ಗಲಭೆಗಳನ್ನು ನಿಯಂತ್ರಿಸಬೇಕಾದ ಸರಕಾರವೇ ಗಲಭೆಕೋರನಾದರೆ?

Update: 2022-09-09 05:01 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಒಂದು ರಾಜ್ಯದಲ್ಲಿ ಶಾಂತಿ, ಸೌಹಾರ್ದ, ಕಾನೂನು ಸುವ್ಯವಸ್ಥೆ ಎಷ್ಟರ ಮಟ್ಟಿಗೆ ಅಸ್ತಿತ್ವದಲ್ಲಿದೆ ಎನ್ನುವುದರ ಆಧಾರದ ಮೇಲೆ ನಾವು ಆ ರಾಜ್ಯದ ಅಭಿವೃದ್ಧಿ ಯಾವ ದಿಕ್ಕಿನತ್ತ ಸಾಗುತ್ತಿದೆ ಎನ್ನುವುದನ್ನು ತಾಳೆ ಹಾಕಬಹುದಾಗಿದೆ. ಅಶಾಂತಿ ಮತ್ತು ಅಭಿವೃದ್ಧಿ ಎಂದಿಗೂ ಜೊತೆ ಜೊತೆಯಾಗಿ ಸಾಗುವುದಕ್ಕೆ ಸಾಧ್ಯವಿಲ್ಲ. ಇತ್ತೀಚೆಗೆ ಅಭಿವೃದ್ಧಿಯ ಹೆಸರಿನಲ್ಲಿ ರಾಜಕೀಯ ನಡೆಸುವ ಅಗತ್ಯವೇ ಇಲ್ಲ ಎನ್ನುವ ನಿರ್ಧಾರಕ್ಕೆ ರಾಜಕಾರಣಿಗಳು ಬಂದಂತಿದೆ. ಕೋಮು ಉದ್ವಿಗ್ನ ವಾತಾವರಣವನ್ನು ಸದಾ ಉಳಿಸಿಕೊಂಡು ಬಂದರೆ, ಸುಲಭದಲ್ಲಿ ಅಧಿಕಾರ ಹಿಡಿಯಬಹುದು ಎಂದು ಅವರು ಭಾವಿಸಿದ್ದಾರೆ. ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ನಮ್ಮ ಮುಂದೆ ಉತ್ತರ ಪ್ರದೇಶ ಮತ್ತು ಅದರ ಮುಖ್ಯಮಂತ್ರಿ ಆದಿತ್ಯನಾಥ್ ಅವರಿದ್ದಾರೆ.

ಮುಖ್ಯಮಂತ್ರಿಯಾಗುವ ಯಾವ ರಾಜಕೀಯ ಮುತ್ಸದ್ದಿತನವೂ ಆದಿತ್ಯನಾಥ್ ಬಳಿಯಿದ್ದಿರಲಿಲ್ಲ. ತನ್ನ ಕೋಮು ಉದ್ವಿಗ್ನಕಾರಿ ಹೇಳಿಕೆಗಳಿಂದ, ಹಿಂಸೆ, ಅತ್ಯಾಚಾರಗಳಿಗೆ ಕರೆ ನೀಡುವ ಮೂಲಕವೇ ಅವರು ಉತ್ತರ ಪ್ರದೇಶದಲ್ಲಿ ನಾಯಕನಾಗಿ ಬೆಳೆದು ಬಂದರು.  ಉತ್ತರ ಪ್ರದೇಶವನ್ನು ಅಭಿವೃದ್ಧಿಯ ದಾರಿಯಲ್ಲಿ ಮುನ್ನಡೆಸುವ ಯಾವ ದೂರದೃಷ್ಟಿಯೂ ಅವರ ಬಳಿ ಇರಲಿಲ್ಲ. ಕನಿಷ್ಠ ಮುಖ್ಯಮಂತ್ರಿಯಾದ ಬಳಿಕವಾದರೂ ಆ ಸ್ಥಾನದ ಘನತೆಯನ್ನು ಉಳಿಸುತ್ತಾರೆ ಎಂದು ಭಾವಿಸಿದರೆ, ಆ ಬಳಿಕವೂ ತನ್ನ ದ್ವೇಷ ರಾಜಕಾರಣವನ್ನು ಮುಂದುವರಿಸುತ್ತಾ ಬಂದರು ಮತ್ತು ಈ ಕಾರಣಕ್ಕಾಗಿಯೇ ಇವರನ್ನು ‘ಬಲಿಷ್ಠ ನಾಯಕ’ ಎಂದು ಬಿಂಬಿಸುವ ಪ್ರಯತ್ನವನ್ನು ಕೆಲವು ಮಾಧ್ಯಮಗಳು ಮತ್ತು ಸಂಘಟನೆಗಳು ನಡೆಸುತ್ತಾ ಬಂದವು. ಪರಿಣಾಮವಾಗಿ ಇಂದು ಉತ್ತರ ಪ್ರದೇಶ ಅತ್ಯಂತ ಕಳಪೆ ಆಡಳಿತಕ್ಕಾಗಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಲ್ಲಿದೆ. ಕೊರೋನ ಅವ್ಯವಸ್ಥೆ, ಲಾಕ್‌ಡೌನ್ ದುಷ್ಪರಿಣಾಮಗಳಿಗಾಗಿ ಉತ್ತರ ಪ್ರದೇಶ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯಿತು. ಆರೋಗ್ಯ, ಶಿಕ್ಷಣ ಮತ್ತು ಪೌಷ್ಟಿಕತೆಯ ಕ್ಷೇತ್ರದಲ್ಲಿ ಉತ್ತರ ಪ್ರದೇಶ ಭಾರೀ ಹಿನ್ನಡೆಯನ್ನು ಅನುಭವಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕಾನೂನು ಸುವ್ಯವಸ್ಥೆಯಲ್ಲೂ ಉತ್ತರ ಪ್ರದೇಶ ತೀರಾ ಹಿಂದುಳಿದಿರುವುದರಿಂದ, ಆ ರಾಜ್ಯದಲ್ಲಿ ಬಂಡವಾಳ ಹೂಡಲು ಉದ್ಯಮಿಗಳು ಹಿಂಜರಿಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಉತ್ತರ ಪ್ರದೇಶದ ಮೇಲಿನ ಈ ಕಳಂಕವನ್ನು ಅಳಿಸಲು ಆದಿತ್ಯನಾಥ್ ನೇತೃತ್ವದ ಸರಕಾರ ಇಲ್ಲದ ಪ್ರಯತ್ನವನ್ನು ಮಾಡುತ್ತಿದೆ. ಅದರ ಭಾಗವಾಗಿ ‘‘ಕಳೆದ ಐದು ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಗಲಭೆಗಳೇ ನಡೆದಿಲ್ಲ’’ ಎನ್ನುವ ಹೇಳಿಕೆಯೊಂದನ್ನು ಆದಿತ್ಯನಾಥ್ ಸಭೆಯೊಂದರಲ್ಲಿ ನೀಡಿದ್ದಾರೆ. ಆದರೆ ಹೂಡಿಕೆದಾರರು ಅಂತಹ ಹೇಳಿಕೆಗಳ ಆಧಾರದ ಮೇಲೆ ಬಂಡವಾಳವನ್ನು ಹೂಡುವ ಸಾಹಸಕ್ಕಿಳಿಯುವುದಿಲ್ಲ. ಕಳೆದ ಕೆಲ ವರ್ಷಗಳಿಂದ ಉತ್ತರ ಪ್ರದೇಶದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಇಡೀ ದೇಶ ವಿಷಾದದೊಂದಿಗೆ ಗಮನಿಸುತ್ತಿದೆ.

‘‘ಒಂದು ಕಾಲದಲ್ಲಿ ಉತ್ತರಪ್ರದೇಶ ಗಲಭೆಗಳಿಗೆ ಪ್ರಸಿದ್ಧವಾಗಿತ್ತು. ಆದರೆ, ಕಳೆದ ಐದು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಯಾವುದೇ ಗಲಭೆ ನಡೆದಿಲ್ಲ ಎನ್ನುವುದು ಇತ್ತೀಚೆಗೆ ಬಿಡುಗಡೆಗೊಂಡಿರುವ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ)ದ ವರದಿಯನ್ನು ಪರಿಶೀಲಿಸಿದಾಗ ಗೊತ್ತಾಗುತ್ತದೆ. ಉತ್ತರಪ್ರದೇಶ ಈಗ ಗಲಭೆ ಮುಕ್ತವಾಗಿದೆ’’ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಸಭೆಯೊಂದರಲ್ಲಿ ಸತ್ಯದ ತಲೆಯ ಮೇಲೆ ಹೊಡೆಯುವಂತೆ ಹೇಳಿದ್ದರು. ನನ್ನ ಆಡಳಿತದಲ್ಲಿ ಯಾವುದೇ ‘ಕೋಮು ಗಲಭೆ’ ನಡೆದಿಲ್ಲ ಎಂಬುದಾಗಿಯೂ ಸ್ಪಷ್ಟ ಪಡಿಸಿದ್ದರು. ಆದರೆ ನಿಜವಾದ ಅಂಕಿಅಂಶ ಬೇರೆಯದನ್ನೇ ಹೇಳುತ್ತದೆ.

ಎನ್‌ಸಿಆರ್‌ಬಿ ಅಂಕಿಅಂಶಗಳ ಪ್ರಕಾರವೇ, ಉತ್ತರಪ್ರದೇಶದಲ್ಲಿ ೨೦೧೭-೨೧ರ ಅವಧಿಯಲ್ಲಿ ೩೫,೦೪೦ ಗಲಭೆ ಪ್ರಕರಣಗಳು ನಡೆದಿವೆ. ಇದು ಆದಿತ್ಯನಾಥ್‌ರ ಹೇಳಿಕೆಗೆ ವ್ಯತಿರಿಕ್ತವಾಗಿದೆ. ಈ ಪೈಕಿ, ೫,೩೦೨ ಗಲಭೆಗಳು ೨೦೨೧ರಲ್ಲೇ ನಡೆದಿವೆ. ಆದಾಗ್ಯೂ, ೨೦೧೭ರಲ್ಲಿನ ೮,೯೯೦ ಗಲಭೆ ಪ್ರಕರಣಗಳಿಗೆ ಹೋಲಿಸಿದರೆ, ೨೦೨೧ರಲ್ಲಿ ಗಲಭೆಗಳು ಶೇ.೪೧ರಷ್ಟು ಕಡಿಮೆಯಾಗಿದೆ ಎನ್ನುವುದಷ್ಟೇ ಸಮಾಧಾನದ ವಿಷಯ. ೨೦೨೧ರಲ್ಲಿ ೫,೮೪೬ ಮಂದಿ ಗಲಭೆ ಸಂತ್ರಸ್ತರಾಗಿದ್ದಾರೆ. ಎನ್‌ಸಿಆರ್‌ಬಿ ದಾಖಲೆಗಳ ಪ್ರಕಾರ, ಉತ್ತರಪ್ರದೇಶದಲ್ಲಿ ೨೦೧೭ಮತ್ತು ೨೦೨೧ರ ನಡುವಿನ ಅವಧಿಯಲ್ಲಿ ಕೋಮುಗಲಭೆಗಳ ೩೫ ಪ್ರಕರಣಗಳು ನಡೆದಿವೆ. ೨೦೧೭ರ ಮಾರ್ಚ್‌ನಲ್ಲೇ ಆದಿತ್ಯನಾಥ್ ಸರಕಾರ ಅಸ್ತಿತ್ವಕ್ಕೆ ಬಂದಿದೆ. ನ್ಯಾಶನಲ್ ಕ್ರೈಮ್ ರೆಕಾರ್ಡ್ ಬ್ಯೂರೋ ಗಲಭೆ ಪ್ರಕರಣಗಳನ್ನು ೧೫ ಪ್ರಕಾರಗಳಲ್ಲಿ ವಿಂಗಡಿಸುತ್ತದೆ. ಕೋಮು ಗಲಭೆ, ಪಂಥ ಗಲಭೆ, ಜಾತಿ ಸಂಘರ್ಷ, ಕೃಷಿ ಸಂಘರ್ಷ, ಕೈಗಾರಿಕಾ ಸಂಘರ್ಷ ಮತ್ತು ರಾಜಕೀಯ ಸಂಘರ್ಷ- ಅವುಗಳ ಪೈಕಿ ಕೆಲವು. ವೈರ ಅಥವಾ ವೈಷಮ್ಯಕ್ಕೆ ಸಂಬಂಧಿಸಿದ ಗಲಭೆ ಪ್ರಕರಣಗಳ ಸಂಖ್ಯೆಯಲ್ಲಿ ಶೇ.೫೫ ಏರಿಕೆಯಾಗಿದೆ. ಹಾಗೆಯೇ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳೂ ಹೆಚ್ಚಿ ವೆ ಎನ್ನುವುದು ಅಂಕಿಅಂಶಗಳಿಂದ ಬಯಲಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ದಲಿತರ ಮೇಲೆ ನಡೆಯುವ ದೌರ್ಜನ್ಯಗಳ ದೂರುಗಳನ್ನು ದಾಖಲಿಸುವುದಕ್ಕೇ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪಗಳಿವೆ. ಆದಿತ್ಯನಾಥ್ ಅಧಿಕಾರಾವಧಿಯಲ್ಲಿ ಉತ್ತರ ಪ್ರದೇಶದಲ್ಲಿ ಪ್ರಬಲ ಜಾತಿಗಳು ಇನ್ನಷ್ಟು ಬಲಿಷ್ಠವಾಗಿವೆ. ಮಾತ್ರವಲ್ಲ, ದಲಿತರು ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಧ್ವನಿಯೆತ್ತುವ ವಾತಾವರಣವೇ ಇಲ್ಲ. ಸರಕಾರದ ನೀತಿಗಳನ್ನು, ವೈಫಲ್ಯಗಳನ್ನು ಟೀಕಿಸುವ, ಅದರ ವಿರುದ್ಧ ಬರೆಯುವ ವಾತಾವರಣವೂ ಉತ್ತರ ಪ್ರದೇಶದಲ್ಲಿ ಪತ್ರಕರ್ತರಿಗೆ ಇಲ್ಲ. ಬರೆದವರ ಮೇಲೆಯೇ ಮೊಕದ್ದಮೆ ದಾಖಲಿಸಿ ಅವರನ್ನು ಜೈಲಿಗೆ ತಳ್ಳುವುದಕ್ಕೆ ಉತ್ತರ ಪ್ರದೇಶ ಸರಕಾರ ಹಿಂದೇಟು ಹಾಕಿಲ್ಲ. ಹಾಥರಸ್ ಪ್ರಕರಣವನ್ನು ವರದಿ ಮಾಡಲು ತೆರಳಿದ ಕೇರಳದ ಪತ್ರಕರ್ತ ಇಂದಿಗೂ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಆದಿತ್ಯನಾಥ್ ಅಧಿಕಾರಾವಧಿಯಲ್ಲಿ ಪತ್ರಕರ್ತರ ಅಭಿವ್ಯಕ್ತಿಯ ದಮನಗಳು ಹೆಚ್ಚಿವೆ.

ಈ ಹಿಂದೆ ಉತ್ತರ ಪ್ರದೇಶದಲ್ಲಿ ಗಲಭೆಗಳು ಎರಡು ಸಮುದಾಯಗಳ ನಡುವೆ ನಡೆಯುತ್ತಿದ್ದರೆ, ಆದಿತ್ಯನಾಥ್ ಅವಧಿಯಲ್ಲಿ ಪ್ರಜೆಗಳು ಮತ್ತು ಸರಕಾರದ ನಡುವೆಯೇ ಸಂಘರ್ಷಗಳು ನಡೆಯುತ್ತಿವೆ. ಸರಕಾರದ ನೀತಿಗಳ ವಿರುದ್ಧ ಪ್ರತಿಭಟನೆ ನಡೆಸಲು ಬೀದಿಗಿಳಿದ ಜನರ ವಿರುದ್ಧ ಪೊಲೀಸರು ಅತ್ಯಂತ ಅಮಾನವೀಯವಾಗಿ ವರ್ತಿಸಿದ್ದಾರೆ. ಸರಕಾರದ ನೇತೃತ್ವದಲ್ಲೇ ನಾಗರಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಅಪರಾಧ ಪ್ರಕರಣಗಳ ಅಂಕಿಅಂಶಗಳಲ್ಲಿ ಉಲ್ಲೇಖಿಸಲಾಗುವುದಿಲ್ಲ. ಸಿಎಎ ಪ್ರತಿಭಟನಾಕಾರರನ್ನು ದಮನಿಸಲು ಸರಕಾರ ಪೊಲೀಸರನ್ನು ಬಳಸಿದ ಬಗೆ, ಪ್ರವಾದಿ ನಿಂದನೆಯನ್ನು ವಿರೋಧಿಸಿ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದಾಗ ಅವರ ವಿರುದ್ಧ ಪೊಲೀಸ್ ಇಲಾಖೆಯನ್ನು ಬಳಸಿದ ರೀತಿ ಯಾವುದೇ ‘ಕ್ರಿಮಿನಲ್ ವರ್ತನೆ’ಗಳಿಗಿಂತ ಭಿನ್ನವಾಗಿಲ್ಲ. ಇಲ್ಲಿ ಪ್ರತಿಭಟನಾಕಾರರು ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದವರು ಎನ್ನುವ ಕಾರಣಕ್ಕಾಗಿಯೇ ಅತ್ಯಂತ ಬರ್ಬರವಾಗಿ ಪೊಲೀಸ್ ವ್ಯವಸ್ಥೆಯನ್ನು ಅವರ ವಿರುದ್ಧ ಬಳಸಲಾಗಿದೆ. ಇದು ಒಂದೆರಡು ಬಾರಿಯಲ್ಲ. ನ್ಯಾಯಾಲಯ ಆರೋಪಿಗಳ ವಿರುದ್ಧ ಯಾವುದೇ ತೀರ್ಪುಗಳನ್ನು ನೀಡುವ ಮೊದಲೇ, ಬುಲ್ಡೋಜರ್‌ಗಳ ಮೂಲಕ ಆರೋಪಿಗಳ ಮನೆಗಳನ್ನು ಧ್ವಂಸ ಗೊಳಿಸಿರುವುದು ಪ್ರಜಾಸತ್ತಾತ್ಮಕ ವ್ಯವಸ್ಥೆ ಅಸ್ತಿತ್ವದಲ್ಲಿರುವ ರಾಜ್ಯದಲ್ಲಿ ನಡೆಯಲು ಸಾಧ್ಯವಿಲ್ಲ.

ಉತ್ತರ ಪ್ರದೇಶದಲ್ಲಿ ಹೆಸರಿಗಷ್ಟೇ ಪ್ರಜಾಸತ್ತಾತ್ಮಕ ಸರಕಾರ ಅಸ್ತಿತ್ವದಲ್ಲಿದೆ. ಪ್ರಜಾಸತ್ತೆಯ ಮುಖವಾಡದಲ್ಲೇ ಅದು ಜನರನ್ನು ಭೀಕರವಾಗಿ ದಮನಿಸುತ್ತಿದೆ. ಕಾನೂನು ವ್ಯವಸ್ಥೆ ದೊಡ್ಡ ಮಟ್ಟದಲ್ಲಿ ದುರ್ಬಳಕೆಯಾಗುತ್ತಿದೆ. ಇಂತಹ ವಾತಾವರಣದಲ್ಲಿ ನರಳುತ್ತಿರುವ ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಗಲಭೆಗಳೇ ನಡೆದಿಲ್ಲ ಎನ್ನುವ ಆದಿತ್ಯನಾಥ್ ಹೇಳಿಕೆಯೇ ಹಾಸ್ಯಾಸ್ಪದ. ಉತ್ತರ ಪ್ರದೇಶದಲ್ಲಿ ಸರಕಾರವೇ ಗಲಭೆಕೋರನಾಗಿ ದಾಂಧಲೆ ನಡೆಸುತ್ತಿರುವಾಗ, ಜನಸಾಮಾನ್ಯರಿಗೆ ಗಲಭೆ ನಡೆಸಲು ಅವಕಾಶವಾದರೂ ಎಲ್ಲಿದೆ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News