ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿಯೆಬ್ಬಿಸಿದ ಅಂಡಮಾನ್ ನ ಬುಲ್ ಬುಲ್ ಹಕ್ಕಿಗಳು

Update: 2022-09-11 04:16 GMT

ಬುಲ್‌ಬುಲ್ ಕಲ್ಪನಾ ಚಿತ್ರಣದ ಬಗೆಗಿನ ಈ ವಿವಾದದ ಬಗ್ಗೆ ಹೇಳುವುದಾದರೆ, ಅದು ಒಂದು ರೂಪಕವಷ್ಟೇ ಅಲ್ಲದೆ ಬೇರೇನೂ ಅಲ್ಲವೆಂಬುದು ಸ್ಪಷ್ಟವಿದೆ. ಸಾಂದರ್ಭಿಕ ವಿವರಣೆಯೇನೂ ಇಲ್ಲದಿರುವುದರಿಂದ ಅದು ಲೇಖಕನ ಕಾವ್ಯಾತ್ಮಕ ಕಾಲ್ಪನಿಕತೆಯ ತುಣುಕು ಎಂಬಂತೆ ಭಾಸವಾಗಿದೆ.

ಸಾಹಿತಿ, ವೈಚಾರಿಕ ಲೇಖಕ, ಶಿಕ್ಷಣತಜ್ಞ ಕೆ.ಟಿ.ಗಟ್ಟಿಯವರು ಕರ್ನಾಟಕ ಸಾಹಿತ್ಯ ಪರಿಷತ್ ಪ್ರಾಯೋಜಿಸಿದ ಅಂಡಮಾನ್ ಪ್ರವಾಸದಿಂದ ಹಿಂದಿರುಗಿ ರಚಿಸಿದ ಪ್ರವಾಸ ಕಥನ, ‘ನಿಸರ್ಗ ಕನ್ಯೆ ಅಂಡಮಾನ್’. 1996ರಲ್ಲಿ ಬೆಂಗಳೂರಿನ ಭಾಗೀರಥಿ ಪ್ರಕಾಶನದಿಂದ ಪ್ರಕಟವಾದ ಅವರ ಈ ಪ್ರವಾಸ ಕಥನದಿಂದ, ‘ಕಾಲವನ್ನು ಗೆದ್ದವರು’ ಎಂಬ ಪ್ರಬಂಧವನ್ನು ಆಯ್ದು, ಎಸ್‌ಸಿಇಆರ್‌ಟಿ ಪಠ್ಯಕ್ರಮದ ಎಂಟನೇ ತರಗತಿಯ ಉಪಪಠ್ಯದಲ್ಲಿ ಪ್ರಕಟಿಸಲಾದ ವಿಷಯ ಮಾಧ್ಯಮದ ಗಮನ ಸೆಳೆದು, ಬುಲ್ ಬುಲ್ ರೆಕ್ಕೆಗಳಿಂದ ಬಿರುಗಾಳಿಯನ್ನೇ ಎಬ್ಬಿಸಿತು. ‘‘ಕೆ.ಟಿ.ಗಟ್ಟಿ ಹೀಗೆ ಬರೆದಿದ್ದಾರೆ’’ ಎಂದು ಮಾಧ್ಯಮಗಳು ಅಬ್ಬರಿಸಿದವು. ತಮ್ಮ ಪ್ರವಾಸ ಕಥನದ ಭಾಗ ಪಠ್ಯದಲ್ಲಿ ಸೇರ್ಪಡೆಯಾದ ವಿಚಾರವೇ ಅದುವರೆಗೆ ಅವರಿಗಾಗಲೀ, ಅವರ ಮನೆಯವರಿಗಾಗಲೀ ತಿಳಿದಿರಲಿಲ್ಲ.

ಪ್ರವಾಸ ಸಾಹಿತ್ಯ ಎಂದು ಸೂಚಿಸಲಾಗಿರುವ ಈ ಲೇಖನ ಭಾಷಾಪಠ್ಯವಾಗಿ ಉಪಪಠ್ಯದಲ್ಲಿ ಸೇರ್ಪಡೆಯಾಗಿದೆ. ಪುಸ್ತಕದಲ್ಲಿನ ಅವರ ಮುನ್ನುಡಿಯಲ್ಲಿ ಪ್ರಕೃತಿಯ ಬಗೆಗಿನ ಅವರ ಆಕರ್ಷಣೆ ವಿದಿತವಾಗಿದ್ದರೆ, ಒಳಪುಟಗಳಲ್ಲಿ ಅಂಡಮಾನ್‌ನ ಪ್ರಕೃತಿ ಚಿತ್ರದೊಡನೆ ಅಲ್ಲಿನ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಚಿತ್ರಣ ತೆರೆದುಕೊಂಡಿದೆ. ಸಹಜವಾಗಿಯೇ ಅಂಡಮಾನ್ ಸೆಲ್ಯುಲರ್ ಜೈಲಿನ ಚಿತ್ರಣವೂ, ಚರಿತ್ರೆಯೂ ಇಲ್ಲಿ ಬಿಂಬಿಸಲ್ಪಟ್ಟಿದೆ. ಪ್ರಸಕ್ತ ಪಠ್ಯಪುಸ್ತಕದಲ್ಲಿನ ‘ಕಾಲವನ್ನು ಗೆದ್ದವರು’ ಎಂಬ ಈ ಅಧ್ಯಾಯದಲ್ಲಿ ಸಾವರ್ಕರ್‌ರ ಜೈಲುವಾಸದ ಚಿತ್ರಣವಿದೆ. ಕೆ.ಟಿ.ಗಟ್ಟಿಯವರ ಪುಸ್ತಕದಲ್ಲಿ ಸದರಿ ಅಧ್ಯಾಯದ ಕೊನೆಗೆ, ‘‘ಈ ಅಧ್ಯಾಯದಲ್ಲಿ ಉಧೃತವಾದ ಭಾಗಗಳು ಮತ್ತೂರು ಕೃಷ್ಣಮೂರ್ತಿಯವರ ‘ಸ್ವಾತಂತ್ರ್ಯವೀರ ಸಾವರ್ಕರ್’ (1966) ಎಂಬ ಪುಸ್ತಕದಿಂದ’’ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ. 

ಪಠ್ಯಕ್ಕೆ ಆಯ್ದುಕೊಂಡ ಭಾಗದೊಡನೆ ಈ ಮಾಹಿತಿ ಇಲ್ಲದಿರುವುದೇ ಎಲ್ಲ ಗೊಂದಲಕ್ಕೆ ಮೂಲ ಕಾರಣ. ಆಯ್ಕೆ ಸಮಿತಿಯ ತಪ್ಪಿನಿಂದ ಎದ್ದ ಬಿರುಗಾಳಿ ಮಾಧ್ಯಮದ ವಿಚಾರಹೀನತೆಯಿಂದ ವೇಗ ಪಡೆದು ಗೊಂದಲವೆಬ್ಬಿಸಿದೆ. ಪಠ್ಯಭಾಗವಾಗಿ ಆಯ್ದು ಸೇರಿಸುವಾಗ ಅಧ್ಯಾಯದ ಕೊನೆಗಿರುವ ಈ ಮಾಹಿತಿಯನ್ನೂ ಕೊಟ್ಟಿದ್ದರೆ, ಕೆ.ಟಿ.ಗಟ್ಟಿ ಹೀಗಂದಿದ್ದಾರೆ ಎಂಬ ವಿವಾದಕ್ಕೆ ಅವಕಾಶವಿರುತ್ತಿರಲಿಲ್ಲ. ಕನ್ನಡ ಸಾಹಿತ್ಯ ಪರಿಷತ್ತು ಪ್ರಾಯೋಜಿಸಿದ ಅವರ ಈ ಪ್ರವಾಸವು, ಅಂಡಮಾನ್‌ನ ಸಾಮಾಜಿಕ ಜನಜೀವನ ಹಾಗೂ ರಾಜಕೀಯ ಚರಿತ್ರೆಯ ವಿಸ್ತೃತ ನೋಟವನ್ನು ಆ ದ್ವೀಪವಾಸಿಗಳಿಂದ ಕಲೆ ಹಾಕುವುದೇ ಆಗಿತ್ತು. ಅಲ್ಲಿಂದ ಅವರು ಬರೆದ ಒಂದು ಪತ್ರದಲ್ಲಿ, ತಾನು ಆ ಪ್ರದೇಶದ ಬಗ್ಗೆ ಮಾಹಿತಿ ಕಲೆ ಹಾಕಲು ಸ್ಥಳೀಯ ವಾಚನಾಲಯದಲ್ಲಿ ಸಾಕಷ್ಟು ಸಮಯ ಕಳೆಯುತ್ತಿರುವುದಾಗಿ ಬರೆದುದು ಅವರ ಪತ್ನಿ ಯಶೋದಾರ ನೆನಪಿನಲ್ಲಿದೆ. 

ಅವರು ಪರಿಶೀಲಿಸಿದ ಅನೇಕ ಆಕರಗ್ರಂಥಗಳ ಪಟ್ಟಿ ಪುಸ್ತಕದ ಕೊನೆಗೆ ನೀಡಿರುವ ಗ್ರಂಥಸೂಚಿಯಲ್ಲಿದೆ. ಅದರಲ್ಲಿ ಮತ್ತೂರು ಕೃಷ್ಣಮೂರ್ತಿ ಅವರ ಕೃತಿಯೊಡನೆ ಸ್ವತಃ ಸಾವರ್ಕರ್‌ರ ಆತ್ಮಕಥನವೂ ಹೆಸರಿಸಲ್ಪಟ್ಟಿದೆ. ಪುಸ್ತಕಗಳಲ್ಲದೆ, ಅವರು ಸ್ಥಳೀಯರನ್ನು ಸಂದರ್ಶಿಸುತ್ತಾ, ಸ್ಥಳೀಯ ಸಾಮಾಜಿಕ, ಸಾಂಸ್ಕೃತಿಕ ಸಮಾರಂಭಗಳಲ್ಲಿ ಹಾಜರಿರುತ್ತಾ ಸಾಕಷ್ಟು ಸಮಯ ಕಳೆದಿದ್ದರು. ಅಂತಹದೊಂದು ಸಮಾರಂಭ, ಸಾವರ್ಕರ್ ಅವರ ಪುಣ್ಯತಿಥಿ ಪ್ರಯುಕ್ತ ಸ್ಥಳೀಯ ಮಹಾರಾಷ್ಟ್ರ ಸಂಘದಿಂದ ಆಯೋಜಿಸಲಾಗಿದ್ದ ವಾರ್ಷಿಕೋತ್ಸವವಾಗಿದ್ದು, ಮಹಾರಾಷ್ಟ್ರದಿಂದ ಸುಮಾರು ನೂರು ಮಂದಿ ಆಗಮಿಸಿ ಆ ಸಮಾರಂಭದಲ್ಲಿ ಭಾಗವಹಿಸಿದ್ದರು(ಪುಟ 45). ಸಾವರ್ಕರ್ ಅವರ ಕಥೆಯತ್ತ ಅವರ ಗಮನವನ್ನು ಸೆಳೆಯುವಲ್ಲಿ ಈ ಘಟನೆ ಮುಖ್ಯ ಪಾತ್ರ ವಹಿಸಿರಬಹುದು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಕ ಸೆಲ್ಯುಲರ್ ಜೈಲಿಗೆ ಜೈಲರ್ ಆಗಿ ಬಂದ ಸರಳ ಸಜ್ಜನ, ಮಹಾರಾಷ್ಟ್ರ ಮಂಡಳದ ಚೇತನದಂತಿದ್ದ ಗೋವಿಂದರಾವ್ ಹರ್ಷೆ ಅವರ ಬಗ್ಗೆ, ಅವರು ನಡೆಸಿರುವ ಅಧ್ಯಯನದ ಬಗ್ಗೆ, ಅಲ್ಲಿನ ಇನ್ನಿತರ ಭಾರತೀಯ ಭಾಷಾ ಸಂಘಗಳ ಬಗ್ಗೆ, ಕನ್ನಡ ಸಂಘದ ಬಗ್ಗೆ ಅವರು ವಿವರವಾಗಿ ಬರೆದಿದ್ದಾರೆ. ಈ ಕೃತಿಯಲ್ಲಿ ಸಾವರ್ಕರ್ ಅವರ ಬಗೆಗಿನ ಗಟ್ಟಿಯವರ ವಿವರವು ಕೇವಲ ಅವರ ಅಂಡಮಾನ್ ಜೈಲುವಾಸದ ಅನುಭವಕ್ಕಷ್ಟೇ ಸೀಮಿತವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಅವರ ಪಾತ್ರದ ಬಗೆಗಾಗಲೀ, ಅವರ ವಿಚಾರಧಾರೆಯ ಬಗೆಗಾಗಲೀ ಯಾವುದೇ ಮಾತು ಇಲ್ಲಿ ಬಂದಿಲ್ಲ. ಇಲ್ಲಿಯಾಗಲೀ, ಗಟ್ಟಿ ಅವರ ಇನ್ನಾವುದೇ ಬರಹಗಳಲ್ಲಾಗಲೀ, ಅವರಿಗೆ ಸಾವರ್ಕರ್‌ರ ಬಗೆಗೆ ಈ ಪುಸ್ತಕದಲ್ಲಿ ಇರುವುದಕ್ಕಿಂತ ಹೆಚ್ಚು ತಿಳಿದಿತ್ತೆನ್ನಲು ಯಾವ ಆಧಾರವೂ ಇಲ್ಲ.

ಸಾವರ್ಕರ್ ಅವರ ಬಗೆಗಿನ ಈ ಲೇಖನವು, ಈ ಪುಸ್ತಕದಲ್ಲಿ ಪ್ರಕಟವಾಗಿರುವ ಜೈಲುವಾಸ ಅನುಭವದ ಹಲವು ವಿವರಗಳಲ್ಲಿ ಒಂದಾಗಿದೆ. ಅಂತಹ ಇತರ ಕಥನಗಳು ವೈಯಕ್ತಿಕ ಅನುಭವಗಳಾಗಿದ್ದು, ಚಾರಿತ್ರಿಕ, ರಾಜಕೀಯಾತ್ಮಕ ವಿವರಗಳೊಡನೆ ಐದು ಅಧ್ಯಾಯಗಳಲ್ಲಿ ಬಿಂಬಿತವಾಗಿವೆ. ಜೈಲುವಾಸಿಗಳಾಗಿದ್ದ ಇಬ್ಬರ, ಇತರ ಜೈಲುವಾಸಿಗಳ ಮೂವರು ಬಂಧುಗಳ, ಮಹಾರಾಷ್ಟ್ರದವನಾದ ಒಬ್ಬ ಜೈಲು ಅಧಿಕಾರಿಯ ಹಾಗೂ ಕೆಲ ಸ್ಥಳೀಯರ ವೈಯಕ್ತಿಕ ಸಂದರ್ಶನಗಳ ವಿವರಗಳು ಈ ಅಧ್ಯಾಯಗಳಲ್ಲಿವೆ.

ಬುಲ್‌ಬುಲ್ ಕಲ್ಪನಾ ಚಿತ್ರಣದ ಬಗೆಗಿನ ಈ ವಿವಾದದ ಬಗ್ಗೆ ಹೇಳುವುದಾದರೆ, ಅದು ಒಂದು ರೂಪಕವಷ್ಟೇ ಅಲ್ಲದೆ ಬೇರೇನೂ ಅಲ್ಲವೆಂಬುದು ಸ್ಪಷ್ಟವಿದೆ. ಸಾಂದರ್ಭಿಕ ವಿವರಣೆಯೇನೂ ಇಲ್ಲದಿರುವುದರಿಂದ ಅದು ಲೇಖಕನ ಕಾವ್ಯಾತ್ಮಕ ಕಾಲ್ಪನಿಕತೆಯ ತುಣುಕು ಎಂಬಂತೆ ಭಾಸವಾಗಿದೆ. ಆ ಪ್ರದೇಶದಲ್ಲಿ ಹೇರಳವಾಗಿದ್ದ ಬುಲ್‌ಬುಲ್ ಹಕ್ಕಿಗಳು ಅಂಡಮಾನ್ ಜೈಲುವಾಸಿಗಳ ಜೀವನದ ಅವಿಭಾಜ್ಯ ಅಂಗವಾಗಿದ್ದವು ಎಂದು ತಿಳಿದು ಬಂದಿದೆ. ಬುಲ್‌ಬುಲ್‌ಗಳೊಡನೆ ಸಾವರ್ಕರ್‌ರ ಸಾಂಗತ್ಯವು ಸ್ಥಳೀಯ ಜನಪದದಲ್ಲೂ, ಸಾವರ್ಕರ್‌ರ ಆತ್ಮಕಥೆಯಲ್ಲೂ, ಮತ್ತಿತರ ಮೂಲಗಳಲ್ಲೂ ಅಭಿವ್ಯಕ್ತವಾಗಿದೆ.

 ಈ ಬುಲ್‌ಬುಲ್ ಐತಿಹ್ಯವು ಲೇಖಕನ ಸೃಷ್ಟಿಯಲ್ಲ ಎಂಬುದು ನಿಸ್ಸಂಶಯ. ಈ ಬುಲ್‌ಬುಲ್ ಪ್ರತಿಮೆಯು ಸಾವರ್ಕರ್‌ರನ್ನು ವೈಭವೀಕರಿಸುವ ಉದ್ದೇಶದಿಂದ, ಅವರ ವಿಚಾರಧಾರೆಯ ಬಗ್ಗೆ ಅಭಿಮಾನವುಳ್ಳ ಲೇಖಕ ರಚಿಸಿರಬೇಕು ಎಂಬ ಭಾವನೆ ಯಾರಿಗಾದರೂ ಬಂದಿದ್ದರೆ, ಅಂಥವರು ಗಟ್ಟಿ ಅವರ ಕೃತಿಗಳನ್ನು ಓದಿಕೊಂಡಿಲ್ಲವೆಂದೇ ಹೇಳಬೇಕಾಗುತ್ತದೆ. ದೇವರು, ಧರ್ಮಗಳನ್ನೆಲ್ಲ ಹೊರಗಿರಿಸಿ, ಮಾನವೀಯತೆಯನ್ನೇ ಅಪ್ಪಿಕೊಂಡಿರುವ ವೈಚಾರಿಕ ಲೇಖಕ ಕೆ.ಟಿ.ಗಟ್ಟಿ ಅವರು. ತಮ್ಮ ‘ನಮ್ಮಿಳಗಿನ ಆಕಾಶ’ ಪ್ರಬಂಧ ಸಂಕಲನದ ‘ಧರ್ಮ ಮತ್ತು ವ್ಯಕ್ತಿ ಸ್ವಾತಂತ್ರ್ಯ’ ಎಂಬ ಪ್ರಬಂಧದ ಆರಂಭದಲ್ಲೇ ಅವರು, ‘‘ಮಾನವಧರ್ಮ ಎಂಬುದು ಹೇಗೆ ಒಂದು ವ್ಯಕ್ತಿಗಿರಬೇಕಾದ್ದು ಅಗತ್ಯವೋ, ಹಾಗೆಯೇ ಒಂದು ರಾಷ್ಟ್ರಕ್ಕೂ ಇರಬೇಕಾದ್ದು ಅಗತ್ಯ’’ ಎಂದು ಬರೆದಿದ್ದಾರೆ.

‘‘ಧಾರ್ಮಿಕತೆಯನ್ನೇ ರಾಷ್ಟ್ರೀಯತೆಯಾಗಿಸಿ ಒಂದು ದೇಶವನ್ನು ಸದಾ ಕಾಲ ಶಾಂತಿ, ಸೌಹಾರ್ದದ ನೆಲೆವೀಡಾಗಿ ಮಾಡಬಹುದೇ? ಬದುಕಿಗೆ ಧಾರ್ಮಿಕ ನಂಬಿಕೆಯೊಂದೇ ಸಾಕಾಗುವುದಿಲ್ಲ; ಮಳೆ, ಬೆಳೆಯ ಬಗ್ಗೆ ಯಾವ ಧರ್ಮವೂ ಗ್ಯಾರಂಟಿ ನೀಡಲಾರದು. ಬದುಕಿಗೆ ಉದ್ಯೋಗ ಬೇಕು, ಸಂಪಾದನೆ ಬೇಕು, ಭದ್ರತೆ ಬೇಕು; ಅಷ್ಟೇ ಸಾಲದು; ಅಭಿವ್ಯಕ್ತಿ ಸ್ವಾತಂತ್ರ್ಯ ಬೇಕು; ... ಮಹಾವೀರ, ಬುದ್ಧ, ಜೊರಾಸ್ಟರ್, ಕನ್ಫೂಶಿಯಸ್, ಜೀಸಸ್, ಮುಹಮ್ಮದ್, ನಾನಕ್ ಇವರ್ಯಾರೂ ಮತಸ್ಥಾಪಿಸಲು ಹೊರಟಿರಲಿಲ್ಲ; ಮಾನವ ಜೀವನ ವಿಧಾನವನ್ನು ಇನ್ನಷ್ಟು ಚೆನ್ನಾಗಿಸುವ ಕುರಿತಾಗಿ ಚಿಂತಿಸಿದವರು ಅವರು’’ ಎಂದವರು ಅಲ್ಲಿ ಬರೆದಿದ್ದಾರೆ. ‘‘ಮನುಷ್ಯನನ್ನು ಗುರುತಿಸಬೇಕಾದುದು ಅವನ ಮಾನವೀಯತೆಯ ಮೂಲಕ ಮಾತ್ರ’’ ಎಂದು ಗಟ್ಟಿಯವರು ತಮ್ಮ ‘ಪುನರಪಿ ಜನನಂ’ ಕೃತಿಯಲ್ಲಿ ಬರೆದಿದ್ದಾರೆ. 

ಇಪ್ಪತ್ತೆಂಟು ವರ್ಷಗಳ ಬಳಿಕ ತಮ್ಮ ಈ ಕೃತಿಯ ದ್ವಿತೀಯ ಮುದ್ರಣಕ್ಕೆ ಮುನ್ನುಡಿ ಬರೆಯುತ್ತಾ, ‘‘ಸಮಾಜದ ವಿಕಾಸದ ಬಗ್ಗೆ ಚಿಂತಿಸುತ್ತಾ, ಕಳೆದ ದಶಕಗಳಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗಿದೆ; ಆದರೆ ವಿಚಾರವಂತಿಕೆ ಮತ್ತು ಸ್ವಂತಿಕೆ ಕಡಿಮೆಯಾಗಿದೆ. ಯಾವ ಧರ್ಮವೂ ಮೇಲಲ್ಲ; ಯಾವ ಧರ್ಮವೂ ಕೀಳಲ್ಲ; ಎಲ್ಲಕ್ಕಿಂತ ಮುಖ್ಯವಾದುದು ಮಾನವೀಯತೆ,’’ ಎಂದಿದ್ದಾರೆ. ಗಟ್ಟಿ ಅವರ ವಿಚಾರಧಾರೆಯನ್ನರಿವ ಆಸಕ್ತಿ ಉಳ್ಳವರು, ಅವರ ‘ನಿಸರ್ಗಕನ್ಯೆ ಅಂಡಮಾನ್’ ಅಥವಾ ಅವರ ಇನ್ನಿತರ ಸಾಹಿತ್ಯಲೋಕಕ್ಕೆ ಪ್ರವೇಶ ಪಡೆದುಕೊಳ್ಳಬಹುದು. ಅವರ ನಲ್ವತ್ತೊಂಭತ್ತು ಕಾದಂಬರಿಗಳು, ಆತ್ಮಕಥೆಯೊಂದು, ಭಾಷೆ ಮತ್ತು ಶಿಕ್ಷಣ ಸಂಬಂಧಿತ ಕೃತಿಗಳು, ಸಣ್ಣ ಕಥಾ ಸಂಕಲನಗಳು, ಕವನ ಸಂಕಲನಗಳು, ಪ್ರಬಂಧ ಸಂಕಲನಗಳು, ನಾಟಕಗಳು, ಆಂಗ್ಲ ಕವನಗಳ ಅನುವಾದ ಸಂಕಲನ, ಮಕ್ಕಳ ನಾಟಕಗಳು, ರೇಡಿಯೊ ನಾಟಕಗಳು, ತುಳು ಕೃತಿಗಳು ಈ ವರೆಗೆ ಪ್ರಕಟವಾಗಿವೆ. ‘‘ಪುಸ್ತಕ ಮನುಷ್ಯ ಸೃಷ್ಟಿಸಿದ ಮಹಾ ಅದ್ಭುತ’’ ಎಂದು ತಮ್ಮ ಆತ್ಮಕಥನ ತೀರದಲ್ಲಿ ಅದ್ಭುತವಾದ ಮಾತನ್ನೇ ಅವರು ಬರೆದಿದ್ದಾರೆ. ಗಟ್ಟಿಯವರ ಸಾಹಿತ್ಯ ಸ್ನೇಹಾನುಬಂಧದ ಭಾಗ್ಯ ಪಡೆದ ನನ್ನ ಪತ್ರ ಭಂಡಾರದಲ್ಲಿ ಗಟ್ಟಿಯವರ ಅಸಂಖ್ಯ ಪತ್ರಗಳಿವೆ. ಅವರ ಪ್ರಬುದ್ಧ ಲೇಖನಿ ಕೊನೆಯವರೆಗೂ ನಿಲ್ಲದೆ ವಿಚಾರದೀಪ್ತಿಯ ಹೊನಲನ್ನು ಹರಿಸುತ್ತಿರಬೇಕೆಂಬುದೇ ನನ್ನಾಶಯವಾಗಿತ್ತು. ಆದರೆ ದೇಹಪ್ರಕೃತಿಯ ಮೇಲೆ ಮನಸ್ಸಿನ ವಿಜಯ ಸಾಧ್ಯವಾಗುವಂತಿದ್ದರೆ....!

Writer - ಶ್ಯಾಮಲಾ ಮಾಧವ

contributor

Editor - ಶ್ಯಾಮಲಾ ಮಾಧವ

contributor

Similar News