ಹಗರಣಗಳು ಮತ್ತು ಜಾತಿಯ ದುರ್ಬಳಕೆ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ರಾಜ್ಯ ವಿಧಾನಮಂಡಲದ ಮಳೆಗಾಲದ ಅಧಿವೇಶನ ಪ್ರತಿಭಟನೆ, ಧರಣಿ, ಕೋಲಾಹಲಗಳಲ್ಲಿ ಕೊನೆಗೊಂಡಿದೆ. ಹೀಗೆ ಕೊನೆಗೊಳ್ಳುವುದು ಈಗಿನ ಸರಕಾರದ ಒಳ ಬಯಕೆಯಾಗಿತ್ತೇನೋ ಎಂಬ ಸಂದೇಹ ಬರುತ್ತದೆ. ಆರು ತಿಂಗಳ ನಂತರ ನಡೆದ ಶಾಸನ ಸಭೆಯ ಅಧಿವೇಶನದಲ್ಲಿ ರಾಜ್ಯವನ್ನು ಬಾಧಿಸುತ್ತಿರುವ ಅತಿವೃಷ್ಟಿ, ಪ್ರವಾಹ ಹಾಗೂ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಚರ್ಚೆಯಾಗಬೇಕಾಗಿತ್ತು. ಗುತ್ತಿಗೆದಾರರ ಸಂಘ ಶೇ. 40 ಕಮಿಷನ್ ಹಣದ ಬಗ್ಗೆ ಪ್ರಧಾನಮಂತ್ರಿಗೆ ಬರೆದ ಪತ್ರದ ಬಗ್ಗೆ ಸದನದಲ್ಲಿ ಚರ್ಚೆ ನಡೆದು ಸರಕಾರ ಉತ್ತರ ನೀಡಬೇಕಾಗಿತ್ತು. ಈ ಕುರಿತು ಕಾಂಗ್ರೆಸ್ ಪಕ್ಷದ ನಿಲುವಳಿ ಸೂಚನೆಯನ್ನು ವಿಧಾನಸಭಾಧ್ಯಕ್ಷ ಕಾಗೇರಿ ತಿರಸ್ಕರಿಸಿದ್ದರು. ಇದರಿಂದ ಕೆರಳಿದ ಪ್ರತಿಪಕ್ಷ ಸದಸ್ಯರು ಸದನದಲ್ಲಿ ಪ್ರತಿಭಟನೆ ನಡೆಸಿದರು. ಸರಕಾರದ ಮೇಲೆ ಪ್ರತಿಪಕ್ಷ ಸದಸ್ಯರು ಮಾಡಿದ ಆರೋಪ ಸುಳ್ಳಾಗಿದ್ದರೆ ಆರೋಪ ಸಾಬೀತು ಪಡಿಸಲು ಆಡಳಿತ ಪಕ್ಷ ಸವಾಲು ಹಾಕಬೇಕಾಗಿತ್ತು. ಅದರ ಬದಲಾಗಿ ಹಿಂದಿನ ಕಾಂಗ್ರೆಸ್ ಸರಕಾರದಲ್ಲೂ ಹಗರಣಗಳು ನಡೆದಿವೆ ಎಂದು ಬಿಜೆಪಿ ಶಾಸಕರು ಸದನದಲ್ಲಿ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟಿಸಿದ್ದು ಸರಿಯೇ?. ನೀವೂ ತಿಂದಿದ್ದೀರಿ ನಾವೂ ತಿನ್ನುತ್ತೇವೆ ಎಂಬಂತೆ ಸದನದಲ್ಲಿ ಕೋಲಾಹಲದ ವಾತಾವರಣ ನಿರ್ಮಿಸುವುದು ಅಧಿಕಾರದಲ್ಲಿ ಇರುವವರಿಗೆ ಶೋಭೆ ತರುತ್ತದೆಯೇ?.
ಎರಡನೆಯದಾಗಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಭ್ರಷ್ಟಾಚಾರದ ಆರೋಪ ಮಾಡಿದರೆ ಅದನ್ನು ಎದುರಿಸಿದ ಸರಕಾರದ ಶೈಲಿ ಅದರ ಕೈಗಳು ಕಳಂಕರಹಿತವಾಗಿಲ್ಲ ಎಂಬುದಕ್ಕೆ ಸಾಕ್ಷಿಯಾಗಿವೆ. ಶೇ. 40 ಕಮಿಷನ್ ಹಗರಣ ಮಾತ್ರವಲ್ಲ ರಾಜ್ಯದಲ್ಲಿ ಎಡಿಜಿಪಿ ಮಟ್ಟದ ಅಧಿಕಾರಿಯ ಬಂಧನಕ್ಕೆ ಕಾರಣವಾದ ಪಿಎಸ್ಸೈ ನೇಮಕಾತಿ ಪ್ರಕರಣದಲ್ಲಿ ಪೇಚಿಗೆ ಸಿಲುಕಿದ ಬಿಜೆಪಿ ಸರಕಾರ ‘ಆರೋಪ ಸಾಬೀತು ಮಾಡಲು’ ಪ್ರತಿಪಕ್ಷಗಳಿಗೆ ಸವಾಲು ಹಾಕುವ ಸ್ಥಿತಿಯಲ್ಲಿ ಇಲ್ಲ. ಹಾಗಾಗಿಯೇ ಈಗ ಈ ಹಗರಣಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಜಾತಿ ಎಂಬ ಅಸ್ತ್ರವನ್ನು ಬಳಸಲು ಮುಂದಾಗಿದೆ ಎಂದು ಪ್ರತಿಪಕ್ಷಗಳ ನಾಯಕರು ಹೇಳುತ್ತಿದ್ದಾರೆ. ಬಸವರಾಜ ಬೊಮ್ಮಾಯಿಯವರು ವೀರಶೈವ ಲಿಂಗಾಯತರಾದುದರಿಂದ ಕಾಂಗ್ರೆಸ್ ಅವರ ವಿರುದ್ಧ ಪಿತೂರಿ ನಡೆಸಿದೆ ಎಂದು ಆರೋಪಿಸುವ ಕೀಳು ಮಟ್ಟದ ರಾಜಕೀಯಕ್ಕೆ ಬಿಜೆಪಿ ಮಂತ್ರಿಗಳು ಮತ್ತು ನಾಯಕರು ಕೈ ಹಾಕಿದ್ದಾರೆ. ಕಾಂಗ್ರೆಸ್ ನಾಯಕರು ಪ್ರಬಲ ಜಾತಿಯವರು ಮುಖ್ಯಮಂತ್ರಿಯಾಗುವುದನ್ನು ಸಹಿಸುವುದಿಲ್ಲ. ಹಿಂದೆ ಕೆಂಗಲ್ ಹನುಮಂತಯ್ಯ, ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾಗಿದ್ದಾಗಲೂ ಅವರ ವಿರುದ್ಧ ಕಾಂಗ್ರೆಸ್‌ನವರು ಸಂಚು ನಡೆಸಿದರು ಈಗ ಬಸವರಾಜ ಬೊಮ್ಮಾಯಿಯವರ ವಿರುದ್ಧ ಮಸಲತ್ತು ನಡೆಸಿದ್ದಾರೆ ಎಂದು ಕಾಂಗ್ರೆಸ್‌ನಿಂದ ಶಾಸಕನಾಗಿ ಬಿಜೆಪಿಗೆ ಜಿಗಿದು ಮಂತ್ರಿಯಾದವರೊಬ್ಬರು ಆರೋಪಿಸಿದ್ದಾರೆ.
ವೀರಶೈವ ಲಿಂಗಾಯತ ಧರ್ಮದ ಗುರಾಣಿ ಬಳಸಿ ರಕ್ಷಣೆ ಪಡೆಯಲು ಹೊರಟವರು ಅದೇ ಸಮುದಾಯದ ಯಡಿಯೂರಪ್ಪನವರು ಅತ್ಯಂತ ಅವಮಾನಕಾರಿಯಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪರಿಸ್ಥಿತಿ ಬಂದಾಗ ಯಾಕೆ ತೆಪ್ಪಗಿದ್ದರು? ಶೇ. 40 ಕಮಿಷನ್ ಕಿರುಕುಳದಿಂದ ಹತಾಶನಾಗಿ ಸಂತೋಷ್ ಪಾಟೀಲ್ ಎಂಬ ಲಿಂಗಾಯತನೊಬ್ಬ ಸಾವಿನ ಮೊರೆ ಹೋದಾಗ ಈಗ ಜಾತಿಯ ಹೆಸರಿನಲ್ಲಿ ಹಗರಣಗಳನ್ನು ಮುಚ್ಚಿ ಕೊಳ್ಳಲು ಹೊರಟವರು ಯಾಕೆ ತೆಪ್ಪಗಿದ್ದರು? ಎಂಬ ಪ್ರತಿಪಕ್ಷಗಳ ಪ್ರಶ್ನೆಗೆ ಬಿಜೆಪಿ ಮಂತ್ರಿಗಳು ಮತ್ತು ನಾಯಕರ ಬಳಿ ಉತ್ತರವಿದೆಯೇ?.
ಲಿಂಗಾಯತರ ಮೇಲೆ ಬಿಜೆಪಿಯವರಿಗೆ ಇಷ್ಟೊಂದು ಪ್ರೇಮವಿದ್ದರೆ ಈ ನಾಡು ಕಂಡ ಮಹಾನ್ ಸಂಶೋಧಕರಾದ ಡಾ. ಎಂ.ಎಂ. ಕಲಬುರ್ಗಿ ಮತ್ತು ಹೆಸರಾಂತ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯಾದಾಗ ಬಾಯಿ ಮುಚ್ಚಿಕೊಂಡಿದ್ದು ಯಾಕೆ ಎನ್ನುವ ರಾಜ್ಯದ ಜನತೆಯ ಪ್ರಶ್ನೆಗೆ ಉತ್ತರವಿದೆಯೇ? ಕಲಬುರ್ಗಿ ಮತ್ತು ಗೌರಿ ಲಂಕೇಶ್ ಲಿಂಗಾಯತ ಸಮುದಾಯದಿಂದ ಬಂದವರು. ಕಲಬುರ್ಗಿ ಅವರಂತೂ ಲಿಂಗಾಯತ ಪ್ರತ್ಯೇಕ ಧರ್ಮದ ಅವಶ್ಯಕತೆಯ ಬಗ್ಗೆ ಪೂರಕವಾದ ಸಂಶೋಧನಾ ಗ್ರಂಥಗಳನ್ನು ರಚಿಸಿದ್ದರು. ಇಂಥವರನ್ನು ಹಾಡ ಹಗಲೇ ಕೊಂದು ಹಾಕಿದವರಿಗೆ ಪ್ರೇರಣೆಯಾಗಿದ್ದು ಮತ್ತು ಮಹಾತ್ಮಾ ಗಾಂಧೀಜಿಯವರನ್ನು ಹತ್ಯೆ ಮಾಡಲು ನಾಥೂರಾಮ್ ಗೋಡ್ಸೆಗೆ ಪ್ರೇರಣೆಯಾಗಿದ್ದು ಒಂದೇ ಸಿದ್ಧಾಂತ. ಆ ಸಿದ್ಧಾಂತದ ಬಗ್ಗೆ ಮುಖ್ಯಮಂತ್ರಿ ಮತ್ತು ಇತರ ಬಿಜೆಪಿ ನಾಯಕರ ಅಭಿಪ್ರಾಯವೇನು?. ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆಯ ಬಗ್ಗೆ ಇವರ ನಿಲುವೇನು? ಇಂಥ ಹಲವಾರು ಮುಖ್ಯ ವಿಷಯಗಳಲ್ಲಿ ಬಾಯಿ ಮುಚ್ಚಿಕೊಂಡು ಈಗ ತಮ್ಮನ್ನು ಸಮರ್ಥಿಸಿಕೊಳ್ಳಲು ವೀರಶೈವ ಲಿಂಗಾಯತ ಧರ್ಮದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದು ಸಮರ್ಥನೀಯವಲ್ಲ.
ಪ್ರಜಾಪ್ರಭುತ್ವದಲ್ಲಿ ಅಧಿಕಾರದಲ್ಲಿ ಇರುವವರ ಮೇಲೆ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದ ಆರೋಪಗಳು ಬರುವುದು ಸಹಜ. ಸರಕಾರದ ಚುಕ್ಕಾಣಿ ಹಿಡಿದವರು ತಾಳ್ಮೆ ಕಳೆದುಕೊಳ್ಳದೆ ಸಹನೆಯಿಂದ ಉತ್ತರಿಸಬೇಕು. ಆರೋಪ ನಿಜವೇ ಆಗಿದ್ದರೆ ರಾಜೀನಾಮೆ ನೀಡಿ ಮನೆಗೆ ಹೋಗಬೇಕು. ಹಿಂದೆ ಹವಾಲಾ ಹಗರಣದಲ್ಲಿ ಕೇಂದ್ರ ಸಚಿವರಾಗಿದ್ದ ಎಲ್.ಕೆ.ಅಡ್ವಾಣಿಯವರ ಮೇಲೆ ಆರೋಪಗಳು ಬರುತ್ತಿದ್ದಂತೆ ಅವರು ರಾಜೀನಾಮೆ ನೀಡಿದರು. ರಾಜ್ಯದ ಬಿಜೆಪಿ ಮಂತ್ರಿಗಳಿಗೆ ಇದು ಮಾದರಿಯಾಗಬೇಕಾಗಿತ್ತು. ಅದರ ಬದಲಾಗಿ ಹಿಂದಿನ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರದ ವಿರುದ್ಧ ಹಗರಣಗಳ ವಿಚಾರಣೆ ಮಾಡಿಸುವುದಾಗಿ ಬೆದರಿಕೆ ಹಾಕಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯನವರು ತನಿಖೆ ನಡೆಸಿ ಜೈಲಿಗೆ ಕಳಿಸಿ ಎಂದು ಪ್ರತಿ ಸವಾಲು ಹಾಕಿದ್ದಾರೆ. ಹೀಗಿರುವಾಗ ಮುಖ್ಯಮಂತ್ರಿಯವರು ಮತ್ತು ಬಿಜೆಪಿ ನಾಯಕರು ತನಿಖೆ ಎದುರಿಸುತ್ತೇವೆ, ತಪ್ಪುಮಾಡಿದ್ದರೆ ಜೈಲಿಗೆ ಹೋಗುವುದಾಗಿ ಪ್ರತಿ ಸವಾಲು ಹಾಕಬೇಕಾಗಿದೆ.
ರಾಜ್ಯದ ಬಿಜೆಪಿ ಸರಕಾರದ ಬಹುತೇಕ ಮಂತ್ರಿಗಳು ನಾನಾ ಹಗರಣಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂಬ ಆರೋಪವಿದೆ. ಕೆಲವರು ಲಂಚ ತೆಗೆದುಕೊಂಡಿರುವುದನ್ನು ಒಪ್ಪಿಕೊಂಡಿದ್ದಾರೆ. ಬಿಜೆಪಿಯೇತರ ಸರಕಾರಗಳನ್ನು ಉರುಳಿಸಲು ಬಳಕೆಯಾಗುವ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳ ಹೆದರಿಕೆಯೂ ಇವರಿಗಿಲ್ಲ. ಸದನವನ್ನು ಎದುರಿಸುವ ಸಂಸದೀಯ ಸೌಜನ್ಯ ಮತ್ತು ನೈಪುಣ್ಯತೆಯೂ ಇಲ್ಲದೆ ಕೂಗಾಡಿ, ಅರಚಾಡಿ ಪ್ರತಿಪಕ್ಷ ಸದಸ್ಯರ ಬಾಯಿ ಮುಚ್ಚಿಸುವ ಕೀಳು ಮಟ್ಟದ ರಾಜಕೀಯ ಬಹಳ ದಿನ ನಡೆಯುತ್ತದೆಯೇ?.
ಭ್ರಷ್ಟಾಚಾರದ ಆರೋಪ ಬಂದಾಗ ಅದನ್ನು ಎದುರಿಸುವ ನೈತಿಕ ಮಾರ್ಗವೆಂದರೆ ನ್ಯಾಯಾಂಗ ವಿಚಾರಣೆ ಎದುರಿಸಲು ತಯಾರಾಗುವುದು. ಅದನ್ನು ಬಿಟ್ಟು ಇದು ಲಿಂಗಾಯತರನ್ನು,ಬ್ರಾಹ್ಮಣರನ್ನು, ಒಕ್ಕಲಿಗರನ್ನು ಹಣಿಯುವ ತಂತ್ರ ಎಂದು ಪ್ರತ್ಯಾರೋಪ ಮಾಡುವುದು ಸರಿಯಲ್ಲ. ಹಿಂದೆ ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಬಂದಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಂದಿನ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವನ್ನು 10 ಪರ್ಸೆಂಟ್ ಕಮಿಷನ್ ಸರಕಾರ ಎಂದು ಆರೋಪಿಸಿದ್ದರು. ಆಗ ಸಿದ್ದರಾಮಯ್ಯ ಜಾತಿಯ ಹೆಸರಿನಲ್ಲಿ ರಕ್ಷಣೆ ಪಡೆದಿದ್ದರೇ?. ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರಕಾರದ ಹಗರಣಗಳು ನಿಜವಾಗಿದ್ದರೆ ಆ ಬಗ್ಗೆ ತನಿಖೆ ನಡೆಸಬಹುದಿತ್ತಲ್ಲ. ವಿಳಂಬ ಮಾಡಿದ್ದೇಕೆ?
ಒಟ್ಟಾರೆ ಇತ್ತೀಚಿನ ವಿಧಾನ ಮಂಡಲ ಅಧಿವೇಶನದಲ್ಲಿ ರಾಜ್ಯದ ಜನಸಾಮಾನ್ಯರ ಜ್ವಲಂತ ಸಮಸ್ಯೆಗಳು ಚರ್ಚೆಗೆ ಬರದೆ ಗದ್ದಲ, ಕೂಗಾಟಗಳ ವ್ಯರ್ಥ ಕಾಲಹರಣವಾಯಿತೆಂದರೆ ಅತಿಶಯೋಕ್ತಿಯಲ್ಲ. ಇದರ ಹೊಣೆಯನ್ನು ಆಡಳಿತ ಪಕ್ಷವೇ ಹೊರಬೇಕಾಗುತ್ತದೆ.ಪ್ರತಿಪಕ್ಷಗಳಿರುವುದೇ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು.ಇಂಥ ಸಂದರ್ಭದಲ್ಲಿ ಅಧಿಕಾರದಲ್ಲಿರುವವರು ಜವಾಬ್ದಾರಿಯಿಂದ ನಡೆದುಕೊಳ್ಳದೆ ತಮ್ಮ ಶಾಸಕರನ್ನು ಪ್ರತಿ ಕೂಗಾಟಕ್ಕೆ, ಕೋಲಾಹಲಕ್ಕೆ ಪ್ರಚೋದಿಸುವುದು ಸಂಸದೀಯ ಜನತಂತ್ರದ ಸತ್ಸಂಪ್ರದಾಯಕ್ಕೆ ಅಪಚಾರ ಮಾಡಿದಂತೆ ಎಂದು ಹೇಳಿದರೆ ತಪ್ಪಿಲ್ಲ.