ಜವಾಬ್ದಾರಿಯುತ ಪತ್ರಿಕೋದ್ಯಮದ ಪ್ರತೀಕ- ವಾರ್ತಾಭಾರತಿ

Update: 2022-08-29 06:36 GMT

ಮುಂದಿನ ದಿನಗಳಲ್ಲಿ ಮುದ್ರಣ ಮಾಧ್ಯಮದ ಮೇಲೆ ಇನ್ನಷ್ಟು ಒತ್ತಡಗಳು ಬರಲಿವೆ. ಆದರೆ ಮೌಲ್ಯಗಳ ತಳಹದಿಯಿರುವ ಪತ್ರಿಕೆಗೆ ಯಾವತ್ತೂ ಓದುಗರಿಂದ ಮನ್ನಣೆ ಸಿಗುತ್ತದೆ ಎಂದು ನನ್ನ ವಿಶ್ವಾಸ. ‘ವಾರ್ತಾಭಾರತಿ’ಯು ಇದಕ್ಕೆ ಒಂದು ಜ್ವಲಂತ ಉದಾಹರಣೆ. ಈ ನಂಬಿಕೆಯ ಆಧಾರದಲ್ಲಿ ‘ವಾರ್ತಾಭಾರತಿ’ ಇನ್ನೂ ಮೇಲಕ್ಕೇರಲಿ ಹಾಗೂ ಇನ್ನೂ ಅನೇಕ ಮೈಲುಗಲ್ಲುಗಳನ್ನು ಪತ್ರಿಕೆಯು ದಾಟಲಿ ಎಂದು ಹಾರೈಸುತ್ತೇನೆ.


20ನೇ ವರ್ಷಕ್ಕೆ ಕಾಲಿಟ್ಟ ವಾರ್ತಾ ಭಾರತಿ ಪತ್ರಿಕೆಗೆ ಹಾಗೂ ಅದರ ಇಡೀ ಬಳಗಕ್ಕೆ ಅಭಿನಂದನೆಯನ್ನು ಸಲ್ಲಿಸಲು ಬಯಸುತ್ತೇನೆ. ಮಾತ್ರವಲ್ಲ ಬಳಗದ ಯಶೋಗಾಥೆ ಇನ್ನೂ ಅವಿರತವಾಗಿ ಮುಂದು ವರಿಯಲಿ ಮತ್ತು ಅನೇಕ ಮೈಲುಗಲ್ಲುಗಳನ್ನು ಅದು ದಾಟಲಿ ಎಂದು ಹಾರೈಸುತ್ತೇನೆ.

ಈ ಸಂದರ್ಭದಲ್ಲಿ ಪ್ರಜಾತಂತ್ರದಲ್ಲಿ ಮಾಧ್ಯಮಗಳ ಭೂಮಿಕೆ, ಅವುಗಳ ಇತಿಮಿತಿಗಳು ಮತ್ತು ಅವುಗಳು ಎದುರಿಸುವ ಸವಾಲುಗಳ ಕುರಿತು ಒಬ್ಬ ಪ್ರಜ್ಞಾವಂತ ನಾಗರಿಕನಾಗಿ ನನ್ನ ಅಭಿಪ್ರಾಯಗಳನ್ನು ಹೇಳಲು ಇಷ್ಟಪಡುತ್ತೇನೆ. ಇಂದು ಓರ್ವ ಸಮಾಜಜೀವಿಯಾದ ಮನುಷ್ಯನಿಗೆ ಸಮಾಜದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಅರಿತುಕೊಳ್ಳುವ ಕುತೂಹಲವಿರುವುದು ಸ್ವಾಭಾವಿಕ. ಈ ಕುತೂಹಲವನ್ನು ತಣಿಸಲು ಅಗತ್ಯವಾದ ಮಾಹಿತಿಯನ್ನು ಒದಗಿಸುವ ಪ್ರಮುಖ ಸಾಧನ ವೃತ್ತಪತ್ರಿಕೆಗಳು. ಈ ಕುತೂಹಲ ಬಾಲ್ಯದಿಂದಲೇ ಆರಂಭವಾಗುತ್ತದೆ ಎಂಬುದೂ ಗಮನಾರ್ಹ. ಉದಾಹರಣೆಗಾಗಿ, ನಾನು ಕಲಿಯುತ್ತಿದ್ದ ಶಾಲೆಯ, ಆ ಮೇಲೆ ಕಾಲೇಜಿನ ವಾಚನಾಲಯಗಳಲ್ಲಿ ದೊರಕುತ್ತಿದ್ದ ಬೇರೆ ಬೇರೆ ಪತ್ರಿಕೆಗಳನ್ನು ಓದುವ ಮೂಲಕ ದೇಶವಿದೇಶದ ಆಗುಹೋಗುಗಳ ಬಗ್ಗೆ ನಾನು ಮತ್ತು ಅನೇಕ ಸಹಪಾಠಿಗಳು ಅರಿತುಕೊಳ್ಳುತ್ತಿದ್ದೆವು. ಮುಂದೆ ವೃತ್ತಿಜೀವನದಲ್ಲಿ ದಿನಚರಿ ಆರಂಭವಾಗುವುದೇ ಆಯಾಯಾ ದಿನದ ಪತ್ರಿಕೆಗಳನ್ನು ಓದುವುದರ ಮೂಲಕವಾಗಿತ್ತು. (ಈಗ ದೃಶ್ಯಮಾಧ್ಯಮಗಳು ಈ ಕೆಲಸವನ್ನು ಮಾಡುತ್ತಿದ್ದರೂ ಮುದ್ರಣ ಮಾಧ್ಯಮಕ್ಕೆ ಈಗಲೂ ತನ್ನದೇ ಆದ ಸ್ಥಾನ ಇದೆ ಎಂಬುದು ವಾಸ್ತವ.)

ಆ ಕುತೂಹಲ ಮನುಜಸಹಜವಾಗಿದ್ದು ಅದನ್ನು ತಣಿಸುವ ಮೂಲಕ ನಮ್ಮ ಅರಿವಿನ ಪರಿಧಿ ವಿಸ್ತಾರವಾಗುತ್ತದೆ. ಅರಿವಿನ ವಿಸ್ತಾರ ಮತ್ತು ಆಳ ಹೆಚ್ಚಾದಂತೆ ಓದುಗನ ಬೌದ್ಧಿಕ ವಿಕಾಸ ಪ್ರಬಲವಾಗುತ್ತದೆ. ಬೌದ್ಧಿಕ ವಿಕಾಸವಾದರೆ ಮಾತ್ರ ಒಬ್ಬ ವ್ಯಕ್ತಿಯ ನೈಜ ಬೆಳವಣಿಗೆ ಸಾಧ್ಯ ಎಂದು ನನ್ನ ದೃಢವಾದ ನಂಬಿಕೆ. ವ್ಯಕ್ತಿಯ ವಿಕಾಸದ ಮೂಲಕ ಸಮಾಜದ ಏಳಿಗೆ ಆಗುವುದು ಸುಲಭ. ವೃತ್ತಪತ್ರಿಕೆಗಳ ಮೌಲ್ಯವನ್ನು ನಾವು ಎರಡು ಮಾನಕಗಳನ್ನು ಉಪಯೋಗಿಸಿ ಅಳೆಯಬೇಕಾಗುತ್ತದೆ-ಅವುಗಳು ಒದಗಿಸುತ್ತಿರುವ ಮಾಹಿತಿ ಮತ್ತು ಅದರ ನಿಖರತೆ. ಮಾಹಿತಿಯ ಪೂರೈಕೆಯು ಅವುಗಳ ಪ್ರಮುಖವಾದ ಒಂದು ಜವಾಬ್ದಾರಿ. ಆದರೆ ತಪ್ಪುಮಾಹಿತಿಯು ಜ್ಞಾನವನ್ನು ಹೆಚ್ಚಿಸುವುದರ ಬದಲಾಗಿ ಮೌಢ್ಯಕ್ಕೆ ಉತ್ತೇಜನ ನೀಡುತ್ತದೆ. ಹೀಗಾಗಿ ಮಾಹಿತಿಯು ಎಷ್ಟು ನಂಬಲರ್ಹ ಎಂಬುದೂ ಪತ್ರಿಕೆಯ ಮೌಲ್ಯವನ್ನು ನಿರ್ಧರಿಸುತ್ತದೆ. ಒಂದು ಪತ್ರಿಕೆಯು ಸುಳ್ಳು ಮಾಹಿತಿಗಳನ್ನು ಒದಗಿಸಿದರೆ, ಅದನ್ನು ನಾಲ್ಕು ದಿನ ಓದುಗನು ನಂಬುತ್ತಾನೆ. ಕ್ರಮೇಣ ಸತ್ಯದರ್ಶನವಾದಾಗ ಮಾಧ್ಯಮದ ದ್ರೋಹ ಬೆತ್ತಲಾಗಿ ಪರ್ಯಾಯ ದಾರಿಯನ್ನು ಓದುಗನು ಶೋಧಿಸುತ್ತಾನೆ. ಇದು ಎರಡು ರೀತಿಯಲ್ಲಿ ಪತ್ರಿಕೆಗೆ ಹೊಡೆತ ನೀಡುತ್ತದೆ ಅದರ ಮೇಲಿನ ವಿಶ್ವಾಸಕ್ಕೆ ಹಾನಿಯಾಗುತ್ತದೆ ಮತ್ತು ಅದರ ಪರಿಣಾಮವಾಗಿ ಓದುಗನು ಅದರಿಂದ ದೂರಸರಿಯುತ್ತಾನೆ. ನಿಖರವಾದ ಮಾಹಿತಿಯ ಇನ್ನೊಂದು ಉದ್ದೇಶವೂ ಇಲ್ಲಿ ಪ್ರಸ್ತುತ ವಾಗುತ್ತದೆ. ದೇಶದ ಆಡಳಿತದ ಸೂತ್ರವಹಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಷ್ಟರ ಮಟ್ಟಿಗೆ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂಬುದನ್ನು ಅರಿಯಲು ನಂಬಲರ್ಹವಾದ ಮಾಹಿತಿ ಬೇಕೇ ಬೇಕು.

ಕೊಟ್ಟ ಆಶ್ವಾಸನೆಗಳು, ಭರವಸೆಗಳು ಮತ್ತು ಕೈಗೊಂಡ ನಿರ್ಧಾರಗಳು ಅನುಷ್ಠಾನವಾಗಿವೆಯೇ ಎಂಬುದರ ಮೌಲ್ಯಮಾಪನಕ್ಕೆ ನಿಖರವಾದ ಮಾಹಿತಿ ಅಗತ್ಯ. ಈ ಮಾಹಿತಿಯನ್ನು ನೀಡುವ ದಾಯಿತ್ವವನ್ನು ವೃತ್ತಪತ್ರಿಕೆಗಳು ಹೊಂದಿವೆ. ನಾನು ಗಮನಿಸಿದಂತೆ, ‘ವಾರ್ತಾಭಾರತಿ’ ಈ ನಿಟ್ಟಿನಲ್ಲಿ ವೃತ್ತಪತ್ರಿಕೆಯ ಜವಾಬ್ದಾರಿಗೆ ಅನುಗುಣವಾಗಿ ಈ ಎರಡು ದಶಕಗಳಲ್ಲಿ ಕಾರ್ಯವೆಸಗುತ್ತಾ ಬಂದಿದೆ. ಅದರಲ್ಲಿ ಬರುವ ವಾರ್ತೆಗಳು ನಿಖರವಾದ ಮಾಹಿತಿಯನ್ನು ವಸ್ತು ನಿಷ್ಠವಾಗಿ ನೀಡುತ್ತವೆ. ಆ ಮೂಲಕ ಪತ್ರಿಕೆಯು ಓದುಗರ ಅರಿವಿನ ಪರಿಧಿಯ ವಿಸ್ತಾರಕ್ಕೆ ಅನುವು ಮಾಡುತ್ತಿದೆ ಎಂಬುದು ನಿರ್ವಿವಾದ. ಅದೂ ಅಲ್ಲದೆ, ತನ್ನ ವರದಿಗಳ ವಸ್ತು ನಿಷ್ಠತೆಯಿಂದಾಗಿ ಪತ್ರಿಕೆಯ ಉತ್ತರದಾಯಿತ್ವವನ್ನೂ ಸಮರ್ಥವಾಗಿ ಪೂರೈಸುತ್ತಿದೆ. ಪತ್ರಿಕೆಗಳು ಓದುಗರ ವಿಭಿನ್ನ ಅಭಿರುಚಿಗಳನ್ನು ಅರಿತು ಅವುಗಳನ್ನು ಬೆಳೆಸುವ ಗುಣವನ್ನೂ ಹೊಂದಿರಬೇಕು. ಲೇಖನಗಳು, ವರದಿಗಳು ಮತ್ತು ವಿಶ್ಲೇಷಣೆಗಳು ಓದುಗರ ಆಸಕ್ತಿಗಳಿಗೆ ಸ್ಪಂದಿಸುತ್ತಿದ್ದರೆ ಓದುಗರ ಬಳಗ ಬೆಳೆಯುತ್ತದೆ. ಪತ್ರಿಕೆಯ ಏಳಿಗೆಯೂ ಆಗುತ್ತದೆ. ಹಾಗೆಂದು ಆಸಕ್ತಿಗಳಿಗೆ ಸ್ಪಂದಿಸುವ ಸಂದರ್ಭಗಳಲ್ಲಿ ತತ್ಕಾಲೀನ ಆಮಿಷಗಳಿಗೆ ಬಲಿಯಾಗಿ, ಭಾಷೆ, ಲೇಖನದ ಗುಣಮಟ್ಟ, ಮಾಹಿತಿಗಳ ನಿಖರತೆ ಯನ್ನು ಸಡಿಲಾಗಿಸಿದರೆ ಪತ್ರಿಕೆಯ ಮೇಲಿನ ವಿಶ್ವಾಸಕ್ಕೆ ಧಕ್ಕೆ ಉಂಟಾ ಗುತ್ತದೆ. ಇದೇ ಕಾರಣಕ್ಕೆ ನಾನೇ ಅನೇಕ ವರ್ಷಗಳಿಂದ ಓದುತ್ತಿದ್ದ ಮ್ಯಾಗಝಿನ್‌ಗಳಿಗೆ ಕೊಡುತ್ತಿದ್ದ ಚಂದಾವನ್ನು ನಿಲ್ಲಿಸಿದ್ದೇನೆ. ಈ ಮಾನದಂಡವನ್ನು ಉಪಯೋಗಿಸಿ ನೋಡಿದರೆ ‘ವಾರ್ತಾಭಾರತಿ’ಯು ಅನೇಕ ಸಮಕಾಲೀನ ಪತ್ರಿಕೆಗಳಿಗಿಂತ ಬಹಳಷ್ಟು ಉನ್ನತ ಮಟ್ಟದಲ್ಲಿದೆ ಎಂದು ನನಗೆ ಅನಿಸುತ್ತದೆ. ಅದು ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದೆ ಮಾತ್ರವಲ್ಲ ಮತ್ತಷ್ಟು ಸುಭದ್ರಗೊಳಿಸಿದೆ.

ಪ್ರಜಾತಂತ್ರದ ಆರೋಗ್ಯವನ್ನು ಕಾಯುವಲ್ಲಿ ಒಂದು ಪತ್ರಿಕೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಧಿಕಾರಿವರ್ಗದ ನಿರ್ಧಾರಗಳು ಮತ್ತು ಅವುಗಳಿಂದಾಗುವ ಒಳಿತು ಕೆಡುಕುಗಳನ್ನು ಸ್ವತಂತ್ರವಾಗಿ ವಿಮರ್ಶಿಸುವ ಕೆಲಸ ಪತ್ರಿಕೆಗೆ ಇದೆ. ಈ ವಿಮರ್ಶೆಯ ಉದ್ದೇಶ ಪ್ರಜಾಹಿತವನ್ನು ಕಾಪಾಡುವುದು. ಅದರೊಂದಿಗೆ ಪ್ರಜೆಗಳ ಸಂಕಷ್ಟಗಳು ಮತ್ತು ಅವರ ಆಶೋತ್ತರಗಳನ್ನು ಮುನ್ನೆಲೆಗೆ ತಂದು ಅವುಗಳಿಗೆ ಆಡಳಿತವು ಸ್ಪಂದಿಸುವಂತೆ ಮಾಡುವ ಕೆಲಸವನ್ನು ಒಂದು ಪತ್ರಿಕೆಗೆ ಮಾಡಲು ಸಾಧ್ಯ. ಪ್ರಜಾತಂತ್ರದಲ್ಲಿರುವ ಜವಾಬ್ದಾರಿಯುತ ವಿರೋಧಪಕ್ಷದ ಕೆಲಸವನ್ನು ಪತ್ರಿಕೆ ಮಾಡಬೇಕಾಗುತ್ತದೆ. ‘ವಾರ್ತಾಭಾರತಿ’ಯ ಅನೇಕ ವರದಿಗಳು, ಪ್ರಕಟವಾದ ಲೇಖನಗಳು ಮತ್ತು ವಾಚಕರ ಕಾಗದಗಳು ಈ ದಿಶೆಯಲ್ಲಿ ಉಲ್ಲೇಖನೀಯವಾದ ಕೊಡುಗೆ ನೀಡಿವೆ ಎಂದು ನನಗೆ ಅನ್ನಿಸಿದೆ. ಪಿ. ಮಹಮ್ಮದರ ವ್ಯಂಗ್ಯಚಿತ್ರಗಳೂ ಈ ನಿಟ್ಟಿನಲ್ಲಿ ಪ್ರಶಂಸನೀಯ ಕೆಲಸ ಮಾಡುತ್ತಿವೆ.

ಒಂದು ಪತ್ರಿಕೆ ತಾನು ಹುಟ್ಟಿಬೆಳೆದ ಭೌಗೋಳಿಕ ಚೌಕಟ್ಟಿನ ಅಸ್ಮಿತೆಯನ್ನೂ ಬಿಂಬಿಸಬೇಕು. ನಮ್ಮೂರಿನ ವೈಶಿಷ್ಟಗಳು, ಇಲ್ಲಿನ ಸಂಸ್ಕೃತಿ, ಭಾಷೆ, ಜನರ ಆಚಾರ ವಿಚಾರಗಳ ಉಳಿವಿಗೆ ಪತ್ರಿಕೆಗಳು ಮಹತ್ತರವಾದ ಕೊಡುಗೆಯನ್ನು ನೀಡಬಲ್ಲವು; ಆ ಜವಾಬ್ದಾರಿಯೂ ಅವುಗಳ ಮೇಲಿದೆ. ಈ ದೃಷ್ಟಿಯಿಂದ ನೋಡಿದರೆ ‘ವಾರ್ತಾಭಾರತಿ’ಯು, ಕರಾವಳಿಯ ಸಂಸ್ಕೃತಿಯ ಮತ್ತು ಇಲ್ಲಿನ ಸ್ವಾಭಿಮಾನದ ಒಂದು ಪ್ರತೀಕವಾಗಿ ಇತ್ತೀಚೆಗಿನ ವರ್ಷಗಳಲ್ಲಿ ಹೊರಹೊಮ್ಮಿದೆ ಎಂದು ಖಂಡಿತವಾಗಿ ಹೇಳಬಲ್ಲೆ. ವಿಶೇಷವೆಂದರೆ, ಇದರ ಜೊತೆಗೆ, ರಾಜ್ಯದ ಇತರ ಪ್ರದೇಶಗಳ ಕುರಿತಾಗಿಯೂ ಸಾಕಷ್ಟು ವರದಿಗಳನ್ನು ಪತ್ರಿಕೆ ತರುತ್ತಿದೆ. ಪತ್ರಿಕೆಯ ಮೌಲ್ಯ ಈ ಕ್ರಮಗಳಿಂದಾಗಿ ಹೆಚ್ಚಿದೆ.

ಯಾವುದೇ ಒಂದು ಪತ್ರಿಕೆಯ ಕುರಿತು ಓದುಗರಲ್ಲಿ ಗೌರವ ಹೆಚ್ಚಾಗಲು ಅದು ಉಪಯೋಗಿಸುವ ಭಾಷೆಯೂ ಕಾರಣವಾಗುತ್ತದೆ. ಕನ್ನಡದಲ್ಲಿ ಶಬ್ದಗಳಿರುವಾಗ, ಇತರ ಭಾಷೆಯ ಶಬ್ದಗಳನ್ನು ವ್ಯವಹಾರದಲ್ಲಿ ಉಪಯೋಗಿಸುವುದು ಪರಾವಲಂಬನೆಯ ಲಕ್ಷಣ. ಸಂಶಯವಿದ್ದಾಗ ಪರ್ಯಾಯ ಪ್ರಯೋಗಗಳನ್ನು ಮೂಲ ಭಾಷೆಯಲ್ಲಿ ಕೊಡುವುದು ಸೂಕ್ತವೇ. ಆದರೆ ಸುಲಭದಲ್ಲಿ ಅರ್ಥವಾಗುವ ಪ್ರಯೋಗಗಳು ಕನ್ನಡದಲ್ಲಿ ಲಭ್ಯವಿದ್ದಾಗ ಬೇರೆ ಭಾಷೆಯ ಶಬ್ದಗಳನ್ನು ಎರವಲು ಪಡೆಯುವುದು ನಮ್ಮತನಕ್ಕೆ ಅಪಚಾರವಾಗುತ್ತದೆ ಎಂದು ನನ್ನ ದೃಢವಾದ ನಂಬಿಕೆ. ಇಂದಿನ ಪರಿಸ್ಥಿತಿಯಲ್ಲಿ ಎಷ್ಟೇ ಒತ್ತಡವಿದ್ದರೂ ಅದಕ್ಕೆ ಮಣಿಯದೆ, ‘ವಾರ್ತಾಭಾರತಿ’ ಕನ್ನಡದ ಅದರಲ್ಲಿಯೂ ಮುಖ್ಯವಾಗಿ ಕರಾವಳಿಯ ಭಾಷಾ ವೈಶಿಷ್ಟವನ್ನು ಬೆಳೆಸುವಲ್ಲಿ ಶ್ರಮಿಸುತ್ತಿರುವುದು ಶ್ಲಾಘನಾರ್ಹ. ವಿಶೇಷ ಸಂದರ್ಭಗಳಲ್ಲಿ, ಅಂದರೆ, ಪ್ರಕೃತಿಯ ವಿಕೋಪಗಳು, ಸಮಾಜಘಾತಕ ಮತ್ತು ಮತಾಂಧ ಶಕ್ತಿಗಳಿಂದಾಗುವ ತಲ್ಲಣಗಳು, ರಾಜಕೀಯ ಬದಲಾವಣೆಗಳ ಸಂದರ್ಭದಲ್ಲಿ ಒಂದು ಪತ್ರಿಕೆಯು ಹೆಚ್ಚು ಜವಾಬ್ದಾರಿಯಿಂದ ಕೆಲಸಮಾಡಬೇಕಾಗುತ್ತದೆ.

ಜನರಿಗೆ ಘಟನೆಗಳ ಬಗ್ಗೆ ಸ್ಪಷ್ಟ ಚಿತ್ರಣವನ್ನು ನೀಡಿದರೆ ಅವರು ತಮ್ಮ ಸ್ವತಂತ್ರ ವಿವೇಚನೆಯ ಮೂಲಕ ಸತ್ಯಾನ್ವೇಷಣೆಯ ದಾರಿಯನ್ನು ಗುರುತಿಸಿಕೊಳ್ಳುತ್ತಾರೆ; ಪರಿಹಾರದ ದಾರಿಗಳನ್ನು ಹುಡುಕುವ ಅಥವಾ ಅಧಿಕಾರಿಗಳ ಮೇಲೆ ಅಗತ್ಯವಾದ ಸಾತ್ವಿಕ ಒತ್ತಡ ಹೇರಲು ಅನುವಾಗುತ್ತಾರೆ. ‘ವಾರ್ತಾಭಾರತಿ’ಯು 2020-21ರ ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಭಾರತದಲ್ಲಿ ನಡೆದ ಅನಾಹುತಗಳ ಬಗ್ಗೆ, 2021ರ ರೈತ ಚಳವಳಿಯ ಕುರಿತಾಗಿ, ನಮ್ಮದೇ ರಾಜ್ಯದಲ್ಲಿ ಕೋಮುಭಾವನೆಗಳನ್ನು ಕೆರಳಿಸಿ ಜನರನ್ನು ವಿಭಜಿಸುವ ಘಟನೆಗಳ ಕುರಿತಾಗಿ ಅದು ಕೊಟ್ಟ ವರದಿಗಳು ಮತ್ತು ಅಭಿಪ್ರಾಯಗಳು, ಆರ್ಥಿಕ ಹಿಂಜರಿಕೆಯ ಬಗ್ಗೆ ಪ್ರಕಟಿಸಿದ ತಜ್ಞರ ವಿಶ್ಲೇಷಣೆಗಳು-ಇವುಗಳೆಲ್ಲ ಅದರ ಜವಾಬ್ದಾರಿಯುತ ಸಮಾಜಬದ್ಧತೆಗೆ ಉದಾಹರಣೆಗಳು. ಈ ಕಾರಣಕ್ಕಾಗಿಯೂ ವಾರ್ತಾಭಾರತಿಯನ್ನು ನಾನು ಮೆಚ್ಚುತ್ತೇನೆ. ವಾರ್ತಾಭಾರತಿಯ ವಾರ್ಷಿಕ ಸಂಚಿಕೆಗಳ ಬಗ್ಗೆಯೂ ಒಂದು ಮಾತು ಅಗತ್ಯ. ಅವುಗಳಲ್ಲಿರುವ ಲೇಖನಗಳ ವೈವಿಧ್ಯ, ವಿಷಯ ಗಾಂಭೀರ್ಯ ಮತ್ತು ಭಾಷಾ ಪ್ರೌಢಿಮೆ ಅನನ್ಯವಾದುದು. ಹೀಗಾಗಿ ಪ್ರತೀ ವಿಶೇಷ ಸಂಚಿಕೆಯೂ ಸಂಗ್ರಹ ಯೋಗ್ಯವೆಂದು ನನ್ನ ಅನಿಸಿಕೆ. ಮುಂದಿನ ದಿನಗಳಲ್ಲಿ ಮುದ್ರಣ ಮಾಧ್ಯಮದ ಮೇಲೆ ಇನ್ನಷ್ಟು ಒತ್ತಡಗಳು ಬರಲಿವೆ. ಆದರೆ ಮೌಲ್ಯಗಳ ತಳಹದಿಯಿರುವ ಪತ್ರಿಕೆಗೆ ಯಾವತ್ತೂ ಓದುಗರಿಂದ ಮನ್ನಣೆ ಸಿಗುತ್ತದೆ ಎಂದು ನನ್ನ ವಿಶ್ವಾಸ. ‘ವಾರ್ತಾಭಾರತಿ’ಯು ಇದಕ್ಕೆ ಒಂದು ಜ್ವಲಂತ ಉದಾಹರಣೆ. ಈ ನಂಬಿಕೆಯ ಆಧಾರದಲ್ಲಿ ‘ವಾರ್ತಾಭಾರತಿ’ ಇನ್ನೂ ಮೇಲಕ್ಕೇರಲಿ ಹಾಗೂ ಇನ್ನೂ ಅನೇಕ ಮೈಲುಗಲ್ಲುಗಳನ್ನು ಪತ್ರಿಕೆಯು ದಾಟಲಿ ಎಂದು ಹಾರೈಸುತ್ತೇನೆ.

Writer - ಟಿ.ಆರ್.ಭಟ್

contributor

Editor - ಟಿ.ಆರ್.ಭಟ್

contributor

Similar News