ತನ್ನ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ರನ್ನು ಶಿಫಾರಸು ಮಾಡಿದ ಸಿಜೆಐ ಯು.ಯು. ಲಲಿತ್

Update: 2022-10-11 16:08 GMT
ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ , Photo:NDTV

ಹೊಸದಿಲ್ಲಿ,ಅ.11: ಭಾರತದ ಮುಖ್ಯ ನ್ಯಾಯಾಧೀಶ ಯು.ಯು.ಲಲಿತ್( ಸಿಜೆಐ) ಅವರು ತನ್ನ ಉತ್ತರಾಧಿಕಾರಿಯಾಗಿ ನ್ಯಾ.ಡಿ.ವೈ.ಚಂದ್ರಚೂಡ ಅವರ ಹೆಸರನ್ನು ಮಂಗಳವಾರ ಶಿಫಾರಸು ಮಾಡಿದ್ದಾರೆ.

ತನ್ನ ಉತ್ತರಾಧಿಕಾರಿಯನ್ನು ಹೆಸರಿಸುವಂತೆ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯವು ಅ.7ರಂದು ನ್ಯಾ.ಲಲಿತ್ ಅವರಿಗೆ ಸೂಚಿಸಿತ್ತು. ಅವರ ಪ್ರಸ್ತಾವವನ್ನು ಕೇಂದ್ರವು ಒಪ್ಪಿಕೊಂಡರೆ ಚಂದ್ರಚೂಡ ಅವರು ಭಾರತದ 50ನೇ ಸಿಜೆಐ ಆಗಿ 2024,ನ.10ರವರೆಗೆ ಎರಡು ವರ್ಷಗಳ ಕಾಲ ಅಧಿಕಾರದಲ್ಲಿರಲಿದ್ದಾರೆ.

ನ್ಯಾ.ಲಲಿತ್ ನ.8ರಂದು ತನ್ನ 74 ದಿನಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿ ನಿವೃತ್ತರಾಗಲಿದ್ದಾರೆ.

ಚಂದ್ರಚೂಡ ಅವರು ಅಲಹಾಬಾದ್ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ಎರಡೂವರೆ ವರ್ಷಕ್ಕೂ ಹೆಚ್ಚಿನ ಸೇವೆಯ ಬಳಿಕ 2016,ಮೇ 13ರಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.

 ಮಾಜಿ ಸಿಜೆಐ ವೈ.ವಿ.ಚಂದ್ರಚೂಡ ಅವರ ಪುತ್ರರಾಗಿರುವ ಚಂದ್ರಚೂಡ 1998,ಜೂನ್‌ನಲ್ಲಿ ಬಾಂಬೆ ಉಚ್ಚ ನ್ಯಾಯಾಲಯದಿಂದ ಹಿರಿಯ ವಕೀಲರಾಗಿ ಮಾನ್ಯತೆಯನ್ನು ಪಡೆದಿದ್ದರು. 2000,ಮಾರ್ಚ್‌ನಲ್ಲಿ ಅವರು ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಅವರು 1998ರಿಂದ ನ್ಯಾಯಾಧೀಶರಾಗಿ ನೇಮಕಗೊಳ್ಳುವರೆಗೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿಯೂ ಕಾರ್ಯ ನಿರ್ವಹಿಸಿದ್ದರು.

  ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ತನ್ನ ಅಧಿಕಾರಾವಧಿಯಲ್ಲಿ ಚಂದ್ರಚೂಡ ಖಾಸಗಿತನವನ್ನು ಮೂಲಭೂತ ಹಕ್ಕು ಎಂದು ಘೋಷಿಸಿದ್ದು ಸೇರಿದಂತೆ ಹಲವಾರು ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ.

ಚಂದ್ರಚೂಡ ಪರಸ್ಪರ ಸಮ್ಮತಿಯ ವಯಸ್ಕರ ನಡುವೆ ಸಲಿಂಗಕಾಮ ಚಟುವಟಿಕೆಯನ್ನು ಸರ್ವಾನುಮತದಿಂದ ಅಪರಾಧ ಮುಕ್ತಗೊಳಿಸಿದ್ದ ಐವರು ನ್ಯಾಯಾಧೀಶರ ಸಂವಿಧಾನ ಪೀಠದ ಸದಸ್ಯರೂ ಆಗಿದ್ದರು.

ನವಂಬರ್ 2019ರಲ್ಲಿ ಅಯೋಧ್ಯೆಯ ವಿವಾದಿತ ನಿವೇಶನವನ್ನು ಅಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್‌ಗೆ ಹಸ್ತಾಂತರಿಸಬೇಕು ಎಂದು ಸರ್ವಾನುಮತದ ತೀರ್ಪು ನೀಡಿದ್ದ ಐವರು ನ್ಯಾಯಾಧೀಶರಲ್ಲಿ ಚಂದ್ರಚೂಡ ಓರ್ವರಾಗಿದ್ದರು. ಮಸೀದಿ ನಿರ್ಮಾಣಕ್ಕಾಗಿ ಮುಸ್ಲಿಮರಿಗೆ ಪ್ರತ್ಯೇಕ ಐದು ಎಕರೆ ನಿವೇಶನವನ್ನು ನೀಡುವಂತೆಯೂ ಪೀಠವು ತನ್ನ ತೀರ್ಪಿನಲ್ಲಿ ಆದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News