ಭಾರತ ಜೋಡೊ ಮತ್ತು ಕಾಂಗ್ರೆಸ್‌ನ ಬಗ್ಗೆ ನಿರೀಕ್ಷೆ
ರಾಹುಲ್ ಮನುಷ್ಯ ಸಹಜ ಪ್ರೀತಿಯಿಂದ ಜನರ ಜೊತೆ ಬೆರೆತರೆ ಹಮ್ಮು ಬಿಮ್ಮಿಲ್ಲದ ಮನುಷ್ಯ ಎಂದು ಮೆಚ್ಚಬಹುದು. ಆದರೆ ನಾಯಕನ ಲಕ್ಷಣ ಅಷ್ಟೇ ಅಲ್ಲ. ತನ್ನ ಸೈದ್ಧಾಂತಿಕ ನಿಲುವು ಬೆಟ್ಟು ಮಾಡಿ ತೋರುವ ಉದ್ದಿಶ್ಯಿತ ಹೋರಾಟಕ್ಕೆ ತನ್ನ ಬೆಂಬಲಿಗರ ಪಡೆ ಕಟ್ಟುವುದು ನಾಯಕನ ಜವಾಬ್ದಾರಿ.
ರಾಹುಲ್ ಗಾಂಧಿಯವರ ಭಾರತ್ ಜೋಡೊ ಅನಿರೀಕ್ಷಿತವಾಗಿ ಅಪಾರ ಸ್ಪಂದನೆಗೆ ಪಾತ್ರವಾಗಿದೆ. ಮುಖ್ಯವಾಗಿ ಭಾಜಪದ ವಿಕೃತ ಅಪಪ್ರಚಾರದಿಂದಾಗಿ ನಲುಗಿದ್ದ ರಾಹುಲ್ ಇಮೇಜ್ ಏಕಾಏಕಿ ಬದಲಾಗಿದೆ. ಅವರ ಸಹಜ ಮನುಷ್ಯ ಪ್ರೀತಿ, ದೇಹ ದಾರ್ಢ್ಯತೆ, ಬೆರೆಯುವ ಗುಣ- ಎಲ್ಲವೂ ಜನರನ್ನು ಬೆರೆಗಾಗಿಸಿದೆ.
ನಾಯಕ ಮತ್ತು ಪ್ರಜೆ ಪರಸ್ಪರ ಸ್ಪರ್ಶದ ಅನುಭೂತಿ ಪಡೆಯ ಬೇಕೆನ್ನುವ ಒಳ ಹಂಬಲ ಹಠಾತ್ತನೆ ನಿಜವಾದಂತಿದೆ. ಕಾಂಗ್ರೆಸ್ ಪಕ್ಷ ಇದನ್ನು ಅದ್ಭುತವಾಗಿ ಯೋಜಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಕಂಡು ಬರುತ್ತಿರುವ ಜೋಶ್ ಮತ್ತು ಪ್ರೀತಿಯ ಮಹಾಪೂರ ವಿಸ್ಮಯ ಹುಟ್ಟಿಸುತ್ತಿದೆ.
ಬಹುತೇಕ ಪ್ರಾಜ್ಞರು ಇದನ್ನು ಸ್ವಾಗತಿಸುತ್ತಾ ಇದು ಕಾಂಗ್ರೆಸ್‌ನ ಹಣೆಬರಹ ತಿದ್ದುವುದರ ಬಗ್ಗೆ ತೀರ್ಪು ಕಾದಿರಿಸಿದ್ದಾರೆ. ಇರಲಿ.
ಕೇಳಬೇಕಾದ ಕೆಲವು ಪ್ರಶೆಗಳನ್ನು ಈ ಭಾರತ್ ಜೋಡೊವನ್ನು ಸ್ವಾಗತಿಸುತ್ತಲೇ ಕೇಳಬೇಕಿದೆ. ಕೋಮುವಾದ, ಭ್ರಷ್ಟಾಚಾರ ಮತ್ತು ಕಾರ್ಪೊರೇಟೀಕರಣಗಳ ಬಗ್ಗೆ ಕಾಂಗ್ರೆಸ್‌ನ ಕಾರ್ಯಕರ್ತರ/ ಮಧ್ಯಮ ಹಂತದ ನಾಯಕರ ನಿಲುವು ಏನು?
ರಾಹುಲ್ ಆರೆಸ್ಸೆಸನ್ನು ತರಾಟೆಗೆ ತೆಗೆದುಕೊಂಡದ್ದು ಬಿಟ್ಟರೆ ಕಾಂಗ್ರೆಸ್‌ನ ಸ್ಥಳೀಯ ಅಂದರೆ ತಾಲೂಕು ಮಟ್ಟದ ನಾಯಕರು ಈ ಬಗ್ಗೆ ಹೆಚ್ಚು ರಿಸ್ಕು ತೆಗೆದುಕೊಂಡಂತಿಲ್ಲ. ದೇಶವನ್ನು ಭಾಜಪ ಹೇಗೆ ಒಡೆದು ಹಾಕುತ್ತಿದೆ ಎಂಬ ಬಗ್ಗೆ ಅವರಿಗೆ ಸ್ಪಷ್ಟತೆ ಇದ್ದಂತೆ ಕಾಣುತ್ತಿಲ್ಲ. ಅವರಿನ್ನೂ ಚುನಾವಣೆ ಗೆಲುವು ಸಾಧಿಸಲು ಬೇಕಾದ ಜಾತಿ, ಬಣ, ಹಣದ ಲೆಕ್ಕಾಚಾರದಲ್ಲಿದ್ದಾರೆ. ತಾತ್ವಿಕವಾಗಿ ರಾಹುಲ್ ನಿಲುವನ್ನು ತಳಮಟ್ಟದಲ್ಲೂ ವ್ಯಕ್ತಪಡಿಸಿದ ಉದಾಹರಣೆಗಳು ಯಾರಿಗಾದರೂ ಗೊತ್ತಿದೆಯೇ?!
ಈ ಪಾದಯಾತ್ರೆ ಜನ ಸಾಮಾನ್ಯರಲ್ಲೂ, ಆತಂಕಿತ ಮಧ್ಯಮ ವರ್ಗ ದಲ್ಲೂ ಹುಟ್ಟಿಸಿರುವ ಭರವಸೆ ಬಗ್ಗೆ ಕಾಂಗ್ರಸ್ಸಿಗರಿಗೇ ಗೊತ್ತಿದ್ದಂತಿಲ್ಲ. ಈ ಪಾದಯಾತ್ರೆ ದಾಟಿ ಹೋದ ಮೇಲೆ ಅಲ್ಲಲ್ಲಿನ ಕಾಂಗ್ರೆಸ್ ನಾಯಕರನ್ನು ನಾವೀಗ ಮಾತಾಡಿಸಬೇಕಿದೆ. ಗ್ರಾಮ ಭಾರತಕ್ಕೂ ಇಳಿದಿರುವ ಕೋಮು ವಿಕೃತಿ ಬಗ್ಗೆ ಅವರು ಮಾತನಾಡುವಂತೆ ಮಾಡಬೇಕಿದೆ. ಚುನಾವಣಾ ಗೆಲುವು ಸಾಧಿಸಿದರೆ ಭಾಜಪದ ಮನಸ್ಸು ಒಡೆಯುವ ವಿಭಜಕ ರಾಜಕಾರಣ ಅಂತ್ಯವಾಗುವುದಿಲ್ಲ. ಯಾಕೆಂದರೆ ಅದು ಚುನಾವಣಾ ರಾಜಕಾರಣಕ್ಕಿಂತ ಭಿನ್ನವಾದ ಸ್ತರದಲ್ಲಿ ಹರಡಿ ಕೂತಿರುವ ಅಭಿಯಾನ. ಕಾಂಗ್ರೆಸ್‌ಗರು ಇದಕ್ಕೆ ತಳ ಮಟ್ಟದಲ್ಲಿ ಮುಖಾಮುಖಿಯಾಗುತ್ತಾರೆಯೇ?
ಹಾಗೆಯೇ ಭ್ರಷ್ಟಾಚಾರದ ಬಗ್ಗೆ. ಮಾಮೂಲು ಮೊದಲೂ ಇತ್ತು, ಅದನ್ನು ರಾಜ್ಯವನ್ನೇ ಕೆಡಿಸುವ ಮಟ್ಟಿಗೆ ಬೆಳೆಸಿದ ಭಾಜಪದ ದುರಾಡಳಿತದ ಬಗ್ಗೆ ಕಾಂಗ್ರೆಸ್‌ನ ಸಣ್ಣ ನಾಯಕರು ಮಾತಾಡುತ್ತಿಲ್ಲ. ಅಷ್ಟೇಕೆ ನೀವು ಸುಮ್ಮನೆ ಮಾತಾಡಿಸಿ. ಆಯಕಟ್ಟಿನ ಜಾಗದಲ್ಲಿ ಅಧಿಕಾರಿಗಳಾಗಿರುವ ಅವರ ನೆಂಟರು, ಪರಿಚಯಸ್ಥರ ಬಗ್ಗೆ ಕೇಳಿ ನೋಡಿ. ನಾಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅವರ ಪರವಾಗಿ ವಿಧಾನ ಸೌಧದ ಮೂರನೇ ಮಹಡಿ ಹತ್ತುವವರು ಇವರೇ. ಇದನ್ನು ಸಿನಿಕತನದಲ್ಲಿ ಹೇಳುತ್ತಿಲ್ಲ. ಸ್ವಾತಂತ್ರ ಹೋರಾಟದೊಂದಿಗೆ ಅವಿನಾಭಾವವಾಗಿ ಬೆರೆತಿರುವ ಕಾಂಗ್ರೆಸ್‌ನ ಚರಿತ್ರೆಯೇ ಈ ಕಾಂಗ್ರೆಸ್‌ಗರಿಗೆ ನೆನಪಿದ್ದಂತಿಲ್ಲ. ಇದರ ಸ್ಮರಣೆ ಮರಳಿ ತರುವುದು ಕಾಂಗ್ರೆಸ್‌ಗಿರುವ ಸವಾಲು. ಈ ಚರಿತ್ರೆಯ ಅರಿವಿನಲ್ಲೇ ಕೋಮುವಾದ, ಕಾರ್ಪೋರೇಟೀಕರಣಗಳ ಬಗ್ಗೆ ಯಾವ ನಿಲುವು ತೆಗೆದುಕೊಳ್ಳಬೇಕೆಂಬ ಸುಳಿವುಗಳಿವೆ. ಪಾದಯಾತ್ರೆಯ ದಕ್ಷಿಣ ಭಾರತದ ಹಂತ ನೋಡಿದರೆ ಕರ್ನಾಟಕವನ್ನು ಹೊರತುಪಡಿಸಿ ಇತರ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಸೈದ್ಧಾಂತಿಕವಾಗಿ ಶತ್ರುಗಳಿಲ್ಲ. ಕೇರಳದಲ್ಲಿ ರಾಜಕಾರಣದ ಅನಿವಾರ್ಯತೆಗೆ ಸಿಪಿಐಎಂ ವಿರೋಧ ನಟಿಸಿದರೂ ಅಖಿಲ ಭಾರತ ಮಟ್ಟದಲ್ಲಿ ಅದೂ ಕಾಂಗ್ರೆಸ್‌ನ ವಿರೋಧಿ ಅಲ್ಲ. ತೆಲಂಗಾಣ, ಆಂಧ್ರಗಳೆರಡರಲ್ಲೂ ಅಲ್ಲಿನ ಪ್ರಾದೇಶಿಕ ದೀಡು ನಾಯಕರು ಮಾಜಿ ಕಾಂಗ್ರೆಸ್‌ಗರೇ!! ಕೋಮು ವಿಭಜಕ ರಾಜಕಾರಣದಲ್ಲಿ ಅವರೂ ಭಾಜಪದ ವಿರೋಧಿಗಳೇ.
ಸಮಸ್ಯೆ ಇರುವುದು ಕರ್ನಾಟಕದಲ್ಲಿ. ಯುಪಿ, ಮಧ್ಯಪ್ರದೇಶಗಳ ರೀತಿ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಭಾಜಪ ರಾಜಕೀಯ ಎದುರಾಳಿ ಮಾತ್ರವಲ್ಲ ಸೈದ್ಧಾಂತಿಕ ಎದುರಾಳಿ ಎಂಬುದನ್ನು ಕಾಂಗ್ರೆಸ್‌ಗರ ನೆಣದೊಳಗೆ ಇಳಿಸುವುದು ಹೇಗೆ? ರಾಹುಲ್ ಯಾತ್ರೆ ಇಂಥಾ ಒಂದು ಸೈದ್ಧಾಂತಿಕ ಶಕ್ತಿಯನ್ನು ಕಾಂಗ್ರೆಸ್‌ನ ಜಡ ದೇಹದೊಳಗೆ ಸ್ಪುರಿಸುತ್ತದೆಯೇ ಎಂಬ ಪ್ರಶ್ನೆ ಕಾಂಗ್ರೆಸ್‌ನ ದೊಡ್ಡ ನಾಯಕರನ್ನೂ ಕಾಡಬೇಕಿದೆ. ಕರ್ನಾಟಕದಲ್ಲಿ ಇರುವ ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳು ಕರ್ನಾಟಕವನ್ನು ಕಟ್ಟಿವೆ. ಅರಸು ಕಟ್ಟಿದ ಕೈಗಾರಿಕಾ ನೀತಿ ಕರ್ನಾಟಕವನ್ನು ಕಟ್ಟಿದೆ. ಈ ಪರಂಪರೆ ಬಗ್ಗೆ ಕಾಂಗ್ರೆಸ್ ಮಾತಾಡಬೇಕಿದೆ. ಕುವೆಂಪು, ಬಸವಣ್ಣನವರ ವೈಚಾರಿಕತೆ ಬಗ್ಗೆ ಮಾತಾಡಬೇಕಿದೆ. ಭಾಜಪದ ಕೋಮು ಅಭಿಯಾನ ಕರ್ನಾಟಕದ ಪರಂಪರೆ ಎದುರು ನಿಲ್ಲುವ ಶಕ್ತಿ ಹೊಂದಿಲ್ಲ. ಆದರೆ ಈ ಪರಂಪರೆ ರಾಜಕೀಯ ಪಕ್ಷದ ಅರಿವಾಗಬೇಕು.
ರಾಹುಲ್ ಮನುಷ್ಯ ಸಹಜ ಪ್ರೀತಿಯಿಂದ ಜನರ ಜೊತೆ ಬೆರೆತರೆ ಹಮ್ಮು ಬಿಮ್ಮಿಲ್ಲದ ಮನುಷ್ಯ ಎಂದು ಮೆಚ್ಚಬಹುದು. ಆದರೆ ನಾಯಕನ ಲಕ್ಷಣ ಅಷ್ಟೇ ಅಲ್ಲ. ತನ್ನ ಸೈದ್ಧಾಂತಿಕ ನಿಲುವು ಬೆಟ್ಟು ಮಾಡಿ ತೋರುವ ಉದ್ದಿಶ್ಯಿತ ಹೋರಾಟಕ್ಕೆ ತನ್ನ ಬೆಂಬಲಿಗರ ಪಡೆ ಕಟ್ಟುವುದು ನಾಯಕನ ಜವಾಬ್ದಾರಿ.
ಸ್ವತಃ ರಾಹುಲ್ ಕೋಮುವಾದದ ವಿಷಯದಲ್ಲಿ ನೇರ ದಾಳಿ ಮಾಡಬಹುದು. ಆದರೆ ಕಾರ್ಪೊರೇಟೀಕರಣ, ಸಾಂವಿಧಾನಿಕ ಸಂಸ್ಥೆ ಗಳನ್ನು ಕೆಡಿಸಿದ ಇತಿಹಾಸಗಳ ವಿಚಾರದಲ್ಲಿ ತನ್ನ ಪಕ್ಷದ ಬೆರಳಚ್ಚುಗಳ ಬಗ್ಗೆ ಸಾರ್ವಜನಿಕವಾಗಿ ಆತ್ಮಾವಲೋಕನ ಮಾಡಬೇಕಿದೆ. ಕಾಂಗ್ರೆಸ್ ತನ್ನ ವಿಶ್ವಾಸಾರ್ಹತೆ ಪಡೆಯುವುದು ಸರಕಾರದ ನೀತಿಗಳಲ್ಲಿರುವ ವಿಕೃತಿ ಬಗ್ಗೆ ದಿಟ್ಟವಾಗಿ ಮಾತಾಡುವುದರಿಂದ. ಇದನ್ನು ರಾಹುಲ್ ಅಲ್ಲದೇ ಇನ್ಯಾರೂ ಮಾತಾಡಲಾರರು.
ತನ್ನ ಪಕ್ಷವೇ ನೆಟ್ಟ ನೀತಿ ವಿಕೃತಿಗಳನ್ನು ಬಳಸಿಯೇ ಭಾಜಪ ಇಂದು ಜನರ ಬದುಕು ಬರ್ಬಾದಾಗಿಸಿದೆ. ಆದ್ದರಿಂದ ಅವುಗಳನ್ನು ತಿರಸ್ಕರಿಸುವುದೆಂದರೆ ತನ್ನ ಪಕ್ಷದ ಗತಕಾಲದ ತಪ್ಪುಗಳನ್ನು ಒಪ್ಪಿಕೊಳ್ಳುವುದೇ ಆಗಿದೆ. ದೇಶದ ಜನರ ಬದುಕು ನೇರ್ಪು ಮಾಡಲು ಇಂಥಾ ಒಂದು ಆಳ ನಿರೀಕ್ಷಣೆ ಮಾಡಿದರೆ ಮಾತ್ರ ಮುಂದೇನು ಮಾಡಬಹುದು ಎಂಬ ಚರ್ಚೆ ಸುಲಭ.