ಕಮಿಷನ್ ಹಗರಣ: ನ್ಯಾಯಾಂಗ ತನಿಖೆಗೆ ಹಿಂಜರಿಕೆಯೇಕೆ?

Update: 2022-08-30 04:13 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೆಪ್ಟಂಬರ್ 2ರಂದು ರಾಜ್ಯಕ್ಕೆ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ಮತ್ತೆ ಶೇ. 40 ಕಮಿಷನ್ ಹಗರಣದ ಬಿರುಗಾಳಿ ಬೀಸತೊಡಗಿದೆ. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಈ ಬಗ್ಗೆ ಪ್ರಧಾನ ಮಂತ್ರಿಯವರಿಗೆ ಮತ್ತೆ ಪತ್ರ ಬರೆದು ತನಿಖೆಗೆ ಒತ್ತಾಯಿಸಿದ್ದಾರೆ. ಕಳೆದ ವರ್ಷವೂ ಅವರು ಇದೇ ರೀತಿ ಪತ್ರವನ್ನು ಪ್ರಧಾನಿಗೆ ಬರೆದು ಹಗರಣದ ತನಿಖೆಗೆ ಆಗ್ರಹಿಸಿದ್ದರು. ಈ ಬಾರಿ ಸಚಿವ ಮುನಿರತ್ನಂ ವಿರುದ್ಧ ಬಹಿರಂಗ ಆರೋಪ ಮಾಡಿದ್ದಾರೆ. ಈ ಆರೋಪದ ಬಗ್ಗೆ ಕೆಲ ಸಚಿವರು ಅದರಲ್ಲೂ ಬಿಜೆಪಿಗೆ ವಲಸೆ ಬಂದವರು ಆರೋಪ ಸುಳ್ಳು ಎಂದು ಮಾಧ್ಯಮಗಳಿಗೆ ಹೇಳಿದ್ದನ್ನು ಬಿಟ್ಟರೆ ರಾಜ್ಯ ಸರಕಾರ ತನಿಖೆಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.

 ಲೋಕೋಪಯೋಗಿ, ಜಲ ಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಹಾಗೂ ಬೆಂಗಳೂರು ಮಹಾನಗರ ಪಾಲಿಕೆಯಿಂದ ಗುತ್ತಿಗೆದಾರರಿಗೆ ರೂ. 22,000 ಕೋಟಿಗಿಂತ ಹೆಚ್ಚು ಬಿಲ್ ಪಾವತಿಯಾಗಬೇಕಾಗಿದೆ. ಈ ಬಾಕಿ ಹಣದ ಬಿಡುಗಡೆಗೆ 40 ಪರ್ಸೆಂಟ್ ಲಂಚ ಕೇಳುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘ ಒಂದು ವರ್ಷದ ಹಿಂದೆಯೇ ಆರೋಪ ಮಾಡಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಸಂಘದ ಅಧ್ಯಕ್ಷರು ಭೇಟಿ ಮಾಡಿ ಬಾಕಿ ಬಿಡುಗಡೆ ಮಾಡಲು ಕೇಳಿಕೊಂಡಿದ್ದರು. ಬೊಮ್ಮಾಯಿಯವರು ಬಾಕಿ ಪಾವತಿ ಮಾಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ಸರಕಾರದಲ್ಲಿ ಅವರ ಮಾತೂ ನಡೆಯುತ್ತಿಲ್ಲ ಎಂದು ಕೆಂಪಣ್ಣ ಆರೋಪಿಸಿದ್ದಾರೆ.

ಮುಖ್ಯಮಂತ್ರಿಗೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ ಎಂದಾಗ ಗುತ್ತಿಗೆದಾರರ ಸಂಘ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ತನಿಖೆಗೆ ಮನವಿ ಮಾಡಿತು. ಆದರೆ ಅಲ್ಲಿಂದಲೂ ಇವರಿಗೆ ಉತ್ತರ ಬರಲಿಲ್ಲ. ಹಾಗಾಗಿಯೇ ಕಳೆದ ವಾರ ಮತ್ತೆ ಪ್ರಧಾನಿಗೆ ಪತ್ರ ಬರೆದ ಗುತ್ತಿಗೆದಾರರ ಸಂಘ ಈ 40 ಪರ್ಸೆಂಟ್ ಕಮಿಷನ್ ಹಗರಣದಲ್ಲಿ ನಿರ್ದಿಷ್ಟ ಸಚಿವರತ್ತ ಬೆರಳು ಮಾಡಿ ತೋರಿಸಿದೆ.

 ಇಂತಹ ಗಂಭೀರ ಆರೋಪ ಬಂದಾಗ ತಕ್ಷಣ ತನಿಖೆಗೆ ಆದೇಶ ನೀಡಬೇಕಾದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರು ಅದರ ಬದಲಾಗಿ ಆರೋಪ ಮಾಡಿದವರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಕೇಳುತ್ತಿದ್ದಾರೆ. ಈ ಪ್ರಕರಣದಲ್ಲಿ ಯಾರನ್ನೋ ರಕ್ಷಿಸಲು ಯತ್ನಿಸಲಾಗುತ್ತಿದೆ ಎಂಬ ಸಂದೇಹ ಸಹಜವಾಗಿ ಬರುತ್ತದೆ. ಇನ್ನೊಂದೆಡೆ ಕಳಂಕಿತ ಮಂತ್ರಿ ಮುನಿರತ್ನ ಮಾನನಷ್ಟ ಖಟ್ಲೆ ಹಾಕುವುದಾಗಿ ಆರೋಪ ಮಾಡಿರುವ ಕೆಂಪಣ್ಣ ಅವರಿಗೆ ಬೆದರಿಕೆ ಹಾಕುತ್ತಿದ್ದಾರೆ. ಇಂಥ ಪ್ರಕರಣ ಗಳಲ್ಲಿ ಲಂಚದ ವ್ಯವಹಾರಗಳು ಹೇಗೆ ನಡೆಯುತ್ತವೆ ಎಂಬುದು ಎಲ್ಲರಿಗೂ ಗೊತ್ತಿದೆ. ಯಾರೂ ಬಹಿರಂಗವಾಗಿ ಲಂಚ ಕೇಳುವುದಿಲ್ಲ. ಪಡೆದ ಲಂಚಕ್ಕೆ ಪಾವತಿ ಚೀಟಿ ಕೊಡುವುದಿಲ್ಲ. ಆರೋಪ, ಪ್ರತ್ಯಾರೋಪಗಳೇನೇ ಇರಲಿ ಸತ್ಯಾಂಶ ಬಯಲಿಗೆ ಬರಬೇಕಾದರೆ ಈ ಪ್ರಕರಣದ ನ್ಯಾಯಾಂಗ ವಿಚಾರಣೆಗೆ ಸರಕಾರ ಆದೇಶ ನೀಡುವುದು ಸೂಕ್ತ.

ಯಾವುದೇ ಸರಕಾರಕ್ಕೆ ಇಂಥ ಪ್ರಕರಣಗಳು ಒಳ್ಳೆಯ ಹೆಸರನ್ನು ತರುವುದಿಲ್ಲ. ಬೆಂಕಿ ಇಲ್ಲದೆ ಹೊಗೆ ಏಳುವುದಿಲ್ಲ. ಭ್ರಷ್ಟರನ್ನು ರಕ್ಷಿಸುವುದು ಸರಿಯಲ್ಲ. ಒಂದು ವೇಳೆ ಆರೋಪ ಸುಳ್ಳಾಗಿದ್ದರೆ ತನಿಖೆ ನಡೆಸಿ ಸುಳ್ಳು ಆರೋಪ ಮಾಡಿದವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಬಹುದು. ಈ ಸರಳ ಮಾರ್ಗ ಬಿಟ್ಟು ಆರೋಪ ಮಾಡಿದವರನ್ನು ಮಾಧ್ಯಮಗಳಲ್ಲಿ ನಿಂದಿಸುವುದು, ಬೆದರಿಕೆ ಹಾಕುವುದು ಸರಕಾರದ, ಅದರಲ್ಲೂ ಕೆಲ ಮಂತ್ರಿಗಳ ಮೇಲೆ ಸಂದೇಹಕ್ಕೆ ಕಾರಣವಾಗುತ್ತದೆ.

ಈ ಪ್ರಕರಣದ ತನಿಖೆಗೆ ಆದೇಶ ಮಾಡಬೇಕಾದ ಮುಖ್ಯಮಂತ್ರಿ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಚಿತಾವಣೆಯಿಂದ ಈ ಆರೋಪ ಮಾಡುತ್ತಿದ್ದಾರೆಂದು ಪ್ರತ್ಯಾರೋಪ ಮಾಡುವ ಮೂಲಕ ತನಿಖೆಗೆ ಹಿಂದೇಟು ಹಾಕುತ್ತಿದ್ದಾರೆ.ವಾಸ್ತವವಾಗಿ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಮೊದಲಿಗೆ ಭೇಟಿಯಾಗಲಿಲ್ಲ. ಮೊದಲು ಅವರು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಿ ಮನವಿ ಮಾಡಿದರು. ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದರು. ಇದ್ಯಾವುದರಿಂದಲೂ ಪ್ರಯೋಜನವಾಗದಿದ್ದಾಗ ಕಳೆದ ವಾರ ಸಿದ್ದರಾಮಯ್ಯನವರನ್ನು ಕಂಡು ಮನವಿ ಮಾಡಿಕೊಂಡರು. ವಾಸ್ತವಾಂಶ ಇದಾಗಿದ್ದರೂ ಯಾರನ್ನು ರಕ್ಷಿಸಲು ಬಿಜೆಪಿ ಸರಕಾರ ಮಸಲತ್ತು ನಡೆಸಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಕಾಂಗ್ರೆಸ್‌ನಲ್ಲಿ ಇದ್ದಾಗಲೇ ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿದ್ದ ವ್ಯಕ್ತಿಯನ್ನು ಬಿಜೆಪಿಗೆ ಸೇರಿಸಿಕೊಂಡು ಅಧಿಕಾರಕ್ಕೆ ಬಂದವರು ಯಾರೆಂದು ಎಲ್ಲರಿಗೂ ಗೊತ್ತಿರುವ ಸಂಗತಿ. ಒಬ್ಬ ಮಂತ್ರಿಯ ಮೇಲೆ ನಿರ್ದಿಷ್ಟವಾಗಿ ಹಾಗೂ ಸರಕಾರದ ಮೇಲೆ ಇಡಿಯಾಗಿ ಆರೋಪ ಮಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷರಿಗೆ ಲೋಕಾಯುಕ್ತಕ್ಕೆ ಹೋಗಲು ಮುಖ್ಯಮಂತ್ರಿ ಹೇಳುತ್ತಾರೆ. ಇದು ಸರಿಯಲ್ಲ. ತಮ್ಮ ಸರಕಾರದ ಮೇಲೆ ಆರೋಪ ಬಂದಾಗ ತಕ್ಷಣ ತನಿಖೆಗೆ ಆದೇಶ ನೀಡಿ ದೋಷಮುಕ್ತರಾಗಬೇಕಾದದ್ದು ಅಧಿಕಾರದಲ್ಲಿ ಇದ್ದವರ ನೈತಿಕ ಹೊಣೆಗಾರಿಕೆಯಾಗಿದೆ.

ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವುದಾಗಿ ಕಳೆದ ಆಗಸ್ಟ್ 15 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದಿಲ್ಲಿಯ ಕೆಂಪು ಕೋಟೆಯಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿ ಘೋಷಿಸಿದರು. ಆದರೆ ಅವರು ಸಮರ ಘೋಷಿಸಿರುವುದು ಪ್ರತಿರೋಧ ಮತ್ತು ಪ್ರತಿಪಕ್ಷ ನಾಯಕರ ವಿರುದ್ಧ ಎಂಬುದು ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳ ಕಾರ್ಯಾಚರಣೆ ಯಿಂದ ಗೊತ್ತಾಗುತ್ತಿದೆ. ಆದರೆ ಕರ್ನಾಟಕದಲ್ಲಿ ತಮ್ಮದೇ ಪಕ್ಷದ ಸರಕಾರದ ವಿರುದ್ಧ ಭ್ರಷ್ಟಾಚಾರದ ಅತ್ಯಂತ ಗಂಭೀರ ಆರೋಪ ಬಂದಾಗಲೂ ಮೌನ ತಾಳಿರುವುದು ಅವರ ಪ್ರಾಮಾಣಿಕತೆಯ ಬಗ್ಗೆ ಸಂದೇಹಿಸುವಂತೆ ಮಾಡಿದೆ.ಈಗಲೂ ಕಾಲ ಮಿಂಚಿಲ್ಲ. ಕರ್ನಾಟಕದ ಗುತ್ತಿಗೆದಾರರ ಸಂಘ ಮಾಡಿರುವ ಆರೋಪಗಳ ಬಗ್ಗೆ ಸಮಗ್ರ ತನಿಖೆಗೆ ಆದೇಶ ನೀಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News