ಭಾರತದ ಜನಸಂಖ್ಯೆಯ ಕುರಿತ ತಪ್ಪು ವ್ಯಾಖ್ಯಾನ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಆರೆಸ್ಸೆಸ್‌ನ ಸರಸಂಘಚಾಲಕ ಮೋಹನ್ ಭಾಗವತ್ ಅವರು ತಮ್ಮ ವಿಜಯದಶಮಿ ಭಾಷಣದಲ್ಲಿ ದೇಶದ ಜನಸಂಖ್ಯೆಯಲ್ಲಿ ಧಾರ್ಮಿಕ ಸಮತೋಲನ ಇಲ್ಲದಿದ್ದರೆ ಆಗುವ ಅನಾಹುತಗಳ ಬಗ್ಗೆ ಮಾತನಾಡುತ್ತಾ ಮತ್ತೆ ಪರೋಕ್ಷವಾಗಿ ಮುಸ್ಲಿಮ್ ಜನಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಅಪವ್ಯಾಖ್ಯಾನ ಮಾಡಿದ್ದಾರೆ. ವಾಸ್ತವದಲ್ಲಿ ಭಾರತದ ಪರಿಸ್ಥಿತಿ ಅದಕ್ಕೆ ತದ್ವಿರುದ್ಧವಾಗಿದೆ. ಮೊದಲನೆಯದಾಗಿ ಭಾರತದ ಜನಸಂಖ್ಯಾ ಏರಿಕೆಯ ದರ ಆರೋಗ್ಯಕರವಾಗಿ ಕಡಿಮೆಯಾಗುತ್ತಿದೆಯೇ ವಿನಾ ಹೆಚ್ಚಾಗುತ್ತಿಲ್ಲ ಹಾಗೂ ಮುಸ್ಲಿಮ್ ಜನಸಂಖ್ಯಾ ಇಳಿಕೆಯ ವೇಗ ಹಿಂದೂಗಳ ಜನಸಂಖ್ಯಾ ಇಳಿಕೆಯ ವೇಗಕ್ಕಿಂತ ಹೆಚ್ಚಿದೆ. ಅಂದರೆ ಮುಸ್ಲಿಮರ ಜನಸಂಖ್ಯೆ ವೇಗವಾಗಿ ಕಡಿಮೆಯಾಗುತ್ತಿದೆ.
ಸಾಮಾನ್ಯವಾಗಿ ಒಂದು ದೇಶದ ಜನಸಂಖ್ಯೆಯ ಏರಿಕೆಯ ಗತಿಯನ್ನು ಅರಿಯಲು ಒಟ್ಟಾರೆ ಫಲವಂತಿಕೆ ದರ (Total Fertility Rate- TFR) ಎಂಬ ಮಾನದಂಡವನ್ನು ಬಳಸುತ್ತಾರೆ. ಅಂದರೆ ಒಂದು ದೇಶದಲ್ಲಿ-ಪ್ರದೇಶದಲ್ಲಿ ಒಬ್ಬ ಮಹಿಳೆ 18-49 ವಯಸ್ಸಿನ ನಡುವಿನ ತನ್ನ ಗರ್ಭಧಾರಣಾ ಅವಧಿಯಲ್ಲಿ ಸರಾಸರಿ ಎಷ್ಟು ಮಕ್ಕಳಿಗೆ ಜನ್ಮ ನೀಡುತ್ತಿದ್ದಾಳೆ ಎನ್ನುವ ಸಂಖ್ಯೆಯದು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಭಾರತದ TFR ದರ 5.9. ಅಂದರೆ 1951ರ ವೇಳೆಗೆ ಭಾರತದ ಮಹಿಳೆ ಸರಾಸರಿ 6 ಮಕ್ಕಳಿಗೆ ಜನ್ಮ ಕೊಡುತ್ತಿದ್ದಳು ಎಂದರ್ಥ. ಅದೇ ರೀತಿ ಮುಂದುವರಿದಿದ್ದರೆ ಈಗ ಭಾರತದ ಜನಸಂಖ್ಯೆ 250-300 ಕೋಟಿಗೆ ತಲುಪಬೇಕಿತ್ತು. ಆದರೆ ಭಾರತವು ಪ್ರಾರಂಭದಿಂದಲೇ ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಅರಿವು ಹಾಗೂ ಕುಟುಂಬ ನಿಯಂತ್ರಣ ಸಾಧನಗಳ ಲಭ್ಯತೆಯ ಬಗ್ಗೆ ಹೆಚ್ಚು ಒತ್ತು ಕೊಟ್ಟಿದ್ದರಿಂದ ಎಲ್ಲೆಲ್ಲಿ ಅರಿವು, ಲಭ್ಯತೆ ಹಾಗೂ ಮಹಿಳೆಯ ಶಿಕ್ಷಣ ಹಾಗೂ ಸಬಲೀಕರಣ ಸಾಪೇಕ್ಷವಾಗಿ ಸಾಧ್ಯವಾಯಿತೋ ಅಲ್ಲೆಲ್ಲಾ ಬಹಳ ಬೇಗನೆ TFR ದರ ಕುಸಿಯುತ್ತಾ ಬಂತು. 2015-16ರ NFHSನ ಅಂಕಿಅಂಶದ ಪ್ರಕಾರ ಈಗ ಭಾರತದ ಸರಾಸರಿ TFR ದರ 2.30ಕ್ಕೆ ಕುಸಿದಿದೆ. ಅಂದರೆ 1951ಕ್ಕೆ ಹೋಲಿಸಿದರೆ ಜನಸಂಖ್ಯಾ ಏರಿಕೆಯ ದರ ಅರ್ಧಕ್ಕಿಂತಲೂ ಹೆಚ್ಚು ಕಡಿಮೆಯಾಗಿದೆ.
ಭಾರತದೊಳಗೆ ವಿವಿಧ ರಾಜ್ಯಗಳಲ್ಲಿ ವಿಭಿನ್ನವಾಗಿರುವ TFR ದರವನ್ನು ಅವಲೋಕಿಸಿದಾಗಲೂ ಈ ಅಂಶ ಸ್ಪಷ್ಟವಾಗುತ್ತದೆ. 2015-16ರ NFHSನ ವರದಿಯ ಪ್ರಕಾರ ಭಾರತದ ಸರಾಸರಿ TFR ದರ 2.3 ಆಗಿದ್ದರೆ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್.. ಇನ್ನಿತ್ಯಾದಿ ಸಾಪೇಕ್ಷವಾಗಿ ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲಿ TFR ದರ 1.7-1.8 ರಷ್ಟು ಮಾತ್ರ ಅಂದರೆ ದೇಶದ ಸರಾಸರಿಗಿಂತ ಕಡಿಮೆಯಾಗಿತ್ತು. ಆದರೆ ಬಿಹಾರದ ದರ 3.4 ಆಗಿದ್ದರೆ ಉತ್ತರ ಪ್ರದೇಶದ್ದು 2.7. ಅಂದರೆ ದೇಶದ ಸರಾಸರಿಗಿಂತ ಹೆಚ್ಚು. ಮೇಲ್ನೋಟಕ್ಕೆ ಕಾಣುವಂತೆ ಬಿಹಾರ ಹಾಗೂ ಉತ್ತರ ಪ್ರದೇಶಗಳಿಗಿಂತ TFR ದರ ಕಡಿಮೆ ಇರುವ ರಾಜ್ಯಗಳಲ್ಲಿ ಮಹಿಳಾ ಸಾಕ್ಷರತೆ, ಶಿಕ್ಷಣ, ಸಾರ್ವಜನಿಕ ವಲಯದಲ್ಲಿ ಮಹಿಳೆಯ ಭಾಗವಹಿಸುವಿಕೆ, ಒಟ್ಟಾರೆ ಆ ರಾಜ್ಯಗಳ ಸಾಪೇಕ್ಷ ಅಭಿವೃದ್ಧಿ ದರಗಳು ಹೆಚ್ಚಾಗಿವೆ.
ಹಾಗೆ ನೋಡಿದರೆ, ಉತ್ತರ ಪ್ರದೇಶ ಮತ್ತು ಬಿಹಾರದ ಹಿಂದೂಗಳ TFR ದರವು ದಕ್ಷಿಣ ರಾಜ್ಯಗಳ ಮುಸ್ಲಿಮರ TFR ದರಕ್ಕಿಂತ ಜಾಸ್ತಿ. ಅರ್ಥಾತ್ ಬಿಹಾರ ಹಾಗೂ ಉತ್ತರ ಪ್ರದೇಶಗಳ ಹಿಂದೂಗಳಿಗಿಂತ ದಕ್ಷಿಣ ರಾಜ್ಯಗಳ ಮುಸ್ಲಿಮ್ ಮಹಿಳೆಯರು ಕಡಿಮೆ ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ.
NFHSನ ವರದಿಗಳು ಸ್ಪಷ್ಟಪಡಿಸುವ ಮತ್ತೊಂದು ಸತ್ಯವೇನೆಂದರೆ ಕಳೆದ ಮೂರು ದಶಕಗಳಿಂದ ದೇಶದಲ್ಲಿ ಮುಸ್ಲಿಮರ TFR ದರವು ಹಿಂದೂಗಳಿಗಿಂತ ವೇಗವಾಗಿ ಇಳಿಕೆಯಾಗುತ್ತಿದೆ. ಉದಾಹರಣೆಗೆ 2005-06ರಲ್ಲಿ ನಡೆದ NFHSನ 3ನೇ ಸರ್ವೇಯ ಪ್ರಕಾರ ಹಿಂದೂಗಳ TFR ದರವು 2.59 ಇದ್ದರೆ ಮುಸ್ಲಿಮರ TFR ದರವು 3.4ರಷ್ಟಿತ್ತು. ಆದರೆ ಹತ್ತುವರ್ಷಗಳ ನಂತರ NFHSನ 4ನೇ ಸರ್ವೇಯ ಪ್ರಕಾರ ಹಿಂದೂಗಳ TFR ದರವು 2.59ರಿಂದ 2.13ಕ್ಕೆ ಇಳಿದಿತ್ತು. ಅಂದರೆ 0.46ರಷ್ಟು ಇಳಿಕೆ. ಅದೇ ಅವಧಿಯಲ್ಲಿ ಮುಸ್ಲಿಮರ TFR ದರವು 3.4ರಿಂದ 2.61ಕ್ಕೆ ಇಳಿಯಿತು. ಅಂದರೆ 0.79ರಷ್ಟು ಇಳಿಕೆ. ಅಂದರೆ, ಕಳೆದೊಂದು ದಶಕದಲ್ಲಿ ಮುಸ್ಲಿಮರ TFR ದರ ಮತ್ತು ಆ ಕಾರಣಕ್ಕಾಗಿ ಮುಸ್ಲಿಮರ ಜನಸಂಖ್ಯೆ ಏರಿಕೆಯ ಪ್ರಮಾಣ ಹಿಂದೂಗಳಿಗಿಂತ ತೀವ್ರವಾಗಿ ಕಡಿಮೆಯಾಗುತ್ತಿದೆ. ಅಷ್ಟೇ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ಮುಸ್ಲಿಮ್ TFR ದರವು ಕೇರಳ, ಅಸ್ಸಾಂ, ಪ. ಬಂಗಾಳ ಜಮ್ಮು-ಕಾಶ್ಮೀರದಂತಹ ಮುಸ್ಲಿಮ್ ಬಾಹುಳ್ಯವಿರುವ ರಾಜ್ಯಗಳಲ್ಲೇ ವೇಗವಾಗಿ ಕುಸಿಯುತ್ತಿದೆ.
ಹಾಗೆ ನೋಡಿದರೆ, NFHSನ ವರದಿಗಳೂ ಹಾಗೂ ಜಗತ್ತಿನಾದ್ಯಂತ ನಡೆಯುತ್ತಿರುವ ಜನಸಂಖ್ಯೆ ಅಧ್ಯಯನಗಳು ಮುಂದಿಡುತ್ತಿರುವ ಅಪಾಯವೇನೆಂದರೆ ಜನಸಂಖ್ಯೆ ಹೆಚ್ಚಳದ್ದಲ್ಲ, ಜನಸಂಖ್ಯೆ ಕಡಿಮೆಯಾಗುತ್ತಿರುವುದು!
ಏಕೆಂದರೆ ಪ್ರತಿಯೊಂದು ಕುಟುಂಬಕ್ಕೆ ಇಬ್ಬರು ಮಕ್ಕಳಿದ್ದರೆ ಅಪ್ಪ-ಅಮ್ಮ ತೀರಿಕೊಂಡ ಬಳಿಕ ಆ ಸಂಖ್ಯೆಯನ್ನು ಇಬ್ಬರು ಮಕ್ಕಳು ಭರ್ತಿ ಮಾಡುತ್ತಾರೆ. ಆಗ ಆ ದೇಶದ ಜನಸಂಖ್ಯೆ ಒಂದು ಸ್ಥಿರತೆಯಲ್ಲಿರುತ್ತದೆ. ಆದ್ದರಿಂದ ಒಂದು ದೇಶದಲ್ಲಿ TFR ದರವು 2.1ರಷ್ಟಿದ್ದರೆ ಅದನ್ನು ರೀಪ್ಲೇಸ್‌ಮೆಂಟ್ ದರ ಎಂದು ಕರೆಯುತ್ತಾರೆ. ಅದಕ್ಕಿಂತ ಕಡಿಮೆಯಾದರೆ ಆ ದೇಶದ ಒಟ್ಟಾರೆ ಜನಸಂಖ್ಯೆಯೇ ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. Lancet ಎಂಬ ಜಗತ್ತಿನ ಅತ್ಯಂತ ಪ್ರತಿಷ್ಠಿತ ವೈಜ್ಞಾನಿಕ ಜರ್ನಲ್‌ನ ಅಧ್ಯಯನದ ಪ್ರಕಾರ ಈಗ ಭಾರತದ ಜನಸಂಖ್ಯೆ 140 ಕೋಟಿಯಿದ್ದು, 2048ರ ವೇಳೆಗೆ 160 ಕೋಟಿಗೆ ತಲುಪಿದರೂ ಜನಸಂಖ್ಯೆಯ ಏರಿಕೆಯ ವೇಗ ಕುಸಿಯುತ್ತಿರುವುದರಿಂದ 2048ರಿಂದ ಭಾರತದ ಜನಸಂಖ್ಯೆ ಕುಸಿಯುತ್ತಾ ಹೋಗುತ್ತದೆ ಹಾಗೂ 2100ರ ವೇಳೆಗೆ ಭಾರತದ ಜನಸಂಖ್ಯೆ 109 ಕೋಟಿಗೆ ಇಳಿದಿರುತ್ತದೆ. ಅದಕ್ಕಿಂತ ಗಂಭೀರವಾದ ಸಂಗತಿಯೆಂದರೆ ಆ ಸಂದರ್ಭದಲ್ಲಿ ಕೆಲಸ ಮಾಡಬಲ್ಲ ಯುವಕರ ಸಂಖ್ಯೆಗಿಂತ ಹಿರಿಯರ-ವೃದ್ಧರ ಸಂಖ್ಯೆ ಎರಡು ಪಟ್ಟು ಹೆಚ್ಚಿರುತ್ತದೆ.
ಒಬ್ಬ ದುಡಿಯುವ ವ್ಯಕ್ತಿಯ ಮೇಲೆ ಅಪ್ಪ, ಅಮ್ಮ, ತಾತ, ಅಜ್ಜಿ ಹೀಗೆ ನಾಲ್ವರು ಅವಲಂಬಿತರಾಗುವ ಪರಿಸ್ಥಿತಿ ಎದುರಾಗುತ್ತದೆ. ಇದು ಆ ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ. ಕೆಲಸ ಮಾಡುವ ಜನರಿಗಾಗಿ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳನ್ನು ಅವಲಂಬಿಸಬೇಕಾಗುತ್ತದೆ. ಈಗಾಗಲೇ ಚೀನಾದಲ್ಲಿ ಆ ಪರಿಸ್ಥಿತಿ ಎದುರಾಗಿದೆ. ಆದ್ದರಿಂದಲೇ ಅಲ್ಲಿ ಒಂದು ಮಕ್ಕಳ ನೀತಿಯನ್ನು ಸಡಿಲಿಸಿ ಈಗ ಮೂರು ಮಕ್ಕಳನ್ನು ಪಡೆದುಕೊಳ್ಳಲು ಉತ್ತೇಜನ ಕೊಡಲಾಗುತ್ತಿದೆ. ಭಾರತದಲ್ಲಿ ದಕ್ಷಿಣ ರಾಜ್ಯಗಳಿಗೆ ಅಂತಹ ಪರಿಸ್ಥಿತಿ ಉತ್ತರ ರಾಜ್ಯಗಳಿಗಿಂತ ಬೇಗನೆ ಬಂದೊದಗಲಿದೆ. ಹೀಗಾಗಿ ಸರಕಾರ ಚಿಂತಿಸಬೇಕಿರುವುದು ಇಲ್ಲದ ಜನಸಂಖ್ಯಾ ಸ್ಫೋಟದ ಸಮಸ್ಯೆಯ ಬಗ್ಗೆಯಲ್ಲ. ಇಲ್ಲದ ಧರ್ಮಾನುಪಾತದ ಸಮಸ್ಯೆಯ ಬಗ್ಗೆಯಲ್ಲ. ಈಗ ಜಗತ್ತಿನಲೇ ಅತಿ ಹೆಚ್ಚು ಯುವಶಕ್ತಿ ಇರುವ ಈ ದೇಶದಲ್ಲಿ ಹೇಗೆ ಉದ್ಯೋಗಗಳನ್ನು ಸೃಷ್ಟಿಸಿ ಅದನ್ನು ರಚನಾತ್ಮಕವಾಗಿ ಬಳಸಿಕೊಳ್ಳಬಹುದು ಎಂಬ ಬಗ್ಗೆ ಮತ್ತು ಇನ್ನೆರಡು ದಶಕಗಳ ನಂತರ ಎದುರಾಗಲಿರುವ ಹಿರಿಯರ ಬಾಹುಳ್ಯ ತಂದೊಡ್ಡುವ ಆರ್ಥಿಕ-ರಾಜಕೀಯ-ಸಾಂಸ್ಕೃತಿಕ ಸಮಸ್ಯೆಗಳನ್ನು ಹೇಗೆ ಎದುರಿಸುವುದು ಎಂಬ ಬಗ್ಗೆ.