ಹಗರಣಗಳ ಆರೋಪ: ಇದು ಉತ್ತರವಲ್ಲ

Update: 2022-09-06 04:09 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ರಾಜ್ಯದಲ್ಲಿ ಹಿಂದಿನ ಕಾಂಗ್ರೆಸ್ ಸರಕಾರದ ಕಾಲದಲ್ಲಿ ನಡೆದ ಹಗರಣಗಳ ತನಿಖೆಗೆ ಬಿಜೆಪಿ ಪ್ರಮುಖರ ಸಭೆಯಲ್ಲಿ ತೀರ್ಮಾನಿಸಲಾಗಿದೆ. ತನಿಖೆಗೆ ಪ್ರಾಮಾಣಿಕ ಕ್ರಮ ಕೈಗೊಂಡರೆ ಅಭ್ಯಂತರವಿಲ್ಲ. ಆದರೆ ಇದಕ್ಕೆ ಇಷ್ಟು ವಿಳಂಬ ಮಾಡಿದ್ದೇಕೆ?. ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಉಳಿದಿರುವಾಗ ಹಗರಣಗಳ ತನಿಖೆಯ ಬೆದರಿಕೆ ಏಕೆ? ಯಡಿಯೂರಪ್ಪನವರು, ಆನಂತರ ಬಸವರಾಜ ಬೊಮ್ಮಾಯಿಯವರು ಅಧಿಕಾರ ವಹಿಸಿಕೊಂಡಾಗಲೇ ತನಿಖೆಗೆ ಕ್ರಮ ಕೈಗೊಳ್ಳಬಹುದಿತ್ತು. ಹಗರಣದಲ್ಲಿ ಪಾಲ್ಗೊಂಡರೆನ್ನಲಾದ ಸಚಿವರನ್ನು ಆಗಲೇ ಜೈಲಿಗೆ ಕಳುಹಿಸಬಹುದಿತ್ತು. ಈಗ ಒಂದು ಅಂಶ ಸ್ಪಷ್ಟವಾಗುವುದೆಂದರೆ ಹಿಂದಿನ ಕಾಂಗ್ರೆಸ್ ಸರಕಾರದ ಮೇಲಿನ ತನಿಖೆ ಹೆಸರಿಗೆ ಮಾತ್ರ. ತಮ್ಮ ಸರಕಾರದ ಮೇಲೆ ಬಂದ ಗುರುತರ ಆರೋಪಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಹಾಗೂ ಸದನದಲ್ಲಿ ಪ್ರತಿ ಪಕ್ಷಗಳು ಮಾಡುವ ಆಪಾದನೆಗಳಿಗೆ ಪ್ರತ್ಯಸ್ತ್ರವಾಗಿ ತನಿಖೆಯ ಈ ಬೆದರುಬೊಂಬೆಯನ್ನು ನಿಲ್ಲಿಸಲಾಗಿದೆ ಎಂದರೆ ತಪ್ಪಿಲ್ಲ.

ರಾಜ್ಯದ ಬಿಜೆಪಿ ಸರಕಾರ ಹಲವಾರು ಹಗರಣಗಳಲ್ಲಿ ಸಿಲುಕಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಶೇ. 40ರ ಕಮಿಷನ್ ಕುರಿತು ಗುತ್ತಿಗೆದಾರರ ಸಂಘ ಆರೋಪ ಮಾಡಿ ಒಂದು ವರ್ಷವಾಯಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೂ ಎರಡು ಪತ್ರಗಳನ್ನು ಬರೆದಾಯಿತು. ಈ ಹಗರಣದ ಬಗ್ಗೆ ಮೊದಲು ತನಿಖೆ ನಡೆಸಿ ದೋಷ ಮುಕ್ತವಾಗಿದ್ದರೆ ಸರಕಾರದ ನಡೆಯನ್ನು ಎಲ್ಲರೂ ಶ್ಲಾಘಿಸುತ್ತಿದ್ದರು. ಆದರೆ ಕಣ್ಣೆದುರಿನ ಹಗರಣಗಳ ಮೇಲೆ ತಿಪ್ಪೆಸಾರಿಸಿ ಹಿಂದಿನ ಸರಕಾರದ ಹಗರಣಗಳ ಬಗ್ಗೆ ಮಾತಾಡುವುದು ಸಮರ್ಥನೀಯವೇ?. ಸದನದಲ್ಲಿ ಶೇ. 40ರ ಕಮಿಷನ್ ಹಗರಣ ಮತ್ತು ಶಿಕ್ಷಣ ಇಲಾಖೆಯಲ್ಲಿ ನಡೆದ ಹಗರಣಗಳ ಬಗ್ಗೆ ಸಹಜವಾಗಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಸದಸ್ಯರು ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತಾರೆ. ಆಗ ಅಧಿಕಾರದಲ್ಲಿ ಇರುವವರು ತಾವು ಪ್ರಾಮಾಣಿಕರಾಗಿದ್ದರೆ, ಆರೋಪ ಸುಳ್ಳಾಗಿದ್ದರೆ, ನಡೆದಿದೆಯೆನ್ನಲಾದ ಹಗರಣವನ್ನು ಸಾಬೀತು ಪಡಿಸಲು ಸವಾಲು ಹಾಕಬೇಕು. ಅದನ್ನು ಬಿಟ್ಟು ನಿಮ್ಮ ಸರಕಾರದಲ್ಲೂ ಹಗರಣ ನಡೆದಿದೆ ಎಂದು ತಮ್ಮ ಸರಕಾರದ ಹಗರಣಗಳನ್ನು ಸಮರ್ಥಿಸುವುದು ಸರಿಯಲ್ಲ.

ರಾಜ್ಯದಲ್ಲಿ ಕಾಮಗಾರಿ ಗುತ್ತಿಗೆಯ ಬರಬೇಕಾದ ಬಾಕಿಯನ್ನು ಪಡೆಯಲು ಶೇ. 40ರಷ್ಟು ಕಮಿಷನ್ ನೀಡಬೇಕಾಗಿದೆ ಎಂದು ಗುತ್ತಿಗೆದಾರರ ಸಂಘ ಮಾಡಿರುವ ಆರೋಪದ ಜೊತೆಗೆ ಈಗ ಶಿಕ್ಷಣ ಇಲಾಖೆಯಲ್ಲಿನ ಹಗರಣ ಕೂಡ ಬಯಲಿಗೆ ಬಂದಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಂತದಲ್ಲಿ ಭ್ರಷ್ಟಾಚಾರದ ದುರ್ವಾಸನೆ ಹರಡಿದೆ. ಈ ಬಗ್ಗೆ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಸಂಘವು ರಾಜ್ಯದ ಮಂತ್ರಿಗಳಿಗೆ ಮತ್ತು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಈ ಸಂಘ ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಮನವಿ ಮಾಡಿದೆ. ಇಲಾಖೆಯ ಅಧಿಕಾರಿಗಳು ಯಾವುದಾವುದಕ್ಕೆ ಎಷ್ಟು ಹಣವನ್ನು ಪಡೆಯುತ್ತಾರೆ ಎಂದು ಈ ಸಂಘ ಪ್ರಧಾನಿ ಅವರಿಗೆ ಬರೆದ ಪತ್ರದಲ್ಲಿ ಅತ್ಯಂತ ವಿವರವಾಗಿ ದಾಖಲಿಸಿದೆ. ಆದರೆ ಪ್ರಧಾನಿ ಮೌನ ಮುರಿದಿಲ್ಲ.

ಈಗಿನ ಶಿಕ್ಷಣ ಸಚಿವರು ಅಧಿಕಾರ ವಹಿಸಿಕೊಂಡಾಗಿನಿಂದ ಶಿಕ್ಷಣ ಇಲಾಖೆಯ ಭ್ರಷ್ಟಾಚಾರದ ಹಗರಣಗಳು ಒಂದೊಂದಾಗಿ ಬಯಲಿಗೆ ಬರುತ್ತಿವೆ. ಪಠ್ಯಪುಸ್ತಕ ಪರಿಷ್ಕರಣೆಯ ಅವಾಂತರದ ಮರೆಯಲ್ಲಿ ಲಂಗು ಲಗಾಮಿಲ್ಲದೇ ನಡೆಯುತ್ತಿರುವ ಈ ಹಗರಣಗಳು ಈ ಸರಕಾರಕ್ಕೆ ಶೋಭೆ ತರುವುದಿಲ್ಲ. ಖಾಸಗಿ ಶಾಲೆಗಳ ಪರವಾನಿಗೆಯಿಂದ ಹಿಡಿದು ನಿವೃತ್ತ ಶಿಕ್ಷಕರ ಪಿಂಚಣಿ ಮಂಜೂರಾತಿಯ ವರೆಗೆ ಯಾವ ಕೆಲಸವೂ ಲಂಚ ನೀಡದೆ ಆಗುವುದಿಲ್ಲ. ಇದರ ಹೊಣೆಯನ್ನು ಆರೆಸ್ಸೆಸ್‌ನಲ್ಲಿ ಚಾರಿತ್ರ್ಯ ರೂಪಿಸಿಕೊಂಡು ಬಂದ ಶಿಕ್ಷಣ ಸಚಿವರು ಹೊರಬೇಕಾಗಿದೆ.

ಈ ಶಿಕ್ಷಣ ಸಚಿವರು ಪಠ್ಯಪುಸ್ತಕ ಪರಿಷ್ಕರಣೆ ಮಾಡಲು ಹೋಗಿ ಇಕ್ಕಟ್ಟಿಗೆ ಸಿಲುಕಿರುವ ಜೊತೆಗೆ ಭ್ರಷ್ಟಾಚಾರದ ಆರೋಪವನ್ನೂ ಎದುರಿಸುತ್ತಿದ್ದಾರೆ. ಈ ಕುರಿತು ರಾಜ್ಯದ ಹದಿಮೂರು ಸಾವಿರ ಶಾಲೆಗಳನ್ನು ಪ್ರತಿನಿಧಿಸುವ ಎರಡು ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ತಳ್ಳಿ ಹಾಕಲಾಗದ ಆರೋಪ ಮಾಡಿರುವುದು ಮಾತ್ರವಲ್ಲ, ದಾಖಲೆಗಳ ಸಮೇತ ಪ್ರಧಾನಿ ಅವರಿಗೆ ಪತ್ರವನ್ನೂ ಬರೆದಿವೆ. ಶಿಕ್ಷಣ ಇಲಾಖೆಯ ಬಿಇಒಗಳು, ಡಿಡಿಪಿಐಗಳು ಮತ್ತು ಇತರ ಅಧಿಕಾರಿಗಳು ತಮಗೆ ಬೇಕಾದ ಜಿಲ್ಲೆ ಹಾಗೂ ತಾಲೂಕುಗಳಿಗೆ ವರ್ಗಾವಣೆ ಮಾಡಿಸಿಕೊಳ್ಳಲು ಮೇಲಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ದೊಡ್ಡ ಮೊತ್ತದ ಲಂಚವನ್ನು ನೀಡಬೇಕಾಗುತ್ತದೆ ಎಂಬ ಆರೋಪವನ್ನು ತಳ್ಳಿ ಹಾಕಲು ಮುಂದಾಗಬೇಕಾದ ರಾಜ್ಯದ ಆಡಳಿತ ಪಕ್ಷ ಹಿಂದಿನ ಸರಕಾರದ ಹಗರಣಗಳ ತನಿಖೆಯ ಬೆದರಿಕೆಯನ್ನು ಹಾಕುತ್ತಿರುವುದು ಅದರ ಹತಾಶೆಯನ್ನು ತೋರಿಸುತ್ತದೆ.

ರಾಜ್ಯ ಬಿಜೆಪಿ ಸರಕಾರದ ಕೆಲ ಸಚಿವರು ನಾನಾ ಹಗರಣಗಳಲ್ಲಿ ಸಿಲುಕಿರುವುದು ಎಲ್ಲರಿಗೂ ತಿಳಿದ ಸಂಗತಿ. ಗೃಹ ಮಂತ್ರಿ ಆರಗ ಜ್ಞಾನೇಂದ್ರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭೂಹಗರಣದಲ್ಲಿ ಸಿಲುಕಿದ್ದಾರೆ. ಈಗ ಶಿಕ್ಷಣ ಮಂತ್ರಿಯ ಹಗರಣ ಬಯಲಿಗೆ ಬಂದಿದೆ. ಜನಸಾಮಾನ್ಯರು ಮತ್ತು ಹಲವಾರು ಸಂಘ ಸಂಸ್ಥೆಗಳು ಹಗರಣಗಳ ಬಗ್ಗೆ ದೂರುತ್ತಲೇ ಇವೆ. ಬಿಜೆಪಿಯ ಹಿರಿಯ ನಾಯಕರ ಬಳಿ ಉತ್ತರವಿಲ್ಲ. ಈ ಆರೋಪಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಬಳಿ ಇರುವ ಉತ್ತರ ಒಂದೇ ಒಂದು ‘‘ಈ ಹಗರಣಗಳೆಲ್ಲ ರಾಜಕೀಯ ಪ್ರೇರಿತ’’ ಎಂಬುದು. ಪ್ರಧಾನಿ ನರೇಂದ್ರ ಮೋದಿಯವರು 2018ರಲ್ಲಿ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಬಂದಾಗ ಅಂದಿನ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಶೇ.10 ಕಮಿಷನ್ ಸರಕಾರ ಎಂದು ಪದೇ ಪದೇ ಲೇವಡಿ ಮಾಡಿದ್ದರು. ಈಗ ಕರ್ನಾಟಕದಲ್ಲಿ ಅವರದೇ ಪಕ್ಷದ ಸರಕಾರ ಬಹುದೊಡ್ಡ ಹಗರಣಗಳಲ್ಲಿ ಸಿಲುಕಿದೆ. ಶೇ. 40 ಕಮಿಷನ್ ಹಗರಣಗಳು ಬಯಲಿಗೆ ಬರುತ್ತಲೇ ಇವೆ. ಆದರೂ ಪ್ರಧಾನಿ ಇನ್ನೂ ಮೌನ ಮುರಿದಿಲ್ಲ. ಪ್ರತಿಪಕ್ಷ ನಾಯಕರ ಮೇಲೆ ವಿನಾ ಕಾರಣ ಆದಾಯ ತೆರಿಗೆ ಇಲಾಖೆ, ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳ ಮೂಲಕ ದಾಳಿ ಮಾಡಿಸುವವರಿಗೆ ಕರ್ನಾಟಕದಲ್ಲಿ ನಡೆದಿರುವುದು ಭ್ರಷ್ಟಾಚಾರ ಎಂದು ಅನ್ನಿಸುವುದಿಲ್ಲವೇ?.

ಒಂದೊಂದಾಗಿ ಬಯಲಿಗೆ ಬರುತ್ತಿರುವ ರಾಜ್ಯ ಬಿಜೆಪಿ ಸರಕಾರದ ಹಗರಣಗಳ ಬಗ್ಗೆ ಸರಕಾರದಿಂದ, ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಯಿಂದ ರಾಜ್ಯದ ಜನತೆ ಉತ್ತರ ಬಯಸಿದ್ದಾರೆ. ತನ್ನ ಮೇಲೆ ಬಂದ ಆರೋಪವನ್ನು ಪುರಾವೆ ಸಹಿತ ನಿರಾಕರಿಸಿ ದೋಷ ಮುಕ್ತವಾಗುವ ನ್ಯಾಯ ಸಮ್ಮತ ಮಾರ್ಗವನ್ನು ಕೈ ಬಿಟ್ಟು ಹಿಂದಿನ ಕಾಂಗ್ರೆಸ್ ಸರಕಾರದ ಹಗರಣಗಳನ್ನು ಬಯಲಿಗೆಳೆಯುತ್ತೇವೆ ಎನ್ನುವುದು ಹತಾಶೆಯ ಪ್ರತಿಕ್ರಿಯೆಯಾಗುತ್ತದೆ. ನೀವು ತಿಂದಿದ್ದೀರಿ ನಾವೂ ತಿನ್ನುತ್ತೇವೆ ಎಂದಂತಾಗುತ್ತದೆ. ಈ ರೀತಿ ರಾಜ್ಯದ ಜನತೆಗೆ ದ್ರೋಹ ಬಗೆದು ಕೆಸರೆರಚಾಟದಲ್ಲಿ ತೊಡಗುವುದು ಜನದ್ರೋಹವಾಗುತ್ತದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News