ಗೋವಾ ರಾಜಕೀಯ ಬೆಳವಣಿಗೆ: ಪ್ರಜಾಸತ್ತೆಯ ಮುಖವಾಡದಲ್ಲಿ ಸರ್ವಾಧಿಕಾರ

Update: 2022-09-17 03:50 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಗೋವಾದಲ್ಲಿ ಸುಭದ್ರವಾಗಿ ಅಧಿಕಾರ ನಡೆಸುತ್ತಿದ್ದರೂ, ಬಿಜೆಪಿ ಅಲ್ಲಿನ ಕಾಂಗ್ರೆಸ್ ಶಾಸಕಾಂಗ ಪಕ್ಷವನ್ನು ಅನಾಮತ್ತಾಗಿ ನುಂಗಿಹಾಕಿದೆ. 40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ 20 ಸ್ಥಾನ ಬಲವನ್ನು ಹೊಂದಿರುವ ಬಿಜೆಪಿ, ಮೂವರು ಸ್ವತಂತ್ರ ಶಾಸಕರು ಹಾಗೂ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ ಇಬ್ಬರು ಶಾಸಕರು ಸೇರಿ ಒಟ್ಟು 25 ಶಾಸಕರ ಬೆಂಬಲದೊಂದಿಗೆ ಸರಕಾರವನ್ನು ನಡೆಸುತ್ತಿತ್ತು. ಆದರೂ ಮೊನ್ನೆ ಕಾಂಗ್ರೆಸಿನಿಂದ ಆಯ್ಕೆಯಾಗಿದ್ದ 11 ಶಾಸಕರಲ್ಲಿ 8 ಶಾಸಕರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ಅವರಲ್ಲಿ ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಮತ್ತು ವಿಧಾನ ಸಭೆಯ ಪ್ರತಿಪಕ್ಷ ನಾಯಕರಾಗಿದ್ದ ಮೈಕೆಲ್ ಲೋಬೊ ಕೂಡ ಸೇರಿದ್ದಾರೆ. ಅಲ್ಲದೆ ಈ ರೀತಿ ಪಕ್ಷ ತೊರೆದ ಶಾಸಕರ ಸಂಖ್ಯೆ ಮೂಲ ಪಕ್ಷದ ಮೂರನೇ ಎರಡಕ್ಕಿಂತ ಜಾಸ್ತಿ ಇದ್ದುದರಿಂದ ಅವರು ತಮ್ಮದೇ ಪ್ರತ್ಯೇಕ ಶಾಸಕಾಂಗ ಪಕ್ಷ ರಚಿಸಿಕೊಂಡರು ಹಾಗೂ ಅದನ್ನು ಅನಾಮತ್ತಾಗಿ ಬಿಜೆಪಿಯಲ್ಲಿ ವಿಲೀನ ಮಾಡಲು ಸ್ಪೀಕರ್ ಅನುಮತಿ ಕೋರಿದ್ದರು. ಇದು ಮೂಲಪಕ್ಷದ ಮುಕ್ಕಾಲುವಾಸಿಗಿಂತ ಹೆಚ್ಚಿನ ಸದಸ್ಯರ ಬೆಂಬಲ ಹೊಂದಿದ್ದರಿಂದ ಸ್ಪೀಕರ್ ಕೂಡ ಅದಕ್ಕೆ ಅನುಮತಿ ಕೊಟ್ಟು ಅವರೆಲ್ಲರೂ ಪಕ್ಷಾಂತರ ನಿಷೇಧ ಕಾಯ್ದೆಯಿಂದ ಪಾರಾಗಿ ಬಿಜೆಪಿ ಶಾಸಕರಾಗಿ ಬದಲಾಗಿದ್ದಾರೆ. ಇದೀಗ ಬಿಜೆಪಿ ಶಾಸಕರ ಬಲ 33ಕ್ಕೆ ಏರಿದೆ ಹಾಗೂ ಕೇವಲ ಮೂವರು ಶಾಸಕರ ಬಲವನ್ನು ಹೊಂದಿರುವ ಕಾಂಗ್ರೆಸ್ ನಗಣ್ಯ ಸ್ಥಾನಕ್ಕೆ ಕುಸಿದಿದೆ.

ಈ ಹಿಂದೆಯೂ ಗೋವಾದಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ 17 ಜನ ಶಾಸಕರಲ್ಲಿ 15 ಶಾಸಕರು ಬಿಜೆಪಿಯ ಭೀತಿ ಮತ್ತು ಭಾರೀ ಮೊತ್ತದ ಆಪರೇಶನ್‌ಗೆ ಬಲಿಯಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಆದ್ದರಿಂದ ಆನಂತರ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು 37 ಜನ ಹೊಸಬರಿಗೆ ಅವಕಾಶ ಮಾಡಿಕೊಟ್ಟಿತ್ತಲ್ಲದೆ ಅವರೆಲ್ಲರಿಂದ ಪಕ್ಷಾಂತರ ಮಾಡುವುದಿಲ್ಲವೆಂದು ಅವರವರ ಧರ್ಮಗಳಿಗೆ ಸೇರಿದ ದೇವರ ಮುಂದೆ ಪ್ರಮಾಣ ಕೂಡ ಮಾಡಿಸಿದ್ದರು. ಆದರೆ ಅದು ಯಾವುದೂ ಭೀತಿ ಹಾಗೂ ಆಸೆಗಳ ಮುಂದೆ ಕೆಲಸ ಮಾಡಲಿಲ್ಲ. ದಿಗಂಬರ್ ಕಾಮತ್ ಹೇಳಿದಂತೆ ದೇವರೇ ಅವರಿಗೆ ಬಿಜೆಪಿ ಸೇರಲು ಬೋಧಿಸಿದ್ದಂತೆ! ಈ ಪಕ್ಷಾಂತರ ಕಾರಣಗಳು ಸ್ಪಷ್ಟ. ಇತ್ತೀಚೆಗೆ ದಿಲ್ಲಿಯ ಆಪ್ ಪಕ್ಷದ ಮೇಲೂ ಕಮಲಾಚರಣೆ ಮಾಡಿ ವಿಫಲವಾದಾಗ ಆಪ್ ಪಕ್ಷ ಬಿಜೆಪಿಯು ಏನಿಲ್ಲವೆಂದರೂ 700 ಕೋಟಿ ರೂಪಾಯಿಯನ್ನು ಈ ಹೀನನಡೆಗಳಿಗೆ ವೆಚ್ಚ ಮಾಡಿದೆಯೆಂದು ಆಪಾದಿಸಿತು.

ಗೋವಾ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಅವರ ಪ್ರಕಾರ ಪಕ್ಷಾಂತರಗೊಂಡ ಒಬ್ಬೊಬ್ಬ ಶಾಸಕರಿಗೆ ಹತ್ತಾರು ಕೋಟಿ ರೂಪಾಯಿಯನ್ನು ನೀಡಿ ಖರೀದಿಸಲಾಗಿದೆ. ಅಷ್ಟು ಮಾತ್ರವಲ್ಲದೆ ದಿಗಂಬರ್ ಕಾಮತ್ ಮೇಲೆ ಬಿಜೆಪಿಯೇ ಆರೋಪಿಸಿರುವ ಮೈನಿಂಗ್ ಭ್ರಷ್ಟಾಚಾರದ ಹಗರಣಗಳಿವೆ ಮತ್ತು ಈ.ಡಿ. ತನಿಖೆಯ ಕತ್ತಿ ತೂಗುತ್ತಿದೆ ಹಾಗೂ ಮತ್ತೊಬ್ಬ ನಾಯಕ ಲೋಬೊ ಅತ್ಯಂತ ಶ್ರೀಮಂತ ಶಾಸಕರಾಗಿದ್ದು ಅವರ ಮೇಲೆ ಇತ್ತೀಚೆಗೆ ಬಿಜೆಪಿ ನಾಯಕರು ಭ್ರಷ್ಟಾಚಾರದ ಆರೋಪ ಹೊರಿಸಿ ತನಿಖೆಗೆ ಒತ್ತಾಯಿಸುತ್ತಿದ್ದರು. ಈಗ ಅವರು ಬಿಜೆಪಿ ಸೇರಿದ ಮೇಲೆ ಅವರ ಭ್ರಷ್ಟಾಚಾರಗಳೆಲ್ಲಾ ದೇಶಭಕ್ತಿಯ ದ್ಯೋತಕವೇ ಆಗಿಬಿಡಬಹುದು. ಮೊನ್ನೆ ಮಹಾರಾಷ್ಟ್ರದಲ್ಲೂ ಬಿಜೆಪಿ ಶಿವಸೇನೆಯ 17 ಶಾಸಕರನ್ನು ಖರೀದಿಸಿ ಸರಕಾರ ರಚಿಸಿತು. 2018ರಲ್ಲಿ ಅರುಣಾಚಲ ಪ್ರದೇಶ, 2019ರಲ್ಲಿ ಕರ್ನಾಟಕ ಮತ್ತು ಗುಜರಾತ್, 2020ರಲ್ಲಿ ಮಧ್ಯಪ್ರದೇಶ, 2021ರಲ್ಲಿ ಪ. ಬಂಗಾಳ ಇನ್ನಿತ್ಯಾದಿ ಕಡೆಗಳಲ್ಲೆಲ್ಲಾ ಕೇವಲ ತನ್ನ ಹಣಬಲ ಮತ್ತು ಕೇಂದ್ರದ ತನಿಖಾ ಸಂಸ್ಥೆಗಳಾದ ಈ.ಡಿ, ಸಿಬಿಐ ಇತ್ಯಾದಿಗಳ ಭೀತಿಯನ್ನು ಒಡ್ಡಿ ಬಿಜೆಪಿ ತಾನು ಸೋತ ಕಡೆಗಳಲ್ಲೂ ಅನಾಯಾಸವಾಗಿ ಅಧಿಕಾರ ವಶಪಡಿಸಿಕೊಳ್ಳುತ್ತಿದೆ. ಹೀಗಾಗಿ ಇಂದು ರಾಜಕೀಯ ಪಕ್ಷಗಳು ಎಷ್ಟೇ ಬಹುಮತವನ್ನು ಹೊಂದಿದ್ದರೂ ಸರಕಾರ ರಚಿಸುವ ಮತ್ತು ಸರಕಾರ ಮುಂದುವರಿಸುವ ಸಾಧ್ಯತೆಗಳೇ ಬಿಜೆಪಿಯ ಹಣಬಲ ಮತ್ತು ಸರ್ವಾಧಿಕಾರಿ ಭಯೋತ್ಪಾದನೆಯ ಮುಂದೆ ಇಲ್ಲವಾಗುತ್ತಿದೆ. ಮತದಾರರು ಯಾರನ್ನೇ ಆಯ್ಕೆ ಮಾಡಿದರೂ ಬಿಜೆಪಿಯೇ ಅಧಿಕಾರಕ್ಕೆ ಬರುವುದರಿಂದ ಚುನಾವಣೆಗಳು ಸಹ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಾಮಮಾತ್ರ ಪ್ರಕ್ರಿಯೆಯಾಗಿ ಬಿಡುತ್ತಿದೆ.

ಇವೆಲ್ಲದರ ಮೂಲಕ ಬಿಜೆಪಿಯು ವಿರೋಧ ಪಕ್ಷ ಮುಕ್ತ ಏಕಪಕ್ಷ-ಬಿಜೆಪಿ ಪಕ್ಷ ಸರ್ವಾಧಿಕಾರವನ್ನು ಪ್ರಜಾತಾಂತ್ರಿಕವಾಗಿಯೇ ಜಾರಿ ಮಾಡುತ್ತಿದೆ. ಆಗ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿಯ ಕಾರ್ಪೊರೇಟ್ ಪರ ಹಿಂದುತ್ವವಾದಿ ಶಾಸನಗಳನ್ನು ವಿರೋಧಿಸುವ ಸಂಸದೀಯ ಶಕ್ತಿಯೇ ಇರದಂತಾಗಿ ಜನರ ಬದುಕು ಹಾಗೂ ದೇಶದ ಸಂಪತ್ತು ಇನ್ನಷ್ಟು ಸುಲಿಗೆಯಾಗತೊಡಗುತ್ತದೆ. ಆದ್ದರಿಂದಲೇ ಕಾರ್ಪೊರೇಟ್ ದೇಣಿಗೆಗಳಲ್ಲಿ ಬಿಜೆಪಿಗೆ ಶೇ. 95ಕ್ಕಿಂತಲೂ ಹೆಚ್ಚಿನ ಪಾಲು ಸಂದಾಯವಾಗುತ್ತಿದೆ. ಅದಕ್ಕೆಂದೇ ಬಿಜೆಪಿಗೆ ಕಾರ್ಪೊರೇಟ್‌ಗಳು ದೇಣಿಗೆ ಕೊಡುವ ವ್ಯವಹಾರವನ್ನು ಅತ್ಯಂತ ರಹಸ್ಯಗೊಳಿಸುವ 'ಎಲೆಕ್ಟೋರಾಲ್ ಬಾಂಡ್' ಎಂಬ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಇದು ಜಾರಿಗೆ ಬಂದಮೇಲೆ ವಿರೋಧ ಪಕ್ಷಗಳ ಶಾಸಕರ ಖರೀದಿಯೂ ಮತ್ತು ಸಂಸತ್ತಿನ ಮೇಲೆ ಕಾರ್ಪೊರೇಟ್‌ಗಳ ಹಿಡಿತವೂ ಹೆಚ್ಚಾಗಿ ಇಡೀ ಪ್ರಜಾತಂತ್ರ ವ್ಯವಸ್ಥೆಯೇ ಜನರಿಂದ, ಸಂವಿಧಾನದಿಂದ ದೂರ ಉಳಿಯುವಂತಾಗಿದೆ. ಪಕ್ಷಾಂತರ ನಿಷೇಧ ಕಾಯ್ದೆಯನ್ನು ಬಿಜೆಪಿ ಈ ಎಲ್ಲಾ ಕ್ರಮಗಳ ಮೂಲಕ ಬಹಿರಂಗವಾಗಿ ಲೇವಡಿ ಮಾಡುತ್ತಿದೆ. ಮತ್ತೊಂದು ಕಡೆ ತಾತ್ವಿಕವಾಗಿ ಕಾಂಗ್ರೆಸ್ ಅಥವಾ ಇತರ ಬಿಜೆಪಿ ವಿರೋಧಿ ಪಕ್ಷಗಳು ಬಿಜೆಪಿಯದ್ದು ತಮ್ಮ ತಾತ್ವಿಕತೆಗೆ ತದ್ವಿರುದ್ಧವಾದ ಪಕ್ಷವೆಂದು ಹೇಳುತ್ತವೆ. ಭಾರತ್ ಜೋಡೊ ಯಾತ್ರೆಯಲ್ಲಂತೂ ರಾಹುಲ್ ಗಾಂಧಿಯವರು ತಮ್ಮ ಹಾಗೂ ಬಿಜೆಪಿಯ ನಡುವಿನ ಸಮರ ಎರಡು ತತ್ವ-ಸಿದ್ಧಾಂತಗಳ ನಡುವಿನ ಸಮರ ಎಂದು ಬಣ್ಣಿಸುತ್ತಾರೆ.

ಅಂಥ ತದ್ವಿರುದ್ಧವಾದ ಪಕ್ಷಕ್ಕೆ ವಿರೋಧ ಪಕ್ಷಗಳ ಘಟಾನುಘಟಿ ನಾಯಕರೇ ಹೇಗೆ ವಲಸೆ ಹೋಗುತ್ತಾರೆ ಮತ್ತು ಅಲ್ಲಿ ಬಿಜೆಪಿಯ ನಾಯಕರಾದ ಮೇಲೆ ಆರೆಸ್ಸೆಸ್ ನಾಯಕರಿಗಿಂತ ತೀವ್ರವಾದ ಕೋಮುವಾದಿ-ಹಿಂದುತ್ವ ವಾದಿಗಳಾಗುತ್ತಾರೆ? ಎಂಬುದನ್ನು ಗಂಭೀರವಾಗಿ ಯೋಚಿಸಬೇಕಾದ ವಿಷಯವಾಗಿದೆ. ಬಿಜೆಪಿ ಪ್ರತಿನಿಧಿಸುವ ಕಾರ್ಪೊರೇಟ್ ಬಂಡವಾಳವಾದ ಮತ್ತು ಬ್ರಾಹ್ಮಣೀಯ ಹಿಂದುತ್ವದ ಜೊತೆಗೆ ಉಳಿದ ವಿರೋಧ ಪಕ್ಷಗಳಿಗೆ ನಿಜಕ್ಕೂ ಆಳವಾದ ತಾತ್ವಿಕ ಮತಭೇದಗಳಿವೆಯೇ? ಅದಕ್ಕಿಂತಲೂ ಗಂಭೀರವಾದ ಪ್ರಶ್ನೆಯೆಂದರೆ ಬಹಳಷ್ಟು ಸಂದರ್ಭಗಳಲ್ಲಿ ಹೀಗೆ ಪಕ್ಷಾಂತರಗೊಂಡು ಬಿಜೆಪಿ ಸೇರಿದವರನ್ನು ಜನರು ಮರುಆಯ್ಕೆ ಮಾಡಿರುವುದು ಮಾತ್ರವಲ್ಲದೆ ಕೆಲವೊಮ್ಮೆ ಇನ್ನೂ ದೊಡ್ಡ ಅಂತರದಿಂದ ಆಯ್ಕೆ ಮಾಡಿದ ಉದಾಹರಣೆಗಳಿವೆ. ಸಮಾಜದಲ್ಲಿ ಕೋಮುವಾದಿ ಧ್ರುವೀಕರಣ ಹೆಚ್ಚಾಗುತ್ತಿರುವುದರಿಂದ ಬಹುಸಂಖ್ಯಾತ ಮತದಾರರು ಚುನಾವಣೆಯ ಸಂದರ್ಭಗಳಲ್ಲಂತೂ ಕೋಮುವಾದಿ ಪಕ್ಷಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದುದರಿಂದ ಸದ್ಯದ ಕೆಟ್ಟ ರಾಜಕೀಯ ಬೆಳವಣಿಗೆಯಲ್ಲಿ ಶ್ರೀಸಾಮಾನ್ಯರ ಪಾತ್ರವೂ ಇದೆ. ಒಂದು ಪ್ರಜಾತಂತ್ರದಲ್ಲಿ ಪ್ರಜ್ಞಾವಂತ, ಸೆಕ್ಯುಲರ್ ಮತದಾರರು ರೂಪುಗೊಳ್ಳದೆ ಪ್ರಜಾಸತ್ತಾತ್ಮಕ, ಸೆಕ್ಯುಲರ್ ಸರಕಾರದ ಅಸ್ತಿತ್ವವೂ ಸಾಧ್ಯವಿಲ್ಲ. ಅಂತಿಮವಾಗಿ ನೂಲಿನ ಗುಣಮಟ್ಟವೇ ಬಟ್ಟೆಯ ಗುಣಮಟ್ಟವನ್ನು ನಿರ್ಧರಿಸುತ್ತದೆ ಎನ್ನುವುದನ್ನು ಜನರು ಕೂಡ ನೆನಪಿನಲ್ಲಿಡಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News