ಹೃದಯದ ಕಾಳಜಿಯಿರಲಿ
ಹೃದಯ ಸಂಬಂಧಿ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸೆಪ್ಟ್ಟಂಬರ್ 29ರಂದು ವಿಶ್ವ ಹೃದಯ ದಿನ ಎಂದು ಆಚರಿಸಲಾಗುತ್ತದೆ. 2022 ರ ಧ್ಯೇಯವಾಕ್ಯ( ‘‘Cardiovascular Health for Everyone’’ )ಅಂದರೆ ‘‘ಎಲ್ಲರಿಗೂ ಹೃದಯದ ಆರೋಗ್ಯ’’ ಎಂಬುದಾಗಿದೆ. ಪ್ರತೀ ವರ್ಷ ಜಗತ್ತಿನಾದ್ಯಂತ ಕನಿಷ್ಠವೆಂದರೂ 18.6 ಮಿಲಿಯನ್ ಜನರು ಹೃದಯಾಘಾತ ಮತ್ತು ಹೃದಯ ಸಂಬಂಧಿ ರೋಗಗಳಿಂದ ಸಾಯುತ್ತಾರೆ. ಕ್ಯಾನ್ಸರ್, ಏಡ್ಸ್, ಮಲೇರಿಯಾ ಈ ಮೂರು ರೋಗಗಳನ್ನು ಒಟ್ಟು ಸೇರಿಸಿದರೆ ಆಗುವ ವರ್ಷಾವಧಿ ಮರಣದ ಸಂಖ್ಯೆಗಿಂತಲೂ ಹೃದಯ ಸಂಬಂಧಿ ರೋಗಗಳಿಂದ ಉಂಟಾಗುವ ಮರಣ ಹೆಚ್ಚು ಎಂದು ಅಂಕಿ ಅಂಶಗಳಿಂದ ಸಾಭೀತಾಗಿದೆ. ಇದೀಗ ಮಾರಣಾಂತಿಕ ಕಾಯಿಲೆಯ ಪಟ್ಟಿಯ ಮೊದಲ ಸ್ಥಾನದಲ್ಲಿ ಹೃದಯ ಸಂಬಂಧಿ ರೋಗ ವಿರಾಜಮಾನವಾಗಿದೆ. ಈ ಹೃದಯ ಸಂಬಂಧಿ ರೋಗಗಳಲ್ಲಿ ಸುಮಾರು 80 ಶೇಕಡಾ ರೋಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಉತ್ತಮ ವ್ಯಾಯಾಮ, ತಂಬಾಕು ಮತ್ತು ಮದ್ಯಪಾನ ಸೇವನೆಯನ್ನು ತ್ಯಜಿಸುವುದು, ಉತ್ತಮ ಆಹಾರ ಪದ್ಧತಿ ಹಾಗೂ ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಂಡಲ್ಲಿ, ಹೃದಯಾಘಾತದ ಅನುಪಾತವನ್ನು ಪರಿಾಮಕಾರಿಯಾಗಿ ಕಡಿಮೆ ಮಾಡಬಹುದು.
ಭಾರತದಂತಹ ಬೆಳವಣಿಗೆ ಹೊಂದುತ್ತಿರುವ ದೇಶಗಳಲ್ಲಿಯೂ ಹೃದಯಾಘಾತ ಮುಂತಾದ ರೋಗಗಳು ಹೆಚ್ಚಾಗಿ ಕಾಡಲಾರಂಭಿಸಿದೆ. ಮೊದಲೇ ಬಡತನ, ಅನಕ್ಷರತೆ ಮೂಢನಂಬಿಕೆಗಳ ಬೀಡಾಗಿರುವ ಭಾರತ ದೇಶಕ್ಕೆ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಆಧುನೀಕರಣ, ವ್ಯಾಪಾರೀಕರಣ, ಕೈಗಾರಿಕೀಕರಣ ಮತ್ತು ಕಲುಷಿತ ವಾತಾವರಣದಿಂದಾಗಿ ಹೃದಯ ಸಂಬಂಧಿ ರೋಗಗಳು ಬಹು ದೊಡ್ಡ ಸಮಸ್ಯೆಯಾಗಿ ಬೆಳೆದು ನಿಂತಲ್ಲಿ ಆಶ್ಚರ್ಯವೇನಿಲ್ಲ. ಭಾರತ ದೇಶವೊಂದರಲ್ಲಿಯೇ ವರ್ಷಕ್ಕೆ ಸುಮಾರು 30 ಲಕ್ಷ ಮಂದಿ ಹೃದಯಾಘಾತಕ್ಕೆ ತುತ್ತಾಗುತ್ತಾರೆ. ಇದರಲ್ಲಿ 15 ಲಕ್ಷ ಮಂದಿ ಪ್ರಾಣ ಕಳೆದುಕೊಳ್ಳುತ್ತಾರೆ. 15 ಶೇಕಡಾ ಮಂದಿ ಆಸ್ಪತ್ರೆ ತಲುಪುವ ಮೊದಲೇ ಜೀವ ಕಳೆದುಕೊಳ್ಳುತ್ತಾರೆ. ಇದರಲ್ಲಿ ಹೆಚ್ಚಿನವರು 30 ಮತ್ತು 40ರ ಹರೆಯದವರು ಆಗಿರುವುದು ವಿಷಾದನೀಯ ವಿಚಾರ. ಆದರೆ ಸಮಾಧಾನಕರ ವಿಚಾರವೆಂದರೆ ಇದರಲ್ಲಿ 80 ಶೇಕಡಾ ಹೃದಯಾಘಾತವನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿದೆ.
ಹೃದಯ ರೋಗಗಳನ್ನು ತಡೆಗಟ್ಟುವುದು ಹೇಗೆ?
ಹೆಚ್ಚಿನ ಹೃದಯಾಘಾತ ಮತ್ತು ಹೃದಯ ಸಂಬಂಧಿ ರೋಗಗಳನ್ನು ಉತ್ತಮ ಜೀವನ ಶೈಲಿ ಮತ್ತು ಆಹಾರ ಪದ್ಧತಿಗಳಿಂದ ತಡೆಗಟ್ಟಬಹುದು.
*ದೈಹಿಕ ವ್ಯಾಯಾಮ:
ದೈಹಿಕ ವ್ಯಾಯಾಮ ಅಥವಾ ಕಸರತ್ತು ಹೃದಯದ ಆರೋಗ್ಯಕ್ಕೆ ಅತೀ ಅವಶ್ಯಕ. ಕನಿಷ್ಠ ಪಕ್ಷ ದಿನಕ್ಕೆ 30ನಿಮಿಷಗಳ ಬಿರುಸು ನಡಿಗೆ ಮಾಡಲೇ ಬೇಕು. ಹೀಗೆ ಮಾಡಿದಲ್ಲಿ ಹೃದಯಾಘಾತ ಶೇ. 60ರಷ್ಟು ಕಡಿಮೆಯಾಗುತ್ತದೆ ಎಂದು ಸಂಶೋಧನೆಗಳು ಸಾರಿ ಹೇಳಿವೆ. ಈಗಿನ ಧಾವಂತದ ಬದುಕಿನಲ್ಲಿ ಅತಿಯಾದ ಕೆಲಸದ ಒತ್ತಡ, ತೀವ್ರ ತರವಾದ ಪೈಪೋಟಿ ಮತ್ತು ದೈಹಿಕ ವ್ಯಾಯಾಮದ ಕೊರತೆಯಿಂದ ರಸದೂತಗಳ ಸ್ರವಿಕೆ ಏರುಪೇರಾಗಿ ಹೃದಯದ ಆರೋಗ್ಯದ ಮೇಲೆ ವ್ಯತಿರಕ್ತ ಪರಿಣಾಮ ಬೀರುತ್ತದೆ. ಅತಿಯಾದ ಮಾನಸಿಕ ಒತ್ತಡ ಕೂಡಾ ಹೃದಯಾಘಾತ್ಕೆ ಪರೋಕ್ಷವಾಗಿ ಕಾರಣವಾಗಬಲ್ಲದು.
* ಅನಾರೋಗ್ಯಕರ ಆಹಾರ ಪದ್ಧತಿ:
ನಮ್ಮ ಆಹಾರಕ್ಕೂ ಹೃದಯಕ್ಕೂ ನೇರ ಸಂಬಂಧವಿದೆ. ಅತಿಯಾದ ಕೊಬ್ಬಿನಂಶ ಮತ್ತು ಸೋಡಿಯಂ ಇರುವ ಕರಿದ ತಿಂಡಿಗಳು ಮತ್ತು ಸಿದ್ಧ ಆಹಾರವನ್ನು ತೆಗೆದುಕೊಳ್ಳಬಾರದು. ಹಸಿ ತರಕಾರಿಗಳು ಮತ್ತು ಹಣ್ಣು ಹಂಪಲುಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು. ಸಿದ್ಧ ಆಹಾರಗಳು ಮತ್ತು ಪರಿಷ್ಕ್ಕರಿಸಿದ ಆಹಾರಗಳಿಗೆ ಹೆಚ್ಚಾಗಿ ಪ್ರಕ್ಟೋಸ್ ಇರುವ ಸಿಹಿಕಾರಕ ವಸ್ತುಗಳನ್ನು ಸೇರಿಸಲಾಗುತ್ತದೆ. ಇಂತಹ ಆಹಾರ ಪದಾರ್ಥಗಳು ರಕ್ತದಲ್ಲಿನ ಟೈಗ್ಲಿಸರೈಡ್ ಎಂಬ ಕೊಬ್ಬಿನ ಅಂಶವನ್ನು ಅಧಿಕ ಮಾಡಿ ಹೃದಯಾಘಾತದ ಸಂಭವವನ್ನು ಹೆಚ್ಚು ಮಾಡಬಹುದು. ಆಮ್ಲಯುಕ್ತ ಪೇಯಗಳು ಮತ್ತು ರಾಸಾಯನಿಕ ಮಿಶ್ರಿತ ಸಿದ್ಧ ಆಹಾರಗಳೂ ಕೂಡಾ ಹೃದಯದ ಆರೋಗ್ಯಕ್ಕೆ ಮಾರಕವಾಗಬಲ್ಲದು.
* ಜೀವನ ಶೈಲಿಯ ಬದಲಾವಣೆ:
ನಾವು ಕೆಲಸ ಮಾಡುವ ಸ್ಥಳಗಳಲ್ಲಿ ಮಾನಸಿಕ ಒತ್ತಡದ ವಾತಾವರಣವಿದ್ದಲ್ಲಿ ಹೃದಯದ ಮೇಲೆ ದುಷ್ಪರಿಣಾಮ ಬೀರಬಹುದು. ಕೆಲಸದ ಒತ್ತಡದಿಂದ ನಿದ್ದೆ ಕಡಿಮೆಯಾದಲ್ಲಿ ಹೃದಯದ ರಕ್ತನಾಳಗಳಲ್ಲಿ ಕ್ಯಾಲ್ಸಿಯಂ ಮತ್ತು ಇತರ ಲವಣಗಳು ಶೇಖರಣೆಗೊಂಡು ಹೃದಯಾಘಾತವಾಗುವ ಸಂಭವ ಜಾಸ್ತಿ ಇರುತ್ತದೆ. ಅದೇ ರೀತಿ ಮಾನಸಿಕ ಒತ್ತಡದಿಂದ ರಸದೂತಗಳ ಏರುಪೇರು ಉಂಟಾಗಿ ಹೃದಯಕ್ಕೆ ಮಾರಕವಾಗಬಹುದು.
* ಬೊಜ್ಜು, ಆನುವಂಶೀಯತೆ ಮತ್ತಿತರ ಕಾರಣಗಳು:
ಅತಿಯಾದ ಬೊಜ್ಜು ಯಾವತ್ತೂ ಹೃದಯದ ಬದ್ಧವೈರಿ. ಇದು ಯಾವ ಕಾಲಕ್ಕೂ ಹೃದಯಾಘಾತಕ್ಕೆ ಮುನ್ನುಡಿ ಬರೆಯಬಹುದು. ಈಗಿನ ಬದಲಾದ ಆಹಾರ ಪದ್ಧತಿಯಿಂದಾಗಿ, ಚಿಕ್ಕ ಮಕ್ಕಳಲ್ಲೂ ಬೊಜ್ಜು ಜಾಸ್ತಿಯಾಗಿ ಕೇವಲ ಮೂವತ್ತರ ಆಸು ಪಾಸಿನಲ್ಲಿಯೇ ಹೃದಯಾಘಾತವಾಗುವ ಆತಂಕಕಾರಿ ಬೆಳವಣಿಗೆ ಕಂಡು ಬರುತ್ತದೆ. ವಂಶವಾಹಿನಿಗಳ ಮುಖಾಂತರ ಬರುವ ಹೃದಯಾಘಾತಕ್ಕೆ ಜೀವನಶೈಲಿ, ಆಹಾರ ಪದ್ಧತಿಯಲ್ಲಿ ಹೆಚ್ಚಿನ ಮಾರ್ಪಾಡು ಮಾಡಿ ಹೃದಯಕ್ಕೆ ಹೆಚ್ಚು ತೊಂದರೆ ಆಗದಂತೆ ನಿಗಾ ವಹಿಸಬೇಕು. ಅದೇರೀತಿ ಅಧಿಕ ರಕ್ತದ ಒತ್ತಡ ಮತ್ತು ಮಧುಮೇಹ ರೋಗಿಗಳು ಹೆಚ್ಚಿನ ಕೊಲೆಸ್ಟ್ರಾಲ್ ಹೊಂದಿರುವವರು ಮತ್ತು ದೇಹದ ತೂಕ ಜಾಸ್ತಿ ಇರುವವರು, ಸಾಕಷ್ಟು ಮುಂಜಾಗರೂಕತೆ ವಹಿಸಿ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಮಾರ್ಪಾಡು ಮಾಡಿದಲ್ಲಿ ಹೃದ್ರೋಗ ಸಂಬಂಧಿ ರೋಗಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು.
* ನಿಯಮಿತವಾಗಿ ಕುಟುಂಬ ವೈದ್ಯರ ಭೆೇಟಿ:
ಜೀವನ ಶೈಲಿ ಮತ್ತು ಆಹಾರದ ಮಾರ್ಪಾಡಿನ ಜೊತೆಗೆ ನಿಯಮಿತವಾಗಿ ವೈದ್ಯರಿಂದ ಪರೀಕ್ಷೆಗೊಳಗಾಗಿರಬೇಕು ಮತ್ತು ನುರಿತ ವೈದ್ಯರ ಮಾರ್ಗದರ್ಶನದಲ್ಲಿ ಸೂಕ್ತ ಚಿಕಿತ್ಸೆ ಪರಿಹಾರ ಮತ್ತು ಮಾರ್ಗದರ್ಶನ ತೆಗೆದುಕೊಂಡಲ್ಲಿ ಪರಿಣಾಮಕಾರಿಯಾಗಿ ಹೃದಯಾಘಾತವನ್ನು ತಡೆಗಟ್ಟಬಹುದು. ನೆನಪಿರಲಿ ಶೇಕಡಾ 80ರಷ್ಟು ಹೃದಯಾಘಾತಗಳನ್ನು ಖಂಡಿತವಾಗಿಯೂ ತಡೆಗಟ್ಟಬಹುದು ಎಂು ಸಂಶೋಧನೆಗಳು ಸಾರಿ ಹೇಳಿದೆ.