ಹರ್ಮನ್‍ಪ್ರೀತ್ ಭರ್ಜರಿ ಶತಕ: ಭಾರತ ವನಿತೆಯರಿಗೆ ಕ್ರಿಕೆಟ್ ಸರಣಿಯಲ್ಲಿ ಮುನ್ನಡೆ
ಕ್ಯಾಂಟರ್ಬರಿ: ಅತಿಥೇಯ ಇಂಗ್ಲೆಂಡ್ ವನಿತೆಯರ ತಂಡದ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ 88 ರನ್‍ಗಳ ಭರ್ಜರಿ ಜಯ ದಾಖಲಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡ ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
ಕ್ಯಾಂಟರ್ಬರಿ ಸಂತ ಲಾರೆನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತದ ಹರ್ಮನ್ ಪ್ರೀತ್ ಕೌರ್ ಕೇವಲ 111 ಎಸೆತಗಳಲ್ಲಿ 143 ರನ್ ಸಿಡಿಸಿ, ಭಾರತದ ಗೆಲುವಿನ ರೂವಾರಿ ಎನಿಸಿದರು. 334 ರನ್‍ಗಳ ಗೆಲುವಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ 245 ರನ್‍ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.
ಟಾಸ್ ಸೋತು ಬ್ಯಾಟಿಂಗ್‍ಗೆ ಇಳಿಸಲ್ಪಟ್ಟ ಭಾರತ, ಶಫಾಲಿ ವರ್ಮಾ (8) ಮತ್ತು ಯಾಸ್ಟಿಕಾ ಭಾಟಿಯಾ (26) ಅವರ ವಿಕೆಟ್‍ಗಳನ್ನು ಬೇಗನೇ ಕಳೆದುಕೊಂಡಿತು. ಸ್ಮೃತಿ ಮಂದಾನ (40) ಅವರ ಜತೆಗೆ 33 ರನ್‍ಗಳ ಜತೆಯಾಟದಲ್ಲಿ ಪಾಲ್ಗೊಂಡ ಹರ್ಮನ್‍ಪ್ರೀತ್ ಭಾರತದ ಇನಿಂಗ್ಸ್ ಕಟ್ಟುವ ಹೊಣೆ ಹೊತ್ತರು. ಈ ಹಂತದಲ್ಲಿ ನಾಯಕಿಗೆ ಸಾಥ್ ನೀಡಿದ ಹರ್ಲೀನ್ ದಿಯೋಲ್ 113 ರನ್‍ಗಳ ಭರ್ಜರಿ ಜತೆಯಾಟಕ್ಕೆ ಕಾರಣರಾದರು. ಇಬ್ಬರೂ 50ರ ಗಡಿ ದಾಟುತ್ತಿದ್ದಂತೆ ಡಿಯೋಲ್ (58) ನಿರ್ಗಮಿಸಿದರು.
ಚೊಚ್ಚಲ ಪಂದ್ಯ ಆಡುತ್ತಿರುವ ಲಾರೆನ್ ಬೆಲ್ ಹಾಗೂ ಫ್ರಯಾ ಕೆಂಪ್ ಅವರನ್ನು ದಂಡಿಸಿದ ಹರ್ಮನ್‍ಪ್ರೀತ್ ಭರ್ಜರಿ ಹೊಡೆತಗಳ ಮೂಲಕ 100ರ ಗಡಿ ದಾಟಿದರು.
ಪಂದ್ಯದ ಯಾವುದೇ ಹಂತದಲ್ಲಿ ಇಂಗ್ಲೆಂಡ್ ತಂಡ ಭಾರತಕ್ಕೆ ಸರಿಸಾಟಿ ಎನಿಸಲಿಲ್ಲ. ಇಂಗ್ಲೆಂಡ್ ಪರ ಡೆನಿಪ್ಪೆ ವ್ಯಾಟ್ (65) ಮತ್ತು ಅಲಿಸ್ ಕ್ಯಾಪ್ಸೆ (39) ಮಾತ್ರ ಪ್ರತಿರೋಧ ತೋರಿದರು. ಭಾರತದ ಪರ ರೇಣುಕಾ ಸಿಂಗ್ (57ಕ್ಕೆ 4), ದಯಾಳನ್ ಹೇಮಲತಾ (6ಕ್ಕೆ 2) ಹಾಗೂ ದೀಪ್ತಿ ಶರ್ಮಾ (40ಕ್ಕೆ 1) ಯಶಸ್ವಿ ಬೌಲರ್‍ಗಳೆನಿಸಿದರು.
ಈ ತಿಂಗಳ 24ರಂದು ನಡೆಯುವ ಮೂರನೇ ಏಕದಿನ ಪಂದ್ಯದ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಘೋಷಿಸಿರುವ ಭಾರತದ ಖ್ಯಾತ ವೇಗದ ಬೌಲರ್ ಜೂಕನ್ ಗೋಸ್ವಾಮಿಯವರಿಗೆ ವಿದಾಯ ಸರಣಿ ಎಂದು ಇದನ್ನು ವಿಶ್ಲೇಷಿಸಲಾಗುತ್ತಿದೆ.