರಕಾರದ ನೀತಿಗಳು ಒಂದಿಷ್ಟು ಚರ್ಚೆಯಾಗುತ್ತವೆ. ರೈತರ ಸಂಘಟಿತ ಪ್ರತಿಭಟನೆಯ ಕಾರಣದಿಂದ ಕೃಷಿ ಭೂಮಿಯ ಒತ್ತುವರಿ ಅಷ್ಟು ಸುಲಭವಿಲ್ಲ. ರೈತರು ಮತ್ತು ಉದ್ಯಮಿಗಳ ನಡುವಿನ ಸಂಘರ್ಷದ ಕಾರಣದಿಂದ ಹಲವು ಕೈಗಾರಿಕಾ ಯೋಜನೆಗಳು ಸ್ಥಗಿತಗೊಂಡ ಉದಾಹರಣೆಗಳೂ ಇವೆ. ಆದರೆ ಇದೇ ಸಂದರ್ಭದಲ್ಲಿ ಅಭಿವೃದ್ಧಿಯೊಂದಿಗೆ ಯಾವ ಸಂಬಂಧವೂ ಇಲ್ಲದ ಕೆಲವು ಉಂಡಾಡಿ ಸಂಘಟನೆಗಳು ಸಾಂಸ್ಕೃತಿಕ ಪುನರುತ್ಥಾನ, ಜನಸೇವೆ ಎಂಬಿತ್ಯಾದಿ ಹೆಸರಿನಲ್ಲಿ ಸರಕಾರದ, ಜನಸಾಮಾನ್ಯರ ಜಮೀನುಗಳನ್ನು ನುಂಗಿ ಹಾಕುತ್ತಿರುವುದು ಎಲ್ಲೂ ಸುದ್ದಿಯಾಗುವುದೇ ಇಲ್ಲ. ಯಾವುದೋ ಬೃಹತ್ ಉದ್ಯಮಗಳಿಗೆ, ಕೈಗಾರಿಕೆಗಳಿಗೆ, ಕೃಷಿ ಚಟುವಟಿಕೆಗಳಿಗೆ ಅಥವಾ ಜನಪರ ಕಾರ್ಯಕ್ರಮಗಳಿಗೆ ಉಪಯೋಗವಾಗಬಹುದಾದ ಸರಕಾರಿ ಭೂಮಿಗಳನ್ನು, ಗೋಮಾಳಗಳನ್ನು ಸದ್ದಿಲ್ಲದೆ ಕೆಲವು ಸಂಘಟನೆಗಳು ಒತ್ತುವರಿ ಮಾಡಿಕೊಳ್ಳುತ್ತಾ ಬರುತ್ತಿದ್ದು, ಸರಕಾರವೂ ಈ ಒತ್ತುವರಿಗೆ ಒತ್ತಾಸೆಯಾಗಿ ನಿಂತಿದೆ. ಬೀದಿಯಲ್ಲಿರುವ ಜನರಿಗೆ ಮನೆಗಳನ್ನು ನಿರ್ಮಾಣ ಮಾಡಲು ಅಥವಾ ಇತರ ನೈಜ ಅಭಿವೃದ್ಧಿಯ ಕೆಲಸಗಳಿಗೆ ಭೂಮಿ ನೀಡುವ ಪ್ರಸ್ತಾವ ಬಂದಾಗ ಕೈ ಚೆಲ್ಲುವ ಸರಕಾರ, ಕೆಲವು ನಿರ್ದಿಷ್ಟ ಸಂಘಟನೆಗಳಿಗೆ ಮಾತ್ರ ನೂರಾರು ಎಕರೆ ಭೂಮಿಗಳನ್ನು ಅಗ್ಗದ ಬೆಲೆಗೆ ಹಂಚುತ್ತಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬರುತ್ತಿದೆ. ಇದರ ವಿರುದ್ಧ ಜನಸಾಮಾನ್ಯರು ಈವರೆಗೆ ಸಂಘಟಿತವಾಗಿ ಪ್ರತಿಭಟಿಸದೇ ಇರುವ ಪರಿಣಾಮವಾಗಿ, ಈ ಜಮೀನು ಅತಿಕ್ರಮ ನಿರಂತರವಾಗಿ ಮುಂದುವರಿಯುತ್ತಲೇ ಇದೆ.

ಈ ದೇಶದಲ್ಲಿ ರಾಷ್ಟ್ರೋತ್ಥಾನ ಪರಿಷತ್ ಎನ್ನುವ ಸಂಘಟನೆಯೊಂದಿದೆೆ. ಆರೆಸ್ಸೆಸ್‌ನ ಭಾಗವಾಗಿರುವ ಈ ಪರಿಷತ್, ಸಾಹಿತ್ಯ, ಸಂಸ್ಕೃತಿಯ ಪುನರುತ್ಥಾನದ ಹೆಸರಿನಲ್ಲಿ ಸುಳ್ಳು ಇತಿಹಾಸಗಳನ್ನು ಜನರ ನಡುವೆ ಹರಡುತ್ತಾ ಬಂದಿರುವುದೇ ಇದರ ಸಾಧನೆ. ಇದೊಂದು ಅಪ್ಪಟ ಅನುತ್ಪಾದಕ ಸಂಸ್ಥೆ. ಆರೆಸ್ಸೆಸ್ ವಿಸರ್ಜಿಸುವ ಬೂಸಾಗಳನ್ನು ಮುದ್ರಿಸುತ್ತಾ, ಅದನ್ನು ಶಾಲೆ, ಕಾಲೇಜು ಸರಕಾರಿ ಲೈಬ್ರರಿಗಳಿಗೆ ಹಂಚುತ್ತಾ ಈ ದೇಶವನ್ನು ಮಾನಸಿಕವಾಗಿ ಗುಲಾಮಿ ವ್ಯವಸ್ಥೆಯೆಡೆಗೆ ಮರಳಿ ಕೊಂಡೊಯ್ಯುವುದಕ್ಕಾಗಿಯೇ ಇರುವ ಸಂಘಟನೆಯಿದು. ದೇಶಾದ್ಯಂತ ಇದರ ನೂರಾರು ಶಾಖೆಗಳಿವೆ. ಇದು, ಒಂದು ನಿರ್ದಿಷ್ಟ ರಾಜಕೀಯ ಅಜೆಂಡಾ ಇರುವ ಅಪ್ಪಟ ರಾಜಕೀಯ ಸಂಸ್ಥೆ. ಆರೆಸ್ಸೆಸ್ ಇಂತಹ ಹತ್ತು ಹಲವು ಮರಿ ಸಂಸ್ಥೆಗಳ ವೇಷಗಳಲ್ಲಿ ದೇಶಾದ್ಯಂತ ಹರಡಿಕೊಂಡಿದೆ. ಇದೀಗ ಯಾವೆಲ್ಲ ರಾಜ್ಯಗಳಲ್ಲಿ ಬಿಜೆಪಿ ಆಳ್ವಿಕೆ ನಡೆಯುತ್ತಿದೆಯೋ, ಅಲ್ಲಿ ಸರಕಾರದೊಂದಿಗೆ ಒಳ ಮಾತುಕತೆ ನಡೆಸಿ ಸದ್ದಿಲ್ಲದೆ ಸರಕಾರಿ ಜಮೀನುಗಳನ್ನು ನುಂಗಿ ಹಾಕುತ್ತಿವೆ. ಕೈಗಾರಿಕೆಯಂತಹ ಯೋಜನೆಗಳಿಗೆ ಭೂಮಿಯನ್ನು ನೀಡುವಾಗ ಸಾವಿರ ಆಕ್ಷೇಪಗಳನ್ನು ಎತ್ತುವ ಸಂಘಟನೆಗಳು, ಈ ಅನುತ್ಪಾದಕ ಸಂಘಟನೆಯೊಂದು ನೂರಾರು ಎಕರೆ ಸಾರ್ವಜನಿಕ ಆಸ್ತಿಗಳನ್ನು ನುಂಗುತ್ತಿರುವಾಗ ಅದನ್ನು ಅಸಹಾಯಕವಾಗಿ ನೋಡುತ್ತಾ ನಿಂತಿರುವುದು ವಿಪರ್ಯಾಸವೇ ಸರಿ.

ರಾಷ್ಟ್ರೋತ್ಥಾನ ಪರಿಷತ್‌ಗೆ, ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಹೆಸರಘಟ್ಟ ಬಳಿ 9.32 ಎಕರೆ ಜಮೀನನ್ನು ಸರಕಾರ ಮಂಜೂರು ಮಾಡಲು ಹೊರಟಿರುವುದು ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಏಳೂವರೆ ಕೋಟಿ ರೂಪಾಯಿ ಬೆಲೆಬಾಳುವ ಭೂಮಿಯನ್ನು ಬರೇ ಒಂದೂವರೆ ಕೋಟಿ ರೂಪಾಯಿ ಜುಜುಬಿ ಬೆಲೆಗೆ ಮಂಜೂರು ಮಾಡಲಾಗಿದೆ ಎಂದು ವರದಿಗಳು ಆರೋಪಿಸಿವೆ. ರಾಷ್ಟ್ರೋತ್ಥಾನ ಪರಿಷತ್‌ಗೆ ಗೋಮಾಳವನ್ನು ಮಂಜೂರು ಮಾಡುವ ಬಗ್ಗೆ ಕಾನೂನು ಇಲಾಖೆಯ ಅಭಿಪ್ರಾಯವನ್ನು ಕೋರಿದಾಗ, ‘ಈ ಸಂಸ್ಥೆ ಖಾಸಗಿಯೇ ಹೊರತು, ನೋಂದಾಯಿತ ಸಂಸ್ಥೆಯಲ್ಲ’ ಎಂದು ಸಲಹೆ ನೀಡಿತ್ತು. ಕಂದಾಯ ಇಲಾಖೆಯೂ ಗೋಮಾಳ ಮಂಜೂರನ್ನು ವಿರೋಧ ಮಾಡಿತ್ತು. ಈ ಎಲ್ಲ ವಿರೋಧಗಳ ನಡುವೆಯೇ ಜಮೀನನ್ನು ಮಂಜೂರು ಮಾಡಿಕೊಡಲಾಗಿದೆ. ಇದೇ ಸಂದರ್ಭದಲ್ಲಿ, ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನಲ್ಲಿ, ಕಲಬುರಗಿ ಜಿಲ್ಲೆಯ ಶರಣ ಸಿರಸಿ ಪಟ್ಟಣದಲ್ಲಿ ಕೂಡ ರಾಷ್ಟ್ರೋತ್ಥಾನ ಪರಿಷತ್ ಸರಕಾರಿ ಜಮೀನಿನ ಮೇಲೆ ಕಣ್ಣು ಹಾಕಿದೆ. ಆರೆಸ್ಸೆಸ್‌ನ ಭಾಗವಾಗಿರುವ ವನವಾಸಿ ಕಲ್ಯಾಣ ಸಂಸ್ಥೆ, ಜನಸೇವಾ ಟ್ರಸ್ಟ್‌ಗಳು ಕೂಡ ರಾಜ್ಯದ ಹಲವೆಡೆ ಸರಕಾರಿ ಜಮೀನು, ಮುಖ್ಯವಾಗಿ ಗೋಮಾಳಗಳನ್ನು ತೀರಾ ಜುಜುಬಿ ಬೆಲೆಗೆ ಯಾವ ಅಂಜಿಕೆಯೂ ಇಲ್ಲದೆ ಮಂಜೂರು ಮಾಡಿಸಿಕೊಳ್ಳುತ್ತಿವೆ.

ನೋಂದಾಯಿತ ಸಂಸ್ಥೆಯೂ ಆಗಿರದ ಈ ಸಂಘಟನೆಗಳು ಇಷ್ಟು ಸುಲಭದಲ್ಲಿ ಗೋಮಾಳಗಳನ್ನು, ಸರಕಾರಿ ಜಮೀನುಗಳನ್ನು ಕೈವಶ ಮಾಡಿಕೊಳ್ಳುವುದು ಹೇಗೆ ಸಾಧ್ಯ? ರಾಜ್ಯದಲ್ಲಿ ಗೋ ಸಾಕಣೆ ಬಹುದೊಡ್ಡ ಸಮಸ್ಯೆಯಾಗಿದೆ. ಸರಕಾರದ ಜಾನುವಾರು ಮಾರಾಟ ಕಾಯ್ದೆಯಿಂದಾಗಿ ತಮ್ಮ ಅನುಪಯುಕ್ತ ಗೋವುಗಳನ್ನು ಮಾರಾಟ ಮಾಡಲಾಗದ ಸ್ಥಿತಿಯಲ್ಲಿ ರೈತರಿದ್ದಾರೆ. ಗೋಮಾಳಗಳ ಒತ್ತುವರಿಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರುಗಳ ಸಾಕಣೆಯನ್ನು ಕೈಬಿಡಬೇಕಾದ ಸ್ಥಿತಿಯನ್ನು ಅವರು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ, ಗೋಸಾಕಣೆಯೊಂದಿಗೆ ಯಾವ ಸಂಬಂಧವೂ ಇಲ್ಲದ, ರಾಷ್ಟ್ರೋತ್ಥಾನ ಸಂಸ್ಥೆಯಂತಹ ಸಂಘಟನೆಗಳು ಗೋಮಾಳ ಭೂಮಿಯನ್ನು ತನ್ನದಾಗಿಸಿಕೊಳ್ಳುತ್ತಿರುವುದು ಅಕ್ಷಮ್ಯವಾಗಿದೆ. ಸರಕಾರ ಯಾವ ಕಾರಣಕ್ಕಾಗಿ ಈ ಸಂಸ್ಥೆಗಳಿಗೆ ಭೂಮಿಯನ್ನು ಹಂಚುತ್ತಿದೆ? ಎಂಬ ಪ್ರಶ್ನೆಯನ್ನು ಜನರು ಕೇಳುತ್ತಿದ್ದಾರೆ. ಸಂಘಪರಿವಾರದ ಅಂಗಸಂಸ್ಥೆಯಾಗಿರುವ ಜನಸೇವಾ ಟ್ರಸ್ಟ್‌ಗೆ ಕುರುಬರ ಹಳ್ಳಿಯಲ್ಲಿರುವ 35 ಎಕರೆ ವಿಸ್ತೀರ್ಣದ ಗೋಮಾಳ ಜಮೀನನ್ನು ಮಂಜೂರು ಮಾಡಲು ಮೂರೂ ಗ್ರಾಮಗಳ ಜನರು ಒಂದಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಈ ಪ್ರತಿಭಟನೆಯನ್ನು ನಿರ್ಲಕ್ಷಿಸಿ 70 ಕೋಟಿ ರೂಪಾಯಿ ಬೆಲೆಬಾಳುವ ಭೂಮಿಯನ್ನು ಜನಸೇವಾ ಟ್ರಸ್ಟ್‌ಗೆ ಸರಕಾರ ಧಾರೆಯೆರೆದಿದೆ.

ಗೋವುಗಳನ್ನು ಸಾಕುತ್ತಿರುವ ರೈತರನ್ನು ಕೇಳುವವರೇ ಇಲ್ಲ. ಇತ್ತ, ಗೋಸಾಕಣೆಯೊಂದಿಗೆ ಸಂಬಂಧವೇ ಇಲ್ಲದ ನಕಲಿ ಗೋರಕ್ಷಕರು, ಗೋಶಾಲೆಗಳು ರೈತರಿಗೆ ಸೇರಬೇಕಾದ ಅನುದಾನಗಳನ್ನು ನುಂಗಿ ನೀರು ಕುಡಿಯುತ್ತಿವೆ. ಮಗದೊಂದೆಡೆ, ರೈತರೇ ಹಕ್ಕುದಾರರಾಗಬೇಕಾಗಿದ್ದ ಗೋಮಾಳಗಳನ್ನು ಆರೆಸ್ಸೆಸ್‌ನ ಅಂಗಸಂಸ್ಥೆಗಳು ವಶಪಡಿಸಿಕೊಳ್ಳುತ್ತಿವೆ. ಇದೇ ಸಂದರ್ಭದಲ್ಲಿ ಕೃಷಿ ಅಥವಾ ಅಭಿವೃದ್ಧಿ ಕಾಮಗಾರಿಗಳಿಗಾಗಿ ಭೂಮಿಯನ್ನು ಕೇಳಿದಾಗ ಸರಕಾರ ಅಸಹಾಯಕತೆಯನ್ನು ಪ್ರದರ್ಶಿಸುತ್ತದೆ. ಹೀಗೆ ಆದಲ್ಲಿ, ರಾಷ್ಟ್ರೋತ್ಥಾನದಂತಹ ಸಂಘಟನೆಗಳು ಉತ್ಪಾದಿಸುವ ದ್ವೇಷವನ್ನೇ ನಾವು ಉಂಡು, ಹಾಸಿ ಹೊದ್ದು ಮಲಗಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ಅದಕ್ಕೆ ಮೊದಲು ಜನರು ಸಂಘಟಿತರಾಗಿ, ಆರೆಸ್ಸೆಸ್‌ನ ಸಹ ಸಂಘಟನೆಗಳು ಮಂಜೂರು ಮಾಡಿಸಿಕೊಂಡ ಸಾರ್ವಜನಿಕ ಜಮೀನುಗಳನ್ನು ಮತ್ತೆ ಕೈವಶ ಮಾಡಿಕೊಳ್ಳುವ ದಾರಿಯನ್ನು ಕಂಡುಕೊಳ್ಳಬೇಕಾಗಿದೆ. ಇಲ್ಲವಾದರೆ ಮುಂದೊಂದು ದಿನ, ಬೆಂಗಳೂರಿನಲ್ಲಿರುವ ವಿಧಾನಸೌಧದ ಅಡಿ ಸ್ಥಳವನ್ನೂ ರಾಷ್ಟ್ರೋತ್ಥಾನಕ್ಕೆ ಮಂಜೂರು ಮಾಡಿಕೊಡುವ ದಿನಗಳು ಬರಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News