ಒಡೆಯುವವರನ್ನು ತಡೆಯದೇ ಜೋಡಿಸುವುದು ಸಾಧ್ಯವೆ?

Update: 2022-10-03 04:28 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ದೇಶಾದ್ಯಂತ ಪಿಎಫ್‌ಐ ನಿಷೇಧ ಚರ್ಚೆಯಾಗುತ್ತಿದ್ದಂತೆಯೇ, ಅದರ ಜೊತೆ ಜೊತೆಗೇ ಆರೆಸ್ಸೆಸ್ ಮತ್ತು ಅದರ ಪರಿವಾರ ಸಂಘಟನೆಗಳನ್ನು ನಿಷೇಧಿಸಬೇಕು ಎನ್ನುವ ಆಗ್ರಹ ಮುನ್ನೆಲೆಗೆ ಬಂದಿದೆ. ಪಿಎಫ್‌ಐ ನಿಷೇಧಕ್ಕೆ ಸರಕಾರ ಕೊಟ್ಟಿರುವ ಕಾರಣಗಳ ಸತ್ಯಾಸತ್ಯತೆ ಏನು ಎನ್ನುವುದು ಇನ್ನಷ್ಟೇ ಬಹಿರಂಗವಾಗಬೇಕಾಗಿದೆ. ಆದರೆ ಇದೇ ಸಂದರ್ಭದಲ್ಲಿ ಪಿಎಫ್‌ಐ ನಿಷೇಧಕ್ಕೆ ಸರಕಾರ ನೀಡುತ್ತಿರುವ ಕಾರಣಗಳು ಆರೆಸ್ಸೆಸ್‌ಗೆ ಎಲ್ಲ ರೀತಿಯಲ್ಲೂ ಅನ್ವಯವಾಗುತ್ತಿರುವುದರಿಂದ ಆರೆಸ್ಸೆಸ್ ಪರಿವಾರಗಳನ್ನು ನಿಷೇಧಿಸದೆ ದೇಶದ ಆಂತರಿಕ ಭದ್ರತೆಯನ್ನು ಕಾಪಾಡುವುದು ಸಾಧ್ಯವಿಲ್ಲ ಎನ್ನುವುದನ್ನು ಹಲವು ರಾಷ್ಟ್ರ ಮಟ್ಟದ ನಾಯಕರು ಅಭಿಪ್ರಾಯಪಡುತ್ತಿದ್ದಾರೆ. ಪಿಎಫ್‌ಐ ನಿಷೇಧಕ್ಕೆ ದೇಶದ ಭದ್ರತೆ ಮುಖ್ಯ ಕಾರಣವೆಂದಾದರೆ ಸರಕಾರ ಆರೆಸ್ಸೆಸ್‌ನ್ನು ನಿಷೇಧಿಸುವುದು ಅನಿವಾರ್ಯವಾಗುತ್ತದೆ. ಯಾಕೆಂದರೆ, ಈಗಾಗಲೇ ಹತ್ತು ಹಲವು ದೇಶ ವಿರೋಧಿ ಕೃತ್ಯಗಳಲ್ಲಿ ಆರೆಸ್ಸೆಸ್ ಹೆಸರು ಕೇಳಿ ಬರುತ್ತಿವೆ. ಆರೆಸ್ಸೆಸ್ ದೇಶಾದ್ಯಂತ ಬಾಂಬ್ ಸ್ಫೋಟಿಸುವ ಸಂಚನ್ನು ನಡೆಸಿತ್ತು ಎನ್ನುವುದನ್ನು ಆರೆಸ್ಸೆಸ್‌ನೊಳಗಿದ್ದ ಕಾರ್ಯಕರ್ತರೇ ಬಹಿರಂಗಪಡಿಸಿದ್ದಾರೆ. ಕೇರಳದಲ್ಲಿ ಬಾಂಬ್ ತಯಾರಿಸುವಾಗಲೇ ಸ್ಫೋಟಿಸಿ ಆರೆಸ್ಸೆಸ್‌ನ ಕಾರ್ಯಕರ್ತರು ಮೃತಪಟ್ಟ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಅಜ್ಮೀರ್ ಬ್ಲಾಸ್ಟ್‌ನಲ್ಲಿ ಆರೆಸ್ಸೆಸ್‌ನ ಪ್ರಮುಖ ಇಂದ್ರೇಶ್ ಹೆಸರು ಕೇಳಿ ಬಂದಿತ್ತು. ನಾಥೂರಾಂ ಗೋಡ್ಸೆಯಿಂದ ಹಿಡಿದು ಪ್ರಜ್ಞಾ ಸಿಂಗ್ ಠಾಕೂರ್‌ವರೆಗಿನ ಉಗ್ರವಾದಿಗಳನ್ನು ಬೆಳೆಸಿರುವುದು ಆರೆಸ್ಸೆಸ್ ಚಿಂತನೆಗಳೇ ಆಗಿವೆ. ದೇಶಾದ್ಯಂತ ನಡೆಯುತ್ತಿರುವ ಹಿಂಸೆಗಳ ಹಿಂದೆ ಆರೆಸ್ಸೆಸ್ ಕೈವಾಡಗಳಿರುವುದು ಪದೇ ಪದೇ ಮಾಧ್ಯಮಗಳ ಮೂಲಕ ಬೆಳಕಿಗೆ ಬರುತ್ತಿವೆ. ಮಾಲೆಗಾಂವ್, ಅಜ್ಮೀರ್ ಸ್ಫೋಟ, ಸಂಜೋತಾ ರೈಲು ಸ್ಫೋಟಗಳಲ್ಲಿ ಸಂಘಪರಿವಾರದ ಪಾತ್ರವನ್ನು ಹೇಮಂತ್ ಕರ್ಕರೆ ತಂಡ ಗುರುತಿಸಿತ್ತು. ಅವರೇನಾದರೂ ತನಿಖೆಯನ್ನು ಪೂರ್ತಿಗೊಳಿಸಿದ್ದಿದ್ದರೆ ಆರೆಸ್ಸೆಸ್ ಯಾವತ್ತೋ ನಿಷೇಧಕ್ಕೊಳಗಾಗಿ ಬಿಡುತ್ತಿತ್ತು. ಆದರೆ ಇಡೀ ತನಿಖಾ ತಂಡವೇ ನಿಗೂಢ ರೀತಿಯಲ್ಲಿ ಭಯೋತ್ಪಾದಕರಿಂದ ಕೊಲ್ಲಲ್ಪಟ್ಟಿತ್ತು. ಇಂತಹ ಹತ್ತು ಹಲವು ಭಯಾನಕ ಹಿನ್ನೆಲೆಯಿರುವ ಸಂಘಟನೆಯನ್ನು ನಿಷೇಧಿಸುವುದಕ್ಕೆ ಸರಕಾರಕ್ಕಿರುವ ಅಡೆತಡೆಗಳಾದರೂ ಏನು? ಎನ್ನುವ ಪ್ರಶ್ನೆಯನ್ನು ನಾಡಿನ ಹಲವು ಚಿಂತಕರು ಮತ್ತು ರಾಜಕೀಯ ನಾಯಕರು ಎತ್ತಿದ್ದಾರೆ.

ವಿಪರ್ಯಾಸವೆಂದರೆ, ಪಿಎಫ್‌ಐಯಂತಹ ಸಂಘಟನೆಗಳ ನಿಷೇಧವನ್ನು ಸಮರ್ಥಿಸುವ ಸರಕಾರ ಆರೆಸ್ಸೆಸ್‌ನ್ನು ‘ದೇಶಭಕ್ತ’ ಸಂಘಟನೆ ಎಂದು ಕರೆಯುತ್ತಿದೆ. ಭಯೋತ್ಪಾದನೆ ಮತ್ತು ಉಗ್ರವಾದದ ಕುರಿತಂತೆ ಸರಕಾರ ಹೊಂದಿರುವ ಈ ದ್ವಂದ್ವ ನಿಲುವು ದೇಶದ ಪಾಲಿಗೆ ಅತ್ಯಂತ ಅಪಾಯಕಾರಿಯಾಗಿದೆ. ನಮ್ಮನ್ನಾಳುವ ಸರಕಾರ ಆರೆಸ್ಸೆಸ್‌ನ್ನು ಪೋಷಿಸುತ್ತಿದೆ ಎನ್ನುವ ಆರೋಪಕ್ಕಿಂತಲೂ, ಆರೆಸ್ಸೆಸ್ ಕೃಪಾಪೋಷಿತ ಸರಕಾರ ನಮ್ಮನ್ನಾಳುತ್ತಿದೆ ಎನ್ನುವುದೇ ಇಂದಿನ ದುರಂತವಾಗಿದೆ. ಕಾಂಗ್ರೆಸ್ ಸೇರಿದಂತೆ ಎಲ್ಲ ಜಾತ್ಯತೀತ ರಾಜಕೀಯ ಪಕ್ಷಗಳು ಆರೆಸ್ಸೆಸ್‌ನ ಕುರಿತಂತೆ ಟೀಕೆಗಳನ್ನು ಮಾಡುತ್ತವೆಯಾದರೂ, ಅದರ ನಿಷೇಧಕ್ಕೆ ತೀವ್ರವಾದ ಹೋರಾಟವನ್ನು ಮಾಡಿದ ಯಾವ ಇತಿಹಾಸವೂ ಅವುಗಳಿಗಿಲ್ಲ. ಇದೀಗ ಕೆಲವು ರಾಜಕೀಯ ಮುಖಂಡರು ಆರೆಸ್ಸೆಸ್ಸನ್ನು ಕೂಡ ನಿಷೇಧಿಸಬೇಕು ಎನ್ನುವ ಧ್ವನಿಯನ್ನು ಎತ್ತಿದ್ದಾರೆ. ಹಾಗೆ ಧ್ವನಿಯೆತ್ತಿದ ನಾಯಕರಲ್ಲಿ ಕಾಂಗ್ರೆಸ್ ಮುಖಂಡರೂ ಸೇರಿದ್ದಾರೆ. ಭಾರತ್ ಜೋಡೊ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ‘‘ಆರೆಸ್ಸೆಸ್ ದೇಶಾದ್ಯಂತ ದ್ವೇಷ ಮತ್ತು ಹಿಂಸೆಯನ್ನು ಬಿತ್ತುತ್ತಿದೆ’ ಎಂದು ಬಹಿರಂಗ ಆರೋಪಗಳನ್ನು ಮಾಡಿದ್ದಾರೆ. ಆದರೆ ಇಂತಹ ಆರೋಪಗಳನ್ನು ಮಾಡುವಾಗ ಕಾಂಗ್ರೆಸ್ ಪಕ್ಷ ಕೆಲವು ಪ್ರಶ್ನೆಗಳಿಗೆ ಎದುರಿಸಬೇಕಾಗುತ್ತದೆ. ಆರೆಸ್ಸೆಸ್ ದೇಶದಲ್ಲಿ ಹಿಂಸೆ, ದ್ವೇಷವನ್ನು ಬಿತ್ತುವುದಕ್ಕೆ ಶುರು ಹಚ್ಚಿರುವುದು ಯುಪಿಎ ಸರಕಾರ ಅಧಿಕಾರ ಕಳೆದುಕೊಂಡ ಬಳಿಕವೆ? ನಿಜಕ್ಕೂ ಆರೆಸ್ಸೆಸ್ ದೇಶ ವಿರೋಧಿ ಹಿಂಸಾಚಾರಗಳಿಗೆ ಪ್ರೋತ್ಸಾಹವನ್ನು ನೀಡುತ್ತದೆಯೆಂದಾಗಿದ್ದರೆ ಅದರ ವಿರುದ್ಧ ೭೫ ವರ್ಷಗಳಲ್ಲಿ ಎಷ್ಟು ಬಾರಿ ಕ್ರಮ ತೆಗೆದುಕೊಳ್ಳಲಾಗಿದೆ? ಕಾಂಗ್ರೆಸ್ ಅಧಿಕಾರಾವಧಿಯಲ್ಲಿದ್ದಾಗ ಅದರ ವಿರುದ್ಧ ಯಾಕೆ ಯಾವುದೇ ತನಿಖಾ ಸಂಸ್ಥೆಗಳು ದಾಳಿ ನಡೆಸಲಿಲ್ಲ? ಅದರ ವಿರುದ್ಧ ಇರುವ ಆರೋಪಗಳನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ? ಅಥವಾ ಆರೆಸ್ಸೆಸ್ ವಿರುದ್ಧ ಯಾವುದೇ ರೀತಿಯ ತನಿಖೆ ನಡೆಸದಂತೆ, ಕ್ರಮ ತೆಗೆದುಕೊಳ್ಳದಂತೆ ಕಾಂಗ್ರೆಸ್‌ನೊಳಗೇ ಒತ್ತಡಗಳಿದ್ದವೆ? ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರವನ್ನು ಕಂಡುಕೊಳ್ಳದೇ ಇದ್ದರೆ, ಕಾಂಗ್ರೆಸ್‌ನ ಭಾರತವನ್ನು ಜೋಡಿಸುವ ಪ್ರಯತ್ನ ಫಲ ಕಾಣದು.

ಕರ್ನಾಟಕದಲ್ಲಿ ಆರೆಸ್ಸೆಸ್ ದ್ವೇಷ ರಾಜಕಾರಣದ ವಿರುದ್ಧ ಸ್ಪಷ್ಟ ಧ್ವನಿಯಲ್ಲಿ ಮಾತನಾಡುತ್ತಿರುವ ಕೆಲವೇ ಕೆಲವು ರಾಜಕೀಯ ನಾಯಕರಲ್ಲಿ ಸಿದ್ದರಾಮಯ್ಯ ಒಬ್ಬರು. ಆರೆಸ್ಸೆಸ್ ವಿರುದ್ಧದ ದಾಳಿಯ ಸಂದರ್ಭದಲ್ಲಿ ಸ್ವತಃ ಕಾಂಗ್ರೆಸ್‌ನೊಳಗಿರುವ ನಾಯಕರೇ ಅವರ ಜೊತೆಗೆ ಗಟ್ಟಿಯಾಗಿ ನಿಲ್ಲುತ್ತಿಲ್ಲ ಎನ್ನುವ ಆರೋಪಗಳಿವೆ. ಅದೇನೇ ಇರಲಿ, ಇದೀಗ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಆರೆಸ್ಸೆಸ್‌ನ ಒಡೆದು ಆಳುವ ನೀತಿ ಚರ್ಚೆಗೆ ಬಂದಿದೆ. ಆರೆಸ್ಸೆಸ್‌ನ ‘ದ್ವೇಷ ರಾಜಕಾರಣ’ವನ್ನು ಬಲವಾಗಿ ವಿರೋಧಿಸದೇ ದೇಶದ ಒಡೆದು ಹೋಗಿರುವ ಹೃದಯಗಳನ್ನು ಜೋಡಿಸಲಾಗುವುದಿಲ್ಲ ಎನ್ನುವುದನ್ನು ಬಹುತೇಕ ರಾಜಕೀಯ ನಾಯಕರು ಅರ್ಥ ಮಾಡಿಕೊಂಡಿದ್ದಾರೆ. ಆದುದರಿಂದ, ಈ ದೇಶದಲ್ಲಿ ದ್ವೇಷವನ್ನು, ಜಾತೀಯತೆಯನ್ನು, ಭಯೋತ್ಪಾದನೆಯನ್ನು, ಹಿಂಸೆಯನ್ನು ಹರಡುವ ಎಲ್ಲ ಸಂಘಟನೆಗಳು ನಿಷೇಧಕ್ಕೊಳಪಡುವುದು ಅತ್ಯಗತ್ಯವಾಗಿದೆ. ಅದಕ್ಕೆ ಸಂಬಂಧಿಸಿದ ಹೋರಾಟದ ನೇತೃತ್ವವನ್ನು ‘ಭಾರತ್ ಜೋಡೊ’ ಆಂದೋಲನದಲ್ಲಿ ಭಾಗವಹಿಸಿರುವ ನಾಯಕರು ಕೈಗೆತ್ತಿಕೊಳ್ಳುವುದು ಕೂಡ ಅತ್ಯಗತ್ಯವಾಗಿದೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಯವರು ‘ಆರೆಸ್ಸೆಸ್‌ನಂತಹ ದೇಶಭಕ್ತ ಸಂಘಟನೆಯನ್ನು ನಿಷೇಧಿಸಲು ಒತ್ತಾಯಿಸುವುದು ದುರದೃಷ್ಟಕರ’ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಇನ್ನೋರ್ವ ಬಿಜೆಪಿ ನಾಯಕರು ‘ಆರೆಸ್ಸೆಸ್‌ನ ವಿರುದ್ಧ ದೇಶದ್ರೋಹದ ಆರೋಪಗಳಿದ್ದರೆ ಸಿದ್ದರಾಮಯ್ಯ ಬಹಿರಂಗ ಪಡಿಸಲಿ’ ಎಂದು ಸವಾಲು ಹಾಕಿದ್ದಾರೆ. ದೇಶಾದ್ಯಂತ ಆರೆಸ್ಸೆಸ್ ಸಂಘಟನೆ ಮತ್ತು ಅದರ ಪರಿವಾರ ಸಂಘಟನೆಗಳ ಮೇಲೆ ಯಾವೆಲ್ಲ ದೇಶದ್ರೋಹದ ಆರೋಪಗಳಿವೆ, ಯಾವೆಲ್ಲ ಹಿಂಸಾಚಾರಗಳಲ್ಲಿ ಅವುಗಳ ಕೈವಾಡಗಳಿವೆ ಎನ್ನುವುದನ್ನು ಈಗ ಸರಕಾರಕ್ಕೆ ಸ್ಪಷ್ಟಪಡಿಸುವ ಹೊಣೆಗಾರಿಕೆ ವಿರೋಧ ಪಕ್ಷಗಳ ಮೇಲಿದೆ. ಬರೇ ಟೀಕೆ, ಬೀಸು ಆರೋಪಗಳನ್ನು ನಿಲ್ಲಿಸಿ, ಆರೆಸ್ಸೆಸ್ ಮೇಲಿರುವ ಆರೋಪಗಳ ದಾಖಲೆಗಳನ್ನು ಒಟ್ಟು ಸೇರಿಸಿ, ಅವುಗಳನ್ನು ಸರಕಾರದ ಮತ್ತು ದೇಶದ ಮುಂದಿಡುವುದು ಅವುಗಳ ಹೊಣೆಗಾರಿಕೆಯಾಗಿವೆ. ಒಡೆಯುವವರನ್ನು ತಡೆಯದೇ ಜೋಡಿಸುವುದು ಕಷ್ಟ. ಈ ದೇಶದಲ್ಲಿ ಜನರನ್ನು ಒಡೆಯುವುದಕ್ಕಾಗಿಯೇ ಒಂದು ವ್ಯವಸ್ಥಿತವಾದ ಸಂಘಟನೆಯಿದೆ. ಅದು ದೇಶಾದ್ಯಂತ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಆಸ್ತಿಪಾಸ್ತಿಗಳನ್ನು ಹೊಂದಿದೆೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಅದಕ್ಕೆ ನಂಟುಗಳಿವೆ. ಸಾವಿರಾರು ಸಹಸಂಘಟನೆಗಳನ್ನು ಹೊಂದಿದೆ. ಸಹಸ್ರಾರು ಜನ ಕಾರ್ಯಕರ್ತರಿದ್ದಾರೆ. ಹಿಂಸೆ, ದ್ವೇಷವನ್ನು ಬಿತ್ತಿ ಬೆಳೆಯುವುದಕ್ಕಾಗಿಯೇ ಇರುವ ಇಂತಹ ಸಂಘಟನೆಯನ್ನು ತಡೆಯುವ, ನಿಷೇಧಿಸುವ ನಿಟ್ಟಿನಲ್ಲಿ ಆಂದೋಲನದ ರೂಪದಲ್ಲಿ ಕಾರ್ಯಗಳು ನಡೆಯಬೇಕು. ಆಗ ಮಾತ್ರ ಜೋಡಿಸುವ ಕೆಲಸ ಯಶಸ್ವಿಯಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News