ವಿದೇಶಗಳಿಂದ ಅಡಿಕೆ ಆಮದು: ಬೆಳೆಗಾರರ ಗಾಯದ ಮೇಲೆ ಬರೆ

Update: 2022-10-06 07:12 GMT

ಅತಿವೃಷ್ಟಿಯಿಂದಾಗಿ ಜಿಲ್ಲೆಯ ಅಡಿಕೆ ಬೆಳೆಗಾರರು ಈಗಾಗಲೇ ಬೆಳೆ ನಷ್ಟದಿಂದ ಕಂಗಾಲಾಗಿದ್ದಾರೆ. ಈ ಮಧ್ಯೆ ಎಲೆ ಚುಕ್ಕಿ ರೋಗ, ಹಳದಿ ಎಲೆ ರೋಗದಿಂದ ಬೆಳೆಗಾರರು ಹೈರಾಣಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರ ಅಡಿಕೆ ಆಮದಿಗೆ ಮುಂದಾಗಿರುವುದು ಸರಿಯಲ್ಲ. ಅಡಿಕೆಗಿರುವ ಹಾಲಿ ಬೆಲೆಯಿಂದಾಗಿ ಬೆಳೆಗಾರರು ಸಂಕಷ್ಟದ ನಡುವೆಯೂ ಬದುಕಲು ಸಾಧ್ಯವಾಗಿದೆ. ವಿದೇಶಿ ಅಡಿಕೆಯು ದೇಶದ ಮಾರುಕಟ್ಟೆ ಪ್ರವೇಶಿಸಿದಲ್ಲಿ ಅಡಿಕೆ ಬೆಲೆ ಕುಸಿಯುವುದು ನಿಶ್ಚಿತ. ಅಡಿಕೆ ಬೆಲೆ ಕುಸಿದಲ್ಲಿ ಬೆಳಗಾರರೊಂದಿಗೆ ಕಾರ್ಮಿಕರಿಗೂ ಭಾರೀ ನಷ್ಟ ಉಂಟಾಗಲಿದೆ. ಆದ್ದರಿಂದ ಕೇಂದ್ರ ಸರಕಾರ ಅಡಿಕೆ ಆಮದು ಆದೇಶವನ್ನು ಹಿಂಪಡೆಯಬೇಕು. ಈ ಸಂಬಂಧ ಅಡಿಕೆ ಬೆಳೆಯುವ ಜಿಲ್ಲೆಗಳ ಶಾಸಕರು, ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಬೇಕು

                                                                                  -ಡಿ.ಆರ್.ದುಗ್ಗಪ್ಪಗೌಡ, ಜಿಲ್ಲಾಧ್ಯಕ್ಷ, ರೈತಸಂಘ

 ಚಿಕ್ಕಮಗಳೂರು, ಅ.5: ಕಾಫಿನಾಡೆಂದು ಪ್ರಸಿದ್ಧಿಯಾಗಿದ್ದರೂ ಕಾಫಿಯೊಂದಿಗೆ ಅಡಿಕೆಯೂ ಜಿಲ್ಲೆಯ ಪ್ರಮುಖ ಬೆಳೆಯಾಗಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಯಥೇಚ್ಛವಾಗಿ ಬೆಳೆಯಲಾಗುತ್ತಿದ್ದ ಅಡಿಕೆ ಇತ್ತೀಚಿನ ವರ್ಷಗಳಲ್ಲಿ ಬಯಲು ಭಾಗದಲ್ಲೂ ಬೆಳೆಯಲಾಗುತ್ತಿದ್ದು, ಅಡಿಕೆ ಬೆಳೆ ನಂಬಿ ಸಾವಿರಾರು ರೈತರು, ಬೆಳೆಗಾರರು ಬದುಕು ಕಟ್ಟಿಕೊಂಡಿದ್ದಾರೆ. ಅಡಿಕೆ ಬೆಳೆಗೆ ಕಳೆದ ನಾಲ್ಕು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿ ಭಾರೀ ನಷ್ಟವನ್ನುಂಟು ಮಾಡಿದ್ದು,ಈಗ ಕೇಂದ್ರ ಸರಕಾರ ಅಡಿಕೆಯನ್ನು ವಿದೇಶದಿಂದ ಆಮದು ಮಾಡಿಕೊಳ್ಳಲು ಮುಂದಾಗಿರುವುದು ಅಡಿಕೆ ಬೆಳೆಗಾರರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳಾದ ಮೂಡಿಗೆರೆ, ಕೊಪ್ಪ, ಶೃಂಗೇರಿ, ಕಳಸ ಭಾಗದಲ್ಲಿ ಅಡಿಕೆ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಕಾಫಿ, ಕಾಳುಮೆಣಸಿನೊಂದಿಗೆ ಅಡಿಕೆಯನ್ನು ಈ ಭಾಗದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಮಲೆನಾಡಿನ ಸಾಂಪ್ರದಾಯಿಕ ಕೃಷಿಯಾಗಿರುವ ಅಡಿಕೆ ಕೃಷಿ ಮಲೆನಾಡಿನ ರೈತರ ಆದಾಯದ ಮೂಲವಾಗಿದ್ದು, ಪ್ರತೀ ವರ್ಷ ಉತ್ತಮ ಧಾರಣೆಯನ್ನು ಕಾಯ್ದುಕೊಂಡಿರುವ ಅಡಿಕೆ ಬೆಳೆ ನಂಬಿದವರನ್ನು ಇಂದಿಗೂ ಕೈಹಿಡಿದಿದೆ. ಅಡಿಕೆ ಕೃಷಿ ಮಾಡಿ ಕೈಸುಟ್ಟುಕೊಂಡು ಒಂದೇ ಒಂದು ಉದಾಹರಣೆ ಇಲ್ಲವಾಗಿದೆ. ಅಡಿಕೆಗಿರುವ ಉತ್ತಮ ಧಾರಣೆ ಕಾರಣಕ್ಕಾಗಿ ಹಿಂದೆ ಮಲೆನಾಡು ಭಾಗದಲ್ಲಿ ಮಾತ್ರ ಕಂಡು ಬರುತ್ತಿದ್ದ ಅಡಿಕೆ ಕೃಷಿ ಪ್ರಸಕ್ತ ಬಯಲು ಭಾಗವನ್ನೂ ಆಕ್ರಮಿಸಿಕೊಂಡಿದ್ದು, ಬಯಲು ಭಾಗದ ಕೃಷಿಕರು ಕೂಡ ಅಡಿಕೆಗೆ ಅವಲಂಬಿತರಾಗುವಂತಾಗಿದೆ.

ಅತಿವೃಷ್ಟಿಯಿಂದಾಗಿ ಕಳೆದ ಕೆಲ ವರ್ಷಗಳಿಂದ ಅಡಿಕೆ ಇಳುವರಿ ಕಡಿಮೆಯಾಗಿದೆ. ಭಾರೀ ಮಳೆಯಿಂದಾಗಿ ಅಡಿಕೆ ಕಾಯಿಗಳು ಕೊಳೆ ರೋಗಕ್ಕೆ ತುತ್ತಾಗಿ ಮಣ್ಣು ಪಾಲಾಗುತ್ತಿದೆಯಾದರೂ ಅಡಿಕೆ ಉತ್ಪಾದನೆಯಲ್ಲಿ ಕೊರತೆ ಉಂಟಾಗಿಲ್ಲ. ಹೊಸದಾಗಿ ಬಯಲು ಭಾಗದಲ್ಲಿಯೂ ಅಡಿಕೆ ಬೆಳೆ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಡಿಕೆ ಉತ್ಪಾದನೆಯಲ್ಲಿ ಸಮತೋಲನ ಕಾಯ್ದುಕೊಳ್ಳಲಾಗಿದೆ. ಎಲೆ ಚುಕ್ಕಿರೋಗ, ಹಳದಿ ಎಲೆ ರೋಗದಿಂದ ರೈತ ತತ್ತರ: 

 ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಬೆಳೆಗಾರರು ಅತಿವೃಷ್ಟಿ ಸಮಸ್ಯೆಯೊಂದಿಗೆ ಎಲೆ ಚುಕ್ಕಿ ರೋಗ, ಹಳದಿ ಎಲೆ ರೋಗಗಳಿಂದ ಆತಂಕಕ್ಕೊಳಗಾಗಿದ್ದಾರೆ. ವಾಡಿಕೆ ಮಳೆಗಿಂತ ಹೆಚ್ಚುವರಿ ಮಳೆ ಸುರಿದ ಸಂದರ್ಭಗಳಲ್ಲಿ ಅಡಿಕೆ ಬೆಳೆ ಕೊಳೆ ರೋಗಕ್ಕೆ ತುತ್ತಾಗುವುದು ಸಾಮಾನ್ಯವಾಗಿತ್ತು. ಕೊಳೆ ರೋಗ ನಿಯಂತ್ರಣಕ್ಕೆ ಬೋರ್ಡೊ ದ್ರಾವಣ ಸಿಂಪಡಣೆ ಮಾಡುವುದರಿಂದ ರೋಗ ನಿಯಂತ್ರಣಕ್ಕೆ ಬರುತ್ತದೆ, ಆದರೆ ಸದ್ಯ ಮಲೆನಾಡು ಭಾಗದಲ್ಲಿ ಅಡಿಕೆ ಎಲೆ ಚುಕ್ಕಿ ರೋಗ, ಹಳದಿ ಎಳೆ ರೋಗ ಹೆಚ್ಚುತ್ತಿದ್ದು, ಈ ರೋಗಕ್ಕೆ ತುತ್ತಾಗುವ ಅಡಿಕೆ ಮರಗಳ ಎಲೆಗಳು ಒಣಗಿ ಇಡೀ ಮರವೇ ಒಣಗಿ ಸಾಯುತ್ತವೆ. ಈ ರೋಗಗಳು ಎಂತಹ ಕೀಟನಾಶಕಕ್ಕೂ ಬಗ್ಗದ ಪರಿಣಾಮ ಅಡಿಕೆ ತೋಟಗಳೆ ನಾಶವಾಗುವಂತಹ ಸಂದರ್ಭ ಎದುರಾಗಿದೆ. ಅಡಿಕೆ ಬೆಳೆಗೆ ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇದೆಯಾದರೂ, ಈ ರೋಗಗಳಿಂದಾಗಿ ಅಡಿಕೆ ಇಳುವರಿ ಪ್ರಮಾಣ ಕಡಿಮೆಯಾಗುವ ಆತಂಕ ಬೆಳೆಗಾರರದ್ದಾಗಿದೆ. ರೋಗಗಳ ನಿಯಂತ್ರಣಕ್ಕೆ ಸರಕಾರವು ಕೃಷಿ, ತೋಟಗಾರಿಕೆ ಇಲಾಖೆಗಳ ಮೂಲಕ ಅಗತ್ಯ ಕ್ರಮವಹಿಸುತ್ತಿಲ್ಲ ಎಂಬ ಕೂಗಿನ ಮಧ್ಯೆ ಇತ್ತೀಚೆಗೆ ಕೇಂದ್ರ ಸರಕಾರ ಭೂತಾನ್ ದೇಶದಿಂದ 17 ಸಾವಿರ ಟನ್ ಅಡಿಕೆ ಆಮದಿಗೆ ಮುಂದಾಗಿರುವುದು ಮಲೆನಾಡಿನ ಅಡಿಕೆ ಬೆಳೆಗಾರರ ಗಾಯದ ಮೇಲೆ ಬರೆ ಎಳದಂತಾಗಿದೆ.

ಅಡಿಕೆ ಧಾರಣೆಯಲ್ಲಿ ಏರುಪೇರು: ಕೇಂದ್ರದ ಅಡಿಕೆ ಆಮದು ನೀತಿಯಿಂದಾಗಿ ದೇಶದ ಅಡಿಕೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಉಂಟಾಗಿ ರೈತರು ಭಾರೀ ಸಮಸ್ಯೆಗೆ ತುತ್ತಾಗುತ್ತಾರೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಿದ್ದು, ರೈತರ ಈ ಆತಂಕ ನಿಜವಾಗುತ್ತಿದೆ. ಕೇಂದ್ರ ಸರಕಾರ ಅಡಿಕೆ ಆಮದು ಆದೇಶ ಹೊರಡಿಸಿದಾಗಿನಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಅಡಿಕೆ ಬೆಳೆ ಧಾರಣೆ ದಿನದಿಂದ ದಿನಕ್ಕೆ ನಿಧಾನವಾಗಿ ಕುಸಿಯಲಾರಂಭಿಸಿದೆ. ಪ್ರಸಕ್ತ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಪ್ರತೀ ಕ್ವಿಂಟಾಲ್‌ಗೆ 40-50 ಸಾವಿರ ರೂ. ಇದ್ದು, ಧಾರಣೆ ಇನ್ನೂ ಹೆಚ್ಚಾಗುವ ನಿರೀಕ್ಷೆಯಿಂದಾಗಿ ಸಣ್ಣ, ಅತೀ ಸಣ್ಣ ರೈತರು ಕಳೆದ ವರ್ಷ ಕಟಾವು ಮಾಡಿದ್ದ ಅಡಿಕೆಯನ್ನು ಇನ್ನೂ ಮಾರಾಟ ಮಾಡಿಲ್ಲ. ಧಾರಣೆ ಹೆಚ್ಚಾಗಿ ಒಂದಿಷ್ಟು ಲಾಭದ ನಿರೀಕ್ಷೆಯಲ್ಲಿದ್ದ ಇಂತಹ ರೈತರಿಗೆ ಪ್ರಸಕ್ತ ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆ ಕುಸಿಯುತ್ತಿರುವುದು ಆತಂಕ ಮೂಡಿಸಿದೆ. ಧಾರಣೆ ಕುಸಿಯುವ ಭೀತಿಯಿಂದಾಗಿ ಸಿಕ್ಕಷ್ಟು ಸಿಗಲಿ ಎಂದು ದಾಸ್ತಾನು ಮಾಡಿದ್ದ ಅಡಿಕೆಯನ್ನು ರೈತರು ಮಾರಾಟ ಮಾಡಲಾರಂಭಿಸಿದ್ದಾರೆ.

ಕೇಂದ್ರ ಸರಕಾರ ಅಡಿಕೆ ಆಮದಿಗೆ ಮುಂದಾಗಿರುವುದರಿಂದ ಮಾರುಕಟ್ಟೆಯಲ್ಲಿ ಇದುವರೆಗೂ ಸ್ಥಿರತೆ ಕಾಯ್ದುಕೊಂಡಿದ್ದ ಅಡಿಕೆ ಧಾರಣೆ ಇಳಿಮುಖ ಕಾಣುತ್ತಿದೆ. ವಿದೇಶಗಳಿಂದ ಅಡಿಕೆ ದೇಶದ ಮಾರುಕಟ್ಟೆ ಪ್ರವೇಶಕ್ಕೂ ಮುನ್ನ ಅಡಿಕೆ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದ್ದು, ವಿದೇಶಿ ಅಡಿಕೆ ದೇಶದ ಮಾರುಕಟ್ಟೆ ಪ್ರವೇಶಿಸಿದಲ್ಲಿ ಅಡಿಕೆ ಧಾರಣೆ ಪಾತಾಳ ಕಾಣಲಿದೆ ಎಂಬ ಭೀತಿಯನ್ನು ಮಲೆನಾಡು ಭಾಗದ ಅಡಿಕೆ ಬೆಳೆಗಾರರು ವ್ಯಕ್ತಪಡಿಸುತ್ತಿದ್ದಾರೆ. ಈ ಬಾರಿ ಕಟಾವಿಗೆ ಬರುತ್ತಿರುವ ಅಡಿಕೆ ಸಂಸ್ಕರಣೆಗೆ ಇನ್ನೂ 6 ತಿಂಗಳುಗಳ ಕಾಲ ಬೇಕಿದ್ದು, ಅಲ್ಲಿಯವರೆಗೆ ಅಡಿಕೆ ಬೆಲೆ ಏನಾಗಲಿದೆಯೋ ಎಂಬುದು ರೈತರ ಆತಂಕವಾಗಿದೆ.

ಅಡಿಕೆಗೂ ಬರಲಿದೆ ಕಾಳುಮೆಣಸಿನ ಸ್ಥಿತಿ: ಈ ಹಿಂದೆ ರಾಜ್ಯದಲ್ಲಿ ಬೆಳೆಯುತ್ತಿದ್ದ ಕಾಳುಮೆಣಸಿಗೆ 500-700 ರೂ. ಧಾರಣೆ ಇತ್ತು. ಅಡಿಕೆ, ಕಾಫಿಯೊಂದಿಗೆ ಕಾಳುಮೆಣಸು ಬೆಳೆಯುವ ಸಣ್ಣ, ಅತಿಸಣ್ಣ ಬೆಳೆಗಾರರ ಪಾಲಿಗೆ ಅಂದಿನ ಕಾಳುಮೆಣಸು ಧಾರಣೆ ಬದುಕಿಗೆ ಆಧಾರವಾಗಿತ್ತು. ಆದರೆ ಕೇಂದ್ರ ಸರಕಾರ ಕಳೆದ 5 ವರ್ಷಗಳ ಹಿಂದೆ ವಿದೇಶಗಳಿಂದ ಕಾಳುಮೆಣಸು ಆಮದು ಮಾಡಿಕೊಂಡ ಪರಿಣಾಮ ಮಾರುಕಟ್ಟೆಯಲ್ಲಿ ಕಾಳುಮೆಣಸು ಬೆಲೆ 200-250 ರೂ.ಗೆ ಕುಸಿತಕಂಡಿದ್ದು, ಮತ್ತೆ ಕಾಳುಮೆಣಸಿನ ಧಾರಣೆಯಲ್ಲಿ ಏರಿಕೆ ಕಾಣದಿರುವುದರಿಂದ ಕಾಳುಮೆಣಸು ಬೆಳೆಯುತ್ತಿರುವ ಕೃಷಿಕರು ಕಡಿಮೆ ಬೆಲೆಗೆ ಮಾರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಬೆಲೆ ಕಾಳುಮೆಣಸು ಬೆಳೆಯಲು ಮಾಡುವ ಖರ್ಚನ್ನೂ ತಂದುಕೊಡುತ್ತಿಲ್ಲ ಎಂಬುದು ರೈತರ ವಾದವಾಗಿದೆ. ಸದ್ಯ ಅಡಿಕೆ ಬೆಲೆಯ ಸ್ಥಿತಿಯೂ ಇದೇ ಆಗಲಿದೆ ಎಂದು ರೈತರು ಆತಂಕ ತೋಡಿಕೊಳ್ಳುತ್ತಿದ್ದು, ಅಡಿಕೆ ಆಮದು ನೀತಿಯನ್ನು ಕೇಂದ್ರ ಸರಕಾರ ಕೈಬಿಡಬೇಕು ಎಂದು ಆಗ್ರಹಿಸುತ್ತಿದ್ದಾರೆ.

Writer - ಕೆ.ಎಲ್.ಶಿವು

contributor

Editor - ಕೆ.ಎಲ್.ಶಿವು

contributor

Similar News