ಪ್ರಾಥಮಿಕ ವಿದ್ಯಾರ್ಥಿಗಳಿಂದ ಪಾಠ ಕಲಿಯಬೇಕಾದ ಐಎಎಸ್ ಅಧಿಕಾರಿಗಳು!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಬಿಹಾರದಲ್ಲಿ ಮಹಿಳಾ ಐಎಎಸ್ ಅಧಿಕಾರಿಯೊಬ್ಬರಿಗೆ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಸಾಮಾಜಿಕ ಹೊಣೆಗಾರಿಕೆಯ ಕುರಿತಂತೆ ಮಾಡಿದ ಪಾಠ ಇದೀಗ ದೇಶಾದ್ಯಂತ ಸುದ್ದಿಯಾಗಿದೆ. ಮಹಿಳಾ ಸುರಕ್ಷತೆಯ ಕುರಿತಂತೆ ಒಬ್ಬ ಪ್ರಾಥಮಿಕ ವಿದ್ಯಾರ್ಥಿನಿಗೆ ಇರುವ ಕಾಳಜಿಯೂ ಐಎಎಸ್ ಕಲಿತ ಅಧಿಕಾರಿಗಳಿಗೆ ಇಲ್ಲವೇ? ಎನ್ನುವ ಪ್ರಶ್ನೆಯನ್ನು ಜನಸಾಮಾನ್ಯರು ಕೇಳುವಂತಾಗಿದೆ. ಬಿಹಾರದ ಪಾಟ್ನಾದಲ್ಲಿ ಮಹಿಳಾ ಅಭಿವೃದ್ಧಿ ನಿಗಮವು ಪ್ರಾಥಮಿಕ ವಿದ್ಯಾರ್ಥಿನಿಯರಿಗಾಗಿ 'ಸಶಕ್ತ ಬೇಟಿ-ಸಶಕ್ತ ಬಿಹಾರ' ಎನ್ನುವ ಕಾರ್ಯಾಗಾರವನ್ನು ಆಯೋಜಿಸಿತ್ತು. ನಿಗಮದ ನಿರ್ದೇಶಕಿ ಐಎಎಸ್ ಅಧಿಕಾರಿ ಹರ್ಜೋತ್ ಕೌರ್ ಭಾಮ್ರಾ ಕಾರ್ಯಾಗಾರದಲ್ಲಿ ವಿದ್ಯಾರ್ಥಿನಿಯರ ಕುಂದುಕೊರತೆ, ಸಮಸ್ಯೆಗಳನ್ನು ಆಲಿಸುತ್ತಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯೊಬ್ಬಳು, ಹೆಣ್ಣು ಮಕ್ಕಳು ಋತುಚಕ್ರದ ಸಂದರ್ಭದಲ್ಲಿ ಎದುರಿಸುವ ಸವಾಲುಗಳನ್ನು ಪ್ರಸ್ತಾಪಿಸಿದ್ದಾಳೆ. ''ಹೆಣ್ಣು ಮಕ್ಕಳು ನ್ಯಾಪ್‌ಕಿನ್‌ನ ದುಬಾರಿ ಬೆಲೆಯಿಂದಾಗಿ ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಡಿಮೆ ಬೆಲೆಯಲ್ಲಿ ಸರಕಾರ ವಿದ್ಯಾರ್ಥಿನಿಯರಿಗೆ ನ್ಯಾಪ್‌ಕಿನ್ ವಿತರಿಸಲು ವ್ಯವಸ್ಥೆ ಮಾಡಬಹುದೆ'' ಎಂದು ಅಧಿಕಾರಿಯ ಜೊತೆಗೆ ಮನವಿ ಮಾಡಿದ್ದಾಳೆ. ಹೆಣ್ಣು ಮಕ್ಕಳು ಅದರಲ್ಲೂ ವಿದ್ಯಾರ್ಥಿನಿಯರು ದೈನಂದಿನ ಜೀವನದಲ್ಲಿ ಎದುರಿಸುವ ಅತ್ಯಂತ ಗಂಭೀರ ವಿಷಯವನ್ನು ಆಕೆ ಅವರ ಜೊತೆಗೆ ತೋಡಿಕೊಂಡಿದ್ದಳು. ಒಬ್ಬ ಮಹಿಳೆಯಾಗಿ ಆ ವಿದ್ಯಾರ್ಥಿನಿಯ ಅಳಲನ್ನು ತಮ್ಮದಾಗಿಸಿಕೊಂಡು ಅದಕ್ಕೊಂದು ಪರಿಹಾರ ಸೂಚಿಸುವುದು ಅವರ ಹೊಣೆಗಾರಿಕೆಯಾಗಿತ್ತು.
ಆದರೆ ಆಕೆ ಅತ್ಯಂತ ಅಸೂಕ್ಷ್ಮರಾಗಿ ವಿದ್ಯಾರ್ಥಿನಿಯ ಸಮಸ್ಯೆಗಳಿಗೆ ಪ್ರತಿಕ್ರಿಯಿಸಿದರು. ''ಇಂದು ನ್ಯಾಪ್‌ಕಿನ್‌ಅನ್ನು ಉಚಿತವಾಗಿ ಕೇಳುವ ನೀವು, ನಾಳೆ ಜೀನ್ಸ್, ಶೂವನ್ನು ಉಚಿತವಾಗಿ ಕೇಳಬಹುದು. ಮುಂದೆ ಕಾಂಡೊಮನ್ನು ಕೂಡ ಉಚಿತವಾಗಿ ವಿತರಿಸಲು ಆಗ್ರಹಿಸಬಹುದು'' ಎಂದು ಕಾರ್ಯಾಗಾರದಲ್ಲಿ ವಿದ್ಯಾರ್ಥಿನಿಯನ್ನು ತರಾಟೆಗೆ ತೆಗೆದುಕೊಂಡರು. ಆದರೆ ವಿದ್ಯಾರ್ಥಿನಿ ಈ ಅಧಿಕಾರಿಯ ಹೇಳಿಕೆಯನ್ನು ಖಂಡಿಸಿ ''ಸೇವೆ ಮಾಡಬೇಕು ಎಂದಲ್ಲವೆ ನಾವು ಜನಪ್ರತಿನಿಧಿಗಳಿಗೆ ಮತ ನೀಡುವುದು ?'' ಎಂದು ಪ್ರತ್ಯುತ್ತರಿಸಿದ್ದಾಳೆೆ. ವಿದ್ಯಾರ್ಥಿನಿಯ ಉತ್ತರಕ್ಕೆ ಆಕ್ರೋಶಗೊಂಡ ಕೌರ್, ''ಹಾಗಾದರೆ ನೀವು ಮತ ಹಾಕಬೇಡಿ, ದೇಶ ಪಾಕಿಸ್ತಾನವಾಗಲಿ'' ಎಂಬ ಬೇಜವಾಬ್ದಾರಿ ಹೇಳಿಕೆಯನ್ನು ನೀಡಿದ್ದಾರೆ. ಇದೊಂದು ರೀತಿಯಲ್ಲಿ, ಸರಕಾರದ ವಿರುದ್ಧ ಮಾತನಾಡಿದವರನ್ನೆಲ್ಲ 'ಪಾಕಿಸ್ತಾನಕ್ಕೆ ಹೋಗಿ' ಎಂಬ ಸಂಘಪರಿವಾರದ ಜನರ ಆದೇಶದಂತಿದೆ. ಆದರೆ ತನ್ನ ನಿಲುವಿನಿಂದ ಹಿಂದೆ ಸರಿಯದ ವಿದ್ಯಾರ್ಥಿನಿ ''ಈ ದೇಶವೇಕೆ ಪಾಕಿಸ್ತಾನವಾಗಬೇಕು? ನಾನು ಭಾರತೀಯಳು'' ಎಂದು ಐಎಎಸ್ ಅಧಿಕಾರಿಗೇ ದೇಶದ ಕುರಿತಂತೆ ಪಾಠ ಮಾಡಿದ್ದಾಳೆ.
ಐಎಎಸ್ ಅಧಿಕಾರಿಯ ವರ್ತನೆ ತೀವ್ರ ಟೀಕೆಗೊಳಗಾದ ಬಳಿಕ ಆಕೆ ಕ್ಷಮೆಯಾಚಿಸಿದಳು. ಜನಸಾಮಾನ್ಯರ ಜೀವನಾವಶ್ಯಕ ಬೇಡಿಕೆಗಳ ಕುರಿತಂತೆ ಐಎಎಸ್ ಅಧಿಕಾರಿಗಳ ಮನಸ್ಥಿತಿ ಹೇಗಿರುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿದೆ. ಮಹಿಳೆಯರು ಎದುರಿಸುವ ಅತ್ಯಂತ ಗಂಭೀರ ಸಮಸ್ಯೆಯ ಬಗ್ಗೆಯೇ ಮಹಿಳಾ ಅಧಿಕಾರಿಯೊಬ್ಬರು ಇಂತಹ ಮನಸ್ಥಿತಿ ಹೊಂದಿದ್ದಾರೆ ಎಂದಾದರೆ, ಜನರ ಉಳಿದ ಮೂಲಭೂತ ಅಗತ್ಯಗಳಿಗೆ ಐಎಎಸ್ ಅಧಿಕಾರಿಗಳು ಹೇಗೆ ಸ್ಪಂದಿಸಬಹುದು? ಇಂತಹ ಅಧಿಕಾರಿಗಳ ಸಲಹೆ ಸೂಚನೆಗಳ ಮೇರೆಗೇ ಇಂದು ಸರಕಾರ ಕಾನೂನುಗಳನ್ನು ಜಾರಿಗೊಳಿಸುತ್ತಿದೆ. ಅದಾನಿ, ಅಂಬಾನಿಗಳಿಗೆ ಬೇಕಾದ 'ಉಚಿತ'ಗಳನ್ನು ನೀಡಿ ಅವರನ್ನು ಅಭಿವೃದ್ಧಿಗೊಳಿಸುವುದೇ ಸರಕಾರದ ಹೊಣೆಗಾರಿಕೆ ಎಂದು ತಿಳಿದುಕೊಂಡಿರುವ ಅಧಿಕಾರಿಗಳಿಂದಷ್ಟೇ ಇಂತಹ ಬೇಜವಾಬ್ದಾರಿ ಹೇಳಿಕೆಗಳು ಹೊರ ಬರಲು ಸಾಧ್ಯ. ನ್ಯಾಪ್‌ಕಿನ್ ಕೊರತೆಗಳಿಂದ ಮಹಿಳೆಯರು ಎದುರಿಸುವ ಅನಾರೋಗ್ಯ, ಆ ಕೊರತೆ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳ ಅರಿವಿರದ ಮಹಿಳೆಯೊಬ್ಬರು ಐಎಎಸ್ ಅಧಿಕಾರಿಯಾಗಿದ್ದಾರೆ ಎನ್ನುವುದೇ ಸರಕಾರಕ್ಕೆ ಬಹುದೊಡ್ಡ ಅವಮಾನವಾಗಿದೆ.
ದೇಶದಲ್ಲಿ ಹೆಚ್ಚುತ್ತಿರುವ ಬಡತನ, ನಿರುದ್ಯೋಗಗಳಿಗೆ ಸರಕಾರದ ನೀತಿಯೂ ನೇರ ಕಾರಣವಾಗಿದೆ. ಆದುದರಿಂದಲೇ ದೇಶದಲ್ಲಿ ತಾಂಡವವಾಡುತ್ತಿರುವ ಅಪೌಷ್ಟಿಕತೆ, ಅನಾರೋಗ್ಯಗಳ ಹೊಣೆಯನ್ನು ಸರಕಾರ ಹೊತ್ತುಕೊಳ್ಳಬೇಕು. ವಿದ್ಯಾರ್ಥಿನಿಯರು ಹೊಟ್ಟೆ ತುಂಬಾ ಊಟ ಮಾಡುವುದೇ ಕಷ್ಟ ಎನ್ನುವಾಗ, ಅವರು ನ್ಯಾಪ್‌ಕಿನ್‌ಗಾಗಿ ಹಣವನ್ನು ವ್ಯಯಿಸುವುದು ಹೇಗೆ? ಆರೋಗ್ಯವಂತ ಭಾರತವೊಂದನ್ನು ಬಯಸುವ ಸರಕಾರ, ನ್ಯಾಪ್‌ಕಿನ್ ಕೊಳ್ಳಲಾರದ ಬಡವರಿಗೆ ಅದನ್ನು ಒದಗಿಸಿಕೊಡುವುದು ಕರ್ತವ್ಯವಾಗಿದೆ. ಶೌಚಾಲಯದ ಅವ್ಯವಸ್ಥೆಯನ್ನು ವಿದ್ಯಾರ್ಥಿನಿ ಪ್ರಶ್ನಿಸಿದಾಗ ''ನಿಮ್ಮ ಮನೆಯಲ್ಲಿ ಮಹಿಳೆಯರಿಗೊಂದು, ಪುರುಷರಿಗೊಂದು ಶೌಚಾಲಯವಿದೆಯೇ?'' ಎಂದು ಮರು ಪ್ರಶ್ನಿಸುವ ಈ ಅಧಿಕಾರಿ, ಶಾಲೆಗಳಲ್ಲಿ ವಿದ್ಯಾರ್ಥಿನಿಯರು ಎದುರಿಸುತ್ತಿರುವ ಶೌಚಾಲಯ ಸಮಸ್ಯೆಗಳಿಗೆ ಯಾವ ಪರಿಹಾರವನ್ನು ಸೂಚಿಸಬಲ್ಲರು? ನಮ್ಮ ಸರಕಾರಿ ಶಾಲೆಗಳು ಶೌಚಾಲಯದ ಸಮಸ್ಯೆಗಳನ್ನು ಯಾಕೆ ಎದುರಿಸುತ್ತಿದೆಯೆಂದರೆ, ಅಧಿಕಾರಿಗಳಿಗೆ 'ಶೌಚಾಲಯಗಳು ವಿದ್ಯಾರ್ಥಿಗಳ ಅಗತ್ಯ' ಎನ್ನುವುದು ಅರ್ಥವೇ ಆಗಿಲ್ಲ.
ಹಾಗಾದರೆ ಈ ಅಧಿಕಾರಿಯ ಪ್ರಕಾರ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಥಿನಿಯರನ್ನು 'ಸಶಕ್ತ ಬೇಟಿ' ಮಾಡುವುದು ಹೇಗೆ? ಇಷ್ಟಕ್ಕೂ, 'ನ್ಯಾಪ್‌ಕಿನ್' ಕೇಳಿದ ವಿದ್ಯಾರ್ಥಿನಿಯರಿಗೆ ''ಅದನ್ನು ಕೊಟ್ಟರೆ ಮುಂದೆ ನೀವು ಕಾಂಡೊಮ್‌ಗಳನ್ನು ಉಚಿತವಾಗಿ ಕೇಳಬಹುದು'' ಎಂಬ ಬಾಲಿಶ ಪ್ರತಿಕ್ರಿಯೆಯನ್ನು ಈ ಅಧಿಕಾರಿ ಮಾಡುತ್ತಾರೆ. ಈ ದೇಶದಲ್ಲಿ 'ಕಾಂಡೊಮ್‌ಗಳನ್ನು ಸರಕಾರದ ನೇತೃತ್ವದಲ್ಲಿ ಮತ್ತು ಸರಕಾರೇತರ ಸಂಘಟನೆಗಳ ನೇತೃತ್ವದಲ್ಲಿ ಉಚಿತವಾಗಿಯೇ ವಿತರಿಸಲಾಗುತ್ತಿದೆ' ಎನ್ನುವ ಅಂಶವೇ ಈಕೆಗೆ ಗೊತ್ತಿಲ್ಲ. ಕುಟುಂಬ ಯೋಜನೆ, ಎಚ್‌ಐವಿಯಂತಹ ಮಾರಕ ರೋಗಗಳ ವಿರುದ್ಧದ ಆಂದೋಲನಗಳಲ್ಲಿ ಸರಕಾರ ಉಚಿತವಾಗಿ ಕಾಂಡೊಮ್‌ಗಳನ್ನು ವಿತರಿಸಿತ್ತು. ದೇಶದ ಜನಸಂಖ್ಯೆ, ಜನರ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಯೋಜನೆಗಳನ್ನು ಸರಕಾರ ಜಾರಿಗೊಳಿಸಿತ್ತು. ಇಷ್ಟು ಅರಿವೂ ಇಲ್ಲದ ಈ ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಾರೆ ಎಂದಾದರೆ, ಆ ಜನಪ್ರತಿನಿಧಿಗಳಿಂದ ಜನರಾದರೂ ಏನನ್ನು ನಿರೀಕ್ಷಿಸಬಹುದು.
ಬಡವರ ಕುರಿತಂತೆ, ವಿದ್ಯಾರ್ಥಿನಿಯರ ಸಮಸ್ಯೆಗಳ ಕುರಿತಂತೆ ಯಾವುದೇ ಕಾಳಜಿಯನ್ನು ಹೊಂದಿಲ್ಲದ, ವಿದ್ಯಾರ್ಥಿನಿಯರ ಕೈಯಲ್ಲೇ ಸಾಮಾಜಿಕ ಸುರಕ್ಷತೆಯ ಬಗ್ಗೆ ಪಾಠ ಹೇಳಿಸಿಕೊಂಡ ಈ ಅಧಿಕಾರಿ ಬಳಿಕ ತನ್ನ ವರ್ತನೆಗೆ ಕ್ಷಮೆಯಾಚನೆ ಮಾಡಿದ್ದಾರೆ. ಆದರೆ ಇಂತಹ ಬೇಜವಾಬ್ದಾರಿ, ಅಸೂಕ್ಷ್ಮ ಅಧಿಕಾರಿಯನ್ನು ವಜಾಗೊಳಿಸುವುದೇ ಸರಿಯಾದ ಕ್ರಮವಾಗಿದೆ. ಆ ಮೂಲಕ ಇತರ ಅಧಿಕಾರಿಗಳಿಗೂ ಎಚ್ಚರಿಕೆಯನ್ನು ನೀಡಿದಂತಾಗುತ್ತದೆ.