ವಿನೋದಕ್ಕಿಂತಲೂ ಇಲ್ಲಿ ವಿಚಾರ ಮುಖ್ಯವಾಗುತ್ತದೆ

Update: 2022-09-27 05:05 GMT

ಇಲ್ಲಿನ ಲೇಖನಗಳು ಪ್ರಬಂಧದ ಸ್ವರೂಪದಲ್ಲಿದ್ದರೂ, ಅವುಗಳಲ್ಲಿ ಹಲವು ಲಲಿತ ಪ್ರಬಂಧಗಳ ಲಕ್ಷಣಗಳನ್ನೂ ಹೊಂದಿವೆ. ಆತ್ಮೀಯ ಶೈಲಿ, ಭಾರವಲ್ಲದ ವೈಚಾರಿಕತೆ ಹಾಗೂ ವಿನೋದದ ಧಾಟಿ ಲಲಿತ ಪ್ರಬಂಧದ ಮುಖ್ಯ ಗುಣಗಳು. ಇಲ್ಲಿನ ಪ್ರಬಂಧಗಳಲ್ಲಿ ವಿನೋದದ ಧಾಟಿಗೆ ಪ್ರಾಮುಖ್ಯವಿಲ್ಲ. ಅದರ ಬದಲು ಅವುಗಳು ನೆನಪುಗಳನ್ನು ಹೆಚ್ಚು ನಂಬಿವೆ. ಹಾಗಾಗಿ ಇಲ್ಲಿನ ಬರಹಗಳು ಪ್ರಬಂಧಗಳನ್ನು ನೆನಪಿಸುತ್ತವೆ. ಉದಾಹರಣೆಗೆ ‘ಕರುಬುವವರಿರಬೇಕಿರಬೇಕು...’ ಪ್ರಬಂಧ ಸಾಕಷ್ಟು ವಿನೋದವನ್ನು ಒಳಗೊಳ್ಳಲು ಅನುಕೂಲವಿರುವ ಬರಹ. ಆದರೆ ಉಮಾದೇವಿಯವರು ಅಲ್ಲಿ ವಿಶ್ಲೇಷಣೆ ಮತ್ತು ವಿವರಣೆಗಳ ಹದನಾದ ವೈಚಾರಿಕ ಬಂಧವನ್ನು ಆತ್ಮೀಯವಾದ ಶೈಲಿಯಲ್ಲಿಯೇ ಹೇಳಿದ್ದಾರೆ. ಅವರಿಗೆ ವಿನೋದಕ್ಕಿಂತಲೂ ವಿಚಾರ ಮುಖ್ಯ ಎಂಬುದು ಸಂಕಲನದ ಮೊದಲಿಗೇ ಭಾಸವಾಗುತ್ತದೆ. ಹಾಗಾಗಿ ಅವರಿಗೆ ಇನ್ನೊಬ್ಬರ ಭಾಗ್ಯಕ್ಕೆ ಕರುಬದೆ ತನ್ನ ಭಾಗ್ಯವನ್ನು ಬೇರೊಂದೆಡೆ ಕಾಣುವ ಸುರೇಶ ಸದಾ ನೆನಪಿನಲ್ಲುಳಿಯುತ್ತಾನೆ. ನೆನಪು ಅವರಿಗೆ ಪೂರಕ ಅನುಭವ. ಬದುಕಿನ ಹಲವು ವಿವರಗಳ ಬಂಧ ಅವರ ಪ್ರಬಂಧ. ಹಲವು ಸಲ ಅಲ್ಲಿನ ಲಾಲಿತ್ಯ ಗುಣದಿಂದಾಗಿ ಲಲಿತವಾದ ಪ್ರಬಂಧಗಳಂತೆ ಭಾಸವಾಗುತ್ತದೆ. ಭಾಷೆ, ವಿಚಾರ, ವಿವರಗಳು ಎಲ್ಲೂ ಓದುಗನಿಗೆ ತಲೆ ಮೇಲಿನ ಭಾರ ಅನಿಸುವುದಿಲ್ಲ. ಕುವೆಂಪು ಹೇಳಿರುವ ಹಾಗೆ ನಮ್ಮ ಮುಗ್ಧತೆ ಸದಾ ‘‘ಮಕ್ಕಳ ಸಂಗದೊಳೆಚ್ಚರಗೊಳ್ಳಲಿ ಆನಂದದ ಆ ದಿವ್ಯ ಶಿಶು.’’ ಪ್ರತೀ ಮನುಷ್ಯನೊಳಗೂ ಅಂತಹ ಒಂದು ಮುಗ್ಧ ಭಾವ ಇರುತ್ತದೆ. ಹಲವು ಸಲ ಅರಿವಿಗೆ ಬಾರದೆ ಅಡಗಿರುತ್ತದೆ. ಆನಂದ ಅದರ ಭಾವ ಮಾರ್ಗ. ಲೋಕಗ್ರಹಿಕೆಯ ಅಂತಹ ಒಂದು ಮುಗ್ಧಭಾವ ಇಲ್ಲಿನ ಹಲವು ಬರಹಗಳ ಪ್ರೇರಣೆ. ಅಂತಹ ಪ್ರಬಂಧಗಳನ್ನು ಕನ್ನಡಿಗರು ಸ್ವಾಗತಿಸಿ ಓದಲಿ ಎಂಬ ಹಾರೈಕೆ-ನನ್ನದು.

ಕೃತಿ: ಮುಳ್ಳುಬೇಲಿಯ ಹೂಬಳ್ಳಿ

ಪ್ರಬಂಧ ಸಂಕಲನ

ಲೇಖಕರು: ಕೆ. ಆರ್. ಉಮಾದೇವಿ ಉರಾಳ

ಬೆಲೆ: 120 ರೂ.

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೇಟ್ ಲಿ., ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001

ದೂರವಾಣಿ:080-22161900/ 22161901/ 22161902

Writer - ಎಸ್. ಆರ್. ವಿಜಯಶಂಕರ

contributor

Editor - ಎಸ್. ಆರ್. ವಿಜಯಶಂಕರ

contributor

Similar News